ರಾಷ್ಟೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಏನೆಂದು ಈಗೀಗ ಎಲ್ಲರಿಗೂ ಮನದಟ್ಟಾಗಿದೆ. ಸಂಘ ಎಂದರೆ RSS ಎನ್ನುವಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಅಚ್ಚಾಗಿದೆ. RSS ಎಂದರೆ ಭಯೋತ್ಪಾದಕ ಸಂಘಟನೆ, RSS ಎಂದರೆ ಕೋಮುವಾದಿ ಸಂಘಟನೆ ಎನ್ನುತ್ತಿದ್ದವರೆಲ್ಲ ಸಂಘದ ನಿಸ್ವಾರ್ಥ ಸೇವೆ ಕಂಡು ಬಾಯಿ ಮುಚ್ಚಿಕೊಂಡಿದ್ದಾರೆ. ಸಂಘ ಹೇಗಿರಬೇಕು ಎಂದರೆ RSS ನಂತಿರಬೇಕು ಎಂಬಂತೆ ಸಂಘಕಾರ್ಯ ಇಂದು ಮನೆಮಾತಾಗಿದೆ. ಇದಕ್ಕೆ ಕಾರಣ ಇಷ್ಟೊಂದು ಅಗಾಧವಾಗಿ ಹಾಗೂ ಒಂದಿಂಚೂ ಕದಲದೇ ತನ್ನ ಕಾರ್ಯವನ್ನು ಸ್ಥಾಪಿತವಾದಾಗಿಂದಲೂ ನಡೆಸಿಕೊಂಡು ಬಂದಿರುವುದು.
ಹಿಂದೂಗಳ ಮೇಲಿನ ಅತ್ಯಾಚಾರ ಇಂದು ನಿನ್ನೆಯದಲ್ಲ, ಈ ಅತ್ಯಾಚಾರಗಳನ್ನು ತಡೆಯಲು, ಹಿಂದೂ ಧರ್ಮವನ್ನು ಜಾಗೃತಗೊಳಿಸಲು ಸಂಘ 1925 ರಂದು ಪ್ರಾರಂಭಯಾಯಿತು. ರಾಷ್ಟ್ರ ಸೇವೆಗಾಗಿ ತಾನಾಗಿಯೇ ಮುಂದೆ ಬಂದು ಸಮರ್ಪಿಸಿಕೊಂಡದ್ದು ಸಂಘ. ಸಂಘದ ಮೂಲಕ ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂಬುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿ.
ಈ ಗುರಿ ತಲುಪಬೇಕಾದರೆ ಸ್ವಯಂಸೇವಕ ಹೇಗಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಇದನ್ನು ಡಾಕ್ಟರ್ ಜಿ ಒಂದು ಕಡೆ ವರ್ಣಿಸುತ್ತಾರೆ, ಒಬ್ಬ ಸ್ವಯಂಸೇವಕ ಆಕರ್ಷಣೆಯ ಕೇಂದ್ರವಾಗಿರಬೇಕು. ತನ್ನ ಸುತ್ತಲಿರುವ ಜನರನ್ನು ಸೆಳೆಯುವ ಕಲೆಯನ್ನು ಹೊಂದಿರಬೇಕು. ಸವಿ ಮಾತು, ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಯಾವ ವ್ಯಕ್ತಿಯು ಯಾವ ಕೆಲಸಕ್ಕೆ ಸಮರ್ಥ ಎಂದು ಗುರುತಿಸುವ ಜಾಣ್ಮೆ ಇವೆಲ್ಲವೂ ಉಳ್ಳವ ಸಂಘವನ್ನು ಕಟ್ಟಬಲ್ಲ. ಸಂಘ ಕಾರ್ಯವೆಂದರೆ ಕೇವಲ ವ್ಯಕ್ತಿಗೆ ಸೀಮಿತವಾದದ್ದಲ್ಲ. ಬದಲಾಗಿ ನಮ್ಮ ಸಮಾಜದಲ್ಲಿರುವ ಎಲ್ಲಾ ಜನರಿಗೂ ಸೀಮಿತವಾದದ್ದು. ಅದಕ್ಕೆ ಪೂರಕ ಎಂಬಂತೆ ಇಂದಿಗೂ ಸಂಘದಲ್ಲಿ ಯಾರಿಗೂ ಗುರು ಎಂದು ಕರೆಯುವುದಿಲ್ಲ, ಇಲ್ಲಿ ಪ್ರತಿಯೊಬ್ಬ ಸ್ವಯಂಸೇವಕನಿಗೂ ಭಗವಾಧ್ವಜವೇ ಗುರು. ಕಾರಣ ಇಷ್ಟೇ. ಯಾವೊಬ್ಬ ವ್ಯಕ್ತಿಯೂ ಸಹ ಪರಿಪೂರ್ಣನಲ್ಲ, ಶಾಶ್ವತವಲ್ಲ. ಅಂಥವರನ್ನು ಗುರುವೆಂದು ಭಾವಿಸಿದಲ್ಲಿ ನಮ್ಮ ಸ್ಥಿತಿ ಏರುಪೇರಾಗುವ ಸಂಭವ ಇರುತ್ತದೆ. ಆದರಿಂದ ನಮ್ಮ ಇತಿಹಾಸ, ಪರಂಪರೆ, ನಿಸ್ವಾರ್ಥ ತ್ಯಾಗಗಳು ಹಾಸುಹೊಕ್ಕಾಗಿರುವ ಭಗವಾ ಧ್ವಜವನ್ನೇ ನಮ್ಮ ಗುರು ಎಂದು ಪರಿಗಣಿಸಿದ್ದೇವೆ.
ಒಬ್ಬ ವ್ಯಕ್ತಿ ಸಂಘಕ್ಕೆ ಸೇರಿದರೆ ಮೊದಲು ಅವನು ಕಲಿಯುವುದೇ ನಾವೆಲ್ಲರೂ ಒಂದೇ ಎಂದು. ಸಂಘದಂಗಳದಲ್ಲಿ ಯಾವುದೇ ಜಾತಿಗಳ ಭೇದವಿಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ, ಜೊತೆಗೇ ಆಟವಾಡುತ್ತಾರೆ, ವಾಸವೂ ಜೊತೆ ಜೊತೆಗೆಯೇ. ಇಲ್ಲಿ ಎಂದಿಗೂ ನೀನಾವ ಜಾತಿ ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುವುದಿಲ್ಲ. ಈ ಮನೋಭಾವ ಸಂಘವನ್ನು ಸಮಾಜಕ್ಕೆ ಮತ್ತಷ್ಟು ಆಪ್ತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಹೆಚ್ಚಿನ ಯುವ ಪಡೆ ಸಂಘದತ್ತ ಮುಖ ಮಾಡುತ್ತಿದ್ದಾರೆ.
ಇಂದು ಸಂಘ ಈ ಹಂತಕ್ಕೆ ಬರಬೇಕಾದರೆ ಅನೇಕ ಹಿರಿಯರು ತಮ್ಮ ಜೀವನವನ್ನೇ ಇದಕ್ಕಾಗಿ ನೀಡಿದ್ದಾರೆ. ಸಂಘಕ್ಕಾಗಿ ಮನೆಯ ಪಾತ್ರೆಗಳನ್ನು, ತಮ್ಮ ಸ್ವಂತ ವಸ್ತುವನ್ನು ಮಾರುವ ಮೂಲಕ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ನಮ್ಮ ನಿಮ್ಮ ಮಧ್ಯೆ ಅನೇಕರು ಸಿಗುತ್ತಾರೆ. ಪ್ರಚಾರಕರುಗಳು, ವಿಸ್ತಾರಕ್ ಗಳು ಒಮ್ಮೊಮ್ಮೆ ಸಂಘದ ಕಚೇರಿಗಳಲ್ಲಿ ಅಲ್ಪ ಆಹಾರ, ನೀರನ್ನು ಕುಡಿದು ಸಂಘದ ಪ್ರಚಾರಕ್ಕೆ ಹೊರಡುತ್ತಿದ್ದರು. ಇನ್ನು ಪ್ರಚಾರಕ್ ಬಗ್ಗೆ ಹೇಳುವುದಾದರೆ, ಅವರ ಜೀವನ ಸಾಮಾನ್ಯರ ಜೀವನಕ್ಕಿಂತ ಭಿನ್ನ. ಸಂಘದ ಪರಿಚಯವೇ ಇಲ್ಲದ ಊರುಗಳಿಗೆ ತೆರಳಿ ಅಲ್ಲಿನ ಜನರನ್ನು ಒಗ್ಗೂಡಿಸಿ, ಸಂಘದ ಕಾರ್ಯದ ಬಗೆಗಿನ ವಿಷಯಗಳನ್ನು ತಿಳಿಸಿ, ಅಲ್ಲೊಂದು ಸಂಘದ ಶಾಖೆ ಪ್ರಾರಂಭ ಮಾಡುವುದು.
ಅದರಲ್ಲೇನಿದೆ ಎಂದುಕೊಳ್ಳಬೇಡಿ. ಈ ಕೆಲಸ ನಾವಂದುಕೊಳ್ಳುವಷ್ಟು ಸುಲಭವಲ್ಲ. ಸಂಘ ನೀಡಿದ ಹಣದಲ್ಲಿ ಅಲ್ಲಿಗೆ ತೆರಳಬೇಕು. 10-15 ಕಿಲೋಮೀಟರ್ ನಷ್ಟು ಹಳ್ಳಿಗಳು ದೂರವಿದ್ದರೆ ಒಮ್ಮೊಮ್ಮೆ ನಡೆದುಕೊಂಡೇ ಹೋಗಬೇಕು. ಹಳ್ಳಿಗಳಲ್ಲಿ ಊಟ, ಮಲಗುವುದಕ್ಕೆ ವ್ಯವಸ್ಥೆ ಅವರೇ ಮಾಡಿಕೊಳ್ಳಬೇಕು. ವ್ಯವಸ್ಥೆ ಆದರೆ ಸಮಸ್ಯೆಗಳಿಲ್ಲ. ಯಾರೂ ಮಲಗುವುದಕ್ಕೆ ಜಾಗ ಕೊಡದಿದ್ದರೆ ಅರಳಿ ಕಟ್ಟೆಯೊ, ದೇವಸ್ಥಾವನ್ನೋ ಆಶ್ರಯಿಸಬೇಕು. ಇಂಥ ಕಠಿಣ ಪರಿಸ್ಥಿತಿಯಲ್ಲಿಯೂ ಪ್ರಚಾರಕರು ಮಾಡುವ ನಿಷ್ಕಲ್ಮಶ ರಾಷ್ಟ್ರ ಸೇವೆಯೇ ಇಂದು ಸಮಾಜಕ್ಕೆ ಸಂಘವನ್ನು ಹತ್ತಿರವಾಗಿಸಿದೆ.
ಇನ್ನು ಪರಿಸ್ಥಿತಿ ಯಾವುದೇ ಇರಲಿ. ಸಂಘ ಇಂತಹ ಕಾರ್ಯವನ್ನು ಮಾಡಿ ಎಂದು ಹೇಳುವುದಕ್ಕಿಂತ ಮೊದಲೇ ಸ್ವಯಂಸೇವಕರು ಆ ಕಾರ್ಯದ ಸಿದ್ಧತೆಯಲ್ಲಿ ತೊಡಗಿರುತ್ತಾರೆ. ಅಷ್ಟರ ಮಟ್ಟಿಗೆ ಸಂಘ ಸ್ವಯಂಸೇವಕರನ್ನು ಸಿದ್ಧಪಡಿಸಿದೆ.
ಹಿಂದು ಜನತೆಯ ಸುಖವೇ ನನ್ನ ಹಾಗೂ ನನ್ನ ಕುಟುಂಬದ ಸುಖ ; ಹಿಂದು ಜನತೆಯ ಮೇಲೆರಗಿ ಬರುವ ವಿಪತ್ತೇ ನಮ್ಮೆಲ್ಲರಿಗೂ ಘೋರ ಗಂಡಾಂತರ ; ಹಿಂದು ಜನತೆಯ ಅಪಮಾನವೇ ನಮ್ಮೆಲ್ಲರ ಅಪಮಾನ ಎಂಬ ನಿಷ್ಟೆಯೊಂದಿಗೆ ಸಂಘ ಉಸಿರಾಡುತ್ತಿದೆ. ಈ ತೆರದ ಆತ್ಮೀಯ ಮನೋವೃತ್ತಿ ಹಿಂದು ಮಾತ್ರನ ರೋಮರೋಮದಲ್ಲೂ ವ್ಯಾಪಿಸಬೇಕು.
ಇದೇ ರಾಷ್ಟಧರ್ಮದ ಮೂಲಮಂತ್ರ. ಯಾರಿಗೆ ತನ್ನ ದೇಶ, ತನ್ನ ದೇಶ ಬಾಂಧವರ ವಿನಃ ಮತ್ತಾವುದರ ಮೋಹ ಇಲ್ಲವೋ, ತನ್ನ ಧರ್ಮ ಹಾಗೂ ಧರ್ಮ ಕಾರ್ಯದ ವಿನಃ ಇನ್ನಾವ ಕಾರ್ಯವೂ ಮುಖ್ಯವಲ್ಲವೋ, ತನ್ನ ಹಿಂದುಧರ್ಮವನ್ನು ಅಭಿವೃದ್ಧಿಗೊಳಿಸಿ ಹಿಂದುರಾಷ್ಟ್ರದ ಪ್ರತಾಪಿ ಸೂರ್ಯನು ಬೆಳಗುವಂತೆ ಮಾಡುವುದರ ಹೊರತು ಮತ್ತಾವ ಸ್ವಾರ್ಥ ಲಾಲಸೆಯೂ ಇಲ್ಲವೋ ಅವನು ಸ್ವಯಂಸೇವಕನಾಗಿರುತ್ತಾನೆ. ಅಂತಹವನ ಹೃದಯದಲ್ಲಿ ಭಯ, ಚಿಂತೆ ಅಥವಾ ನಿರುತ್ಸಾಹವನ್ನುಂಟು ಮಾಡುವ ಶಕ್ತಿ ಇಡೀ ಜಗತ್ತಿನಲ್ಲಿ ಯಾರಲ್ಲಿಯೂ ಇರಲಾರದು. ಇಂತಹ ನಿಸ್ವಾರ್ಥ ಸೇವೆಯೇ ಸಂಘದ ಪರಮ ಗುರಿ. ಇದು ಇಂದಿನ ವಿಚಾರವಲ್ಲ. ಹಿಂದೆಯೂ ಮುಂದೆಯೂ ಹಾಗೂ ಎಂದೆಂದಿಗೂ ಇದೇ ಸಂಘದ ಪರಮೋಚ್ಛ ಧ್ಯೇಯ.
✍️ ನೀವಣೆ ಕಲಾನಾಥ್ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.