ಬೈಂದೂರು : ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಾಲೆಗಳಂತೆ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ, ಉನ್ನತ ಮಟ್ಟದ ಶಿಕ್ಷಣ ಹಾಗೂ ಅದಕ್ಕೆ ಪೂರಕ ವಾತಾವರಣದ ನಿರ್ಮಾಣ ಮಾಡಿದರೆ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಪೋಷಕರು ಸರಕಾರಿ ಶಾಲೆಗಳತ್ತ ಮುಖ ಮಾಡುವಂತಾಗುತ್ತದೆ. ಇದಕ್ಕೆ ಶಿಕ್ಷಕರ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅವಿರತ ಪ್ರಯತ್ನ ಅಗತ್ಯ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಯಡ್ತರೆ ಗ್ರಾಪಂ ವ್ಯಾಪ್ತಿಯ ಮದ್ದೋಡಿ ಸಹಿಪ್ರಾ ಶಾಲೆಯಲ್ಲಿ ರೂ. ಮೂರು ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಕ್ಷರ ದಾಸೋಹ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಪ್ರಾಥಮಿಕ ಶಾಲೆಗಳನ್ನು ಖಾಸಗಿಯವರು ದತ್ತು ಸ್ವೀಕಾರ ಮಾಡಿದರೆ ಅದರ ಸಂಪೂರ್ಣ ಲಾಭ ಊರಿನವರು ಪಡೆದುಕೊಳ್ಳಬಹುದು. ನಮ್ಮ ತಾಲೂಕಿನ ಅನೇಕರು ದೇಶ-ವಿದೇಶಗಳಲ್ಲಿ ಉದ್ಯೋಗ, ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಮನವಿ ಮಾಡುವುದರ ಮೂಲಕ ಈ ಕ್ಷೇತ್ರದ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ದತ್ತು ಸ್ವೀಕಾರ ಯೋಜನೆಯಲ್ಲಿ ಕೈ ಜೋಡಿಸುವಂತೆ ಮನವಿ ಮಾಡಲಾಗುವುದು ಎಂದ ಶಾಸಕರು ಮದ್ದೋಡಿ ಶಾಲೆಯನ್ನು ದತ್ತು ಪಡೆದ ಸ್ಥಳೀಯ ಉದ್ಯಮಿ ಜೈಸನ್ ಎಂ.ಡಿ ಯವರಿಗೆ ಅಭಿನಂದಿಸಿದರು. ಕಟ್ಟಡ ನಿರ್ಮಿಸಿದ ರಾಮ ಮೊಗವೀರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಯಡ್ತರೆ ಗ್ರಾಪಂ ಅಧ್ಯಕ್ಷ ಎನ್.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿಪಂ ಸದಸ್ಯೆ ಸುಪ್ರೀತಾ ಡಿ.ಶೆಟ್ಟಿ, ತಾಪಂ ಸದಸ್ಯ ಎಸ್.ರಾಜು ಪೂಜಾರಿ, ಶಿಕ್ಷಣ ಸಂಯೋಜಕ ರೂಪ್ಲಾ ಕಾಮತ್, ನಿವೃತ್ತ ಮುಖ್ಯಶಿಕ್ಷಕ ಕೃಷ್ಣಪ್ಪ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಮರಾಠಿ, ಸರ್ವೋತ್ತಮ ಭಟ್, ಗಣಪತಿ ಹೋಬಳೀದಾರ್ ಉಪ್ಥಿತರಿದ್ದರು.
ಮುಖ್ಯಶಿಕ್ಷಕ ನಾರಾಯಣ ಎಚ್.ಎಸ್. ಸ್ವಾಗತಿಸಿ, ಲೀನಾ ವಂದಿಸಿದರು. ಸುಬ್ರಹ್ಮಣ್ಯ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಅನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಒಂದು ಕೋಟಿ ವೆಚ್ಚದ ಗುರುಭವನಕ್ಕೆ ಸದ್ಯದಲ್ಲಿ ಶಂಕುಸ್ಥಾಪನೆ ನೆರವೇರಲಿದೆ. ಈ ಭವನದಲ್ಲಿ ಕ್ಷೇತ್ರದ ಎಲ್ಲಾ ಶಿಕ್ಷಕರಿಗೆ ವಿವಿಧ ತರಬೇತಿ, ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಲಾಗುವುದು.- ಕೆ.ಗೋಪಾಲ ಪೂಜಾರಿ, ಶಾಸಕರು ಬೈಂದೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.