ಬಸ್ರೂರು ಕರ್ನಾಟಕದ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿದೆ. ವಸುಪುರ ಎಂಬ ಪುರಾತನ ಹೆಸರುಳ್ಳ ಈ ಪಟ್ಟಣ ಕರಾವಳಿಯ ಪ್ರಮುಖ ಬಂದರು ಪಟ್ಟಣವಾಗಿತ್ತು. ಬಸ್ರೂರು ಒಂದು ಐತಿಹಾಸಿಕ ಸ್ಥಳ, 16ನೇ ಶತಮಾನದಲ್ಲಿ ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು. ಸುಸಜ್ಜಿತವಾದ ನಗರವಾಗಿದ್ದ ಈ ಪಟ್ಟಣ ಯಾತ್ರಿಗಳಿಗೆ ತಂಗುದಾಣ, ವ್ಯಾಪಾರಿಗಳಿಗೆ, ಕರಕುಶಲ ಶಿಲ್ಪಿಗಳಿಗೆ, ಕಲಾವಿದರಿಗೆ, ನೇಕಾರರಿಗೆ ವ್ಯವಸ್ಥಿತವಾದ ರಸ್ತೆಗಳು ಮತ್ತು ಅಗ್ರಹಾರಗಳನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ವ್ಯಾಪಾರದ ಮುಖ್ಯ ಕೇಂದ್ರವಾಗಿತ್ತು. ಈಗ ಈ ಪಟ್ಟಣ ತನ್ನ ವೈಭವವನ್ನು ಕಳೆದುಕೊಂಡು ವ್ಯಾಪಾರ ಕೇಂದ್ರವಿಲ್ಲದೆ, ಸಂಕುಚಿತವಾದ ಸಣ್ಣ ಹಳ್ಳಿಯಾಗಿ ಅಷ್ಟೇ ಉಳಿದಿದೆ.
ಪಶ್ಚಿಮದ ಯಾತ್ರಿ ಇಬ್ನ್ ಬತುವ ಮಲಬಾರಿಗೆ ಹೋಗುವ ದಾರಿಯಲ್ಲಿ ಕಂಡ ಬಸ್ರೂರಿನ ಬಗ್ಗ ಉಲ್ಲೇಖಿಸಿದ್ದಾರೆ.
ಪ್ರಸಿದ್ಧ ತೌಳೇಶ್ವರ ದೇವಾಲಯ, ಗುಪ್ಪಿ ಸದಾನಂದ ದೇವಾಲಯ ಇನ್ನೂ ಹಲವಾರು ದೇವಾಲಯಗಳ ತಾಣ ಈ ಬಸ್ರೂರು.
ಭಾರತೀಯ ನೌಕಾಪಡೆಯ ಪಿತಾಮಹ ಶಿವಾಜಿ ಮಹಾರಾಜ. 5ನೇ ಡಿಸೆಂಬರ್ 1664ರಲ್ಲಿ ಕೊಂಕಣ ಸಮುದ್ರದಲ್ಲಿ ಸಿಂಧುದುರ್ಗ ಸ್ಥಾಪನೆಯಾಯಿತು. ಜೊತೆಗೆ ವಿಜಯದುರ್ಗ ಮತ್ತು ಸುವರ್ಣ ದುರ್ಗಗಳು ಭದ್ರಗೊಂಡವು. ಇವು ಮರಾಠ ನೌಕಾದಳಕ್ಕೆ ರಕ್ಷಣೆ ಕೊಡಲು ಮತ್ತು ಶತ್ರುಗಳ ದಾಳಿ ಸಮುದ್ರದ ಮೂಲಕ ಹಿಮ್ಮೆಟ್ಟಿಸಲು ಸಹಾಯಕವಾಗಿತ್ತು. ಐತಿಹಾಸಿಕ ದಾಖಲೆಗಳ ಪ್ರಕಾರ ಶಿವಾಜಿಯ ನೌಕಾದಳದಲ್ಲಿ 400-500 ದೊಡ್ಡ ಮತ್ತು ಸಣ್ಣ ಹಡಗುಗಳು ಇದ್ದವು. ಗುರುಬ್, ತರಂದೆ, ಗುಲ್ಬತ್, ಮುಬರ್, ಸಿಹದ್, ಪಗಾರ್, ಮಚ್ವಾ, ತಿರ್ಕಟಿ, ಪಾಲ್ ಮುಂತಾದ ಹೆಸರುಗಳನ್ನು ಇವು ಹೊಂದಿದ್ದವು. ಪದಾತಿ ಮತ್ತು ಅಶ್ವದಳದಷ್ಟೇ ಪ್ರಾಮುಖ್ಯತೆಯನ್ನು ನೌಕಾದಳಕ್ಕೂ ನೀಡಲಾಗಿತ್ತು. ದೌಲತ್ ಖಾನ್ ಮತ್ತು ಮಾಯಾಂಕ್ ಭಂಡಾರಿ ಎಂಬ ಪ್ರಮುಖರನ್ನು ನೇಮಿಸಲಾಗಿತ್ತು. ಸಮುದ್ರಯಾನದಲ್ಲಿ ನಿಷ್ಣಾತರಾದ ಹಲವಾರು ವೀರರ ಪಡೆ ನೌಕಾದಳದಲ್ಲಿ ಇತ್ತು.
ಶಿವಾಜಿಯ ನೌಕಾದಳದ ವಿವರಣೆ ಬ್ರಿಟಿಷ್ ಮತ್ತು ಪೋರ್ಚುಗೀಸರ ದಾಖಲೆಗಳಲ್ಲಿ ಕಂಡುಬರುತ್ತವೆ. ಫೆಬ್ರವರಿ 1665 ರಲ್ಲಿ ಶಿವಾಜಿಯು ಮೊದಲ ನೌಕಾದಳದ ದಂಡಯಾತ್ರೆ ಕೈಗೊಂಡರು. ಮರಾಠರಿಗೆ ಜಂಜೀರ (ಹೆಸರು ಅರಬ್ ಮೂಲದ ಜಜೀರಾ) ನವಾಬನಿಂದ (ಸಿದ್ಧಿ ಅಂಬರ್) ಯಾವಾಗಲೂ ಮುಖಾಮುಖಿಯಾಗುತ್ತಿತ್ತು. ಇದನ್ನು ಎದುರಿಸಲು ತನ್ನ ನೌಕಾದಳದಲ್ಲಿ 50 ಯುದ್ಧ ನೌಕೆ, ನಾಲ್ಕು ಸಾವಿರ ಸೈನಿಕರನ್ನು ಹೊತ್ತು ಸಣ್ಣ ಹಡಗುಗಳು ಹೊರಟವು. 19665ರಲ್ಲಿ ಸಿಂಧೂದುರ್ಗದಿಂದ ಹೊರಟು ಸಮುದ್ರಮಾರ್ಗವಾಗಿ ಬಸ್ರೂರಿಗೆ ಶಿವಾಜಿ ಮಹಾರಾಜರ ಆಗಮನವಾಯಿತು. ಐತಿಹಾಸಿಕ ವಿಜಯ ಸಾಧಿಸಿದ ಶಿವಾಜಿ ಮಹಾರಾಜರ ಸೇನೆಯಲ್ಲಿ ಹಲವಾರು ಮುಸ್ಲಿಂ ವೀರರಿದ್ದರು. ಅವರಲ್ಲಿ ಸುಲ್ತಾನ್ ಖಾನ್, ದಾವೂದ್ ಖಾನ್ ಎಂಬುವವರು ನೌಕ ಅಧಿಕಾರಿಯಾಗಿದ್ದರು, ಹಲವಾರು ಪಠಾಣರು ಮತ್ತು ಇತರ ಮುಸ್ಲಿಂ ವೀರರು ಮರಾಠ ನೌಕಾದಳದಲ್ಲಿ ಇದ್ದರು. ರಾಯಘಢಕ್ಕೆ ಹೋಗುವ ದಾರಿಯಲ್ಲಿ ಶಿವಾಜಿಯು ಗೋಕರ್ಣದಲ್ಲಿ ಸ್ವಲ್ಪ ಸಮಯ ತಂಗಿ ಅಮೇಲೆ ಯಾತ್ರೆ ಮುಂದುವರಿಸಿದರು. ಈ ಮೂಲಕ ಕರ್ನಾಟಕದ ಕರಾವಳಿಯಲ್ಲಿ ಶತ್ರುಗಳ ಹಾವಳಿಯನ್ನು ತಡೆದರು.
ಈ ಪ್ರಥಮ ನೌಕಾ ಅಭಿಯಾನ ಪೋರ್ಚುಗೀಸರ ವಿರುದ್ಧ ಸಾಧಿಸಿದ ವಿಜಯ ಗಾಥೆಯ ಅಂಗವಾಗಿ ಬಸ್ರೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಹಿಂದೆ 2017ರಲ್ಲಿ ‘ಬಸ್ರೂರು ಇತಿಹಾಸ ದಿನಾಚರಣೆ’ಯನ್ನು ಆಚರಿಸಲಾಗಿತ್ತು. ಈ ಬಾರಿ ಫೆ.13ರಂದು ಬಸ್ರೂರು, ಸ್ವಾತಂತ್ರ್ಯ ದಿನ ಮಹೋತ್ಸವವನ್ನು ಆಚರಿಸಲಾಗುತ್ತಿದೆ.
ಬಸ್ರೂರಿನ ಗತವೈಭವವನ್ನು ಮತ್ತೆ ಮರಳಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಐತಿಹಾಸಿಕ ಸ್ಥಳಗಳ ಗುರುತಿಸುವಿಕೆ, ಪುರಾತನ ಶಾಸನಗಳ ಸಂಶೋಧನೆ ಮತ್ತು ಪ್ರಕಟಣೆ, ಬಸ್ರೂರಿನ ಇತಿಹಾಸದ ಪುಸ್ತಕ ಪ್ರಕಟಣೆ ಹಾಗೂ ಮಠ-ಮಂದಿರಗಳನ್ನು ರಾಷ್ಟ್ರ ಕಾರ್ಯಕ್ಕೆ ಜೋಡಿಸುವುದು ಇತ್ಯಾದಿಗಳು ಇದರಲ್ಲಿ ಸೇರಿವೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೈಜೋಡಿಸಿ ರಾಷ್ಟ್ರ ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಅಪೇಕ್ಷೆ ಇರುವವರು ಇದರಲ್ಲಿ ಭಾಗಿಯಾಗಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.