ಕಳೆದ 14 ವರ್ಷಗಳಲ್ಲಿ ಭಾರತವು ಮೂರು ಬಾರಿ ಅಮೆರಿಕಾ ಅಧ್ಯಕ್ಷರಿಗೆ ಆತಿಥ್ಯವನ್ನು ನೀಡಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನ ಒಂದೂ ಆತಿಥ್ಯವನ್ನು ನೀಡಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತುತ ಭಾರತಕ್ಕೆ ನೀಡಿರುವ ಭೇಟಿಯ ಪರಿಣಾಮವಾಗಿ ಯುಎಸ್ ತನ್ನ ವಿದೇಶಾಂಗ ನೀತಿಯಲ್ಲಿ ಪಾಕಿಸ್ಥಾನವನ್ನು ಇನ್ನಷ್ಟು ಕಡೆಗಣನೆಗೆ ಒಳಪಡಿಸುವ ಸಾಧ್ಯತೆ ಇದೆ.
ಪಾಕಿಸ್ಥಾನಕ್ಕೆ ಭೇಟಿ ನೀಡಿದ ಕೊನೆಯ ಯುಎಸ್ ಅಧ್ಯಕ್ಷ ಎಂದರೆ ಜಾರ್ಜ್ ಡಬ್ಲ್ಯು ಬುಷ್. ಮಾರ್ಚ್ 2006 ರ ಆರಂಭದಲ್ಲಿ ಭಾರತವನ್ನು ಒಳಗೊಂಡ ಪ್ರವಾಸದ ಸಂದರ್ಭದಲ್ಲಿ ಅವರು ಪಾಕಿಸ್ಥಾನಕ್ಕೆ ಭೇಟಿಯನ್ನು ನೀಡಿದ್ದರು. ಬುಷ್ ಅವರ ಬಳಿಕ ಅಮೆರಿಕಾ ಅಧ್ಯಕ್ಷರಾದ ಬರಾಕ್ ಒಬಾಮಾ ಒಂದು ಬಾರಿಯೂ ಪಾಕಿಸ್ಥಾನಕ್ಕೆ ಭೇಟಿ ನೀಡಲಿಲ್ಲ. ಆದರೆ ಎರಡು ಬಾರಿ ಭಾರತಕ್ಕೆ ಆಗಮಿಸಿದ್ದಾರೆ. 1959 ರಿಂದ 2006 ರ ವರೆಗೆ ಪ್ರತಿ ಅಮೆರಿಕಾ ಅಧ್ಯಕ್ಷರುಗಳೂ ದಕ್ಷಿಣ ಏಷ್ಯಾ ಪ್ರವಾಸದಲ್ಲಿ ಭಾರತ ಮತ್ತು ಪಾಕಿಸ್ಥಾನವನ್ನು ಒಳಪಡಿಸಿಕೊಂಡಿದ್ದರು.
ಪಾಕಿಸ್ಥಾನ ವಿದೇಶಾಂಗ ಕಚೇರಿಯ ವಕ್ತಾರೆ ಆಯಿಷಾ ಫಾರೂಕಿ ಈ ಹಿಂದೆ ಅಮೆರಿಕಾ ಅಧ್ಯಕ್ಷರು ತಮ್ಮ ದೇಶಕ್ಕೆ ಭೇಟಿ ಕೊಡದ ಬಗ್ಗೆ ವಿವರಿಸಿದ್ದು ಹೀಗೆ-” ಟ್ರಂಪ್ ಅವರು ಪಾಕಿಸ್ಥಾನಕ್ಕೆ ಒಂದು ವಿಶೇಷ ಭೇಟಿಯನ್ನು ನೀಡಲು ಬಯಸುತ್ತಾರೆ, ಆ ಭೇಟಿಯನ್ನು ಅವರು ಇತರ ದೇಶದ ಭೇಟಿಯೊಂದಿಗೆ ಜೋಡಿಸಿಕೊಳ್ಳಲು ಬಯಸುತ್ತಿಲ್ಲ. ಯಾಕೆಂದರೆ ಪಾಕಿಸ್ಥಾನಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ” ಎಂದಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಕಳೆದ ಜುಲೈನಲ್ಲಿ ಟ್ರಂಪ್ಗೆ ಆಹ್ವಾನವನ್ನು ನೀಡಿದ್ದರು.
ಭಾರತಕ್ಕೆ ಅಮೆರಿಕಾ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡುತ್ತಾರೆ, ಆದರೆ ಪಾಕಿಸ್ಥಾನಕ್ಕೆ ಯಾಕೆ ಇಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ.
ಅದರಲ್ಲಿ ಒಂದು, ಭಾರತ ಮತ್ತು ಯುಎಸ್ ನಡುವೆ ಅಭಿವೃದ್ಧಿ ಹೊಂದಿದ ಹೆಚ್ಚು ಆಳವಾದ ಕಾರ್ಯತಾಂತ್ರಿಕ ಸಂಬಂಧವಿದೆ, ಇದು ಭಯೋತ್ಪಾದನಾ ನಿಗ್ರಹ, ಚೀನಾ ಮತ್ತು ವ್ಯಾಪಾರ, ಶಕ್ತಿಯಂತಹ ಜಾಗತಿಕ ಸಮಸ್ಯೆಗಳನ್ನು ಒಳಗೊಂಡಿದೆ. ಆದರೆ ಪಾಕಿಸ್ಥಾನದ ಕಾರ್ಯಸೂಚಿ ಭಯೋತ್ಪಾದನೆ ಮಾತ್ರ.
“ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಅಮೆರಿಕಾದ ನಡುವೆ ಕೆಲವೊಂದು ಭಿನ್ನಾಭಿಪ್ರಾಯಗಳು ತಲೆದೋರಿವೆ, ಆದರೆ ಸ್ನೇಹದ ವಿಕಾಸ ಮಾತ್ರ ಸ್ಥಿರವಾಗಿದೆ ಮತ್ತು ಅಮೆರಿಕದ ಕಾರ್ಯತಾಂತ್ರಿಕತೆಯಲ್ಲಿ ಭಾರತದ ಪ್ರಾಮುಖ್ಯತೆಯು ಹೆಚ್ಚುತ್ತಲೇ ಹೋಗುತ್ತಿದೆ.
ಭಯೋತ್ಪಾದಕರ ಆಶ್ರಯ ತಾಣವಾಗಿ ಪರಿವರ್ತನೆಗೊಂಡಿರುವ ಪಾಕಿಸ್ಥಾನ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ಭಯೋತ್ಪಾದಕ ಸಂಘಟನೆ ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕನೆಂದು ಪಟ್ಟಿ ಮಾಡುವಲ್ಲಿ ಅಥವಾ ಪಾಕಿಸ್ಥಾನವನ್ನು ಭಯೋತ್ಪಾದನೆ-ಸಂಬಂಧಿತ ಹಣಕಾಸು ಕ್ರಿಯಾ ಕಾರ್ಯಪಡೆಯ ಬೂದು ಪಟ್ಟಿಯಲ್ಲಿ ಇರಿಸಿಕೊಳ್ಳುವ ವಿಷಯದಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕಾ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದೆ.
ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತೇನೆಂದು ಟ್ರಂಪ್ ಆಗಾಗ ಹೇಳುತ್ತಿರುತ್ತಾರೆ. ಭಾರತ ಇದನ್ನು ಯಾವತ್ತೂ ಒಪ್ಪಿಕೊಂಡಿಲ್ಲ, ಮುಂದೆಯೂ ಒಪ್ಪಿಕೊಳ್ಳುವುದಿಲ್ಲ. ಆದರೆ ಪಾಕಿಸ್ಥಾನ ಈ ಬಗ್ಗೆ ಒಲವು ತೋರಿಸುತ್ತಿದೆ. ನೋಬೆಲ್ ಶಾಂತಿ ಪುರಸ್ಕಾರ ಪಡೆಯುವ ಹಪಹಪಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಮೆರಿಕಾ ಮತ್ತು ಪಾಕಿಸ್ಥಾನ ಆರ್ಥಿಕ ಪಾಲುದಾರರು ಅಲ್ಲವೇ ಅಲ್ಲ. ಪಾಕಿಸ್ಥಾನದಲ್ಲಿ ಅಮೆರಿಕಾ ಹೂಡಿಕೆ ಶೂನ್ಯ ಅಂದರೂ ತಪ್ಪಲ್ಲ. 2018ರಲ್ಲಿ ಪಾಕ್ ಮತ್ತು ಯುಎಸ್ ದ್ವಿಪಕ್ಷೀಯ ವ್ಯಾಪಾರದ ಮೊತ್ತ $6.6 ಬಿಲಿಯನ್, ಅದೇ ಭಾರತದೊಂದಿಗೆ ವ್ಯಾಪಾರ $ 150 ಬಿಲಿಯನ್ ಆಗಿದೆ.
ಪಾಕಿಸ್ಥಾನದಲ್ಲಿ ಯುಎಸ್ ಹೂಡಿಕೆ ಕನಿಷ್ಠ $6 386 ಮಿಲಿಯನ್, ಇದು ಮಧ್ಯಮ ಗಾತ್ರದ ಭಾರತೀಯ ರಾಜ್ಯದಲ್ಲಿ ಯುಎಸ್ ಮಾಡುವ ಹೂಡಿಕೆಗಿಂತಲೂ ಕಡಿಮೆ. ಹೀಗಾಗಿ ಪಾಕಿಸ್ಥಾನ ಮತ್ತು ಅಮೆರಿಕಾಗೆ ಚರ್ಚಿಸಲು ಭಯೋತ್ಪಾದನೆಯ ವಿಷಯ ಬಿಟ್ಟರೆ ಬೇರೆ ಯಾವ ವಿಷಯವೂ ಇಲ್ಲ. ಹೀಗಾಗಿ ಅಲ್ಲಿಗೆ ಅಮೆರಿಕಾ ಅಧ್ಯಕ್ಷರು ಭೇಟಿ ನೀಡಲು ಹೆಚ್ಚಿನ ಒಲವು ತೋರಿಸುವುದಿಲ್ಲ.
ಆದರೆ ಪಾಕಿಸ್ಥಾನ ಮಾತ್ರ ಇಂದಲ್ಲ ನಾಳೆ ತನ್ನ ನೆಲದಲ್ಲಿ ಏರ್ ಫೋರ್ಸ್ ಒನ್ (ಅಮೆರಿಕಾ ಅಧ್ಯಕ್ಷರ ವಿಮಾನ) ಲ್ಯಾಂಡ್ ಆಗುತ್ತದೆ ಎಂಬ ಕನಸನ್ನು ಕಾಣುತ್ತಿದೆ.
ಕಳೆದ ಜನವರಿಯಲ್ಲಿ ಹೇಳಿಕೆ ನೀಡಿದ್ದ ಫಾರೂಕಿ ಅವರು, ಟ್ರಂಪ್ ಅವರ ಪಾಕಿಸ್ಥಾನ ಭೇಟಿಯ ಬಗ್ಗೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಮುಂಬರುವ ವರ್ಷಗಳಲ್ಲಿ ಇದು ಸಾಧ್ಯವಾಗಲಿದೆ ಎಂದಿದ್ದಾರೆ. ಆದರೆ ಅಮೆರಿಕಾದ ಸರ್ಕಾರಿ ಮೂಲಗಳು ಇಂತಹ ಯಾವುದೇ ಮಾತುಕತೆಯನ್ನು ಅಲ್ಲಗೆಳೆದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.