ಇಡೀ ಜಗತ್ತೇ ಕರೋನವೈರಸ್ ಮಹಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿಹೋಗಿದೆ. ಈ ಚೀನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಜನ್ಮತಾಳಿ, ಡಿಸೆಂಬರ್ 19 ರಿಂದಲೇ ತನ್ನ ರಾಕ್ಷಸಿತನವನ್ನು ಪ್ರದರ್ಶಿಸಲಾರಂಭಿಸಿದೆ. ಆದರೆ ಜಗತ್ತಿಗೆ ವೈರಸ್ ಬಗ್ಗೆ ತಿಳಿದಿದ್ದು ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ಭಾಗದಲ್ಲಿ. ಚೀನಾದ ಮಹಾಗೋಡೆಯನ್ನು ದಾಟಿ ವೈರಸ್ ವಿಷಯ ಹೊರ ಜಗತ್ತಿಗೆ ತಿಳಿಯಲು ಎರಡು ತಿಂಗಳುಗಳೇ ಬೇಕಾಯಿತು. ಆದರೆ ಇದಕ್ಕಾಗಿ ಮಾನವತೆ ತೆರುತ್ತಿರುವ ಬೆಲೆ ತುಂಬಾ ದೊಡ್ಡದು. ಈಗಾಗಲೇ ಚೀನಾವನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ಕಟಕಟೆಯ ಮುಂದೆ ನಿಲ್ಲಿಸಿ ಅದರಿಂದ ಟ್ರಿಲಿಯನ್ ಡಾಲರ್ ಮೊತ್ತಗಳನ್ನು ಪರಿಹಾರವಾಗಿ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಲು ಹಲವಾರು ದೇಶಗಳು ಸಿದ್ಧವಾಗಿ ನಿಂತಿವೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣಕಾಸು ನೆರವನ್ನು ನಿಲ್ಲಿಸುವ ಬೆದರಿಕೆ ಹಾಕಿದೆ. ಈ ವೈರಸ್ ಕಾರಣದಿಂದಾಗಿ ಸತ್ತವರ ಸಂಖ್ಯೆ ಹಲವು ಸಾವಿರಗಳನ್ನು ದಾಟಿದೆ. ಸಾವಿರಾರು ಜನರು ಸೋಂಕನ್ನು ತಗುಲಿಸಿಕೊಂಡಿದ್ದಾರೆ.
ನಮ್ಮ ದೇಶಕ್ಕೂ ವೈರಸ್ ಕಾಲಿಟ್ಟಿದೆ. ಈಗಾಗಲೇ ಸೋಂಕಿತರ ಸಂಖ್ಯೆ 20 ಸಾವಿರವನ್ನು ದಾಟಿದೆ ಮತ್ತು ವೈರಸ್ ಕಾರಣದಿಂದ ಹತರಾದವರು ಸಂಖ್ಯೆ 700ರ ಗಡಿಯನ್ನು ದಾಟಿದೆ. ಪ್ರಧಾನಿ ನರೇಂದ್ರ ಮೋದಿಯವರು ಆರಂಭದಲ್ಲೇ ಎಚ್ಚೆತ್ತು ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಭಾರತ ಪ್ರಸ್ತುತ ಇತರ ದೇಶಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ. ಪ್ರಧಾನಿಯವರ ಈ ಗಟ್ಟಿತನದ ನಿರ್ಧಾರ ವೈರಸ್ ಪ್ರಸರಣದ ವೇಗವನ್ನು ಕುಂಠಿತಗೊಳಿಸಿವೆ ಮತ್ತು ವೈರಸ್ ಸಮುದಾಯ ಪ್ರಸರಣದ ಹಂತ ತಲುಪುವುದನ್ನು ತಡೆಹಿಡಿದಿದೆ. ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಿಂತು ಅವರು ವಿಧಿಸಿದ ನಿರ್ಬಂಧಗಳನ್ನು ಚಾಚುತಪ್ಪದೇ ಪಾಲನೆ ಮಾಡಿದೆ. ಭಾರತೀಯರು ಮರೆತಿದ್ದ ಕೆಲವೊಂದು ತಮ್ಮ ಹಳೆಯ ರೂಢಿಗಳನ್ನು ವೈರಸ್ ಮತ್ತೆ ನೆನಪಿಸಿಕೊಟ್ಟಿದೆ. ಹಸ್ತಲಾಘವ ಮಾಡುವ ಬದಲು ಜನರು ನಮಸ್ತೆ ಮಾಡುತ್ತಿದ್ದಾರೆ, ಜನರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ, ನೈರ್ಮಲ್ಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಆಹಾರಗಳನ್ನು ಕೂಡ ಜನರು ಈಗ ಸೇವಿಸಲಾರಂಭಿಸಿದರೆ. ಪ್ರಾಣಾಯಾಮ ಮತ್ತು ಧ್ಯಾನ ದಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಭಾರತೀಯ ನಿರ್ವಹಣಾ ಚಿಂತನೆಗಳನ್ನು ಹೇಳಿಕೊಡುವ ಮತ್ತು ಆಧ್ಯಾತ್ಮದ ಬಗ್ಗೆ ತಿಳಿಸಿಕೊಡುವ ಆನ್ಲೈನ್ ಕೋರ್ಸ್ಗಳು ಕೂಡ ಆರಂಭಗೊಂಡಿದೆ.
ನಮ್ಮ ಸ್ವದೇಶಿ ಚಿಲ್ಲರೆ ವ್ಯಾಪಾರಿಗಳು ಜನರಿಗೆ ಅತ್ಯಗತ್ಯ ಆಹಾರ ಧಾನ್ಯಗಳನ್ನು, ಔಷಧಿಗಳನ್ನು ಮತ್ತು ತರಕಾರಿಗಳನ್ನು ತಮಗಾಗಬಹುದಾದ ಅಪಾಯವನ್ನು ಲೆಕ್ಕಿಸದೆ ಪೂರೈಕೆ ಮಾಡುತ್ತಿದ್ದಾರೆ. ನಾಗರಿಕ ಸಮಾಜವು ಅಗತ್ಯ ಇರುವ ಜನರಿಗೆ ಬೇಕಾದ ನೆರವುಗಳನ್ನು ಒದಗಿಸುತ್ತಿದೆ. ಸಂಪೂರ್ಣ ರಾಷ್ಟ್ರ ಈಗ ಈ ಜನರ ಮೌಲ್ಯಗಳನ್ನು ಅರಿತು ಕೊಂಡಿದೆ.
ಕೆಲವೇ ದಿನಗಳಲ್ಲಿ ನಮ್ಮ ಉದ್ಯಮಶೀಲರು ಅನೇಕ ಹೊಸ ನಾವಿನ್ಯತೆ ಗಳೊಂದಿಗೆ ಹೊರಬಂದಿದ್ದಾರೆ. ಕೊಯಂಬತ್ತೂರು ಮತ್ತು ಕೆಲವು ಕಡೆಗಳಲ್ಲಿ ಕಡಿಮೆ ಬೆಲೆಯ ಸಮರ್ಥ ವೆಂಟಿಲೇಟರ್ಗಳನ್ನು ಅಭಿವೃದ್ಧಿಪಡಿಸಲಾಗಿದೆ, ಪರ್ಸನಲ್ ಪ್ರೋಟೆಕ್ಷನ್ ಇಕ್ವಿಪ್ಮೆಂಟ್ಗಳನ್ನು ಹಲವಾರು ಮಂದಿ ಕಡಿಮೆ ಬೆಲೆಗೆ ಉತ್ಪಾದನೆ ಮಾಡಿ ಪೂರೈಸುವ ಆಫರ್ಗಳನ್ನು ನೀಡಿದ್ದಾರೆ. ಬೆಳಗಾವಿ ಮೂಲದ ಕಂಪನಿ VEGA, DRDO ತಂತ್ರಜ್ಞಾನವನ್ನು ಪಡೆದು ಸ್ಯಾಂಪಲ್ ಸಂಗ್ರಹಿಸುವ kiosks ಅನ್ನು ಅಭಿವೃದ್ಧಿಪಡಿಸಿದೆ. ಇದು ಟೆಲಿಫೋನ್ ಬೂತ್ ಮಾದರಿಯಲ್ಲಿ ಇದ್ದು, ಇಲ್ಲಿ ಶಂಕಿತನ ಸ್ಯಾಂಪಲ್ ಅನ್ನು ವೈದ್ಯರು ಹೊರಗಿನಿಂದ ಸಂಗ್ರಹ ಮಾಡುತ್ತಾರೆ. ಶಂಕಿತ ಒಳಗಡೆ ಇರುತ್ತಾನೆ. ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಿಂದಲೂ ಇದಕ್ಕೀಗ ಡಿಮ್ಯಾಂಡ್ ಬಂದಿದೆ. ಪುಣೆ ಮೂಲದ ರಕ್ಷಾ ಪ್ಲೆಕೋಟ್ಸ್, ಐಸೋಲೈಷನ್ ಚೇಂಬರ್ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಇಂತಹ ನೂರಾರು ವಿಧಾನದ ನಾವಿನ್ಯತೆಗಳು ದಿನನಿತ್ಯ ಹೊರಹೊಮ್ಮುತ್ತಿವೆ. ಭಾರತೀಯ ರೈಲ್ವೆಯು ರೈಲು ಬೋಗಿಗಳನ್ನು ಹಾಸ್ಪಿಟಲ್ ವಾರ್ಡ್ ಆಗಿ ಪರಿವರ್ತಿಸಿದ್ದು, ಇದನ್ನು ಜಗತ್ತಿನಲ್ಲಿ ನಿಬ್ಬೆರಗಾಗಿದೆ. ಸ್ವದೇಶಿ ಸ್ಫೂರ್ತಿ ಅಂದರೆ ಇದು.
ಭಾರತದ ಔಷಧ ವಲಯವು ಸುಮಾರು 60 ದೇಶಗಳಿಗೆ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಔಷಧಿಗಳನ್ನು ಪೂರೈಕೆ ಮಾಡಿದೆ. ಇಡೀ ಜಗತ್ತೇ ಔಷಧಕ್ಕಾಗಿ ಈಗ ಭಾರತವನ್ನು ಅವಲಂಬಿಸಿದೆ. ಭಾರತ ಮತ್ತು ಭಾರತದ ಹೊರಗಡೆ ಚೀನಾ ವಿರೋಧಿ ಅಲೆ ಎದ್ದಿದೆ. ಚೀನಾದೊಂದಿಗೆ ವ್ಯವಹರಿಸುವ ಅಪಾಯವನ್ನು ಈಗ ಭಾರತದ ಕೈಗಾರಿಕೆಗಳು ಅರ್ಥಮಾಡಿಕೊಂಡಿದೆ. ಚೀನಾದಿಂದ ಆಮದು ಕಡಿಮೆಗೊಳಿಸುವ ಪ್ರಯತ್ನಗಳನ್ನು ದೊಡ್ಡಮಟ್ಟದಲ್ಲಿ ಮಾಡಲಾಗುತ್ತಿದೆ. ಇದು ನಮ್ಮ ಉತ್ಪಾದನಾ ವಲಯಕ್ಕೆ ಶಕ್ತಿಯನ್ನು ತುಂಬಿದೆ. ಚೀನಾದಿಂದ ಆಮದನ್ನು ತಡೆಗಟ್ಟಿದರೆ, ಮೊಬೈಲ್ನಿಂದ ಹಿಡಿದು ವಾಷಿಂಗ್ ಮೆಷಿನ್ ವರೆಗೆ ಚೀನಾದ ಪ್ರತಿ ವಸ್ತುಗಳನ್ನು ಗ್ರಾಹಕರು ಬಹಿಷ್ಕರಿಸಿದರೆ ನಮ್ಮ ದೇಶದಲ್ಲಿ ಲಕ್ಷ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಪ್ರಸ್ತುತ ನಮ್ಮ ದೇಶದ ಮೂಡ್ ಇದೇ ಹಾದಿಯಲ್ಲಿ ಸಾಗುತ್ತಿದೆ.
ಜಾಗತಿಕ ಪೂರೈಕೆ ಸರಪಣಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಡೆತಡೆಗಳು ಆರಂಭಗೊಂಡಿದೆ, ಸಾವಿರಾರು ಕಂಪನಿಗಳು ಚೀನಾದಿಂದ ಹೊರಹೋಗಲು ಮತ್ತು ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗಿ ನಿಂತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾದಿಂದ ಖಾಲಿಯಾಗಲಿರುವ ಜಾಗವನ್ನು ತುಂಬಲು ಸಮಾನಮನಸ್ಕ ದೇಶಗಳು ಒಂದುಗೂಡಬೇಕು. ಚೀನಾದ ಹಲವಾರು ಕಂಪನಿಗಳು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅಪಾಯಕಾರಿ ಕಾರ್ಯದಲ್ಲಿ ತೊಡಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಚೀನಾ ಹೂಡಿಕೆಯ ಕುತಂತ್ರಗಳನ್ನು ಹಲವಾರು ದೇಶಗಳ ಅರ್ಥಮಾಡಿಕೊಂಡಿದೆ. ಚೀನಾ ಅತ್ಯಂತ ಅನುಕೂಲಕರ ವಿಧಾನದಲ್ಲಿ ಸಾಲಗಳನ್ನು ನೀಡುತ್ತದೆ, ಸಾಲವು ಅಸ್ಥಿರ ಮಟ್ಟವನ್ನು ತಲುಪಿದಾಗ ಚೀನಾ ಆ ದೇಶದ ಬಂದರು, ಏರ್ಪೋರ್ಟ್, ಡ್ಯಾಂ, ಪವರ್ ಪ್ಲಾಂಟ್ ಮತ್ತು ಕಮ್ಯುನಿಕೇಶನ್ ನೆಟ್ವರ್ಕ್ ಇತ್ಯಾದಿಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಆರಂಭಿಸುತ್ತದೆ. ಇದೀಗ ಹಲವಾರು ದೇಶಗಳು ಚೀನಾ ಹೂಡಿಕೆಗಳಿಗೆ ಗುಡ್ ಬೈ ಎನ್ನಲು ಸಿದ್ಧವಾಗಿವೆ.
ಭಾರತದಲ್ಲಿ ಈಗ ಸ್ವದೇಶಿ ಸ್ಫೂರ್ತಿಯು ಬಡಿದೆಬ್ಬಿದೆ, ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮನಸ್ಥಿತಿ ಜನರಿಗೆ ಬಂದಿದೆ. ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಸ್ವದೇಶಿ ಸ್ಫೂರ್ತಿ ನಿರಂತರವಾಗಿರುವುದು ಅತಿಮುಖ್ಯ.
ಏಪ್ರಿಲ್ 25 ರಂದು ಸ್ವದೇಶಿ ಜಾಗರಣ್ ಮಂಚ್ ʼಸ್ವದೇಶಿ ದಿವಸʼವನ್ನು ಆಚರಿಸುತ್ತಿದೆ. ಸಂಜೆ 6.30ರಿಂದ 6.40ರವರೆಗೆ ಭಾರತವು ಕೊರೋನಾದಿಂದ ಮುಕ್ತಿ ಪಡೆಯಲು ಪ್ರಾರ್ಥನೆಯನ್ನು ನಡೆಸಲಿದೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಸಂಕಲ್ಪ ಮಾಡಲಿದೆ. ಸಂಪೂರ್ಣ ಸ್ವದೇಶಿ ತನವನ್ನು ಅಳವಡಿಸುವ ಪ್ರತಿಜ್ಞೆ ಮಾಡಲಿದೆ. ಬನ್ನಿ ಇದರಲ್ಲಿ ಕೈಜೋಡಿಸೋಣ.
ಭಾರತ್ ಮಾತಾ ಕೀ ಜಯ್, ಜಯ್ ಸ್ವದೇಶಿ.
ಮೂಲ : ಆರ್. ಸುಂದರಮ್ ಸಿ. ಎಂ.
ರಾಷ್ಟ್ರೀಯ ಸಂಯೋಜಕ್, ಸ್ವದೇಶಿ ಜಾಗರಣ್ ಮಂಚ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.