ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ.
ಆದರೆ ಈ ಬಾರಿಯ ಮಳೆಗಾಲದಲ್ಲಿ ಮರಳಿನ ಅಭಾವಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ಬೇಸಿಗೆಯಲ್ಲಿ ಜಿಲ್ಲೆಯ ಹೊರಗಡೆಗೆ ಮರಳು ಸಾಗಿಸಲು ನೀಡಿದ್ದ ಷರತ್ತು ಬದ್ಧ ಅನುಮತಿಯನ್ನು ಮೀರಿ, ಬೃಹತ್ ಪ್ರಮಾಣದ ಮರಳು ಹೊರಜಿಲ್ಲೆಗಳಿಗೆ ಸಾಗಾಟವಾದದ್ದೇ ಅಭಾವಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಶಾಮೀಲಾತಿಯೊಂದಿಗೆ ಮರಳು ಮಾಫಿಯಾ ಜಿಲ್ಲೆಯಲ್ಲಿ ಸಂಗ್ರಹಿಸಿದ ಮರಳನ್ನು ಹೊರಜಿಲ್ಲೆಗೆ, ಹೊರರಾಜ್ಯಗಳಿಗೆ ಸಾಗಿಸಿದೆ. ಹಾಗೆ ಸಾಗಾಟವಾಗದಂತೆ ಜಿಲ್ಲಾಡಳಿತ ತಡೆದಿದ್ದರೆ ಮಂಗಳೂರಿಗೆ ಇಂದು ಮರಳಿನ ಕೊರತೆ ಎದುರಾಗುತ್ತಿರಲಿಲ್ಲ. ಇಲ್ಲಿನ ನಿರ್ಮಾಣ ಕ್ಷೇತ್ರದ ಉದ್ಯಮಗಳ ಸಹಿತ ಜನಸಾಮಾನ್ಯರು ನಮ್ಮದೇ ಮರಳಿಗೆ ಚಿನ್ನದ ಬೆಲೆ ನೀಡುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಈಗ ಮಳೆಗಾಲದಲ್ಲಿ ಮರಳುಗಾರಿಕೆ ಮಾಡುವ ಪರಿಸ್ಥಿತಿಯೂ ಬರುತ್ತಿರಲಿಲ್ಲ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈಗಲೂ ಷರತ್ತು ಬದ್ಧವಾದ ಮರಳುಗಾರಿಕೆ ದುರುಪಯೋಗವಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದ್ದು, ಷರತ್ತು ಮೀರಿ ಮರಳುಗಾರಿಕೆ ಮಾಡುವುದು ಮಾತ್ರವಲ್ಲದೆ, ಅವಕಾಶವನ್ನು ಅಧಿಕಾರಿಗಳೊಂದಿಗೆ ಸೇರಿಕೊಂಡು ದುರ್ಬಳಕೆ ಮಾಡಿ ಹೊರರಾಜ್ಯ, ಹೊರಜಿಲ್ಲೆಗಳಿಗೆ ಮರಳನ್ನು ಪ್ರಬಲ ಮರಳುಮಾಫಿಯಾ ಸಾಗಿಸುವುದೂ ಶತಸಿದ್ಧ, ಜಿಲ್ಲಾಧಿಕಾರಿಗಳ ಕಾಳಜಿ ನಿಜವೇ ಆಗಿದ್ದರೆ ಇಂತಹ ಅಕ್ರಮಗಳನ್ನು ಮುಂದೆ ನಿಂತು ತಡೆದು ಜಿಲ್ಲೆಯ ನಿರ್ಮಾಣ ಕ್ಷೇತ್ರ, ಕಟ್ಟಡ ಕಾರ್ಮಿಕರು, ಜನಸಾಮಾನ್ಯರ ಹಿತವನ್ನು ಕಾಯಲಿ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.