ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ತನ್ನ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕಾತಿ ಶುಲ್ಕವನ್ನು ಅವೈಜ್ಞಾನಿಕಾವಗಿ ಏರಿಕೆ ಮಾಡಿರುವ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ಹಾಗೂ ದೋಷಪೂರಿತವಾಗಿ ಮುದ್ರಿಸಿರುವ ಘಟಿಕೋತ್ಸವ ಪ್ರಮಾಣ ಪತ್ರಗಳ ಗೊಂದಲವನ್ನು ಸರಿಪಡಿಸುವಂತೆ ಒತ್ತಾಯಿಸಿ ಎಬಿವಿಪಿ ನಿಯೋಗದಿಂದ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಶ್ರೀ ಕೆ. ಬೈರಪ್ಪನವರನ್ನು ಜು.21 ರಂದು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ಈ ವರ್ಷ ಸ್ನಾತಕೋತ್ತರ ಕೋರ್ಸುಗಳ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ವಿದ್ಯಾರ್ಥಿಗಳ ಮೇಲೆ ಶೋಷಣೆ ಮಾಡಿದೆ. ಜೊತೆಗೆ ಬೇರೆ ಬೇರೆ ಕೋರ್ಸುಗಳಲ್ಲಿ ಅವೈಜ್ಞಾನಿಕವಾಗಿ ಶುಲ್ಕವನ್ನು ಹೆಚ್ಚಿಸಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. 2013 -14 ರ ಸಾಲಿನಲ್ಲಿ ವಿವಿಯ ಪ್ರವೇಶಾಕಾತಿ ಶುಲ್ಕ 11,650 ರೂ ಗಳಿದ್ದರೆ, ಕಳೆದ 2014 -15ರಲ್ಲಿ ಅದನ್ನು 12,280 ರೂಗಳಿಗೆ ಏರಿಕೆ ಮಾಡಲಾಗಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಶುಲ್ಕವನ್ನು ಏಕಾಏಕಿ 16,200 ರೂ ಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ, ಈ ಒಂದೇ ವರ್ಷದಲ್ಲಿ 3920 ರೂಗಳನ್ನು ಏರಿಸಿದಂತಾಗಿದೆ.
ಕಳೆದ ವರ್ಷ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿ ಕೋರ್ಸಗಳ ( Applied Botany & Applied Zoology) ಮೆರಿಟ್ ವಿದ್ಯಾರ್ಥಿಗಳ ಶುಲ್ಕ 16,900 ಇದ್ದರೆ, ಈ ವರ್ಷ ಅವುಗಳನ್ನು 21,940 ರೂಗಳಿಗೆ ಏರಿಸಲಾಗಿದೆ (29.8% ಏರಿಕೆ) ಹಾಗೂ ಇದೇ ಕೋರ್ಸುಗಳ ಸ್ವ ವಿತ್ತೀಯ ಕೋಟದ ಶುಲ್ಕವು 39,000 ರೂಗಳಿಂದ 50,940 ರೂಗಳಿಗೆ ಏರಿಕೆಯಾಗಿದೆ (30.6% ಏರಿಕೆ.). ಎಂ.ಎಸ್ಸಿ ಜೀವ ವಿಜ್ಞಾದ (M.sc in Bio-Sciences ) ಮೆರಿಟ್ ಕೋಟದ ಶುಲ್ಕವನ್ನು 16,900 ರೂಗಳಿಂದ 21,440 ರೂಗಳಿಗೆ ಏರಿಕೆ ಮಾಡಲಾಗಿದೆ. (26.8% ಏರಿಕೆ) , ಭೌತಶಾಸ್ತ್ರದ ವಿಭಾಗದ ಮೆರಿಟ್ ಕೋಟಾದ ಶುಲ್ಕವನ್ನು 18,500 ರಿಂದ 23,940 ರೂಗಳಿಗೆ (29.04%), ಸ್ವವಿತ್ತೀಯ ಕೋಟಾದ ಶುಲ್ಕವನ್ನು 41,000 ದಿಂದ 53,940 ರೂಗಳಿಗೆ (31.05%) ಏರಿಸಲಾಗಿದೆ. ಗಣಿತ ಶಾಸ್ತ್ರದ ವಿಭಾಗದ ಮೆರಿಟ್ ಕೋಟಾದ ಶುಲ್ಕವನ್ನು14,500 ರೂಗಳಿಂದ 18,440 ರೂಗಳಿಗೆ (27.02%) ಮತ್ತು ಸ್ವವಿತ್ತೀಯ ಕೋಟಾದ ಶುಲ್ಕವನ್ನು 39,200 ರೂಗಳಿಂದ 50,940 ರೂಗಳಿಗೆ (29.09%) ಏರಿಕೆ ಮಾಡಲಾಗಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಮೆರಿಟ್ ಕೋಟಾದ ಶುಲ್ಕವನ್ನು 18,500 ರಿಂದ 23,940 ರೂಗಳಿಗೆ (29.04%) ಹಾಗೂ ಸ್ವವಿತ್ತೀಯ ಕೋಟಾದ ಶುಲ್ಕವನ್ನು 45,000 ದಿಂದ 55,940 ರೂಗಳಿಗೆ (24.03%) ಏರಿಸಿದ್ದಾರೆ. ರಸಾಯನ ಶಾಸ್ತ್ರದ ಮೆರಿಟ್ ಕೋಟಾದ ಶುಲ್ಕವನ್ನು 22500 ರೂಗಳಿಂದ 27,740 ರೂಗಳಿಗೆ (24.02%) ಹಾಗೂ ಸ್ವವಿತ್ತೀಯ ಕೋಟಾದ ಶುಲ್ಕವನ್ನು 56,000 ರೂಗಳಿಂದ 65,940 ರೂಗಳಿಗೆ (17.07%) ಏರಿಕೆ ಮಾಡಲಾಗಿದೆ.
ಎಂ.ಕಾಂ ವಿಭಾಗದ ಮೆರಿಟ್ ಕೋಟಾದ ಶುಲ್ಕವನ್ನು 20,700 ರೂಗಳಿಂದ 25,940 ರೂಗಳಿಗೆ (25.03%) ಏರಿಕೆ ಮಾಡಲಾಗಿದೆ. ಅರ್ಥಶಾಸ್ತ್ರದ ವಿಭಾಗದ ಮೆರಿಟ್ ಕೋಟಾದ ಶುಲ್ಕವನ್ನು 14,500 ರೂಗಳಿಂದ 18440 ರೂಗಳಿಗೆ (27.02%) ಏರಿಕೆಯಾಗಿದೆ. ದೈಹಿಕ ಶಿಕ್ಷಣ ವಿಭಾಗದ ಪದವಿ ಕೋರ್ಸುಗಳ ಮೆರಿಟ್ ಕೋಟಾದ ಶುಲ್ಕವನ್ನು 14,700 ರೂಗಳಿಂದ 19,440 ರೂUಳಿಗೆ (22.02%) ಮತ್ತು ಸ್ನಾತಕೋತ್ತರ ಕೋರ್ಸುಗಳ ಮೆರಿಟ್ ಶುಲ್ಕವನ್ನು 20,700 ರೂಗಳಿಂದ 25,940 ರೂಗಳಿಗೆ (25.03 %) ಏರಿಕೆ ಮಾಡಲಾಗಿದೆ.
ಹೀಗೆ ಭಾರೀ ಪ್ರಮಾಣದಲ್ಲಿ ಕೋರ್ಸುಗಳ ಶುಲ್ಕವನ್ನು ಹೆಚ್ಚಿಸಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಂತೆಯೇ ವಿವಿಯು ಶಿಕ್ಷಣದ ವ್ಯಾಪಾರೀಕರಣದಲ್ಲಿ ತೊಡಗಿಕೊಂಡಂತಾಗಿದೆ. ಹಾಗಾಗಿ, ಜು 27 ರಂದು ವಿವಿಯ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಪ್ರವೇಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು ವಿವಿಯು ಅಷ್ಟರೊಳಗೆ ಏರಿಸಿರುವ ಶುಲ್ಕವನ್ನು ಇಳಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ದೋಷಪೂರಿತವಾಗಿ ಮುದ್ರಿಸಿರುವ ಘಟಿಕೋತ್ಸವ ಪ್ರಮಾಣ ಪತ್ರಗಳ ಗೊಂದಲವನ್ನು ಸರಿಪಡಿಸಿವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗೌರವ ಡಾಕ್ಟರೇಟ್ ಪಡೆದಿರುವ ವ್ಯಕ್ತಿಗಳಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಅಪಾರವಾದ ತಪ್ಪುಗಳು ಕಂಡುಬಂದಿದೆ. ದೋಷಪೂರಿತವಾಗಿ ಘಟಿಕೋತ್ಸವ ಪ್ರಮಾಣಪತ್ರಗಳನ್ನು ಮುದ್ರಿಸಿರುವುದರಿಂದ ವಿಶ್ವವಿದ್ಯಾನಿಲಯಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಜೊತೆಗೆ ವಿಶ್ವವಿದ್ಯಾನಿಲಯದ ಘನತೆಗೆ ದಕ್ಕೆ ಬಂದಂತಾಗಿದೆ. ಆದ್ದರಿಂದ ವಿಶ್ವವಿದ್ಯಾನಿಲಯ ಈ ಕೂಡಲೇ ದೋಷಪೂರಿತ ಪ್ರಮಾಣಪತ್ರಗಳನ್ನು ಹಿಂತೆಗೆದುಕೊಂಡು, ವಿದ್ಯಾರ್ಥಿಗಳಿಂದ ಪುನಃ ಪ್ರಮಾಣಪತ್ರಕ್ಕೆಂದು ಯಾವುದೇ ಶುಲ್ಕವನ್ನು ಪಡೆಯದೆ ವಿಶ್ವವಿದ್ಯಾನಿಲಯವೇ ಶುಲ್ಕವನ್ನು ಭರಿಸಿ ಹೊಸ ದೋಷರಹಿತ ಪ್ರಮಾಣಪತ್ರಗಳನ್ನು ವಿತರಿಸಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ. ಹಾಗೂ ಈ ದೋಷಪೂರಿತ ಪ್ರಮಾಣ ಪತ್ರವನ್ನು ಮುದ್ರಿಸಿದ ಸಂಸ್ಥೆ ಮತ್ತು ಅದಕ್ಕೆ ಕಾರಣರಾದ ವಿವಿಯ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮವನ್ನು ಜರುಗಿಸಬೇಕೆಂದು ಎಬಿವಿಪಿ ಒತ್ತಾಯಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.