ದೇಶದಲ್ಲಿ ಕೊರೋನಾ ಸೋಂಕು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಕಠಿಣ ಸಂದರ್ಭದಲ್ಲಿ ದೇಶದ ಜನರಿಗೆ ಬೇಕಾದ ಅಗತ್ಯ ಅವಶ್ಯಕತೆಗಳನ್ನು ದಿನಸಿ, ಆಹಾರ ವಸ್ತುಗಳನ್ನು ಒದಗಿಸುವ ಮಹತ್ವದ ಕಾರ್ಯವನ್ನು ಎಬಿವಿಪಿಯ ಸ್ವಯಂಸೇವಕರು ಮತ್ತು ಕಾರ್ಯಕರ್ತರ ತಂಡ ಮಾಡುತ್ತಿದೆ.
ಲಾಕ್ಡೌನ್ನಿಂದಾಗಿ ದಿನಗೂಲಿ ನೌಕರರು ಮತ್ತು ಆರೋಗ್ಯ ಕಾರ್ಯಕರ್ತರು ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ದುಡಿಯಲು ಲಾಕ್ಡೌನ್ ಕಾರಣದಿಂದಾಗಿ ಕೆಲಸವಿಲ್ಲ. ಬದುಕಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವುದಕ್ಕೂ ಪರದಾಡಬೇಕಾದ ಸ್ಥಿತಿ. ಕುಟುಂಬ ನಿರ್ವಹಣೆಗೂ ಕಷ್ಟ ಪಡಬೇಕಾದ ಈ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ್ದು ಎಬಿವಿಪಿಯ ಕಾರ್ಯಕರ್ತರು ಮತ್ತು ಸ್ವಯಂಸೇವಕರ ತಂಡ. ಜಾರ್ಖಂಡ್ನ ಅನೇಕ ಕುಟುಂಬಗಳಿಗೆ ಬೇಕಾದ ದಿನಸಿ ಒದಗಿಸುವ ಮೂಲಕ ಸಮಾಜ ಸೇವೆ ಮಾಡಿದೆ. ಜೊತೆಗೆ ರಾಂಚಿಯಲ್ಲಿ ಆಹಾರ ತಯಾರಿಸುವ ಕಿಚನ್ ಒಂದನ್ನು ಆರಂಭ ಮಾಡಿದ್ದು, ಅಲ್ಲಿನ ಸ್ಥಳೀಯ ಎಬಿವಿಪಿ ಕಾರ್ಯಕರ್ತರು ಕಷ್ಟದಲ್ಲಿರುವವರಿಗೆ, ಆಹಾರದ ಅಗತ್ಯ ಇರುವವರಿಗೆ ಆಹಾರ ನೀಡುವ ಮಹತ್ಕಾರ್ಯ ಮಾಡುತ್ತಿದ್ದಾರೆ.
ಇದಕ್ಕಾಗಿ ರಾಂಚಿಯಲ್ಲಿ ಒಂದು ಆಹಾರ ಸಂಗ್ರಹಣಾ ಕೇಂದ್ರವನ್ನು ಎಬಿವಿಪಿ ಸ್ಥಾಪಿಸಿದೆ. ಈ ಕೇಂದ್ರದಿಂದ ಕಾರ್ಯಕರ್ತರು ಆಹಾರ ಸಂಗ್ರಹಿಸಿ ಅದನ್ನು ಅಗತ್ಯವುಳ್ಳವರಿಗೆ ತಲುಪಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದೆ. ನಗರದ ಬೇರೆ ಬೇರೆ ಭಾಗದಲ್ಲಿ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ದಣಿವರಿಯದೆ ಕೆಲಸ ಮಾಡುತ್ತಿದೆ ಎಬಿವಿಪಿ. ಈ ಕೇಂದ್ರದ ಮೂಲಕ ಕಾರ್ಯಕರ್ತರು 24/7 ಎಂಬಂತೆ ಕೆಲಸ ಮಾಡುತ್ತಿದ್ದಾರೆ.
ಆಹಾರ ತಯಾರು ಮಾಡುವ ಸಂದರ್ಭದಲ್ಲಿಯೂ ಎಬಿವಿಪಿ ಕಾರ್ಯಕರ್ತರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಲ್ಲಾ ರೀತಿಯ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕವೇ ಇಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರದೇಶದಲ್ಲಿ ಸ್ಯಾನಿಟೈಸ್ಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ತರಕಾರಿ ತರುವುದು, ಹೆಚ್ಚುವುದರಿಂದ ಹಿಡಿದು, ಆಹಾರ ತಯಾರಿಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಕಾರ್ಯಕರ್ತರೇ ಸಂಗ್ರಹಿಸಿ, ಅಡುಗೆ ತಯಾರಿಸುವುದು ಜೊತೆಗೆ ತಯಾರಾದ ಅಡುಗೆಗಳ ಪೊಟ್ಟಣಗಳನ್ನು ಪ್ಯಾಕ್ ಮಾಡುವ ಕೆಲಸವನ್ನು ಸ್ವಯಂಸೇವಕರ ತಂಡವೇ ಮಾಡುತ್ತಿದೆ. ದಿನನಿತ್ಯ ನೂರಕ್ಕೂ ಅಧಿಕ ಸ್ವಯಂಸೇವಕರು ಆಹಾರದ ಸಮಸ್ಯೆ ಅನುಭವಿಸುವವರಿಗೆ ಅಗತ್ಯ ಆಹಾರವನ್ನು ಒದಗಿಸಿಕೊಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.
ಎಬಿವಿಪಿ ಕಾರ್ಯಕರ್ತರ ಈ ತಂಡ ರಾಂಚಿಯ 550ರಿಂದ ಸುಮಾರು 600ರಷ್ಟು ಕುಟುಂಬಗಳಿಗೆ ಪ್ರತಿನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಅಂದಿನ ದಿನವೇ ತಯಾರು ಮಾಡಲಾದ ಶುದ್ಧ ಆಹಾರವನ್ನು ರಾಂಚಿಯ ಬಡಜನರಿಗೆ ನೀಡುವ ಕೆಲಸವನ್ನು ಎಬಿವಿಪಿ ಎಂಬ ದೇಶಪ್ರೇಮಿ ಸಂಘಟನೆ ಮಾಡುತ್ತಿದೆ. ಜನರ ಅಗತ್ಯತೆಗಳನ್ನು ಅರಿತುಕೊಂಡೇ ಆಹಾರ ತಯಾರು ಮಾಡುವ ಕಾರ್ಯಕರ್ತರು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿಯೂ ಮುನ್ನೆಚ್ಚರಿಕೆ, ಮುಂಜಾಗ್ರತೆಯನ್ನು ವಹಿಸಿದ್ದಾರೆ. ಆ ಮೂಲಕ “ಆಹಾರ ತಿನ್ನಲು, ಎಸೆಯುವುದಕ್ಕಲ್ಲ” ಎಂಬ ಘೋಷವಾಕ್ಯಕ್ಕೂ ಸಂಪೂರ್ಣ ಬೆಲೆ ನೀಡುತ್ತಿದ್ದಾರೆ.
ಕೊರೋನಾದಿಂದ ದೇಶವೇ ಲಾಕ್ಡೌನ್ ಸ್ಥಿತಿಗೆ ತಲುಪಿದಂದಿನಿಂದ ಹಿಡಿದು ಇಂದಿನವರೆಗೂ ತಮ್ಮ ಈ ಸೇವೆಯನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಆ ಮೂಲಕ ಸೇವೆಯ ನಿಜವಾದ ಅರ್ಥವನ್ನು ಸಮಾಜಕ್ಕೆ ತಿಳಿಸುವ ಉತ್ತಮ ಕೆಲಸವನ್ನು ಈ ಸಂಘಟನೆ ಉತ್ಸಾಹದಿಂದ ಮಾಡುತ್ತಿದೆ ಎಂದರೂ ತಪ್ಪಾಗಲಾರದು.
ಎಬಿವಿಪಿಯ ಕ್ಷೇತ್ರೀಯ ಸಂಘಟನಾ ಮಂತ್ರಿ ನಿಖಿಲ್ ರಂಜನ್ ಅವರು ಎಬಿವಿಪಿ ಕಾರ್ಯಕರ್ತರು, ಸ್ವಯಂಸೇವಕರ ಬೆನ್ನಿಗೆ ನಿಂತು ಅವರಿಗೆ ಬೇಕಾದ ಅಗತ್ಯ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಜೊತೆಗೆ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಅವರಲ್ಲದೆ ರಾಂಚಿಯ ಎಬಿವಿಪಿಯ ಇನ್ನಿತರ ಸಂಘಟನಾ ಪ್ರಮುಖರೂ ಸಹ ಕಾರ್ಯಕರ್ತರ ಬೆನ್ನಿಗೆ ನಿಂತು ಈ ಸೇವೆಗೆ ಪೂರಕ ಸಹಕಾರವನ್ನು ನೀಡುತ್ತಿದ್ದಾರೆ.
ಸೇವೆ ಮಾಡಬೇಕು ಎನ್ನುವ ಮನಸ್ಸು ನಮ್ಮೊಳಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಎಬಿವಿಪಿಯ ಸ್ವಯಂಸೇವಕರ ತಂಡ ರಾಂಚಿಯಲ್ಲಿ ಮಾಡಿ ತೋರಿಸಿದೆ. ಮನಸ್ಸೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಒಂದೇ ಮನಸ್ಥಿತಿಯ ಹಲವರು ಒಗ್ಗಟ್ಟಾದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಎಬಿವಿಪಿ ಸಮರ್ಥವಾಗಿ ಮಾಡಿದೆ ಎಂದರೂ ಅತಿಶಯವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.