ಮಲಯಾಳಂ ಚಿತ್ರನಟ ಮೋಹನ್ ಲಾಲ್ ಅಥವಾ ಲಾಲೇಟ್ಟನ್ ಕೇವಲ ಚಲನಚಿತ್ರಗಳಲ್ಲಿ ಮಾತ್ರ ನಾಯಕನಲ್ಲ. ಬದಲಾಗಿ ಸಮಾಜ ಸೇವೆಯ ಮೂಲಕ ನಿಜ ಜೀವನದಲ್ಲಿಯೂ ಮಾದರಿ ಸೇವಾ ಕಾರ್ಯಗಳನ್ನು ಮಾಡಿ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. ಅವರ ಸೇವಾ ಕಾರ್ಯಗಳಿಗೆ ಸಾಕ್ಷಿಯೇ ಅವರ ವಿಶ್ವ ಶಾಂತಿ ಫೌಂಡೇಶನ್. ಸಮಾಜದ ದಮನಿತ ವರ್ಗಗಳ ಆರೋಗ್ಯ ಮತ್ತು ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಲಾಲೇಟ್ಟನ್ ಆರಂಭಿಸಿದ ಈ ಸಂಸ್ಥೆ ಇಂದು, ಕೊರೋನಾ ಸಂಕಷ್ಟದಿಂದ ನರಳುತ್ತಿರುವ ಸಮಾಜವನ್ನು ರಕ್ಷಿಸುವ ನಿಟ್ಟಿನಲ್ಲಿಯೂ ಕಾರ್ಯ ನಿರ್ವಹಿಸಿದೆ ಎಂದರೆ ನಂಬಲೇಬೇಕು. ಈ ವರೆಗೆ ಈ ಫೌಂಡೇಶನ್ನ ಅಡಿಯಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಸಹಾಯ ಪಡೆದುಕೊಂಡಿದ್ದಾರೆ ಎಂಬುದರಲ್ಲಿಯೇ ಈ ಸಂಸ್ಥೆಯ ಆಶಯಗಳು ಸಾಮಾನ್ಯರಿಗೂ ಅರ್ಥವಾಗಿ ಬಿಡುತ್ತವೆ. ಅಲ್ಲದೆ ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವಲ್ಲೀಯೂ ಈ ಸಂಸ್ಥೆ ಆಸ್ಥೆ ವಹಿಸುತ್ತಿದೆ. ಆ ಮೂಲಕ ಸಮಾಜ ಸೇವೆಯೇ ಉಸಿರು ಎಂಬಂತೆ ಕಾರ್ಯ ನಿರ್ವಹಿಸುತ್ತಿದೆ.
ಮಲಯಾಳಂ ನಟ ಮೋಹನ್ ಲಾಲ್ ಅವರ ವಿಶ್ವ ಶಾಂತಿ ಫೌಂಡೇಶನ್ ವತಿಯಿಂದ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಆರೋಗ್ಯ ರಕ್ಷಕರಿಗೆ ಉಚಿತ ಸುರಕ್ಷತಾ ಕಿಟ್ಗಳನ್ನು ನೀಡಲಾಗಿದೆ. ತಮಿಳುನಾಡಿನಲ್ಲಿ ಸುಮಾರು 1000 ದಷ್ಟು ಪಿಪಿಇ ಕಿಟ್ಗಳು, 2000 ದಷ್ಟು ಎನ್95 ಮಾಸ್ಕ್ಗಳನ್ನು ಕೊರೋನಾ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ ನೀಡಲಾಗಿದೆ. ಸ್ವಯಂ ಮೋಹನ್ ಲಾಲ್ ಅವರೇ ಸ್ವತಃ 1000 ಪಿಪಿಇ ಕಿಟ್ಗಳನ್ನು ಪುಣೆ ಮುನ್ಸಿಪಲ್ ಕಾರ್ಪೊರೇಶನ್ನ ಆರೋಗ್ಯ ಸಿಬ್ಬಂದಿಗಳಿಗೆ ನೀಡಿದ್ದಾರೆ.
ಈ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ವಿಶ್ವ ಶಾಂತಿ ಫೌಂಡೇಶನ್ ವತಿಯಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘ ಜನಕಲ್ಯಾಣ ಸಮಿತಿ ಮತ್ತು ಪುಣೆ ಮುನ್ಸಿಪಲ್ ಕಾರ್ಪೊರೇಶನ್ ಜಂಟಿಯಾಗಿ ನಡೆಸುತ್ತಿರುವ ಆರೋಗ್ಯ ರಕ್ಷಾ ಸೇವಾ ಅಭಿಯಾನಕ್ಕೆ ಉಚಿತವಾಗಿ ವಿಶ್ವ ಶಾಂತಿ ಫೌಂಡೇಶನ್ ನೀಡಿದೆ. ಆ ಮೂಲಕ ಕೊರೋನಾ ಸೋಂಕಿನ ಜೊತೆಗೆ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಣೆ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ತಮ್ಮ ಕೈಲಾದ ಸೇವೆಯನ್ನು ನೀಡುವ ಮೂಲಕ ಮಾದರಿಯಾಗಿದೆ.
ಕೊರೋನಾ ಭೀಕರವಾಗಿ ಕಾಡುತ್ತಿರುವ ತಮಿಳುನಾಡಿನ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸಚಿವ ವೇಲುಮಣಿ ಅವರ ಮೂಲಕ ಅಗತ್ಯ ಆರೋಗ್ಯ ರಕ್ಷಕ ಉಪಕರಣಗಳನ್ನು ಆರೋಗ್ಯ ಸಿಬ್ಬಂದಿಗಳಿಗೆ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದ ಮೂಲಕ ತಲುಪಿಸಲಾಗಿದೆ ಎಂದು ವಿಶ್ವ ಶಾಂತಿ ಟ್ರಸ್ಟ್ನ ನಿರ್ದೇಶಕ ಡಾ. ನಾರಾಯಣನ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಕೊರೋನಾ ಯುದ್ಧದಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿರುವ ತಮಿಳುನಾಡು ಪೊಲೀಸರಿಗೆ ಎನ್95 ಮಾಸ್ಕ್ಗಳನ್ನು ಐಜಿ ಪೆರಿಯಯ್ಯ ಐಪಿಎಸ್ ಅವರ ಮುಖೇನ ವಿಶ್ವ ಶಾಂತಿ ಫೌಂಡೇಶನ್ ನೀಡಿದೆ.
ವಿಶ್ವ ಶಾಂತಿ ಫೌಂಡೇಶನ್ನ ನಿರ್ದೇಶಕಿ ಸುನಿತಾ ಪೆಂಡೂರ್ಕರ್ ಪುಣೆಯ ಮೇಯರ್ ಮುರಳೀಧರ ಮೊಹೊಲ್ ಅವರ ಮುಖಾಂತರ ಅಗತ್ಯ ಪಿಪಿಇ ಕಿಟ್ ಗಳನ್ನು ಆರೋಗ್ಯ ಸಂರಕ್ಷಣಾ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೇನಾನಿಗಳಿಗೆ ನೀಡುವುದಕ್ಕಾಗಿ ಹಸ್ತಾಂತರ ಮಾಡಿದ್ದಾರೆ. ಪುಣೆ ಮಹಾನಗರದ ಆರೆಸ್ಸೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಈ ಆರೋಗ್ಯ ರಕ್ಷಾ ಕವಚಗಳ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಎಪ್ರಿಲ್ 25 ರಿಂದ ತೊಡಗಿದಂತೆ ರೆಡ್ ಝೋನ್ಗಳಲ್ಲಿ ಫೌಂಡೇಶನ್ ವತಿಯಿಂದ ಆರೋಗ್ಯ ರಕ್ಷಣಾ ಮಾಹಿತಿ ಅಭಿಯಾನಗಳು, ಆರೋಗ್ಯ ತಪಾಸಣಾ ಶಿಬಿರಗಳನ್ನೂ ನಡೆಸಲಾಗಿದೆ. ಸುಮಾರು 53 ಸಾವಿರ ಮಂದಿ ಈ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಅಲ್ಲದೆ, ಆರೋಗ್ಯ ರಕ್ಷಣಾ ಸಿಬ್ಬಂದಿಗಳಿಗೆ ಪಿಪಿಇ ಕಿಟ್ಗಳು ತೀರಾ ಅವಶ್ಯವಾಗಿದ್ದು, ಅವುಗಳನ್ನು ನೀಡಿರುವ ಮೋಹನ್ ಲಾಲ್ ಅವರ ಫೌಂಡೇಶನ್ಗೆ ಪುಣೆಯ ಮುನ್ಸಿಪಲ್ ಕಾರ್ಪೊರೇಶನ್ ಕೃತಜ್ಞತೆ ಗಳನ್ನೂ ತಿಳಿಸಿದೆ.
ಮೋಹನ್ ಲಾಲ್ ಅವರ ಸ್ವಂತ ರಾಜ್ಯ ಕೇರಳದಲ್ಲಿಯೂ ಈ ಫೌಂಡೇಶನ್ ಕೊರೋನಾ ವಿರುದ್ಧದ ಹೋರಾಟದಲ್ಲಿ ತನ್ನ ಕೈಲಾದ ಸಹಾಯವನ್ನು ಮಾಡಿದೆ. ಕೊರೋನಾ ಐಸೋಲೇಷನ್ ವಾರ್ಡ್ಗಳಲ್ಲಿ ಕಾರ್ಯ ನಿರ್ವಹಣೆಗೆ ಎರ್ನಾಕುಳಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ವಯಂಚಾಲಿತ ರೊಬೋಟ್ಗಳನ್ನು ಕೊಡುಗೆಯಾಗಿ ನೀಡಿದೆ. ಈ ರೊಬೋಟ್ ಸೋಂಕಿತನ ಆರೋಗ್ಯ ಮಾಹಿತಿ, ಆತನಿಗೆ ಆಹಾರ ಪೂರೈಕೆ, ಔಷಧ ನೀಡುವ ಕೆಲಸವನ್ನು ಮಾನವನ ಸಹಾಯವಿಲ್ಲದೆ ಮಾಡುವ ಸಾಮರ್ಥ್ಯ ಹೊಂದಿದ್ದು, ಅದನ್ನು ಕೊಡುಗೆಯಾಗಿ ನೀಡುವ ಮೂಲಕ ವೈದ್ಯಕೀಯ ಸಿಬ್ಬಂದಿಗಳು ಸೋಂಕಿತನೊಂದಿಗೆ ನೇರ ಸಂಪರ್ಕ ಸಾಧಿಸುವುದನ್ನೂ ಕಡಿಮೆಯಾಗಿಸುವಂತೆ ಮಾಡಿದೆ. ಜೊತೆಗೆ ಈ ರೊಬೋಟ್ ನಲ್ಲಿ ರೋಗಿ ಮತ್ತು ವೈದ್ಯರು ವಿಡಿಯೋ ಕಾಲ್ ಮೂಲಕ ಕಾನ್ಫರೆನ್ಸ್ ನಡೆಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಆ ಮೂಲಕ ವೈದ್ಯರಿಗೂ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮವನ್ನು ಈ ರೊಬೋಟ್ ನಲ್ಲಿ ಅಳವಡಿಸಲಾಗಿದೆ. ಜೊತೆಗೆ ಮಾನವನ ಹಸ್ತಕ್ಷೇಪ ಇಲ್ಲದೆಯೇ ಸೋಂಕನ್ನು ನಿವಾರಣೆ ಮಾಡುವ ಸಾಮರ್ಥ್ಯ ವಿರುವ ಕರ್ಮಿ ಬೋಟ್, ಅಟೋಮೆಟಿಕ್ ಸ್ಯಾನಿಟೈಸ್ ಮಾಡುವ, ಸ್ವಚ್ಛಗೊಳಿಸುವ ರೊಬೋಟ್ ಅನ್ನು ಸಹ ನೀಡಿದ್ದು, ಆ ಮೂಲಕ ಮಾನವ ಶಕ್ತಿಯ ಕಡಿಮೆ ಬಳಕೆಯ ಮೂಲಕ ಕೊರೋನಾ ನಿಯಂತ್ರಣಕ್ಕೂ ಕ್ರಮಗಳನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವುದಕ್ಕೆ ವಿಶ್ವ ಶಾಂತಿ ಫೌಂಡೇಶನ್ ಸಹಾಯ ಮಾಡಿದೆ.
ಜೊತೆಗೆ ಮೋಹನ್ ಲಾಲ್ ಅವರು ಕೇರಳ ಸಿಎಂ ರಿಲೀಫ್ ಫಂಡ್ಗೆ 50 ಲಕ್ಷ ರೂ. ಗಳ ದೇಣಿಗೆಯನ್ನು ಕೊರೋನಾ ವಿರುದ್ಧದ ಹೋರಾಟಕ್ಕಾಗಿ ನೀಡಿದ್ದಾರೆ. ಆ ಮೂಲಕ ಕೊರೋನಾಗೆ ದೇಣಿಗೆ ನೀಡಿದ ಮೊದಲ ಮಲಯಾಳಂ ಚಿತ್ರನಟ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಅಲ್ಲದೆ ಭಾರತದ ಎಲ್ಲಾ ಭಾಷೆಗಳ ದಿಗ್ಗಜ ನಟರು ಮಾಡಿದ ಕೊರೋನಾ ಅವೇರ್ನೆಸ್ ಕಿರು ಚಿತ್ರದಲ್ಲಿಯೂ ಮೋಹನ್ ಲಾಲ್ ಅವರು ಪಾತ್ರ ನಿರ್ವಹಿಸುವ ಮೂಲಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.
ಹೀಗೆ ತಮ್ಮ ಟ್ರಸ್ಟ್ ಮುಖೇನ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮೋಹನ್ ಲಾಲ್ ಅವರು ಜನಮಾನಸದಲ್ಲಿ ನೆಲೆಯಾಗಿದ್ದಾರೆ ಎಂದರೂ ತಪ್ಪಾಗಲಾರದು. ವಿಶ್ವ ಶಾಂತಿ ಫೌಂಡೇಶನ್ ಮೂಲಕ ಸಮಾಜದ ಶಾಂತಿ ಕಾಪಾಡುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೋಹನ್ ಲಾಲ್ ಅವರ ತಂಡಕ್ಕೆ ನಿಜಕ್ಕೂ ಧನ್ಯವಾದ ತಿಳಿಸಲೇ ಬೇಕು.
Source : www.organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.