ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧೆಡೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ 29.1 ಕಿ.ಮೀ ರಸ್ತೆಗೆ ರೂ. 22.73 ಕೋಟಿ ಮಂಜೂರಾಗಿದೆ. ಎಳನೀರು-ದಿಡುಪೆ ರಸ್ತೆ ಅಭಿವೃದ್ಧಿಗೆ ರೂ. 14.66 ಕೋಟಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಉಜಿರೆ ಗ್ರಾಮದ ನಿನ್ನಿಕಲ್ಲು-ಪೊಸಕಂಡ-ಗುಂಡಿಕಂಡ ವರೆಗಿನ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ ಮಂಜೂರಾದ 3.23 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಹಿಂದಿನ ಸರಕಾರದ ತೊಂದರೆಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿರಲಿಲ್ಲ. ಇದೀಗ ಸರಕಾರ ವಿವಿಧ ಯೋಜನೆಯಡಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರುಗೊಳಿಸಿದೆ. ಈ ಬಾರಿ 10 ರಸ್ತೆಗಳಿಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೆ. 6 ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ರಸ್ತೆಗಳ ಅಭಿವೃದ್ದಿ ಕಾರ್ಯ ಶೇ. 95ರಷ್ಟು ಮುಗಿದಿದ್ದು, ಶೇ. 5ರಷ್ಟು ಮಾತ್ರ ಬಾಕಿ ಉಳಿದಿದೆ. ರಾಜೀವಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ 81 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಎಪ್ರಿಲ್ ಕೊನೆಯೊಳಗೆ ನೀಡಲಾಗುವುದು ಎಂದರು.
ಈ ಸಂದರ್ಭ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ ಮಾತನಾಡಿ ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ತಾ.ಪಂ. ಸದಸ್ಯೆ ವಿಮಲ, ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಗೌಡ, ಉಪಾಧ್ಯಕ್ಷೆ ಪುಷ್ಪ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಸುಂದರ ಗೌಡ ಇಚ್ಚಿಲ, ಪಿಡಿಓ ಸುಶೀಲ ಹೆಗ್ಡೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ವರದಿಯನ್ನು ಮಂಗಳೂರು ಕಾರ್ಯಪಾಲಕ ಅಭಿಯಂತರ ಜಯಾನಂದ ಮಂಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.