ಕೊರೋನಾ ಸೋಂಕಿನಿಂದ ಲಾಕ್ಡೌನ್ ಆದ ದೇಶಕ್ಕೆ ಶಕ್ತಿ ತುಂಬುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಲೇ ಬಂದಿದೆ. ಬಡ, ನಿರ್ಗತಿಕ ಸಮುದಾಯಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸುವುದರಿಂದ ಹಿಡಿದು, ಜನರನ್ನು ಒಗ್ಗಟ್ಟಾಗಿ ಕೊರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುವುದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಸಂಘ ಮಾಡುತ್ತಿದೆ. ಇದರ ಮುಂದುವರಿದ ಭಾಗ ಎಂಬಂತೆ ಈ ಲಾಕ್ಡೌನ್ ಸಂದರ್ಭದಲ್ಲಿ ಜನರನ್ನು ತಮ್ಮ ಕುಟುಂಬದ ಬಗ್ಗೆ ಹೆಚ್ಚು ಪ್ರೀತಿ ಮೂಡುವಂತೆ ಮಾಡುವ ನಿಟ್ಟಿನಲ್ಲಿ ಪರಿವಾರ ಪ್ರಬೋಧನ ಎಂಬ ಕಾರ್ಯವನ್ನೂ ಆರ್ ಎಸ್ ಎಸ್ ಹಮ್ಮಿಕೊಂಡಿದ್ದು, ಆ ಮೂಲಕ ಜನರಿಗೆ ಕುಟುಂಬ ಜೀವನದ ಬಗ್ಗೆ, ಧರ್ಮ, ಆಧ್ಯಾತ್ಮಿಕ ಚಿಂತನೆಗಳ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಈ ಕಾರ್ಯಕ್ರಮದಲ್ಲಿ ಕೊರೋನಾ ಮಹಾಮಾರಿಯಿಂದ ಸೋತು ಹೋದ ಜನರಲ್ಲಿ ಮತ್ತೆ ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ. ಜೊತೆಗೆ ಕೌಟುಂಬಿಕ ವಿಘಟನೆ, ಹೆತ್ತವರ ಕುರಿತ ನಿರ್ಲಕ್ಷ್ಯ, ನೈತಿಕತೆ, ಮೌಲ್ಯಗಳ ವಿಘಟನೆಯ ಕಾರಣದಿಂದ ಸಮಾಜ ವ್ಯವಸ್ಥೆ ಸಾಂಸಾರಿಕ ಬದುಕಿನಲ್ಲಾಗುತ್ತಿರುವ ಸಮಸ್ಯೆ ಮತ್ತು ಈ ಸಮಸ್ಯೆಗಳಿಂದ ಹೊರಬರುವ ದಾರಿಗಳ ಬಗ್ಗೆಯೂ ಜನರಿಗೆ ತಿಳಿಸಲಾಗುತ್ತಿದೆ. ಅಲ್ಲದೆ ಆಧ್ಯಾತ್ಮಿಕ ವಿಚಾರಗಳು, ದೇಶಭಕ್ತಿಯ ವಿಚಾರಗಳ ಬಗೆಗೂ ಬೆಳಕು ಚೆಲ್ಲಲಾಗುತ್ತಿದೆ.
ಇನ್ನು ಎಪ್ರಿಲ್ 5 ರಂದು ಪರಿವಾರ ಪ್ರಬೋಧನದ ಮೂಲಕ ದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮ ಒಂದರಲ್ಲಿ ವೃದ್ಧರ ಬಗೆಗಿನ ನಿರ್ಲಕ್ಷ್ಯವನ್ನು ಕಡಿಮೆ ಮಾಡುವುದು ಹೇಗೆ ಮತ್ತು ಕೇವಲ ಮನೆಗಷ್ಟೇ ಸೀಮೀತವಾಗಿರುವ ಮನಸ್ಸನ್ನು ಸಮಾಜಮುಖಿಯಾಗಿಸುವುದು ಹೇಗೆ ಎಂಬುದರ ಕುರಿತಂತೆಯೂ ಯುವ ಜನತೆಗೆ ಮನನ ಮಾಡುವ ನಿಟ್ಟಿನಲ್ಲಿ ವಿಚಾರಗಳನ್ನು ಮಂಡನೆ ಮಾಡಲಾಯಿತು.
ಈ ಕಾರ್ಯಕ್ರಮ ಮದಲ್ಲಿ ಸುಮಾರು 2100 ಕ್ಕೂ ಹೆಚ್ಚು ಕುಟುಂಬದ 10 ಸಾವಿರಕ್ಕೂ ಅಧಿಕ ಮಂದಿ ಗಾಯತ್ರಿಮಂತ್ರವನ್ನು ಪಠಿಸಿದರು. ಮಹಾವೀರ ಸ್ವಾಮಿಗಳ ಪೂಜೆ ನಡೆಸಿದರು. ಜಾಪುಜೀ ಸಾಹೇಬರ ಬೋಧನೆಗಳನ್ನೂ ಈ ಸಂದರ್ಭದಲ್ಲಿ ಭಾಗಿಯಾದ ಕುಟುಂಬಗಳಿಗೆ ತಿಳಿಸಲಾಯಿತು. ಸುಮಾರು 100 ಕುಟುಂಬಗಳಿಂದ ಹವನ, 3 ಲಕ್ಷ ಜನರಿಂದ ಗಾಯತ್ರಿ ಮಂತ್ರ ಪಠಣ ಮೊದಲಾದವುಗಳೂ ನಡೆಯಿತು. ಜನರಲ್ಲಿ ಆಧ್ಯಾತ್ಮಿಕ ಶಕ್ತಿ ಹೆಚ್ಚುವಂತೆ ಮಾಡುವುದು, ಕೂಡು ಕುಟುಂಬಗಳ ಮಹತ್ವ ತಿಳಿಸುವುದು, ಧಾರ್ಮಿಕ ಆಚರಣೆಗಳ ಮಹತ್ವಗಳೇ ಮೊದಲಾದ ಮೌಲ್ಯಗಳನ್ನು ತಿಳಿಸಿ ಕೊಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಪರಿವಾರ ಪ್ರಬೋಧನದ ಸಂಚಾಲಕ ಭಗವಾನ್ ದಾಸ್ ತಿಳಿಸಿದ್ದಾರೆ.
ಇನ್ನು ಈ ಸಂದರ್ಭ ಕೆಲವು ಕುಟುಂಬಗಳಿಗೂ ಭೇಟಿ ನೀಡಿರುವ ಪರಿವಾರ ಪ್ರಬೋಧನದ ಸದಸ್ಯರು, ದಿನಕ್ಕೊಂದು ಬಾರಿಯಾದರೂ ಕುಟುಂಬ ಸದಸ್ಯರು ಒಟ್ಟು ಸೇರುವುದು, ಮಾತುಕತೆಗಳ ಮೂಲಕ ತಮ್ಮ ಆ ದಿನದ ದಿನಚರಿಯ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುವುದು ಮತ್ತು ಸಹಭೋಜನ ನಡೆಸುವಂತೆಯೂ ತಿಳಿಸಿದ್ದಾರೆ. ಆ ಮೂಲಕ ಕುಟುಂಬದೊಳಗಿನ ಬಾಂಧವ್ಯ ಅಭಿವೃದ್ಧಿ ಮಾಡಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಇದರಿಂದಾಗಿ ಸಕಾರಾತ್ಮಕ ಅಂಶ ಹೆಚ್ಚುವುದಾಗಿ ಭಗವಾನ್ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸತ್ಸಂಗ, ಗುರುವಾಣಿ, ಸುಂದರಕಾಂಡ, ಪ್ರಾರ್ಥನೆ, ದುರ್ಗಾ ಸ್ತುತಿಗಳ ಜೊತೆಗೆ ಲಾಕ್ಡೌನ್ನಿಂದಾಗಿ ಸಮಸ್ಯೆ ಎದುರಿಸುವವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು. ಕೂಡು ಕುಟುಂಬದ ಉಪಯೋಗದ ಬಗ್ಗೆ ಮಾಹಿತಿ, ಕೊರೋನಾ ಸಂಕಷ್ಟದಿಂದ ಒತ್ತಡಕ್ಕೊಳಗಾದವರಿಗೆ ಚೈತನ್ಯ ತುಂಬುವ ಕೆಲಸ, ಜೊತೆಗೆ ಕೋವಿಡ್ನಿಂದ ರಕ್ಷಿಸಿಕೊಳ್ಳುವ ಬಗೆಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ದಾಸ್ ತಿಳಿಸಿದ್ದಾರೆ. ಈ ಚಟುವಟಿಕೆಗಳನ್ನು ನಡೆಸುವ ಜೊತೆಗೆ ಪ್ರಾದೇಶಿಕ ಭಾಷೆಗಳಾದ ಕನ್ನಡ, ಮರಾಠಿ, ಗುಜರಾತಿ, ಮಲಯಾಳಂ ಮೊದಲಾದ ಭಾಷೆಗಳಲ್ಲಿರುವ ರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸುವ ಕೃತಿಗಳನ್ನೂ ಒದಗಿಸಲಾಗುವುದಾಗಿ ಸಂಘ ತಿಳಿಸಿದೆ. ಆ ಮೂಲಕ ದೇಶ ಭಕ್ತಿ ಮೂಡಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಲಾಗುವುದು ಎಂದು ಸಂಘ ತಿಳಿಸಿದೆ.
ಇನ್ನು ದೇಶದ ನಾನಾ ರಾಜ್ಯಗಳಲ್ಲಿ ಈವರೆಗೆ ಸಂಘ ಆಹಾರ, ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಜನರೊಂದಿಗೆ ನಾವಿದ್ದೇವೆ ಎಂಬುದನ್ನು ಸಾರಿದೆ. ಜೊತೆಗೆ ಸಮಾಜದಲ್ಲಿನ ನಕಾರಾತ್ಮಕ ಮನಸ್ಥಿತಿಯನ್ನು ತೊಡೆದು ಹಾಕಿ ಸಕಾರಾತ್ಮಕ ಚಿಂತನೆಗಳನ್ನು ಬಿತ್ತುವ ಕೆಲಸವನ್ನೂ ಮಾಡಿದೆ. ಆ ಮೂಲಕ “ರಾಷ್ಟ್ರ ಹಿತದ ಕಾಯಕ, ನಾಡಿಗಭಯ ದಾಯಕ, ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ” ಎಂಬಂತೆ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೀಯ ಪ್ರಜ್ಞೆ ಮೂಡಿಸಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಶ್ರಮಿಸುತ್ತಿದೆ. ತಾನು ಮಾಡುವ ಕಾರ್ಯದ ಮೂಲಕವೇ ಯುವಕರಿಗೆ ದೇಶಭಕ್ತಿಯ ಪಾಠವನ್ನು ತಿಳಿಸಿಕೊಡುತ್ತಿದೆ ಎಂದರೂ ಅತಿಶಯೋಕ್ತಿಯಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.