ಹಿಂದೆಲ್ಲಾ ಕೇವಲ ಅಡುಗೆ ಕೋಣೆಗಷ್ಟೇ ಸೀಮಿತಳಾಗಿದ್ದ ಹೆಣ್ಣು ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾಳೆ. ತನ್ನ ಬೇಕು ಬೇಡಗಳನ್ನೆಲ್ಲಾ ನಿರ್ಧರಿಸುವುದಕ್ಕೆ ಶಕ್ತಳಾಗಿದ್ದಾಳೆ. ಕೇವಲ ಮನೆಯೊಳಗೆ ಮಾತ್ರವಲ್ಲ, ಹೊರಗೂ ದುಡಿದು ಕುಟುಂಬವನ್ನು ಸಾಕುವಷ್ಟರ ಮಟ್ಟಿಗೆ ಮುಂದುವರಿದಿದ್ದಾಳೆ. ಮನೆಯ ಆರ್ಥಿಕತೆಯ ಬೆನ್ನೆಲುಬಾಗಿಯೂ ಕುಟುಂಬದ ಪೋಷಣೆಯನ್ನು ಮಾಡುವಂತಹ ಸಾಮರ್ಥ್ಯ ಆಕೆಗಿದೆ. ಸ್ವತಂತ್ರಳಾಗಿ ಬೆಳೆಯುತ್ತಿರುವ ಮಹಿಳೆಗೆ ಸಹಾಯವಾಗುವುದಕ್ಕೆ, ಆಕೆ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡುವಂತೆ ಸರಕಾರವೂ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಸ್ವ ಉದ್ಯೋಗ ಮಾಡುವ ಅಥವಾ ಉದ್ಯಮಗಳನ್ನು ತೆರೆಯುವ ಹೆಣ್ಣು ಮಕ್ಕಳಿಗೆಂದೇ ಕೇಂದ್ರ ಸರಕಾರ ತಂದ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳ ಒಂದು ಸಣ್ಣ ನೋಟ ಇಲ್ಲಿದೆ.
ಅನ್ನಪೂರ್ಣ ಯೋಜನೆ
ಸ್ವ ಉದ್ಯಮದ ಕನಸನ್ನು ಹೊತ್ತಿರುವ ಸಾಮಾನ್ಯ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗೆ ರೂಪುರೇಶೆಗಳನ್ನು ಹಾಕಲಾಗಿದೆ. ಸಣ್ಣ ಪ್ರಮಾಣದ ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಕೊಳ್ಳುವ ಆಕಾಂಕ್ಷೆ ಹೊಂದಿರುವ ಮಹಿಳೆಯರಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಸಿಕೊಳ್ಳುವುದಕ್ಕೆ 50,000 ರೂ. ಗಳನ್ನು ಸಾಲವಾಗಿ ನೀಡುತ್ತಿದೆ. ಇದನ್ನು ಮರು ಪಾವತಿ ಮಾಡುವುದಕ್ಕೆ ಮೂರು ವರ್ಷಗಳ ಸಮಯಾವಕಾಶವನ್ನು ಸಹ ನೀಡಲಾಗುತ್ತದೆ. ಬರುವ ಲಾಭದ ಲೆಕ್ಕಾಚಾರದ ಮೇಲೆ ಇದರ ಬಡ್ಡಿ ದರವನ್ನು ನಿಗದಿಪಡಿಸಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ಗಳಲ್ಲಿ ಈ ಸಾಲವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿದೆ.
ಸ್ತ್ರೀ ಶಕ್ತಿ ಪ್ಯಾಕೇಜ್
ಸ್ತ್ರೀ ಶಕ್ತಿ ಪ್ಯಾಕೇಜ್ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದುಕೊಳ್ಳಬಹುದಾಗಿದೆ. ಸಣ್ಣ ಯೋಜನೆಗಳಲ್ಲಿ ಬಹುಪಾಲು ಮಾಲೀಕತ್ವವನ್ನು ಹೊಂದಿರುವ ಮಹಿಳೆಯರು ಈ ಯೋಜನೆಯಡಿಯಲ್ಲಿ ಸಾಲ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ. ಇದರಲ್ಲಿ 2 ಲಕ್ಷ ರೂ. ಗಳಿಂದ, 5 ಲಕ್ಷ ರೂ. ಗಳ ವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಶೇ. 5 ಬಡ್ಡಿ ದರ ರಿಯಾಯಿತಿಯಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ. ಆದರೆ ಇದನ್ನು ಪಡೆದುಕೊಳ್ಳುವುದಕ್ಕೆ ಇಚ್ಚಿಸುವ ಮಹಿಳೆಯರು ರಾಜ್ಯದ ಯಾವುದಾದರೂ ಕೇಂದ್ರಗಳು ಆಯೋಜಿಸಲ್ಪಟ್ಟ ಎಂಟರ್ಪ್ರೆನರ್ಶಿಫ್ ಡೆವಲಪ್ಮೆಂಟ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಬಗ್ಗೆ ದಾಖಲೆಗಳಿರಬೇಕು.
ಕೇಂದ್ರ ಕಲ್ಯಾಣಿ ಯೋಜನೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಈಗಾಗಲೇ ಉದ್ಯಮ ಆರಂಭಿಸಿರುವ ಮತ್ತು ಉದ್ಯಮ ಆರಂಭಿಸುವುದಕ್ಕೆ ಉತ್ಸಾಹವಿರುವ ಮಹಿಳೆಯರಿಗೆ ಕೇಂದ್ರ ಕಲ್ಯಾಣಿ ಯೋಜನೆಯಡಿಯಲ್ಲಿ ಸಾಲ ನೀಡುತ್ತಿದೆ. 20 ಮಾರ್ಜಿನ್ ರೇಟ್ನಲ್ಲಿ ಸುಮಾರು 1 ಕೋಟಿ ರೂ. ಗಳ ವರೆಗೂ ಸಾಲ ನೀಡಲಾಗುತ್ತದೆ. ಕ್ಯಾಂಟೀನ್, ಬ್ಯೂಟಿ ಪಾರ್ಲರ್, ಗಾರ್ಮೆಂಟ್, ಲೈಬ್ರರಿ ಹೀಗೆ ಹತ್ತು ಹಲವು ರೀತಿಯ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡಂತೆ ಈ ಯೋಜನೆಯಲ್ಲಿ ಸಾಲ ನೀಡಲಾಗುತ್ತದೆ. ಮಾರುಕಟ್ಟೆಗೆ ಅನುಗುಣವಾಗಿ ಇದರ ಬಡ್ಡಿದರವನ್ನು ನಿಗದಿ ಪಡಿಸಲಾಗುತ್ತದೆ. ಸಾಲ ಪಡೆದ ಏಳು ವರ್ಷಗಳೊಳಗಾಗಿ ಮರುಪಾವತಿ ಮಾಡುವಂತೆ ಇದರ ನಿಯಮಗಳನ್ನು ಸಿದ್ಧಪಡಿಸಲಾಗಿದೆ.
ಮುದ್ರಾ ಯೋಜನೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಸಾಮಾನ್ಯ ವರ್ಗದ ಯಾವುದೇ ಮಹಿಳೆಯರು ಪಡೆದುಕೊಳ್ಳಬಹುದಾಗಿದ್ದು, 50000 ದಿಂದ 50 ಲಕ್ಷದವರೆಗೆ ಸಾಲವನ್ನು ಬ್ಯಾಂಕ್ಗಳಿಂದ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಮೂರು ವಿಧ.
ಶಿಶು ಸಾಲ: ಹೊಸ ಉದ್ದಿಮೆ ಆರಂಭಿಸಲು ಹೊರಟವರಿಗೆ ಶಿಶು ಸಾಲದ ಅಡಿಯಲ್ಲಿ 50,000 ರೂ. ಸಾಲವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆ ತಿಂಗಳಿಗೆ 1 ಪ್ರತಿಶತ ಬಡ್ಡಿದರವನ್ನು ನಿಗದಿ ಮಾಡಲಾಗಿದ್ದು, ಮರುಪಾವತಿಗೆ 5 ವರ್ಷಗಳ ಕಾಲಾವಕಾಶವನ್ನೂ ನೀಡಲಾಗಿದೆ.
ಕಿಶೋರ್ ಸಾಲ: ಇದರಡಿಯಲ್ಲಿ 50,000 ರೂ. ಗಳಿಂದ, 5 ಲಕ್ಷ ರೂ. ಗಳ ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಅರ್ಜಿದಾರನು ಅರ್ಜಿಯಲ್ಲಿ ನೀಡಿದ ಮಾಹಿತಿಗನುಗುಣವಾಗಿ ಮತ್ತು ಸಾಲ ಪಡೆದುಕೊಳ್ಳುವ ಬ್ಯಾಂಕ್ನ ನೀತಿ ನಿಯಮಗಳಿಗನುಸಾರವಾಗಿ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
ತರುಣ್ ಸಾಲ: ತರುಣ್ ಸಾಲದ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದ ವರೆಗೆ ಸಾಲ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿದೆ. ಅರ್ಜಿದಾರನು ಅರ್ಜಿಯಲ್ಲಿ ನೀಡಿದ ಮಾಹಿತಿಗನುಗುಣವಾಗಿ ಮತ್ತು ಸಾಲ ಪಡೆದುಕೊಳ್ಳುವ ಬ್ಯಾಂಕ್ನ ನೀತಿ ನಿಯಮಗಳಿಗನುಸಾರವಾಗಿ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
ಮಹಿಳಾ ಉದ್ಯಮ ನಿಧಿ ಯೋಜನೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಭಾರತದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್, ಮಹಿಳಾ ಉದ್ಯಮ ನಿಧಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಸಣ್ಣ ಉದ್ಯಮಗಳನ್ನು ನಡೆಸುವ ಮಹಿಳಾ ಉದ್ಯಮಿಗಳಿಗೆ 10 ವರ್ಷಗಳ ಅವಧಿಗೆ, 10 ಲಕ್ಷ ರೂ. ಗಳನ್ನು ನೀಡುವಂತೆ ಇದನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಅನುಗುಣವಾಗಿ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಹೊಸ ಉದ್ಯಮಗಳನ್ನು ಆರಂಭಿಸುವುದರ ಜೊತೆಗೆ, ಈಗಾಗಲೇ ಇರುವ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕನಸಿರುವವರೂ ಈ ಸಾಲ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ದೇನಾ ಶಕ್ತಿ ಯೋಜನೆ
ಈ ಯೋಜನೆಯಡಿಯಲ್ಲಿ 20 ಲಕ್ಷ ರೂ. ಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆ ಶೇ. 25 ಬಡ್ಡಿದರವನ್ನೂ ನಿಗದಿ ಮಾಡಲಾಗಿದ್ದು, ಕೃಷಿ, ಕೈಗಾರಿಕೋದ್ಯಮ, ಅಂಗಡಿಗಳು ಹೀಗೆ ಹತ್ತು ಹಲವು ಕಾರ್ಯ ಕ್ಷೇತ್ರಗಳಲ್ಲಿ ಉದ್ಯಮವನ್ನು ಆರಂಭಿಸುವ ಕನಸು ಹೊತ್ತವರಿಗಾಗಿಯೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೈಕ್ರೋ ಕ್ರೆಡಿಟ್ ಪಾಲಿಸಿಯಡಿಯಲ್ಲಿ 50000 ರೂ. ಸಾಲವನ್ನೂ ದೇನಾ ಶಕ್ತಿ ಯೋಜನೆ ನೀಡುತ್ತದೆ.
ಓರಿಯೆಂಟ್ ಮಹಿಳಾ ವಿಕಾಸ ಯೋಜನೆ
ಓರಿಯಂಟ್ ಬ್ಯಾಂಕ್ ಆಫ್ ಕಾಮರ್ಸ್ನಿಂದ ಈ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಸಾಲದ ಅರ್ಧ ಪ್ರತಿಶತ ಮೊತ್ತವನ್ನು ಭರಿಸುವ ಸಾಮರ್ಥ್ಯವುಳ್ಳ, ವೈಯಕ್ತಿಕ ಅಥವಾ ಗುಂಪು ಒಡೆತನದಲ್ಲಿ ಉದ್ಯಮ ಆರಂಭ ಮಾಡುವುದಕ್ಕೆ ಸಿದ್ಧರಾಗಿರುವವರಿಗೆ ಈ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ. ಇದರಲ್ಲಿ 10 ಲಕ್ಷ ರೂ. ಗಳಿಂದ 25 ಲಕ್ಷ ರೂ. ಗಳಿಗೆ ಶ್ಯೂರಿಟಿ ನೀಡುವ ಅವಶ್ಯಕತೆ ಇಲ್ಲ. ಸಾಲ ಮರುಪಾವತಿಗಾಗಿ ಏಳು ವರ್ಷಗಳ ಕಾಲಾವಕಾಶ ಮತ್ತು 2 ಪ್ರತಿಶತ ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ.
ಮಹಿಳೆಯರನ್ನು ಮುನ್ನೆಲೆಗೆ ತರುವ ಉದ್ದೇಶದ ಜತೆಗೆ ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದಕ್ಕಾಗಿ ಕೇಂದ್ರ ಹತ್ತು ಹಲವು ಯೋಜನೆಗಳಿಗೆ ಮೂರ್ತ ರೂಪ ನೀಡಿದೆ. ಆ ಮೂಲಕ ಅವರನ್ನು ಸಶಕ್ತರನ್ನಾಗಿಸಲು ಮುಂದಾಗಿದೆ. ಮೋದಿ ಸರಕಾರ ಜನಸಾಮಾನ್ಯರ ಸರಕಾರ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನವೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.