ತಮ್ಮನ್ನು ತಾವು ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಕೆಲವರು ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಅಪಪ್ರಚಾರಗಳು ದೇಶದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ. ಹಿರಿಯ ವಕೀಲ ಹರೀಶ್ ಸಾಲ್ವೆ ಅವರು ಸಿಎಎ ವಿರುದ್ಧದ ಕೆಲವರ ಕುತಂತ್ರವನ್ನು ಬಯಲುಗೊಳಿಸುವಂತಹ ಬರವಣಿಗೆಯನ್ನು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದಿದ್ದಾರೆ.
ಅಸಲಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ತಾರತಮ್ಯ ಧೋರಣೆಯನ್ನು ಹೊಂದಿದೆ ಎಂದು ಕೆಲವರು ಆಪಾದಿಸುತ್ತಿದ್ದಾರೆ. ಆದರೆ ಈ ಕಾಯ್ದೆ ಯಾವ ರೀತಿಯಲ್ಲಿ ತಾರತಮ್ಯ ಧೋರಣೆಯನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಾನು ವಿಫಲನಾಗಿದ್ದೇನೆ ಎಂದು ಸುಪ್ರೀಂಕೋರ್ಟ್ ವಕೀಲ ಹರೀಶ್ ಸಾಲ್ವೆ ಹೇಳಿದ್ದಾರೆ.
ಹರೀಶ್ ಸಾಲ್ವೆ ಅವರು ಮಹತ್ವದ ಹಲವಾರು ಪ್ರಕರಣಗಳಲ್ಲಿ ಹೋರಾಡಿ ಜಯ ಗಳಿಸಿದವರು. ಪಾಕಿಸ್ಥಾನದ ಕಪಿಮುಷ್ಟಿಯಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಸಾಲ್ವೆ ಅವರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು ಈ ಪ್ರಕರಣದಲ್ಲಿ ಭಾರತದ ಪರವಾಗಿ ತೀರ್ಪು ಬಂದಿದೆ. ಹೀಗಾಗಿ ಕುಲಭೂಷಣ್ ಅವರನ್ನು ಗಲ್ಲಿಗೇರಿಸಲು ಪಾಕಿಸ್ಥಾನಕ್ಕೆ ಇದುವರೆಗೆ ಸಾಧ್ಯವಾಗಿಲ್ಲ.
ಇನ್ನು ಸಿಎಎ ವಿಚಾರಕ್ಕೆ ಬಂದರೆ, ಕುತಂತ್ರಿಗಳು ಹಬ್ಬಿಸಿದ ಸುಳ್ಳಿನ ಪರಿಣಾಮವಾಗಿ ದೇಶದಾದ್ಯಂತ ಗಲಾಟೆ, ದೊಂಬಿಗಳು ನಡೆದಿದ್ದವು. ಸಿಎಎ ವಿರುದ್ಧದ ಪ್ರತಿಭಟನೆಯು ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದಲ್ಲಿ ಹಿಂಸಾತ್ಮಕ ರೂಪವನ್ನು ಪಡೆದು 50 ಜನರನ್ನು ಬಲಿತೆಗೆದುಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾದಲ್ಲಿ ‘ಸಿಎಎ ಅಗತ್ಯ’ ಎಂಬ ಶೀರ್ಷಿಕೆಯ ಸಂಪಾದಕೀಯವನ್ನು ಬರೆದು, ಅದರ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಾಲ್ವೆ ಅವರು, “ಸಿಎಎ ತಾರತಮ್ಯದಿಂದ ಕೂಡಿಲ್ಲ ಅಥವಾ ಇದು ಅಸಂವಿಧಾನಿಕವೂ ಅಲ್ಲ ಎಂದು ವಾದಿಸಿದ್ದಾರೆ. ಮಾತ್ರವಲ್ಲದೇ, “ದೇಶವನ್ನು ಅದರ ಅನುಮತಿಯಿಲ್ಲದೆ ಪ್ರವೇಶಿಸುವವರು ಅಕ್ರಮ ನಾಗರಿಕರು ಮತ್ತು ಅವರು ಗಡಿಪಾರಿಗೆ ಅರ್ಹರಾಗಿರುತ್ತಾರೆ” ಎಂದಿದ್ದಾರೆ.
“ಗುರುತಿಸಲ್ಪಟ್ಟ ವರ್ಗದ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡಲು ವಿನ್ಯಾಸಗೊಳಿಸಲಾದ ಕಾನೂನು ಮತ್ತು ಈ ಗುರುತಿಸುವಿಕೆಯು ತರ್ಕಬದ್ಧ ಮಾನದಂಡವನ್ನು ಆಧರಿಸಿದೆ ಎಂದ ಮೇಲೆ ಅದು ಹೇಗೆ ತಾರತಮ್ಯಕ್ಕಾಗಿ ಖಂಡನೆಗೆ ಒಳಪಟ್ಟಿದೆ ಮತ್ತು ಕಾಯ್ದೆಯನ್ನು ಇನ್ನಷ್ಟು ವರ್ಗಗಳಿಗೆ ವಿಸ್ತರಿಸಬೇಕು ಎಂಬ ಕೂಗಿಗೆ ಅದು ಹೇಗೆ ಒಳಗಾಗಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇನೆ” ಎಂದಿದ್ದಾರೆ.
ಖ್ಯಾತ ವಕೀಲ ಮತ್ತು ಸಾಂವಿಧಾನ ತಜ್ಞನಾಗಿರುವ ಸಾಲ್ವೆ ಅವರು, ಸಮಾನತೆಯ ತತ್ವವೆಂದರೆ ಪ್ರತಿ ಕಾನೂನಿನಲ್ಲೂ ಸಾರ್ವತ್ರಿಕ ಅನ್ವಯಿಕೆ ಇರಬೇಕು ಎಂದು ಅರ್ಥವಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ, ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ ಮತ್ತು ಭಾರತಕ್ಕೆ ಯಾವ ನೀತಿ ಉತ್ತಮ ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ ಎಂದಿದ್ದಾರೆ.
“ಈ ಇಸ್ಲಾಮಿಕ್ ಗಣರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾಗಿದ್ದಾರೆ ಎಂಬುದಕ್ಕೆ ನಮಗೆ ನಿಜವಾಗಿಯೂ ಪುರಾವೆ ಬೇಕೇ? ಮೂರು ನೆರೆಹೊರೆಗಳಲ್ಲಿ ಇರುವ ಧಾರ್ಮಿಕ ದೌರ್ಜನ್ಯ ಪೀಡಿತ ಅಲ್ಪಸಂಖ್ಯಾತರನ್ನು ರಕ್ಷಿಸುವ ಅವಶ್ಯಕತೆಯಿದೆ ಎಂಬ ತೀರ್ಮಾನಕ್ಕೆ ಬಂದಿರುವ ಸಂಸತ್ತನ್ನು ಹೇಗೆ ದೋಷಪೂರಿತ ಎಂದು ಆರೋಪಿಸಲು ಸಾಧ್ಯ? ” ಎಂದು ಸಾಲ್ವೆ ಪ್ರಶ್ನಿಸಿದ್ದಾರೆ.
ಭಾರತೀಯ ಸಂವಿಧಾನವು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ ಮತ್ತು ಮುಸ್ಲಿಮರನ್ನು ಸೇರಿಸಲು ಕಾನೂನಿನ ಉದ್ದೇಶವನ್ನು ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕಾಯ್ದೆಯು ಭಾರತದ ಮುಸ್ಲಿಮರನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನವೇ ಎಂದು ಕೇಳಿದಾಗ ಉತ್ತರಿಸಿದ ಅವರು, “ಪ್ರಧಾನಿ ಇದನ್ನು ನಿರಾಕರಿಸಿದ್ದಾರೆ. ಆದರೂ, ಮುಸ್ಲಿಮರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ಕಾರ್ಯವಿಧಾನವನ್ನು ಜಾರಿಗೊಳಿಸಿದರೆ ಆ ವಿಧಾನವು ಅಸಂವಿಧಾನಿಕವಾಗುತ್ತದೆ” ಎಂದು ಅವರು ಅಭಿಪ್ರಾಯಿಸಿದ್ದಾರೆ.
ಹರೀಶ್ ಸಾಲ್ವೆ ಅವರಂತಹ ಕಾನೂನು ಪರಿಣತರು ಸಿಎಎಯ ಸಾಂವಿಧಾನಿಕ ಸಿಂಧುತ್ವವನ್ನು ಪದೇ ಪದೇ ಪ್ರತಿಪಾದಿಸುತ್ತಲೇ ಇದ್ದಾರೆ. ಆದರೆ ಕೆಲವರು ಇದ್ಯಾವುದಕ್ಕೂ ಕಿವಿಗೊಡದೆ ತಮ್ಮದೇ ಆದ ಕಪೋಲಕಲ್ಪಿತ ತಪ್ಪು ತಿಳುವಳಿಕೆಗಳನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಇದು ಅವರ ದುಷ್ಕೃತ್ಯದ ಅಜೆಂಡಾವನ್ನು ಮಾತ್ರ ಬಹಿರಂಗಪಡಿಸುತ್ತದೆ.
Why the many arguments about CAA being unconstitutional don’t hold water, writes Harish Salve, Senior Advocate, Supreme Court.https://t.co/hUiksAqd8x pic.twitter.com/rjmFd2TV2x
— Piyush Goyal (@PiyushGoyal) March 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.