1919, ಏಪ್ರಿಲ್ 13 – ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ನೆನಪು ಮರುಕಳಿಸುತ್ತಿದೆ.
ಘಟನೆಯ ಎಲ್ಲಾ ವಿವರಗಳನ್ನು ನೆನಪಿಸಿಕೊಳ್ಳುವಾಗ ನಮಗೆ ಜಲಿಯನ್ ವಾಲಾಬಾಗ್ನಲ್ಲಿ ಸಾಯುತ್ತಿರುವ ನೂರಾರು ಜನರ ಆರ್ತನಾದಗಳು ಮತ್ತೊಮ್ಮೆ ಕೇಳಿದಂತಾಗುತ್ತದೆ. ಏಪ್ರಿಲ್ ತಿಂಗಳ ಸುಡು ಬೇಸಿಗೆ ಸಂಜೆಯಲ್ಲಿ, ನೀರಿಗಾಗಿ ಕೂಗುತ್ತಾ, ಸಹಾಯ ಹಾಗೂ ಚಿಕಿತ್ಸೆಗಾಗಿ ಗೋಳಿಡುತ್ತಾ ಇರುವ ದೀನ ಮುಖಗಳು ಕಣ್ಮುಂದೆ ಬಂದು ನಿಲ್ಲುತ್ತವೆ.
ಕಿರಿಯ ಶಾಲೆ ಮಕ್ಕಳ ಬೆನ್ನಿಗೆ ಬಿದ್ದ ಬ್ರಿಟಿಷರ ಚಾಟಿ ಏಟಿನ ಸಪ್ಪಳಗಳು, ದಯೆಗಾಗಿ ಅಂಗಲಾಚುವ ಮಕ್ಕಳ ಮುಖ ಮುದ್ರೆಯೊಂದಿಗೆ ಚಿತ್ತಭಿತ್ತಿಯಲ್ಲಿ ಹಾದುಹೋಗುತ್ತವೆ. ಆ ಸಮಯ ಮನೆಯಲ್ಲೇ ಬಂಧಿಯಾಗಿದ್ದ ಹೆಣ್ಣುಮಕ್ಕಳ ಸಂಕಟ, ವಿದ್ಯುತ್ ಹಾಗೂ ನೀರು ಇಲ್ಲದೆ ಭಯಗೊಂಡು, ತಮ್ಮ ಆಪ್ತರು ಕುಟುಂಬ ಸದಸ್ಯರ ಶವಗಳನ್ನು ನೋಡುವುದಕ್ಕೆ ಕೂಡ ಮನೆಯಿಂದ ಹೊರಹೋಗಲು ಸಾಧ್ಯವಿಲ್ಲದೇ, ಸುರಿಸುವ ತಾಯಂದಿರ ಕಣ್ಣೀರು ನದಿಯಾಗಿ ಹರಿದಂತೆ ಭಾಸವಾಗುತ್ತದೆ.
ಆದರೆ ಒಂದು ಮಾತಂತೂ ಸತ್ಯ. ಚರಿತ್ರೆಯೆನ್ನುವುದು ವಿಜಯ ಶಾಲಿಗಳಿಗೆ ಸೇರುತ್ತದೆ: ಆದರೆ ನಾವು ಅದಕ್ಕೆ ಅನುವುಮಾಡಿಕೊಡುವ ತನಕ. ಹೇಗೆ ಇದ್ದರೂ, ಸತ್ಯವನ್ನು ಶಾಶ್ವತವಾಗಿ ಮುಚ್ಚಿಡುವುದು ಸಾಧ್ಯವಿಲ್ಲ ತಾನೆ?
ಹತ್ಯಾ ಕಾಂಡದ ಕಾವಿನಿಂದ ಕನಲಿ ಕೆಂಡವಾದ ಲಾಲಾ ಲಜಪತ್ ರಾಯ್ ಆಡಿದ ಮಾತುಗಳಿವು- ” ಉದಾರವಾದ ಸಾಮ್ರಾಜ್ಯಶಾಹಿ ಗೂಡಿನಲ್ಲಿ ಬಂಧಿಯಾದ ಸಿಂಹದಂತೆ. ನೀವು ಅದರೊಂದಿಗೆ ಆಟವಾಡಬಹುದು, ಅದು ಬಂದಿಯಾಗಿರುವ ತನಕ, ಪಳಗಿಸುವವನ ಕೈಚಳಕದಲ್ಲಿ. ಅದು ನಿಯಂತ್ರಣಕ್ಕೆ ಬಾರದ ಆ ಕ್ಷಣದಲ್ಲಿ ಅದರ ನಿಜ ಸ್ವಭಾವ ಪ್ರದರ್ಶಿಸಿ, ಅದರಂತೆ ವರ್ತಿಸುವುದು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಮೃತಸರ ದಲ್ಲಿನ ದೌರ್ಜನ್ಯಗಳು ಅದರ ಕುರುಹುಗಳು. ಉನ್ಮಾದಕ್ಕೆ ಒಳಗಾದ ಸಾಮ್ರಾಜ್ಯಶಾಹಿಯು ಉದ್ರಿಕ್ತಗೊಂಡ ಗುಂಪಿಗಿಂತಲು ಅಧಿಕ ಅಪಾಯಕಾರಿಯಾದದ್ದು, ಸೇಡಿನಿಂದ ಕೂಡಿದ್ದು, ಅಮಾನವೀಯವಾದದ್ದು ಆಗಿರುತ್ತದೆ “.
ಜಸ್ಟಿಸ್ ರಾಮ್ಕಿನ್ ಡಯರ್ ನನ್ನು ವಿಚಾರಿಸಿದ-
” ಯುದ್ಧದ ರೀತಿಯ ಈ ಕಾರ್ಯಾಚರಣೆ ಅಗತ್ಯವಿತ್ತೆ? ”
ಡಯರ್ ಉತ್ತರಿಸಿದ-
” ಹೌದು, ಈ ಜನರು ನಮ್ಮ ಸಿಂಹಾಸನದ ವಿರುದ್ಧ ಬಂಡೆದ್ದ ಶತ್ರುಗಳಂತೆ ಕಂಡರು “!
ಡಯರ್ನನ್ನು ಸೆಟಲ್ವಾಡ್ ವಿಚಾರಿಸಿದಾಗ ಡಯರ್ ಹೇಳುತ್ತಾನೆ- ” ಅದು ನನ್ನ ಕರುಣಾಪೂರ್ಣವಾದ ಕೃತ್ಯ. ಅದನ್ನು ನಡೆಸಿದ್ದಕ್ಕೆ ಬ್ರಿಟಿಷ್ ಸರಕಾರ ತನಗೆ ಕೃತಜ್ಞತೆ ಅರ್ಪಿಸಬೇಕು ” !
ಡಯರ್ನ ಕ್ರೂರ ಮನಸ್ಥಿತಿ ಎಷ್ಟಿದೆಯೆಂದರೆ, ಮಕ್ಕಳು ಮುದುಕರೆನ್ನದೆ ಸಾವಿರಾರು ಭಾರತೀಯರನ್ನು ಕೊಲೆಗೈದ ಹೇಯ ಕೃತ್ಯವನ್ನು ತನ್ನ ಕರುಣೆಯಿಂದ ಕೂಡಿದ ಕಾರ್ಯ ಎನ್ನುತ್ತಾನೆ !!!
1919ರ, ನವೆಂಬರ್19 ನೇ ತಾರೀಖಿನ ಲಾಹೋರ್ ಎವಿಡೆನ್ಸ್ ಈ ಎಲ್ಲಾ ದಾಖಲೆಗಳನ್ನು ನೀಡುತ್ತದೆ. ಬಂಡಾಯ ಎದ್ದ ಭಾರತೀಯರ ದಮನಕ್ಕೆ ಗವರ್ನರ್ ಮೈಕೆಲ್ ವಢ್ವಯರ್ ಕೈಗೊಂಡ ಬರ್ಬರ ಕೃತ್ಯ ಎಂದು ವರದಿ ನೀಡುತ್ತದೆ.
ಆದರೆ ಇಲ್ಲಿ ಅರ್ಥಮಾಡಿಕೊಳ್ಳಬೇಕಾದದ್ದು ಇಷ್ಟೇ. ಬಂಡಾಯ ವೆಂದರೆ ಸಮಾನ ಹಕ್ಕುಗಳಿಗೆ ಒಂದು ಸಮುದಾಯದ ಕೋರಿಕೆಯ ಮೊದಲ ಕ್ಷಣ. ಆದರೆ, ಬ್ರಿಟಿಷರ ಪ್ರಕಾರ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ಅಸಮರ್ಥರು! ಆದುದರಿಂದ ಆಡಳಿತಕ್ಕೆ ಬ್ರಿಟಿಷರ ಸರಕಾರ ಬೇಕೇಬೇಕು! ಹೇಗಿತ್ತು ನೋಡಿ ಸರ್ವಾಧಿಕಾರಿ ಧೋರಣೆಯ ನಿಲುವು !
ಕ್ಯಾಪ್ಟನ್ ಬ್ರಿಕ್ಸ್ ವಿವರಿಸಿದಂತೆ- ” ಜಲಿಯನ್ ವಾಲಾಬಾಗ್ಗೆ ಕರೆತರಲು ಒಬ್ಬ ಮಾರ್ಗದರ್ಶಿ ಇದ್ದ. ಬರುವಾಗ ಡಯರನ ತಂಡ ಸಣ್ಣ ದಾರಿಯನ್ನು ತಲುಪಿತು. ಆ ಕಿರು ದಾರಿಯಲ್ಲಿ ಎರಡು ಜನ ನಡೆದಾಡಬಹುದಿತ್ತು. ಇದರಿಂದಾಗಿ ಶಸ್ತ್ರಾಸ್ತ್ರ ತುಂಬಿದ ಎರಡು ಕಾರನ್ನು ಬಿಟ್ಟು ಕಾಲ್ನಡಿಗೆಯಲ್ಲಿ ಡಯರ್ ಮತ್ತು ಆತನ ಸೈನಿಕರು ಮುನ್ನಡೆಯಬೇಕಾಯಿತು. ಡಯರ್, ಕಲ್ನಲ್ ಮಾರ್ಗಾನ್, ಮಿ. ರೆಹಿಲ್ ಮತ್ತು ನಾನು ಮೋಟಾರು ವಾಹನದಿಂದ ಕೆಳಗಿಳಿದು ಆ ಕಿರಿದಾದ ದಾರಿಯಲ್ಲಿ ಕ್ರಮಿಸಿದೆವು. ತುಕಡಿಗಳು ನಮ್ಮನ್ನು ಹಿಂಬಾಲಿಸಿದವು. ಕಾಲುದಾರಿಯ ತುದಿ ತಲುಪಿದಾಗ ನಾವು ಒಂದು ದೊಡ್ಡ ಗುಂಪನ್ನು ನೋಡಿದೆವು. ಅವರಲ್ಲಿ ಒಬ್ಬರು ಕೈ ಕರಣಗಳನ್ನು ಮಾಡುತ್ತಾ ಭಾಷಣವನ್ನು ಮಾಡುತ್ತಿದ್ದು, ಇತರ ಕುಳಿತಿದ್ದ ವ್ಯಕ್ತಿಗಳು ಅವನ ಮಾತನ್ನು ಆಲಿಸುತ್ತಿದ್ದರು.”
ಆದರೆ ಅಷ್ಟರವರೆಗೆ ಆ ಜಲಿಯನ್ ವಾಲಾಭಾಗ್ಗೆ ಎಂದಿಗೂ ಬಾರದಿದ್ದ ಡಯರ್ ಆ ದೊಡ್ಡ ಗುಂಪನ್ನು ನೋಡಿ ಚಕಿತನಾದ.
ಆದರೆ ಅಲ್ಲಿಗೆ ಹೋಗಿ ಸೈನಿಕರು ರೈಫಲ್ ರೆಡಿ ಮಾಡಿದಾಗ ಆತನ ಮನಸ್ಥಿತಿ ಹೇಗಿತ್ತು ಎಂಬುದನ್ನು ಡೈಯರ್ ಸ್ವತಃ ಹೇಳಿಕೊಂಡಿದ್ದಾನೆ – ” ದಿನನಿತ್ಯದ ವರದಿ, ಅಮೃತಸರದ ದೃಶ್ಯಾವಳಿಗಳನ್ನು ಗಮನಿಸಿದರೆ, ನಾನು ಸ್ಥಳೀಯ ತೊಂದರೆಗಳನ್ನು ನೋಡುತ್ತಿಲ್ಲ., ಬಂಡಾಯವನ್ನು ಮಾತ್ರ ಗಮನಿಸುತ್ತಿದ್ದೇನೆ, ಮಿಲಿಟರಿ ಕ್ರೈಸಿಸ್ ಬಂದಿದೆ ಎಂದು ನಾನು ಭಾವಿಸಿದೆ. ಅದೊಂದು ರಾಜಕೀಯ ಉದ್ದೇಶಕ್ಕೋಸ್ಕರ ಸೇರಿದ ಗುಂಪು ಅಲ್ಲ. ಬ್ರಿಟಿಷ್ ಸರ್ಕಾರದ ಕಾನೂನನ್ನು ಭಂಗಗೊಳಿಸುವದಕ್ಕೆ ಹಾಗೂ ನಮ್ಮ ಸರಕಾರವನ್ನು ಅಸ್ಥಿರಗೊಳಿಸುವುದಕ್ಕೆ ಸೇರಿದ ಗುಂಪು ಎಂದು ನನಗೆ ಕಂಡಿತು . ಬಂಡಾಯದ ಬಿರುಗಾಳಿ, ಅಮೃತಸರ ಮಾತ್ರವಲ್ಲ, ಇಡೀ ಪಂಜಾಬಿನ ಕಣ್ಣುಗಳು ಅದರತ್ತ ನೆಟ್ಟಿತ್ತು. ಅದು, ನನ್ನ ವಿರುದ್ಧ ಯುದ್ಧ ಘೋಷಿಸಿದ ಆ ಗುಂಪು, ಈ ಪಂಥಾಹ್ವಾನವನ್ನು ಸ್ವೀಕರಿಸುವುದಕ್ಕೆ ನನ್ನನ್ನು ಅಸಮರ್ಥ ಎಂದು ಭಾವಿಸಿತು ಎಂದು ನನಗೆ ಯೋಚನೆ ಬಂತು ” . !
ಗಿರಿಧರಲಾಲ್ ಎಂಬ ವ್ಯಕ್ತಿ ಡಯರ್ ನ ತುಕಡಿ ಬರುವ ತುಸು ಮುಂಚೆ ಬಂದಿದ್ದ. ಸ್ನೇಹಿತನ ಮನೆಯ ತಾರಸಿಯ ಮೇಲೆ ನಿಂತು ಇಡೀ ಭಾಗ್ ನ್ನು ವೀಕ್ಷಿಸಿದ. ಮನೆಗಳ ಮಾಡುಗಳ ಮೇಲೆ ಜನ ಸೇರಿದ್ದರು. ಲಾಲ್ ದೂರದರ್ಶಕ ಹಿಡಿದುಕೊಂಡಿದ್ದ. ಜಲಿಯನ್ ವಾಲಾ ಬಾಗ್ನಲ್ಲಿ ಜನಸ್ತೋಮದ ಎದುರು ಭಾಷಣಮಾಡತೊಡಗಿದ್ದ ಹಂಸರಾಜ್ ಎಲ್ಲರಿಗೂ ಹೆದರದಿರು ವಂತೆ ಸೂಚಿಸಿದ. ಶೂಟ್ ಮಾಡಲಾರರು ಎಂಬ ಭಾವನೆ ಎಲ್ಲರಲ್ಲೂ ಕೆಲಸ ಮಾಡಿತ್ತು. ಹಂಸರಾಜ್ ಆ ಭಾವನೆಗೆ ಮತ್ತು ಧೈರ್ಯ ತುಂಬುತ್ತಿದ್ದ- “ಕಂಪನಿ ಸರಕಾರ ಕೇವಲ ಧಮಕಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಗುಂಡುಗಳನ್ನು ವ್ಯರ್ಥಗೊಳಿಸಲು ಅವರು ದಡ್ಡರಲ್ಲ. ಆದಕಾರಣ ಯಾವ ಕಾರಣಕ್ಕೂ ಅವರು ಶೂಟ್ ಮಾಡುವುದಿಲ್ಲ.”. ಇಷ್ಟೆಲ್ಲ ಮಾತನಾಡುವುದಕ್ಕೆ ಆತನಿಗೆ ಬಲವಾದ ಕಾರಣವಿದೆ, ಅದೇನು ಗೊತ್ತೇ? ಹಂಸರಾಜ್ ಮತ್ತು ಆತನ ಪರಿವಾರದವರು ತಮ್ಮನ್ನು “ಬಂಡಾಯ ಎದ್ದವರು” ಅಥವಾ” ರೆಬೆಲ್” ಗಳೆಂದು ಭಾವಿಸಿರಲಿಲ್ಲ ! ತಮ್ಮ ವರ್ತನೆ ಭಯಾನಕವಾದ ಪ್ರತಿಕ್ರಿಯೆಯನ್ನು ಹುಟ್ಟಿಸ ಬಹುದೆಂಬ ಯೋಚನೆಯೇ ಯಾರಿಗೂ ಬರಲಿಲ್ಲ…
ಈ ಭಾವನೆಗಳಿಗೆ ಗಾಂಧೀಜಿಯ ಇತ್ತೀಚೆಗಿನ ಭಾಷಣದ ಪ್ರತಿಧ್ವನಿಗಳು ಬೆಂಬಲ ಕೊಡುತ್ತಿತ್ತು…
“ನಾವು ಅಗತ್ಯವಿರುವ ಸರಿಯಾದ ಜ್ಞಾನ ಮತ್ತು ಶಿಸ್ತಿನ ಮಟ್ಟವನ್ನು ತಲುಪಿದಾಗ ಮಿಷಿನ್ಗನ್ ಹಾಗೂ ಶಸ್ತ್ರಾಸ್ತ್ರಗಳು ನಮ್ಮನ್ನು ತೊಂದರೆಗೀಡು ಮಾಡಲು ಸಾಧ್ಯವಿಲ್ಲವೆಂಬುದನ್ನು ಮನಗಾಣಬಹುದು ” ಎಂದು ಗಾಂಧೀಜಿ ಹೇಳಿದ ಮಾತುಗಳು ಮತ್ತೆ ಕಿವಿಯಲ್ಲಿ ಮೊರೆಯ ತೊಡಗಿದವು… ಆದರೆ ಗಾಂಧೀಜಿ ಹೇಳಿದ ಸರಿಯಾದ ಜ್ಞಾನದ ಮಟ್ಟ ಯಾವುದು ಎಂದು ಜನರು ಅರ್ಥಮಾಡಿಕೊಳ್ಳದೆ ಇದ್ದುದರಿಂದ ಅತಿಯಾದ ಅಂಧ ಆತ್ಮವಿಶ್ವಾಸಕ್ಕೆ ಅವರು ಒಳಗಾದರು.
ಡಯರ್ ಕೂಡ ಈವರೆಗೆ ಎಂದಿಗೂ, ಒಳ ಮುನಿಸಿನ ಅಭಿವ್ಯಕ್ತಿಗಳನ್ನು ಮತ್ತು ತನ್ನನ್ನು ನೋಡಿ ಉಗುಳುವುದನ್ನು ಬಿಟ್ಟರೆ ಬೇರೆ ಯಾವ ಹಿಂಸೆಯನ್ನು ಭಾರತೀಯರಿಂದ ಎದುರಿಸಲಿಲ್ಲ… ಆದರೂ ಅವನು ಜಲಿಯನ್ ವಾಲಾ ಬಾಗ್ ನಲ್ಲಿ ಸೇರಿದ ಗುಂಪು, ಬ್ರಿಟಿಷರನ್ನು ಹತ್ಯೆಮಾಡಿದ ಲೂಟಿ ಮಾಡಿದ ಬೆಂಕಿ ಹಚ್ಚಿದ ಅದೇ ಜನರ ಗುಂಪು ಎಂದು ಭಾವಿಸಿದ್ದನಂತೆ.! ಅಷ್ಟೇ ಅಲ್ಲ- “ಹೆಚ್ಚಿನ ಭಯವನ್ನು ಹೊಂದಿರದಿದ್ದರೆ ನಾವು ಶೂರರಾಗುವುದು ಸಾಧ್ಯವಿಲ್ಲ ” ಎಂದು ತಿಳಿದುಕೊಂಡಿದ್ದ ಡಯರ್ನದ್ದು ಪ್ಯಾರಾನಾಯ್ಡ್ ವಿಕಲತೆಯ ಭಯವೇ ಇರಬೇಕು !
ಅದಕ್ಕೋಸ್ಕರವೇ, ಭಾಗ್ ಪ್ರವೇಶ ಮಾಡಿದ 30 ಸೆಕೆಂಡುಗಳಲ್ಲಿ ಗುಂಡಿಕ್ಕಲು ಆಜ್ಞೆಮಾಡಿದ ! ಜನರಿಗೆ ಯಾವ ಮುನ್ಸೂಚನೆಯೂ ಸಿಗಲಿಲ್ಲ.
ಭಾಗ್ನಿಂದ ತಪ್ಪಿಸಿಕೊಂಡು ಬಂದ 27 ವರ್ಷದ ಲಾಲ್ ಜಿಯಾನ್ ಚಾಂದ್ ಹೇಳುವ ಪ್ರಕಾರ-” ನನ್ನ ಸುತ್ತಲಿನ ಗುಂಪು ಎದ್ದು ನಿಂತು ಓಡಲಾರಂಭಿಸಿತು. ಗುಂಡಿನ ಸದ್ದು ಕೇಳಿತು. ಮುನ್ನೆಚ್ಚರಿಕೆ ಇರಲಿಲ್ಲ. ಗೋಡೆಯ ಬಳಿ ಓಡಿದೆ. ಆದರೆ ತುಂಬಾ ನೂಕುನುಗ್ಗಲು. ಗೋಡೆ ಹತ್ತಲು ಆಗಲಿಲ್ಲ. ಕೆಳಗೆ ಕುಳಿತು ಮೊಣಕಾಲುಗಳ ನಡುವೆ ತಲೆ ಹಾಕಿ ಕುಳಿತೆ. ಜನರು ನನ್ನ ಮೇಲೆ ಬಿದ್ದರು. ಗುಂಡಿನ ಸದ್ದು ನಿಂತ ನಂತರ, ಕಷ್ಟದಲ್ಲಿ ಗೋಡೆ ಹಾರಿದೆ. ಗುಂಡು ಹಾರಿಸುವವರನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ.”
ಹತ್ಯಾಕಾಂಡ ನಡೆಸಿದ ಡಯರ್ನನ್ನು ವಿಚಾರಣೆ ಮಾಡುವುದಕ್ಕೆ ನೇಮಕಗೊಂಡ ಹಂಟರ್ ಕಮಿಟಿ ವಿವರಿಸಿದ್ದು ಹೀಗೆ- “ಪ್ರವೇಶದ್ವಾರದಲ್ಲಿ ಎತ್ತರದ ಪ್ರದೇಶದಲ್ಲಿ 25 ಬಲೂಚಿಗಳು, 25 ಗೂರ್ಖಾಗಳನ್ನು ನಿಲ್ಲಿಸಿ, ಯಾವುದೇ ಮುನ್ಸೂಚನೆ ಕೊಡದೇ, ಎಚ್ಚರಿಕೆ ನೀಡದೆ, ಜನರಿಗೆ ಚದುರು ವುದಕ್ಕೂ ಹೇಳದೆ, 100 ರಿಂದ 150 ಯಾರ್ಡು ದೂರದಿಂದ, ಡಯರ್ ಗುಂಡು ಹಾರಿಸುವುದಕ್ಕೆ ಆಜ್ಞೆ ನೀಡಿದ. ಗುಂಡಿನ ಮೊರೆತ ಆರಂಭವಾದ ತಕ್ಷಣ ಜನ ಇರುವ ಕೆಲವೊಂದು ಸಣ್ಣ ಮಾರ್ಗಗಳ ಮೂಲಕ ಹೋಗುವ ಯತ್ನದಲ್ಲಿ ಇದ್ದವರ ಮೇಲೂ ಗುಂಡೆಸೆದು ಸಾಯಿಸಲಾಯಿತು.”
ಆದರೆ ಹಂಟರ್ ಕಮಿಟಿಯ ವಿಚಾರಣೆಯಲ್ಲಿ- “ಗುಂಡೆಸೆತ ಹತ್ತು ನಿಮಿಷಗಳ ಕಾಲ ಏಕೆ” ಎಂದು ಕೇಳಿದ ಪ್ರಶ್ನೆಗೆ ಡಯರ್ ಕೊಟ್ಟ ಕಾರಣ-” ಆ ಗುಂಪು ತನ್ನ ಕಡೆಗೆ ಎರಗಿತು” ! ಆದರೆ ವಾಸ್ತವವೆಂದರೆ ಭಾಗ್ಗೆ ಇದ್ದದ್ದು ಒಂದೇ ಒಂದು ದ್ವಾರ ! ಪ್ರವೇಶಕ್ಕೂ ನಿರ್ಗಮನಕ್ಕೂ ಇದ್ದದ್ದು ಒಂದೇ ದ್ವಾರ! ಆದರೆ ಜನರಿಗೆ ತಪ್ಪಿಸಿಕೊಂಡು ಹೋಗುವುದಕ್ಕೆ ಅವಕಾಶವಿರಲಿಲ್ಲ. ಇದ್ದ ಒಂದು ದ್ವಾರದಲ್ಲಿ ಅಡ್ಡಲಾಗಿ ಡಯರ್ ಹಾಗೂ ಆತನ ಸೈನಿಕರು ನಿಂತುಕೊಂಡಿದ್ದರು.
ವಿಚಾರಣಾ ಕಮಿಟಿಯು ತನ್ನ ವರದಿಯಲ್ಲಿ ಈ ಕೆಳಗಿನ ಅಂಶಗಳನ್ನು ಹೇಳಿತು.
1. ಎತ್ತರದಲ್ಲಿ ಅಲ್ಲ, ಜನರ ಕಡೆಗೆಂದೇ ಗುಂಡು ಹಾರಿಸಲಾಯಿತು. ಸಾಮಾನ್ಯ ನಿಯಮವೆಂದರೆ, ಆರಂಭದಲ್ಲಿ ಜನರಿಗೆ ಮುನ್ಸೂಚನೆ ಕೊಡುವುದಕ್ಕೆ ಗಾಳಿಯಲ್ಲಿ ಗುಂಡು ಹಾರಿಸುವುದು ಪದ್ಧತಿ.
2. ಗುಂಪಿನಲ್ಲಿದ್ದ ಜನರಲ್ಲಿ ಶಸ್ತ್ರಾಸ್ತ್ರ ಇರಲಿಲ್ಲ. ಆದಕಾರಣ, ಅಂತಹ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ತಪ್ಪು.
3. ಒಂದು ವೇಳೆ, ಸೈನಿಕರ ಕಡೆಗೆ ಓಡಿದರೂ, ಅವರ ಮೇಲೆ ದಾಳಿ ಮಾಡುವ ಉದ್ದೇಶದಿಂದ ಅಲ್ಲ, ಇರುವ ಒಂದೇ ಒಂದು ದ್ವಾರದಿಂದ ಹೊರಹೋಗುವ ವಿಫಲ ಪ್ರಯತ್ನ.
ಆದರೆ ಡಯರ್ ನಡೆಸಿದ ಕ್ರೌರ್ಯಕ್ಕೆ ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಅಮೃತಸರದ ಜನತೆಯ ಅಭಿಪ್ರಾಯಗಳು, ಪ್ರತ್ಯಕ್ಷ ಸಾಕ್ಷಿಗಳು.
“ಗುಂಡಿನ ಮಳೆ ನಿಂತ ಮೇಲೂ ನಗರದಿಂದ ಹೊರಟು ಹೋಗಬಹುದಿತ್ತು. ಆದರೆ ಅದಕ್ಕೆ ಕೂಡ ಡಯರ್ ನೇಮಕ ಮಾಡಿದ ಅಧಿಕಾರಿಗಳ ಅನುಮತಿ ಅಗತ್ಯವಿತ್ತು. ಆದರೆ ಅಧಿಕಾರಿಗಳು ಲಭ್ಯವಿರಲಿಲ್ಲ. ಹೊರಗಿನಿಂದ ಬಂದವರಲ್ಲಿ ಬಹಳಷ್ಟು ಜನ ಗಾಯಗೊಂಡವರು ಬದುಕಿ ಉಳಿದ ಸ್ಥಳೀಯರ ಸಹಿತ ಅಮೃತಸರದಲ್ಲಿ ಆಶ್ರಯ ಕೊಟ್ಟ ವರ ಮನೆಯಲ್ಲಿ ಅಡಗಿ ಕುಳಿತರು.”
33 ವರ್ಷದ ಪ್ರತಾಪ್ ಸಿಂಗ್ ಗುಂಡೆಸೆದ ತುಕಡಿ ಹೋಗುವವರೆಗೂ ಕಾದಿದ್ದ. ಎಲ್ಲಾ ಕಡೆಯಲ್ಲೂ ಹೆಣದ ರಾಶಿ ನೋಡಿದ. ಅವುಗಳ ಮೇಲಿನಿಂದಲೇ 9 ವರ್ಷದ ಮಗ ಕೃಪಾ ಸಿಂಗ್ ನನ್ನು ಕರೆದುಕೊಂಡು ಹೊರಟುಹೋದ. ಆಗ ಆತ ಜಾರಿಬಿದ್ದ. ಎದೆಯಲ್ಲಿ ಗಾಯಗಳನ್ನು ಹೊತ್ತಿದ್ದ ಆತ ಸಾಯುತ್ತೇನೆ ಎಂದು ಭಾವಿಸಿದ. ಧೋತಿ ಇಲ್ಲದೆ ಅಂಗಿ ಮತ್ತು ಕೋಟ್ ಮಾತ್ರ ಉಳಿದಿತ್ತು. ಹತ್ತಿರದ ಮನೆಗೆ ಪ್ರವೇಶಿಸಿದ. ಯಾರ ಮನೆಯೆಂದು ಗೊತ್ತಿರಲಿಲ್ಲ. ಆಗ ” ಅವರು ಮತ್ತೆ ಬರುತ್ತಿದ್ದಾರೆ” ಎಂಬ ಜೋರಾದ ಕೂಗು ಕೇಳಿಸಿತು. ಹೊರ ಓಡಿ ಮತ್ತೊಂದು ಓಣಿಗೆ ಬಂದೆ. ಬಾಯಾರಿಕೆಯಿಂದ ನಡೆಯುವುದು, ನಿಲ್ಲುವುದು ಅಸಾಧ್ಯವಾಯಿತು. ಮನೆಗೆ ಮುಟ್ಟಿದಾಗ ಮಗ ಬಂದಿರಲಿಲ್ಲ. ಸಂಬಂಧಿಗಳು ಹುಡುಕಾಡುವುದಕ್ಕೆ ತೊಡಗಿದರು. ಅರ್ಧ ಗಂಟೆಯ ನಂತರ ಮಗನು ಅವನಷ್ಟಕ್ಕೆ ಬಂದ. ನಾನು ಮಾತ್ರ 20ರಿಂದ 25 ದಿನ ಹಾಸಿಗೆಯಲ್ಲೇ ಬಿದ್ದಿದ್ದೆ.”
ಆದರೆ ಜಲಿಯನ್ ವಾಲಾ ಬಾಗ್ನಲ್ಲಿ ಭಾಗವಹಿಸಿದ್ದ ಅನೇಕರು ಗಾಯಗೊಂಡವರು ಬೀದಿಗಳಲ್ಲಿ ಸತ್ತರು. ಅಲ್ಲಿಗೆ ಹೋಗಿದ್ದನ್ನು ಅನೇಕರು ರಹಸ್ಯವಾಗಿಟ್ಟರು. ಆಸ್ಪತ್ರೆಗೆ ಕೂಡ ಹೋಗಲಿಲ್ಲ.
ಕಾಂಗ್ರೆಸ್ ಕಮಿಟಿಯು ವರದಿಯಲ್ಲಿ ಲಾಲ್ ಜಿಯನ್ ಚಾಂದ್ ಹೇಳಿಕೆಯನ್ನು ದಾಖಲಿಸಿದೆ- ” ಫಯರಿಂಗ್ ನಡೆದ ನಂತರ 600 ಜನ ಭಾಗ್ನ ಹೊರಗೆ ಬಿದ್ದಿದ್ದರು. ನನ್ನ ಇಬ್ಬರು ಸಂಬಂಧಿಗಳು ಮನೆಯಲ್ಲಿ ಇರಲಿಲ್ಲ. ಉದ್ಯಾನಕ್ಕೆ ಬಂದು ನೋಡಿದರೆ ಗುಂಡುಗಳು ಅವರ ದೇಹ ಹೊಕ್ಕಿತ್ತು. ಸತ್ತವರಲ್ಲಿ ಬಹಳಷ್ಟು ಮಕ್ಕಳು ಇದ್ದರು.”
ಒಬ್ಬ ಮುದುಕ ವ್ಯಕ್ತಿ ಎರಡು ವರ್ಷದ ಮಗುವನ್ನು ಎದೆಗೆ ಅವಚಿಕೊಂಡು ಕವುಚಿ ಸತ್ತುಬಿದ್ದಿದ್ದ ದೃಶ್ಯ ಮನ ಕರಗಿಸುವಂತಿತ್ತು. ಅಂದಾಜು 2000 ಜನ ಸತ್ತು ಬಿದ್ದಿದ್ದರು.
ಪ್ರತಾಪ್ ಸಿಂಗ್ ಎಂಬವನ ಮಗ ಸುಂದರ ಸಿಂಗ್ ಅಲ್ಲಿಗೆ ಹೋಗಿದ್ದ. ಗುಂಡಿನ ಸದ್ದು ಕೇಳಿ ಹೋದವನು ಅಲ್ಲಿ ಕಂಡದ್ದು ಹೆಣಗಳ ರಾಶಿ. ಬೀದಿಗಳಲ್ಲಿ ಕೂಡ ಹೆಣಗಳ ರಾಶಿ! ಗೋಡೆ ಹಾರಿ ಒಳಹೋದಾಗ ಒಬ್ಬ ಸಾಯುತ್ತಾ ಇರುವ ವ್ಯಕ್ತಿ ಕೇಳಿದ. ಸನಿಹದಲ್ಲಿ ಸಣ್ಣ ನೀರಿನ ಹರಿವು ಇತ್ತು. ಅಲ್ಲಿ ಹಂಸಲಿ ಎನ್ನುವ ಕಾಲುವೆ. ಸಣ್ಣ ಹೊಂಡದಲ್ಲಿ ಹೆಣಗಳು ತೇಲುತ್ತಿದ್ದವು. ಕೆಲವರು ಜೀವಂತ ಇದ್ದರು. ಅವರು ಕೇಳಿದರು-” ಅವರು ಹೋದರೇ ?”. ಹೋದರು ಎಂದಾಗ ಎದ್ದು ಬಿದ್ದು ಓಡಿದರು. ಹಾಗೆ ಓಡಿದವರಲ್ಲಿ ಕೆಲವರು ನಮ್ಮ ಮನೆಯಲ್ಲಿ, ಮತ್ತೆ ಕೆಲವರು ಹೊರಗಿನ ಬೀದಿಗಳಲ್ಲಿ ಸತ್ತರು. ನೀರು ಕೊಂಡು ಹೋಗಲು ಮೂರು ನಾಲ್ಕು ಜನರನ್ನು ಸಹಾಯಕ್ಕೆ ಬರಹೇಳಿದೆ.”
“ಸಂಜೆ 6.00 ರಿಂದ 8.00 ಗಂಟೆಯವರೆಗೆ ತಾಯಂದಿರಿಗೆ ಸತ್ತುಹೋದ ತಮ್ಮ ಮನೆಯವರನ್ನು ತೆಗೆಯಲು ಸಾಧ್ಯವಾಗಲಿಲ್ಲ. ಸಾಯುತ್ತಿರುವ ಗಂಡಂದಿರ, ತಂದೆಯರ, ಹೆಣಗಳ ಬಳಿ ಕುಳಿತು ನೋಡುವುದಷ್ಟೇ ಸಾಧ್ಯವಾಯಿತು. ರಾತ್ರಿಯಿಡೀ ನರಳಾಡುತ್ತಿದ್ದವರು ಇದ್ದರು.”
ಒಟ್ಟಿನಲ್ಲಿ ಅಂದಿನ ಹತ್ಯಾಕಾಂಡದ ನಂತರದ ರಾತ್ರಿಯಲ್ಲಿ ಅಲ್ಲಿ ಸೇರಿದವರ ಚೀರಾಟ ನರಳಾಟಗಳು ಆಗಸಕ್ಕೆ ಅಪ್ಪಳಿಸಿ ಮತ್ತೆ ಪ್ರತಿಧ್ವನಿಸುತ್ತಿದ್ದವು…. ನಂತರದ ದಿನದಲ್ಲಿ ಹತ್ಯಾಕಾಂಡದಲ್ಲಿ ಮಡಿದವರ ಹೆಣಗಳನ್ನು ಸುಟ್ಟ ಹೊಗೆ ಅಮೃತಸರದ ಬೀದಿಗಳನ್ನು ಹಾಯ್ದು, ಗಾಳಿಯೊಂದಿಗೆ ಸೇರಿ, ಮನೆ ಮನೆಗಳಿಗೂ ಸುಳಿಯುತ್ತಿತ್ತು.
ಆಶ್ಚರ್ಯವೆಂದರೆ ಯಥಾರ್ಥವಾದ ವರದಿಗಳು ಕಾಂಗ್ರೆಸ್ ಕಮಿಟಿಯಿಂದ ಒದಗಿಬಂತು. ಏಕೆಂದರೆ ಹಂಟರ್ ಕಮಿಟಿ ತನ್ನ ಅಂತಿಮ ವರದಿಯಲ್ಲಿ ಹೀಗೆ ಹೇಳಿತು- “ಗಾಯಗೊಂಡವರು ಅನಗತ್ಯ ನರಳಾಟಕ್ಕೆ ಒಳಗಾಗಿದ್ದಾರೆ ಮತ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು ಎಂದು ಸಾಬೀತಾಗಿಲ್ಲ” ! ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಹೋದವರ ಬಳಿ-” ನೀವು ಹುಚ್ಚುನಾಯಿಗಳು…. ನೀವು ಗಾಂಧಿ, ಸೈಫುದ್ದಿನ್ ಖಿಚಲು, ಹಾಗೂ ಸತ್ಯಪಾಲ್ ಬಳಿ ಚಿಕಿತ್ಸೆ ಪಡೆಯಿರಿ” ಎಂದು ಕರ್ನಲ್ ಸ್ಮಿತ್ ಹೇಳಿದಂತಹ ಪೈಶಾಚಿಕ ನಡೆಗಳು ಹಂಟರ್ ಕಮಿಟಿಯ ವರದಿಯಲ್ಲಿ ಉಲ್ಲೇಖ ವಾಗಲಿಲ್ಲ. ಸತ್ತವರಲ್ಲಿ ಹಂಸಲಾಲ್ ಪುರಿಯ 18 ವರ್ಷದ ಮಗನೂ ಇದ್ದ. ಆತ ಹಿಂದೂಸಭಾದ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ಆದರೆ ಭಾರತದ ರಾಷ್ಟ್ರೀಯ ನಾಯಕರಿಗೆ ಹಂಟರ್ ಕಮಿಟಿಯ ವರದಿಯು ಸತ್ಯಾಸತ್ಯತೆಯನ್ನು ಬಯಲುಮಾಡುವಲ್ಲಿ ಎಡವಿದೆ ಎಂಬ ಅಭಿಪ್ರಾಯ ಕಂಡುಬಂತು. ಅದಕ್ಕಾಗಿ ಸರಿಯಾದ ವರದಿ ಪಡೆಯುವುದಕ್ಕೆ ಪಂಜಾಬ್ ಸಬ್ ಕಮಿಟಿ ಹಾಗೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೇಮಕ ಆಯಿತು. ಪಂಡಿತ್ ಮದನ ಮೋಹನ ಮಾಳವೀಯ, ಪಂಡಿತ್ ಮೋತಿಲಾಲ್ ನೆಹರು, ಸಿ. ಆರ್. ದಾಸ್, ಅಬ್ಬಾಸ್ ತಯಾಬ್ಜಿ, ಎಂ ಆರ್ ಜಯಕರ್, ಕೆ. ಸಂತಾನಂ – ಇವರುಗಳನ್ನೊಳಗೊಂಡ ಸಮಿತಿ ರಚನೆಯಾಯಿತು. ಈ ಎಲ್ಲಾ ರಾಷ್ಟ್ರನಾಯಕರ ಸಂಘಟಿತ ಪ್ರಯತ್ನದ ಫಲವಾಗಿ ನಮಗೆ ಇಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಿಜವಾದ ಇತಿಹಾಸ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕರಾಳ ಮುಖದರ್ಶನ ಸಾಧ್ಯವಾಯಿತು.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು
ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ
ಮೊಬೈಲ್:9740545979
rpbangaradka@gmail.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.