ಇಂದು ಭಾರತದ ಪಾಲಿಗೆ ಕರಾಳ ದಿನ. ನಮ್ಮ ಕೆಚ್ಚೆದೆಯ 40 ಯೋಧರನ್ನು ನಾವು ಕಳೆದುಕೊಂಡ ದಿನ. ರಕ್ಕಸರ ಆರ್ಭಟಕ್ಕೆ ಪ್ರತಿಕಾರ ತೀರಿಸಲು ನಾವು ಟೊಂಕಕಟ್ಟಿ ನಿಂತ ದಿನ. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ.
ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು ವರ್ಷ. ಇದರ ಸ್ಮರಣಾರ್ಥ ಶುಕ್ರವಾರ ಕಾಶ್ಮೀರದ ಲೆಥ್ಪೊರಾದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಕ್ಯಾಂಪಸ್ನಲ್ಲಿ ಮಾಲಾರ್ಪಣೆ ಸಮಾರಂಭ ಜರುಗಿತು. ಅಗಲಿದ ವೀರರಿಗೆ ಗೌರವಾರ್ಪಣೆ ಮಾಡಲಾಯಿತು. ಅವರ ತ್ಯಾಗಕ್ಕೆ ಕಂಬನಿ ಮಿಡಿಯಲಾಯಿತು. ಈ ಸಮಾರಂಭದಲ್ಲಿ ಉಮೇಶ್ ಗೋಪಿನಾಥ್ ಜಾಧವ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಉಮೇಶ್ ಜಾಧವ್ ಅವರು ಈ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳನ್ನು ಭೇಟಿ ಮಾಡುವ ಸಲುವಾಗಿ ದೇಶಾದ್ಯಂತ 61,000 ಕಿ.ಮೀ.ಪ್ರಯಾಣವನ್ನು ಮಾಡಿದವರು. ಹುತಾತ್ಮ ಯೋಧರ ಕುಟುಂಬಿಕರನ್ನು ಸಂತೈಸಿದರು. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
2019 ರ ಫೆಬ್ರವರಿ 14 ರಂದು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕನೊಬ್ಬ ಸಿಆರ್ಪಿಎಫ್ನ 78 ಬೆಂಗಾವಲು ಬಸ್ಗಳಿಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನವನ್ನು ಢಿಕ್ಕಿ ಹೊಡೆಸಿದ್ದ. ಈ ಘಟನೆಯಲ್ಲಿ 40 ಯೋಧರು ನಮ್ಮನ್ನು ಅಗಲಿದರು. ಅವರ ಸ್ಮರಣಾರ್ಥ ಇಂದು ಲೆಥ್ಪೊರಾದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಕ್ಯಾಂಪಸ್ನಲ್ಲಿ ಸ್ಮಾರಕ ಸ್ಥಂಭ ನಿರ್ಮಾಣವಾಗಿದೆ. ಈ ಸ್ಥಂಭದಲ್ಲಿ ಪ್ರತಿ 40 ಹುತಾತ್ಮರ ಮನೆಯ ಮಣ್ಣಿದೆ.
ಸಿಆರ್ಪಿಎಫ್ನ ಲೆಥ್ಪೊರಾ ಶಿಬಿರದ ಸ್ಮಾರಕದಲ್ಲಿ ಸ್ಥಾಪನೆ ಮಾಡಲಾಗಿರುವ ಈ ಹುತಾತ್ಮ ಯೋಧರ ಸ್ಮಾರಕಕ್ಕೆ ಹಾಕಲು ಜಾಧವ್ ಅವರು ಹುತಾತ್ಮ ಸಿಆರ್ಪಿಎಫ್ ಸಿಬ್ಬಂದಿಯ ಮನೆಗಳಿಂದ ಮಣ್ಣನ್ನು ಸಂಗ್ರಹಿಸಿ ತಂದಿದ್ದಾರೆ.
“ನಾನು ಪುಲ್ವಾಮಾ ಹುತಾತ್ಮರ ಎಲ್ಲಾ ಕುಟುಂಬಗಳನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಆ ಪೋಷಕರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ, ಹೆಂಡತಿಯರು ಗಂಡನನ್ನು ಕಳೆದುಕೊಂಡಿದ್ದಾರೆ, ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ, ಸ್ನೇಹಿತರು ತಮ್ಮ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ” ಎಂದು ಉಮೇಶ್ ಜಾಧವ್ ಅವರು ಹೇಳಿದ್ದಾರೆ.
“ನಾನು ಅವರ ಮನೆಗಳಿಂದ ಮತ್ತು ಅವರ ಸಮಾಧಿ ಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿದ್ದೇನೆ” ಎಂದು ಜಾಧವ್ ಹೇಳಿದ್ದಾರೆ.
ಶುಕ್ರವಾರ ಲೆಥ್ಪೊರಾ ಶಿಬಿರದಲ್ಲಿ ಸ್ಮಾರಕ ಉದ್ಘಾಟನೆಯಾಗುವ ಸಂದರ್ಭದಲ್ಲಿ ಜಾಧವ್ ಇದ್ದರು ಮತ್ತು ಸಿಆರ್ಪಿಎಫ್ನ ಹೆಚ್ಚುವರಿ ಮಹಾನಿರ್ದೇಶಕ ಜುಲ್ಫಿಕರ್ ಹಸನ್ಗೆ ಇವರು ಮಣ್ಣಿನೊಂದಿಗೆ ಚಿತಾಭಸ್ಮವನ್ನು ಹಸ್ತಾಂತರಿಸಿದರು.
ಹುತಾತ್ಮರಿಗೆ ಗೌರವಾರ್ಪಣೆ ಮಾಡಿ ಮಾತನಾಡಿರುವ ಜುಲ್ಫಿಕರ್ ಹಸನ್ ಅವರು, “ದಾಳಿಯ ಬಗೆಗಿನ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಡುತ್ತಿದೆ. ಇದು ಸರಿಯಾದ ದಿಕ್ಕಿನಲ್ಲಿ ಮುಂದುವರಿಯುತ್ತಿದೆ. ನನಗೆ ತಿಳಿದ ಮಟ್ಟಿಗೆ ಅವರು ಈ ಪ್ರಕರಣದಲ್ಲಿ ದೊಡ್ಡ ಪ್ರಗತಿ ಸಾಧಿಸಿದ್ದಾರೆ. ಹುತಾತ್ಮರ ಕುಟುಂಬಗಳನ್ನು ನೋಡಿಕೊಳ್ಳಲು ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇವೆ ”ಎಂದಿದ್ದಾರೆ.
ಎಲ್ಲಾ 40 ಸಿಬ್ಬಂದಿಯ ಹೆಸರುಗಳು ಸ್ಮಾರಕದ ಒಂದು ಭಾಗವಾಗವಾಗಲಿದೆ.
ಜೈಶೇ-ಇ-ಮೊಹಮ್ಮದ್ ಭಯೋತ್ಪಾದಕ ಅದೀಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ ಕಾರನ್ನು ಓಡಿಸುತ್ತಾ, ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ದೊಡ್ಡ ಮಟ್ಟದ ಸ್ಪೋಟ ನಡೆದು 40 ಯೋಧರು ಅಸುನೀಗಿದ್ದರು, 39 ಮಂದಿ ಗಾಯಗೊಂಡಿದ್ದರು.
ರಾಜಸ್ಥಾನದ ಅಜ್ಮೀರ್ನ ವಿಮಾನ ನಿಲ್ದಾಣದಲ್ಲಿ ಇದ್ದಾಗ ಜಾಧವ್ ಅವರಿಗೆ ಪುಲ್ವಾಮ ದಾಳಿಯ ಬಗ್ಗೆ ಸುದ್ದಿ ತಿಳಿಯಿತು. 40 ವರ್ಷದ ಜಾಧವ್ ಅವರು ಪ್ಯಾರಮಿಸ್ಟ್ ಮತ್ತು ಸಂಗೀತಗಾರ ಆಗಿದ್ದು, ಇವರು ಪುಲ್ವಾಮಾ ಹುತಾತ್ಮರ ಕುಟುಂಬಗಳನ್ನು ಭೇಟಿಯಾಗಲು ದೇಶದಾದ್ಯಂತ ಪ್ರಯಾಣವನ್ನು ನಡೆಸಿದ್ದರು. ಹುತಾತ್ಮರು ಜನಿಸಿದ ನೆಲದ ಮಣ್ಣು ಸ್ಮಾರಕದಲ್ಲಿ ಇರಬೇಕು ಎಂಬ ಮಹದಾಸೆಯೊಂದಿಗೆ ಅವರು ಈ ಕಾರ್ಯವನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.