ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಇಂದು ಪುನರಾರಂಭಗೊಳ್ಳಲಿದೆ. ಅಧಿವೇಶನದ ಸಂದರ್ಭದಲ್ಲಿ ಬಹುತೇಕ ವಿಷಯಗಳು ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ದೆಹಲಿ ದಂಗೆಯ ಬಗ್ಗೆ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ.
ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಈಗಾಗಲೇ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸದನದಲ್ಲಿ ಈ ವಿಷಯವನ್ನೇ ಹಿಡಿದುಕೊಂಡು ಕೋಲಾಹಲ ಸೃಷ್ಟಿಸಲು ಸಜ್ಜಾಗುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಯನ್ನು ಕೋರುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.
ಜನವರಿಯಿಂದ ಪ್ರಾರಂಭವಾದ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಭಾಷಣವನ್ನು ಪ್ರಸ್ತುತಪಡಿಸಿದರು. ಉಭಯ ಸದನಗಳಲ್ಲಿ ಸಿಎಎ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಯನ್ನು ನಡೆಸಿದವು.
ಬಜೆಟ್ ಅಧಿವೇಶನ ಏಪ್ರಿಲ್ 3 ರಂದು ಮುಕ್ತಾಯಗೊಳ್ಳಲಿದೆ.
ಅಧಿವೇಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಅವರು, “ನಾವು ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಎತ್ತುತ್ತೇವೆ. ನಾವು ಅಮಿತ್ ಶಾ ಅವರ ರಾಜೀನಾಮೆಯನ್ನು ಕೇಳುತ್ತಿದ್ದೇವೆ. ಸಂಸತ್ತಿನಲ್ಲಿಯೂ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ” ಎಂದಿದ್ದಾರೆ.
ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ, ಬಾಡಿಗೆ ತಾಯ್ತತನ ಮತ್ತು ವಿವಾದಿತ ತೆರಿಗೆ ಪರಿಹಾರಕ್ಕೆ ಸಂಬಂಧಿಸಿದ ಮಸೂದೆಗಳನ್ನು ಒಳಗೊಂಡಿರುವ ಶಾಸಕಾಂಗದ ಕಾರ್ಯಸೂಚಿಯನ್ನು ಸರ್ಕಾರ ಸದನದ ಮುಂದಿಡುವ ನಿರೀಕ್ಷೆಯಿದೆ. ಅಲ್ಲದೇ, ಪ್ರತಿಪಕ್ಷಗಳು ಒಡ್ಡುವ ಪ್ರತಿ ಸವಾಲನ್ನು ಕೂಡ ಸಮರ್ಥವಾಗಿ ಎದುರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೇಂದ್ರ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.