ಮಂಗಳೂರು : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ಪಡೆಯಲು ಹಿಂದೆ ಜಾರಿಯಲ್ಲಿದ್ದಂತಹ ಕೈಬರಹದ ಬಿಲ್ಲು ತಯಾರಿಸುವ ರೀತಿಗೆ ಬದಲಾಗಿ ಪ್ರಸ್ತುತ ಹೆಚ್.ಆರ್.ಎಂ.ಎಸ್. ಆನ್ಲೈನ್ ತಂತ್ರಾಂಶದ ಮೂಲಕ ಸಂಬಳ ಪಡೆಯಲು ವ್ಯವಸ್ಥೆ ಜಾರಿಯಲ್ಲಿದೆ ಎಂದು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕ್ಯಾ. ಗಣೇಶ್ ಕಾರ್ಣಿಕ್ರವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ರೀತಿಯಲ್ಲಿ ಎಲ್ಲಾ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರ ವೇತನ ಬಿಲ್ಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕ ಪ್ರತಿ ತಿಂಗಳ 20ನೇ ತಾರೀಕಿನೊಳಗಾಗಿ ಸಂಬಂಧಿಸಿದ ವೇತನ ಬಟವಾಡೆ ಹಾಗೂ ವಿತರಣೆ ಮಾಡುವ ಅಧಿಕಾರಿಗಳು ತಯಾರಿಸಿ 26ನೇ ತಾರೀಕಿನೊಳಗೆ ಖಜಾನೆಗಳಿಗೆ ಬಿಲ್ಗಳನ್ನು ಸಲ್ಲಿಸಲಾಗುವುದು ಎಂದರು. ವೇತನವನ್ನು ನಿಗದಿತ ವೇಳೆಯಲ್ಲಿ ಪಾವತಿಸುವ ವಿಚಾರವಾಗಿ ಪ್ರತಿ ವಲಯ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಲಾಗಿದೆ. ಅದಾಗ್ಯೂ ಕೂಡ ವೇತನ ಪಾವತಿಯಲ್ಲಿ ವಿಳಂಬವಾದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರುಗಳ ಸಂಬಳ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಲು ಸರ್ಕಾರದ ಆರ್ಥಿಕ ಇಲಾಖೆಯಿಂದ ನೇರವಾಗಿ ರಾಜ್ಯ ವಲಯ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತಿಗಳಿಗೆ ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿರುವುದರಿಂದ ಅನುದಾನದ ಬಿಡುಗಡೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಈ ಸಾಲಿನ ಜುಲೈ 2015ರವರೆಗಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೆ ತಿಂಗಳ ಕೊನೆಯ ದಿನಾಂಕದಂದೇ ಸಂಬಳ ನೀಡುವಂತೆ ಇಲಾಖಾ ಹಂತದಲ್ಲಿ ಕಾಲಕಾಲಕ್ಕೆ ಸುತ್ತೋಲೆ ಹೊರಡಿಸಲಾಗುತ್ತಿದ್ದು, ತಿಂಗಳ 5ನೇ ತಾರೀಕಿನೊಳಗಾಗಿ ವೇತನ ಪಾವತಿಸಿ ಮಾಹಿತಿಯನ್ನು ೧೦ನೇ ತಾರೀಖಿನೊಳಗೆ ಸಲ್ಲಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಜಾನೆಯಲ್ಲಿ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಬಿಲ್ಲುಗಳನ್ನು ಪಾಸ್ ಮಾಡಿ ಬ್ಯಾಂಕ್ ಖಾತೆಗಳಿಗೆ ಇ.ಸಿ.ಎಸ್. ಮೂಲಕ ಸಂಬಳ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೀಗಿದ್ದು ಭಾಗಶ: ಸಿಬ್ಬಂದಿಗೆ ವೇತನ ಬಿಡುಗಡೆಯಲ್ಲಿ ಈಗಲೂ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.