ಜವಳಿ ಉದ್ಯಮದ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ, ಪ್ಯೂರಿಫೈಡ್ ಟೆರೆಫ್ಥಾಲಿಕ್ ಆ್ಯಸಿಡ್ (ಪಿಟಿಎ) ಎಂಬ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲು ವಿಧಿಸಲಾಗಿದ್ದ ಆಮದು ನಿರೋಧಕ ಸುಂಕ (anti-dumping duty) ಅನ್ನು ಸರ್ಕಾರ ರದ್ದುಗೊಳಿಸಿದೆ.
ಪಿಟಿಎ ಎಂಬ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವುದರ ಮೇಲೆ ವಿಧಿಸಲಾಗುವ ಆಮದು ನಿರೋಧಕ ಸುಂಕವನ್ನು ಸರ್ಕಾರವು “ಸಾರ್ವಜನಿಕ ಹಿತಾಸಕ್ತಿ”ಯ ಹಿನ್ನಲೆಯಲ್ಲಿ ರದ್ದುಗೊಳಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶೀಯ ಪಾಲಿಸ್ಟರ್ ತಯಾರಕರು ಈ ಕ್ರಮವನ್ನು ಉದ್ಯಮಕ್ಕೆ ದೊಡ್ಡ ಮಟ್ಟದ ಪರಿಹಾರ ಎಂದು ಕರೆದಿದ್ದಾರೆ, ಇವರುಗಳು ನಾಲ್ಕೂವರೆ ವರ್ಷಗಳಿಂದ ಸುಂಕವನ್ನು ತೆಗೆದುಹಾಕಲು ಹೋರಾಟ ನಡೆಸುತ್ತಾ ಬಂದಿದ್ದರು.
ಪಾಲಿಸ್ಟರ್ ಬಟ್ಟೆಗಳ ತಯಾರಿಕೆಯಲ್ಲಿ ಪಿಟಿಎ ಬಹುಮುಖ್ಯವಾಗಿದೆ ಮತ್ತು ಪಾಲಿಸ್ಟರ್ ಉತ್ಪನ್ನದ ಸುಮಾರು 70-80% ರಷ್ಟನ್ನು ಇವುಗಳು ಒಳಗೊಂಡಿದೆ. ಆದ್ದರಿಂದ ಇವುಗಳು ಬಟ್ಟೆಗಳ ತಯಾರಿಕೆಯಲ್ಲಿ ನಿರ್ಣಾಯಕವಾಗಿದೆ. ಸೀತಾರಾಮನ್ ಅವರು ಈ ಬಗ್ಗೆ ಮಾತನಾಡಿ, “ಆ ನಿರ್ದಿಷ್ಟ ಉತ್ಪನ್ನ (ಪಿಟಿಎ) ಅನೇಕ ಕೈಗಾರಿಕೆಗಳಿಗೆ ಕಚ್ಛಾ ವಸ್ತುವಾಗಿದೆ. ಆ ನಿರ್ದಿಷ್ಟ ಉತ್ಪನ್ನವನ್ನು ಕೈಗೆಟುಕುವ ದರದಲ್ಲಿ ಆಮದು ಮಾಡಿಕೊಳ್ಳಲು ಸಹ ಅವರಿಗೆ ಅವಕಾಶ ನೀಡಬೇಕು ಎಂಬ ನಿರಂತರ ಬೇಡಿಕೆ ಇದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ನಿರ್ಣಾಯಕ ಫಲವನ್ನು ಸುಲಭವಾಗಿ ಲಭ್ಯವಾಗಿಸುವ ಅಪಾರ ಸಾಮರ್ಥ್ಯವನ್ನು ಪಡೆಯುವುದು ಇದರಿಂದ ಸಾಧ್ಯವಾಗಲಿದೆ” ಎಂದು ಅವರು ಹೇಳಿದ್ದಾರೆ. ಜವಳಿ ವಲಯವನ್ನು “ಮಹತ್ವದ” ಉದ್ಯೋಗ ಉತ್ಪಾದಕ ಆಗಿ ನೋಡಲಾಗುತ್ತಿದೆ.
ಆಮದು ನಿರೋಧಕ ಸುಂಕವನ್ನು ರದ್ದುಗೊಳಿಸುವುದರಿಂದ ಆಮದುದಾರರು ಪ್ರತಿ 1,000 ಕೆಜಿ ಪಿಟಿಎಗೆ ಸರಾಸರಿ $ 27- $ 160 ಉಳಿತಾಯ ಮಾಡುತ್ತಾರೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವುದರಿಂದ ಅಂದಾಜು $ 30 ರಷ್ಟು ಕಡಿಮೆ ವೆಚ್ಚವಾಗಲಿದೆ. ಆಮದು ನಿರೋಧಕ ಸುಂಕವನ್ನು ತೆಗೆದುಹಾಕುವುದರಿಂದ ಉತ್ಪನ್ನ ವೆಚ್ಚವು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ. “ಈ ಘೋಷಣೆಯು ಪಿಟಿಎ ಬಳಕೆದಾರರಿಗೆ ಮತ್ತು ಇಡೀ ಮಾನವ ನಿರ್ಮಿತ ಫೈಬರ್ ಜವಳಿ ಮತ್ತು ಬಟ್ಟೆ ವಿಭಾಗಕ್ಕೆ ಉತ್ತೇಜನ ನೀಡುತ್ತದೆ” ಎಂದು ಸದರ್ನ್ ಇಂಡಿಯಾ ಮಿಲ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶ್ವಿನ್ ಚಂದ್ರನ್ ಹೇಳಿದ್ದಾರೆ.
ಶುದ್ಧೀಕರಿಸಿದ ಟೆರೆಫ್ಥಾಲಿಕ್ ಆ್ಯಸಿಡ್ (ಪಿಟಿಎ) ಮೇಲಿನ ಆಮದು ನಿರೋಧಕ ಸುಂಕವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜವಳಿ ಸಚಿವ ಸ್ಮೃತಿ ಇರಾನಿ ಅವರಿಗೆ ಧನ್ಯವಾದ ತಿಳಿಸಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಟೆಕ್ಸ್ಟೈಲ್ ಇಂಡಸ್ಟ್ರಿ (ಸಿಐಟಿಐ) ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ. ಪಿಟಿಎ ಮೇಲಿನ ಆಮದು ನಿರೋಧಕ ಸುಂಕವನ್ನು ರದ್ದುಗೊಳಿಸುವ “ದಿಟ್ಟ ಮತ್ತು ಪೂರ್ವಭಾವಿ ಐತಿಹಾಸಿಕ ಕ್ರಮ” ಕ್ಕೆ ಜಾಹೀರಾತು ಪ್ರಕಟಿಸಿ ಪಿಎಂ ಮೋದಿ ಮತ್ತು ಜವಳಿ ಸಚಿವ ಇರಾನಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ಗೆ ಬಜೆಟ್ 1,480 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ, ಇದು ಭಾರತವು ತಾಂತ್ರಿಕ ಜವಳಿಗಳನ್ನು ವರ್ಷಕ್ಕೆ $16 ಬಿಲಿಯನ್ ನಷ್ಟು ಆಮದು ಮಾಡಿಕೊಳ್ಳುತ್ತಿದೆ ಎಂಬ ಅಂಶವನ್ನು ಪರಿಗಣಿಸಿ ಗಮನಾರ್ಹವಾಗಿದೆ. ಮಾನವ ನಿರ್ಮಿತ ಫೈಬರ್ ಆಧಾರಿತ ಜವಳಿ ಉತ್ಪನ್ನಗಳ ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿಯು ಇನ್ನೂ ಅತ್ಯಲ್ಪವಾಗಿದೆ. ವಹಿವಾಟು ನಡೆಸಿದ ಟಾಪ್ 10 ಎಂಎಂಎಫ್ ಆಧಾರಿತ ವಿಭಾಗಗಳಲ್ಲಿ, ಬ್ಲೌಸ್, ಉಡುಪುಗಳು ಮತ್ತು ಕ್ರೀಡಾ ಉಡುಪುಗಳನ್ನು ಹೊರತುಪಡಿಸಿ ಭಾರತದ ಪಾಲು ತುಂಬಾ ಕಡಿಮೆ. ಆದರೆ, ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳು ತುಲನಾತ್ಮಕವಾಗಿ ದೊಡ್ಡ ಪಾಲನ್ನು ಹೊಂದಿವೆ. ಭಾರತವು ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಪ್ರವೇಶಿಸಲು ಎಂಎಂಎಫ್ ಜವಳಿ ಮತ್ತು ಉಡುಪು ಉತ್ಪನ್ನಗಳಲ್ಲಿ ಹೂಡಿಕೆ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಆಮದು ನಿರೋಧಕ ಸುಂಕವನ್ನು ರದ್ದುಪಡಿಸುವುದು ಬಹುಶಃ ಕೈಗೊಳ್ಳಬೇಕಾದ ಹಲವು ಕ್ರಮಗಳಲ್ಲಿ ಮೊದಲನೆಯದು, ಇದು ಭಾರತದ ಜವಳಿ ಉದ್ಯಮಕ್ಕೆ ಉತ್ತೇಜನವನ್ನು ನೀಡಲಿದೆ.
ದೇಶೀಯ ಜವಳಿ ಮತ್ತು ಉಡುಪು ಉದ್ಯಮವು ಭಾರತದ ಜಿಡಿಪಿಗೆ 2.3% ನಷ್ಟು ಕೊಡುಗೆ ನೀಡುತ್ತದೆ ಮತ್ತು ಕೈಗಾರಿಕಾ ಉತ್ಪಾದನೆಯ 13% ಮತ್ತು ದೇಶದ ರಫ್ತು ಗಳಿಕೆಯ 12% ನಷ್ಟು ಕೊಡುಗೆಯನ್ನು ನೀಡುತ್ತದೆ. ಭಾರತದ ಜವಳಿ ಮತ್ತು ಉಡುಪು ಉದ್ಯಮವು 45 ದಶಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ದೇಶದ ಎರಡನೇ ಅತಿದೊಡ್ಡ ಉದ್ಯೋಗದಾತನಾಗಿದೆ. 2020 ರ ವೇಳೆಗೆ ಪ್ರಸ್ತುತ ಸಂಖ್ಯೆ 55 ಮಿಲಿಯನ್ಗೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. 2021 ರ ಹೊತ್ತಿಗೆ ಜವಳಿ ರಫ್ತುಗಳಲ್ಲಿ $ 82 ಬಿಲಿಯನ್ ಆಗಲಿದೆ ಎಂದು Intueri ಅಂದಾಜಿಸಿದೆ.
ಸರ್ಕಾರವು ಸಮರ್ಪಕವಾದ ಕ್ರಮಗಳನ್ನು ತೆಗೆದುಕೊಂಡರೆ ಭಾರತದಲ್ಲಿ ಜವಳಿ ಉದ್ಯಮವು ಜಗತ್ತಿನ ಸ್ಪರ್ಧಾತ್ಮಕ ಮಾರುಕಟ್ಟೆಯಾಗಿ ಹೊರಹೊಮ್ಮಬಲ್ಲದು. ಪಾಲಿಸ್ಟರ್ ಸರಕುಗಳ ಜಾಗತಿಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಸುಂಕವನ್ನು ತೆಗೆದುಹಾಕುವುದು ಈ ವಲಯದ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.