ನವದೆಹಲಿ: ಮೋದಿ ಅವರ ಆತ್ಮ ನಿರ್ಭರ ಭಾರತ ಯೋಜನೆಯ 20 ಲಕ್ಷ ಕೋಟಿ ರೂ. ಗಳ ನಾಲ್ಕನೇ ಹಂತದ ವಿತರಣೆಯ ಕುರಿತಂತೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ವಿವರಣೆ ನೀಡಿದ್ದಾರೆ. ರಚನಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಹಲವು ವಿಷಯಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಯಾವ ಕ್ಷೇತ್ರಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ಯಾಕೇಜ್ಗಳನ್ನು ಘೋಷಣೆ ಮಾಡಲಾಗಿದೆ ಎಂಬುದರ ಕುರಿತಾಗಿಯೂ ಅವರು ಈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಟ್ಟು 8 ರಚನಾತ್ಮಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವಂತೆ ಈ ಸುಧಾರಣೆಗಳನ್ನು ತರಲಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. 1. ಖನಿಜ, 2. ಕಲ್ಲಿದ್ದಲು ,3. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉತ್ಪಾದನೆಗಳು, 4. ವಿಮಾನಯಾನ, 5. ಬಾಹ್ಯಾಕಾಶ, 6. ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಸ್ಕಾಂಗಳಿಗೆ ಸಂಬಂಧಿಸಿದಂತೆ ಸುಧಾರಣೆ, 7. ಅಣುಶಕ್ತಿ ಸುಧಾರಣೆ, 8. ವಾಯು ಪ್ರದೇಶ ನಿರ್ವಹಣೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಕೇಂದ್ರ ಸರ್ಕಾರ ತನ್ನ ಆತ್ಮನಿರ್ಭರ ಭಾರತದ ಕನಸಿನಲ್ಲಿ ಸೇರ್ಪಡೆಗೊಳಿಸಿದ್ದು, ಆ ಮೂಲಕ ದೇಶವನ್ನು ಮತ್ತಷ್ಟು ಸುಭದ್ರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ರಿಫಾರ್ಮ್, ಪರ್ಫಾರ್ಮ್ ಆ್ಯಂಡ್ ಟ್ರಾನ್ಸ್ಫಾರ್ಮ್ ಎಂಬ ಮಾತಿಗೆ ಅನುಗುಣವಾಗಿ ಈ ಯೋಜನೆಗಳಿಗೆ ಸಾಕಾರ ರೂಪ ಕೊಡಲು ಕೇಂದ್ರ ಮುಂದಾಗಿದೆ. ದೇಶದಲ್ಲಿ ಉತ್ಪಾದನೆ, ದೇಶಕ್ಕಾಗಿ ಉತ್ಪಾದನೆ ಮತ್ತು ರಫ್ತಿಗಾಗಿ ಉತ್ಪಾದನೆ ಎಂಬ ನೀತಿಯಂತೆ ಈ ರಚನಾತ್ಮಕ ಕ್ಷೇತ್ರಗಳ ಸುಧಾರಣೆಗೆ ಇದೀಗ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ದೇಶೀಯ ಮಟ್ಟದಲ್ಲಿ ಖನಿಜ ಸಂಪನ್ಮೂಲಗಳ ಉತ್ಪಾದನೆ, ರಫ್ತಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಕಲ್ಲಿದ್ದಲು ಗಣಿಗಾರಿಕೆಯನ್ನು ವಾಣಿಜ್ಯೀಕರಣಗೊಳಿಸುವುದು, ಕೈಗಾರಿಕಾ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು, ದೇಶೀಯ ಕಲ್ಲಿದ್ದಲಿನ ಗಣಿಗಾರಿಕೆಗೆ ಆದ್ಯತೆ, ಆದಾಯ ಹಂಚಿಕೆಯ ಆಧಾರದಲ್ಲಿ ವಾಣಿಜ್ಯ ಗಣಿಗಾರಿಕೆ, ಕಲ್ಲಿದ್ದಲು ಆಮದು ಕಡಿಮೆ ಮಾಡಲು ಹೊಸ ನೀತಿ, ಬಹಳ ಮುಖ್ಯವಾಗಿ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ ಬಳಸುವರಿಗೆ ಪ್ರೋತ್ಸಾಹ ಧನ ನೀಡುವ ನಿಟ್ಟಿನಲ್ಲಿಯೂ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಕಲ್ಲಿದ್ದಲು ಮೂಲಸೌಕರ್ಯ ಅಭಿವೃದ್ಧಿಗೆ 50 ಸಾವಿರ ಕೋಟಿ ರೂ. ಗಳನ್ನು ಸರ್ಕಾರ ಮೀಸಲಿಟ್ಟಿದೆ. ಅಲ್ಲದೆ ದೇಶದ 500 ಖನಿಜ ಗಣಿಗಾರಿಕೆಗಳ ಹರಾಜು, ಬಾಕ್ಸೈಟ್ ಮತ್ತು ಕಲ್ಲಿದ್ದಲುಗಳ ಜಂಟಿ ಹರಾಜು, ಷರತ್ತು ರಹಿತ ಹರಾಜು ಪ್ರಕ್ರಿಯೆಗಳ ಮೂಲಕ ಉದ್ಯಮ ಸ್ನೇಹಿ ರಾಷ್ಟ್ರವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ನಾಗರಿಕ ವಿಮಾನಯಾನ ಕ್ಷೇತ್ರ ಸುಧಾರಣೆಗೂ ಕೇಂದ್ರ ಕ್ರಮ ಕೈಗೊಂಡಿದ್ದು, ಅದಕ್ಕಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣ, ಭಾರತದಲ್ಲಿಯೇ ವಿಮಾನಗಳ ನಿರ್ವಹಣೆ, ಭಾರತವನ್ನು MRO ಕೇಂದ್ರವನ್ನಾಗಿ ಮಾಡಲು ಒತ್ತು ನೀಡುವುದಾಗಿಯೂ ಕೇಂದ್ರ ತಿಳಿಸಿದೆ. ಅಲ್ಲದೆ ಏರ್ಪೋರ್ಟ್ಗಳ ಹರಾಜಿಗೂ ಅವಕಾಶ ಕಲ್ಪಿಸುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ರಕ್ಷಣಾ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ದೇಶೀಯ ರಕ್ಷಣಾ ಸಾಧನಗಳ ಬಳಕೆಗೆ ಆದ್ಯತೆ, ಹೈಟೆಕ್ ರಕ್ಷಣಾ ಉಪಕರಣಗಳ ಆಮದು, ಸ್ವಾಯತ್ತತೆಗೆ ಮತ್ತು ದಕ್ಷತೆಗೆ ಆದ್ಯತೆ ನೀಡುವ ಭರವಸೆಯನ್ನು ಮೋದಿ ಸರ್ಕಾರ ನೀಡಿದೆ. ರಕ್ಷಣಾ ಉಪಕರಣಗಳ ಖರೀದಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವುದಾಗಿಯೂ ತಿಳಿಸಿದೆ. ಜೊತೆಗೆ ಆಮದಾದ ಉಪಕರಣಗಳಿಗೆ ದೇಶೀಯ ಬಿಡಿ ಭಾಗಗಳ ಬಳಕೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿದೆ.
ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಡಿಸ್ಕಾಂಗಳ ಖಾಸಗೀಕರಣ, ವಿದ್ಯುತ್ ವಿತರಣೆ ಖಾಸಗೀಕರಣ, ಡಿಜಿಟಲ್ ಮುಂಗಡ ಪಾವತಿಗೆ ವಿನಾಯಿತಿ, ವಿದ್ಯುತ್ ವಿತರಣಾ ಕಂಪನಿಗಳಿಗೆ ಸಬ್ಸಿಡಿ ನೀಡುವುದಾಗಿಯೂ ತಿಳಿಸಿದೆ. ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಖಾಸಗಿ ಹೂಡಿಕೆಗೆ ಉತ್ತೇಜನಕ್ಕಾಗಿ 8,100 ಕೋಟಿ ರೂ. ಇಟ್ಟಿರುವುದಾಗಿಯೂ ವಿತ್ತ ಸಚಿವೆ ತಿಳಿಸಿದ್ದಾರೆ.
ಬಾಹ್ಯಾಕಾಶ ಚಟುವಟಿಕೆಗೆ ಸಂಬಂಧಿಸಿದಂತೆ ಭಾರತೀಯ ಸ್ಟಾರ್ಟ್ಆಪ್ಗಳಿಗೆ ಆದ್ಯತೆ, ಸ್ಯಾಟಲೈಟ್ ಉಡಾವಣೆಯಲ್ಲಿ ಖಾಸಗಿ ಸಹಭಾಗಿತ್ವ, ಇಸ್ರೋ ಸೌಲಭ್ಯ ಪಡೆಯಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. ಅಟೋಮಿಕ್ ಎನರ್ಜಿಗೆ ಸಂಬಂಧಿಸಿದಂತೆಯೂ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮೋದಿ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅ ಮೂಲಕ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಿರುವ ರಚನಾತ್ಮಕ ಕ್ಷೇತ್ರಗಳಿಗೆ ಮರುಜೀವ ನೀಡಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.