ಅನಿವಾರ್ಯವಾಗಿ ವಿತ್ತಿಯ ಕೊರತೆ ವಿಶಾಲವಾಗುವ ಜೊತೆ ಉದ್ಯೋಗ, ಆದಾಯ, ಹಣದುಬ್ಬರ ಇಳಿಸುವ, ಸಾರ್ವಜನಿಕ ಹೂಡಿಕೆ ಮೂಲಕ ಉತ್ಪಾದನೆ ಹಾಗೂ ಬೇಡಿಕೆಗೆ ಸಂಪೂರ್ಣ ಇಂಬುಕೊಡುವ ಭಾರತದ ಅರ್ಥವ್ಯವಸ್ಥೆಯ ವಿಸ್ತರಣೆ ನಡೆಸಬೇಕಾದ ಕತ್ತಿಯಂಚಿನ ನಡಿಗೆಯಿದು.
“ಭಾರತದ ಆರ್ಥಿಕತೆಯ ಕುರಿತಾದ ಆತಂಕ, ಹಿಂಜರಿತದ (slowdown) ಭಯ ಇವೆಲ್ಲವೂ ತಾತ್ಕಾಲಿಕ ಎನ್ನುವುದೂ ಅಷ್ಟೇ ಸತ್ಯ. ಮುಂದಿನ ದಿನಗಳಲ್ಲಿ ಸೂಕ್ತ ದಿಶೆಯಲ್ಲಿ ಮುನ್ನಡೆದರೆ ಭಾರತದ ಆರ್ಥಿಕತೆ ಚೇತರಿಕೆ ಕಾಣಲಿದೆ. ಆರ್ಥಿಕ ಸಮೀಕ್ಷೆ 2020 ರ ಪ್ರಕಾರ ಎಲ್ಲಾ ಅಂದುಕೊಂಡಂತೆ ನಡೆದರೆ ಭಾರತದ ಆರ್ಥಿಕತೆ 2021 ನೇ ಹಣಕಾಸು ವರ್ಷದಲ್ಲಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ಹಾಗಾಗಿ 2020 ಭಾರತದ ಆರ್ಥಿಕತೆಗೆ ಬಹು ಗಂಭೀರ ವರ್ಷ.”
ಬಜೆಟ್ ಅಂದರೆ: ಸಂವಿಧಾನದ ೧೧೨ನೇ ಅನುಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಬಜೆಟ್ ಕೇಂದ್ರ ಸರಕಾರದ ಬದ್ಧತೆ. ವಿತ್ತ ಸಚಿವರು ರಾಷ್ಟ್ರಪತಿಗಳ ಪರವಾಗಿ, ಕೇಂದ್ರ ಸರಕಾರದ ಆರ್ಥಿಕ ಮುಖವಾಣಿಯಾಗಿ ಮಂಡಿಸುವ ಭಾರತ ಸರಕಾರದ ವಾರ್ಷಿಕ ಆಯವ್ಯಯ ಲೆಕ್ಕಪತ್ರ. ಅದು ಹಿಂದಿನ ಆರ್ಥಿಕ ವರ್ಷದ ಒಟ್ಟಾರೆ ಆದಾಯ, ಖರ್ಚು- ವೆಚ್ಚ ಮೊದಲಾದ ವಿವರಣೆಗಳ ದಾಖಲೆ. ಮುಂದಿನ ಆರ್ಥಿಕ ವರ್ಷದ ವಿತ್ತೀಯ ನೀತಿ, ಯೋಜನೆ, ವಿವಿಧ ಇಲಾಖಾವಾರು ಹಣದ ಹಂಚಿಕೆ, ಅಂದಾಜು ತೆರಿಗೆ ಹಾಗೂ ತೆರಿಗೆಯೇತರ ಆದಾಯಗಳ ಲೆಕ್ಕ, ಅವುಗಳನ್ನು ಹೂಡಿಕೆ, ಬೇಡಿಕೆ ಮತ್ತು ಸರಕಾರದ ಉಪಯೋಗಗಳಿಗೆ ಬಳಸಿಕೊಳ್ಳುವ ದಾರಿ ಇತ್ಯಾದಿ ವಿಭಾಗಗಳಲ್ಲಿ ವಿಂಗಡಿಸಿ, ಎಲ್ಲಾ ಸಂಗತಿಗಳನ್ನು ವಿಸ್ತ್ರತವಾಗಿ ವಿವರಿಸುವ ನಿಯಮ, ದಾಖಲೆ ಮತ್ತು ವ್ಯವಸ್ಥೆಯೇ ಬಜೆಟ್.
ಬಜೆಟ್ ಭಾಷಣದ ತರುವಾಯ, ಒಂದೆರಡು ವಾರ ಬಜೆಟ್ ಮೇಲೆ ಸ್ಥೂಲವಾದ ಚರ್ಚೆ ನಡೆಯುತ್ತದೆ. ಲೋಕಸಭೆಯಲ್ಲಿ ಮತಚಲಾವಣೆ ಮೂಲಕ ಸಿಂಧುವಾಗುವ ಬಜೆಟ್ ರಾಜ್ಯಸಭೆಯಲ್ಲಿ ಕೇವಲ ಚರ್ಚೆಗೆ ಒಳಪಡುತ್ತದೆ. ಬಜೆಟ್ ಅಧಿವೇಶನ ಮುಗಿದ ಬಳಿಕೆ ೨೪ ಇಲಾಖಾವಾರು ಸಮಿತಿಗಳು ಬಜೆಟ್ ಸಂಗತಿಗಳನ್ನು ಪರಿಶೀಲಿಸುತ್ತವೆ. ಅದಾದ ಮೇಲೆ ಬೇಸಿಗೆ ಅಧಿವೇಶನದಲ್ಲಿ ಬಜೆಟ್ನ ನಿರ್ದಿಷ್ಟ ಸಂಗತಿಗಳ ಮೇಲೆ ಚರ್ಚೆ ನಡೆದು, ಬಜೆಟ್ ಅಂಕಿತವಾಗಿ, ರಾಷ್ಟ್ರಪತಿಗಳ ಸಹಿ ಬಿದ್ದ ಮೇಲೆ, ಅಂದರೆ ನೂತನ ಆರ್ಥಿಕ ವರ್ಷ ಮೇ ತಿಂಗಳ ಮೊದಲ ದಿನದಿಂದ ಬಜೆಟ್ ಜಾರಿಯಾಗುತ್ತದೆ. 2017 ರಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಹೂಡಿಕೆ ಹಾಗೂ ಭಾರತದ ಆರ್ಥಿಕತೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ೨೦೧೭ ರಿಂದ ಹಣಕಾಸು ಹಾಗೂ ರೈಲ್ವೆ ಬಜೆಟ್ ಎರಡನ್ನೂ ವಿಲೀನಗೊಳಿಸಲಾಗಿದೆ.
ಆಂತರಿಕ ಚಿತ್ರಣ: ಶ್ರೀ ಸಾಮಾನ್ಯರು, ಮಧ್ಯಮ ವರ್ಗದ ಜನರಲ್ಲಿ ಇಳಿಯುತ್ತಿರುವ ಉಳಿತಾಯ ಪ್ರಮಾಣ,ಗ್ರಾಹಕರ ಅಗತ್ಯ ವಸ್ತುಗಳ ಮೇಲೆ ಹೆಚ್ಚುತ್ತಿರುವ ಹಣದುಬ್ಬರ ಪ್ರಮಾಣ ಅದರಲ್ಲೂ ತರಕಾರಿ, ಬೇಳೆಕಾಳುಗಳ ದರ ಏರಿಕೆ, ನೆಲ ಮಟ್ಟದಲ್ಲಿ ಕುಸಿಯುತ್ತಿರುವ ಬೇಡಿಕೆ, ಇನ್ನೂ ಚೇತರಿಕೆ ಕಾಣದ ಖಾಸಗಿ ಹೂಡಿಕೆ, ಸರಕಾರ ಕಾರ್ಪೋರೆಟ್ ತೆರಿಗೆ ದರ ಇಳಿಸಿದೆ. ಇದರಿಂದ ಕಾರ್ಪೋರೆಟ್ ಕಂಪೆನಿಗಳ ಕೂಡಿಕೆ ಹೆಚ್ಚಾಗಿದ್ದರೂ ಅವರಿಂದ ನಿರೀಕ್ಷಿತ ಹೂಡಿಕೆ ಆಗುತ್ತಿಲ್ಲ, ಇದಕ್ಕೆ ಜಾಗತಿಕ ಮಟ್ಟದ ಹಾಗೂ ದೇಶಿಯ ಮಟ್ಟದ ಬೇಡಿಕೆ, ಸರಕಾರದ ಅನಿರೀಕ್ಷಿತ ಆರ್ಥಿಕ ನಿಯಮಗಳ ನಡೆ ಹೀಗೆ ಅನೇಕ ಕಾರಣಗಳನ್ನು ಹುಡುಕಬಹುದು.
2017-18 ನೇ ಸಾಲಿನಲ್ಲಿ, 45 ವರ್ಷಗಳಲ್ಲೇ ಮೊದಲ ಬಾರಿಗೆ ನಿರುದ್ಯೋಗ ದರ ೬.೧% ಕ್ಕೇರಿದೆ. ಏರುತ್ತಿರುವ ನಿರುದ್ಯೋಗ ಪ್ರಮಾಣ, ಕೃಷಿ ಹಾಗೂ ಕೈಗಾರಿಕ ಕ್ಷೇತ್ರದಲ್ಲಿ ಮುಂದುವರೆದ ಕಳಪೆ ಬೆಳವಣಿಗೆ – ಉತ್ಪಾದನಾ ಪ್ರಮಾಣ, ಮೇಕ್ ಇನ್ ಇಂಡಿಯಾ ಮೇಕ್ ಫಾರ್ ಇಂಡಿಯಾ ಆಗದೆ ಅತ್ತ ಉತ್ಪಾದನೆ, ನಿರೀಕ್ಷಿತ ಮಟ್ಟದ ಉದ್ಯೋಗ ಬೆಳವಣಿಗೆ ಕಾಣದೆ ಸೋತಿರುವ ರೀತಿ, ಅನೇಕ ಜಾರಿಯಾದ ಯೋಜನೆಗಳಿಗೆ ಭೂ ಒತ್ತುವರಿ ಸಮಸ್ಯೆ ಮತ್ತು ಹೂಡಿಕೆಗೆ ಬೇಕಾದ ಹಣದ ಕೊರತೆ (ಉದಾಹರಣೆಗೆ: ತಾತ್ಕಾಲಿಕವಾಗಿ ನಿಂತ ಬುಲೆಟ್ ರೈಲು, ಅನೇಕ ಹೆದ್ದಾರಿ, ಫ್ರೈಟ್ ಕಾರಿಡಾರ್ ಯೋಜನೆಗಳು, ರೈಲ್ವೆ ಹಾಗೂ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಉತ್ತಮ ನಿದರ್ಶನಗಳು), ಬ್ಯಾಂಕ್ಗಳಲ್ಲಿ, ಬ್ಯಾಂಕ್ಯೇತರ ಹಣಕಾಸು ಕಂಪೆನಿಗಳಲ್ಲಿ, ಹೆಚ್ಚುತ್ತಿರುವ ಕಾರ್ಯನಿರ್ವಹಿಸದ ಸ್ವತ್ತುಗಳ(NPA) ಪ್ರಮಾಣ, ಅನೇಕರ ನಿರೀಕ್ಷೆಯ ಪ್ರಕಾರ “ಮುದ್ರಾ ಯೋಜನೆ” ನ ಸಾಲ ಮರುಪಾವತಿಯಾಗದ ಪರಿಣಾಮ ಅದೊಂದು ಬೃಹತ್ NPA ಆಗುವ ಭಯವಿದೆ. ಬ್ಯಾಂಕ್ಗಳಲ್ಲಿ ಇಳಿಮುಖವಾಗಿರುವ ಸಾಲ ಲಭ್ಯತೆ ಪ್ರಮಾಣ, ಪಿಎನ್ಬಿ, ಪಿಎಂಸಿ ಮಾದರಿಯ ಅನೇಕ ಹಗರಣಗಳು, ಮುಂದುವರೆದ ಸಾರ್ವಜನಿಕ ವಲಯಗಳ ನಷ್ಟ ಪ್ರಮಾಣ, ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆ ಮತ್ತು ಮಾರಾಟವಾಗದ ಸಾರ್ವಜನಿಕ ವಲಯಗಳು (ಉದಾ: ಏರ್ ಇಂಡಿಯಾ), ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ಪ್ರಾಕೃತಿಕ ವಿಕೋಪಗಳ ಕಾರಣ ಆಹಾರ ಭದ್ರತೆ ಹಾಗೂ ನಿರೀಕ್ಷಿತ ಪ್ರಮಾಣದ ಉತ್ಪಾದನೆ ಭಾರತದ ಜನರಿಗೂ ಆರ್ಥಿಕತೆಗೂ ದೊಡ್ಡ ಸವಾಲಾಗಿದೆ.
ದೇಶದ ಫಾರೆಕ್ಸ್ ಪ್ರಮಾಣ ಉತ್ತಮವಾಗಿದೆ. ಅದೇ ಹೊತ್ತಿಗೆ ದೇಶದ ಸಾಲದ ಹೊರೆಯೂ ಹೆಚ್ಚುತ್ತಿದೆ. 2014 ರಲ್ಲಿ 53.11 ಲಕ್ಷಕೋಟಿಯಷ್ಟಿದ್ದ ಸಾಲದ ಪ್ರಮಾಣ 2019 ರಲ್ಲಿ 91.01 ಲಕ್ಷಕೋಟಿಯಷ್ಟು ಏರಿಕೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿತ್ತೀಯ ಕೊರತೆ ಸುಮಾರು ೩.೩%ನಷ್ಟು ನಿಲ್ಲಿಸಲು ಸಾಧ್ಯವಾಗಿತ್ತು ಆದರೂ ಜಿಎಸ್ಟಿ ಗಳಿಕೆ, ನೇರ ತೆರಿಗೆ ಗಳಿಕೆ ಮೊದಲಾದ ಆದಾಯ ಮೂಲಗಳು ಇಳಿಮುಖವಾಗಿರುವುದು ಗಂಭೀರವಾಗಿ ವಿವೇಚಿಸಬೇಕಾಗಿರುವ ಸಂಗತಿ. ಇದರ ಪರಿಣಾಮ ಸರಕಾರದ ಆದಾಯದ ಕೊರತೆ ವಿಸ್ತರಿಸುತ್ತಿದೆ.
ನೇರ ತೆರಿಗೆ ಸರ್ಕಾರದ ಮೂಲಭೂತ ಹಾಗೂ ಪ್ರಮುಖ ಆದಾಯ ಮೂಲ. 2018-19 ನೇ ಸಾಲಿನ ನೇರ ತೆರಿಗೆ ಸಂಗ್ರಹಣೆ ಗುರಿ ಇದ್ದದ್ದು 13.5 ಲಕ್ಷ ಕೋಟಿ ರೂಪಾಯಿಗಳು (189 ಬಿಲಿಯನ್ ಡಾಲರ್). ಆದರೆ ಮಾರ್ಚ್ 31, 2020ರ ಹೊತ್ತಿಗೆ ಕೇವಲ 11.5 ಲಕ್ಷ ಕೋಟಿ ರೂಪಾಯಿಗಳು ಮಾತ್ರ ಸಂಗ್ರಹವಾಗುವ ನಿರೀಕ್ಷೆಯಿದೆ. ಕಾರ್ಪೋರೆಟ್ ತೆರಿಗೆಯ ಕಡಿತ ಹಾಗೂ ಕಳೆಗುಂದಿದ ಕೈಗಾರಿಕ ಉತ್ಪಾದನಾ ವಲಯ ಇದಕ್ಕೆ ಮುಖ್ಯ ಕಾರಣವಿರಬಹುದು. ಈ ಕೊರತೆ ಸರ್ಕಾರ ಖರ್ಚು ವೆಚ್ಚ ಭರಿಸಲು ಹೆಚ್ಚಿನ ಸಾಲ ಮಾಡುವ ಅನಿವಾರ್ಯತೆ ತಂದೊಡ್ಡಿದೆ. ಜಿಎಸ್ಟಿ ತೆರಿಗೆಯ ಗಳಿಕೆ ಪ್ರಮಾಣವೂ ಬಜೆಟ್ ಅಂದಾಜಿಗಿಂತ ಕಡಿಮೆ ಮಟ್ಟದಲ್ಲಿದೆ.
ಜಾಗತಿಕ ಸವಾಲು: ವಿಶ್ವದ ನಾನಾ ಕಡೆಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದ ಅಂದರೆ ಭೌಗೋಳಿಕ ರಾಜಕಾರಣ, ವ್ಯಾಪಾರ ಯುದ್ಧ, ವ್ಯಾಪಾರ ನಿಯಮಗಳಲ್ಲೂ ಸೀಮಿತಗೊಳ್ಳುತ್ತಿರುವ ಮುಕ್ತ ವ್ಯಾಪಾರ ವ್ಯವಸ್ಥೆಗಳು, ಅಮೆರಿಕದಂತಹ ಮುಂದುವರೆದ ದೇಶಗಳಿಂದ ಹೆಚ್ಚಿನ ಆಮದು ಸುಂಕ ಹೇರುವ ಹೆಚ್ಚುತ್ತಿರುವ ರಕ್ಷಣಾತ್ಮಕ ವ್ಯಾಪಾರ ನಿಯಮಗಳು ಮತ್ತು ಆಂತರಿಕ ಸಮಸ್ಯೆಗಳಿಂದ ಅತಂತ್ರತೆಯ ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕ ಚೀನ ವ್ಯಾಪಾರ ಯುದ್ಧ ಕದನವಿರಾಮದತ್ತ ಸಾಗುತ್ತಿದೆ. ಅದೇ ಹೊತ್ತಿಗೆ ಅವರಿಬ್ಬರ ವ್ಯಾಪಾರ ಯುದ್ಧದ ಅಡ್ಡ ಪರಿಣಾಮ ವಿಶ್ವ ಮಾರುಕಟ್ಟೆಯ ಮೇಲಾಯಿತು. ಅದರ ಲಾಭ ಪಡೆಯುವಲ್ಲಿ ವಿಯೆಟ್ನಾಮ್, ಫಿಲಿಪೈನ್ಸ್, ದಕ್ಷಿಣ ಕೊರಿಯಾ ದೇಶಗಳಿಗೆ ಹೋಲಿಸಿದರೆ ಭಾರತ ಸೋತಿತು. ಪಶ್ಚಿಮ ಎಷ್ಯಾದ ಮುಗಿಯದ ಅತಂತ್ರತೆ ಭಾರತದ ಆರ್ಥಿಕ ಆಸಕ್ತಿಗಳ ಮೇಲೆ ನೇರ ಪರಿಣಾಮ ಬೀರಲಿದೆ. ಅಮೆರಿಕ ಇರಾನ್ ನೇರ ಯುದ್ದದಂತಹ ಪರಿಸ್ಥಿತಿಯಿಂದ ಭಾರತಕ್ಕೆ ನಷ್ಟವೇ ಹೆಚ್ಚು. ಇದರಿಂದ ಹೆಚ್ಚುವ ತೈಲ ಬೆಲೆ, ಇನ್ನಿತರ ಇಂಧನ ಸೌಲಭ್ಯಗಳ ಕೊರತೆ ಎದುರಾಗುವ ಸಂಭಾವ್ಯತೆ ಹೆಚ್ಚು. ಅಫಘಾನಿಸ್ತಾನವನ್ನು ತಲುಪಲು ಉಪಯೋಗವಾಗುವ ಚಾಬಹಾರ್ ಬಂದರು ಭಾರತಕ್ಕೆ ಕೈಗೆಟುಕದೆ ಹೋಗಬಹುದು. ಪರ್ಶಿಯನ್ ಕೊಲ್ಲಿ ಮೂಲಕ ನಡೆಯುವ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ನಿಲ್ಲಬಹುದು. ಅಫಘಾನಿಸ್ತಾನವನ್ನು ಅಮೆರಿಕ ಸೇನೆ ಬಿಟ್ಟ ಮೇಲೆ ಮತ್ತೆ ತಾಲಿಬಾನ್ ನೇತೃತ್ವದ ವ್ಯವಸ್ಥೆ ಅಧಿಕಾರ ಹಿಡಿದರೆ ಭಾರತದ ಹೂಡಿಕೆಗಳ ಆಸಕ್ತಿಗಳು ಕಳೆಗುಂದಬಹುದು.
ವಿಶ್ವ ಮಾರುಕಟ್ಟೆ ಸುಮಾರು 3.3% ದರದ ಬೆಳವಣಿಗೆ ದಾರಿಯಲ್ಲಿರುವುದು ಉತ್ತಮವಲ್ಲ. ಇಳಿಮುಖವಾಗಿರುವ ಜಾಗತಿಕ ಬೇಡಿಕೆ, ಉತ್ಪಾದನೆ, ಹೂಡಿಕೆ, ಜಾಗತಿಕ ನಿರುದ್ಯೋಗ ಸಮಸ್ಯೆಗಳು.. ಜರ್ಮನಿ, ಚೀನ ಮೊದಲಾದ ದೇಶಗಳು ಪಾಲಿಸಿಕೊಂಡು ಬಂದಿರುವ ರಫ್ತುಕೇಂದ್ರಿತ ಆರ್ಥಿಕ ನೀತಿಗಳತ್ತ ಬೆಟ್ಟುಮಾಡುವಂತೆ ಮಾಡಿದೆ. 3-3.3% ಬೆಳವಣಿಗೆ ದರ ವಿಶ್ವಕ್ಕೆ ಎಂದಿಗೂ ಒಳಿತಲ್ಲ. ಅದೇ ರೀತಿ ಜಾಗತಿಕ ಬೆಳವಣಿಗೆ ನಕಾರಾತ್ಮಕವಾಗಿ ಹೋಗದಿರಲಿ ಎಂಬುದು ಭಾರತದ ಹಿತಾಸಕ್ತಿಯ ಆಶಯವೂ ಕೂಡ. ಆಗ ಕನಿಷ್ಟ ಭಾರತದ ವಸ್ತುಗಳಿಗೆ ಜಾಗತಿಕ ಬೇಡಿಕೆ ಬರಲು ಸಾಧ್ಯ. ಇದರಿಂದ ಭಾರತದ ರಫ್ತು, ಫಾರೆಕ್ಸ್ ರಿಸರ್ವ್, ಹೂಡಿಕೆ, ಉತ್ಪಾದನೆ, ಆದಾಯ ಏರಲು ಸಾಧ್ಯ. ಹಾಗೆಯೇ ಜಾಗತಿಕ ಸ್ಥಿತಿ ಉತ್ತಮವಾಗಿದ್ದರೆ ಭಾರತಕ್ಕೆ ಖಾಸಗಿ ಹೂಡಿಕೆಗಳೂ ಹರಿದುಬರಲು ಸಾಧ್ಯ.
ಕಳೆದ ಕೆಲವಾರು ವರ್ಷಗಳ ಭಾರತದ ಆರ್ಥಿಕ ಬೆಳವಣಿಗೆಗೆ ಕಾರಣವೇ ಸುಲಭವಾಗಿ, ಮತ್ತು ಅನುಕೂಲಸ್ಥರಿಗೆ ಯಥೇಚ್ಛವಾಗಿ ಸಿಗುತ್ತಿದ್ದ ಸಾಲ ಲಭ್ಯತೆ. ಆದರೆ ಅದೇ ಇಂದು ಕುಂಠಿತವಾಗುತ್ತಿದ್ದಂತೆ ದೇಶದಲ್ಲಿ ಕಟ್ಟುಬ್ಬರ (stagflation) ಶುರುವಾಗಿದೆ ಅನ್ನುವ ವಾದವೂ ಎದ್ದಿದೆ. ಇದಕ್ಕೆ ಕಾರಣ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಪ್ರಮಾಣ ಇಳಿಮುಖವಾಗಿ ಚಿಲ್ಲರೆ ವ್ಯಾಪಾರ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರ ಪ್ರಮಾಣ ಏರುತ್ತಿದೆ. ಇದು ಕಟ್ಟುಬ್ಬರದ ಪ್ರಧಾನ ಲಕ್ಷಣ. ಆದರೂ ಭಾರತದ ಆರ್ಥಿಕತೆಗೆ ಇಂತಹ ಸಂಕೀರ್ಣ ಸವಾಲುಗಳನ್ನು ಮೀರುವ ಶಕ್ತಿಯಿದೆ. ಬೇಕಿರುವುದು ಸೂಕ್ತ ಮತ್ತು ನೇರವಾಗಿ ಫಲಿತಾಂಶ ನೀಡಬಲ್ಲ ಯೋಜನೆಗಳು.
ಕಳೆದ ಕೆಲವು ತಿಂಗಳುಗಳಿಂದ ಆಟೋ, ಕೈಗಾರಿಕೆ ಮೊದಲಾದ ವಲಯಗಳ ಆಧಾರದಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತದ ಛಾಯೆಯಿದೆ ಎಂಬ ಟೀಕೆಗಳೂ ಬಂದಿವೆ. ಕ್ಷೇತ್ರವಾರು ಪ್ರೋತ್ಸಾಹ ಒದಗಿಸುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ. ಆದರೆ ಖಾಸಗಿ ವ್ಯಾಪಾರಿ ವಲಯದ ಭಾವನೆಯನ್ನು ಗೆಲ್ಲುವುದು ನಿಜವಾದ ಸವಾಲಾಗಿದೆ. ಈಸ್ ಆಫ್ ಡೂಯಿಂಗ್ ನಲ್ಲಿ ನಮ್ಮ ಶ್ರೇಯಾಂಕ ಉತ್ತಮವಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದ ಹೂಡಿಕೆ ಹರಿದು ಬರುತ್ತಿಲ್ಲ. ಹಾಗಾಗಿ ಹಿಂದೆಂದಿಗಿಂತಲೂ ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಹೂಡಿಕೆ ಮಾಡುವ ಅನಿವಾರ್ಯತೆ ಸರ್ಕಾರಕ್ಕಿದೆ. ಈ ಹಾದಿಯಲ್ಲಿ ಅದು ವಿತ್ತೀಯ ಕೊರತೆಯ ಗುರಿಯನ್ನು ಸಡಿಲಗೊಳಿಸುವುದು ಖಚಿತ. ೨೦೦೮-೦೯ರ ಜಾಗತಿಕ ಆರ್ಥಿಕ ಹಿಂಜರಿತವಾದ ಸಮಯದಲ್ಲಿ ಆರ್ಥಿಕತೆಯ ವರ್ಧನೆಗಾಗಿ ವಿತ್ತೀಯ ಕೊರತೆಯ ಮಿತಿಯನ್ನು ವಿಶಾಲವಾಗಿ ಸಡಿಲಗೊಳಿಸಿತ್ತು. ಅಮೆರಿಕ ತನ್ನ ಜಿಡಿಪಿಯ ಸುಮಾರು 8.1%ದಷ್ಟು ವಿತ್ತೀಯ ಕೊರತೆ ಪ್ರಮಾಣವನ್ನು ಹೆಚ್ಚಿಸಿಕೊಂಡೂ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನ ಮಾಡಿತ್ತು. ಹಾಗಾಗಿ ಹೆಚ್ಚಿನ ಸಾಲ ಮಾಡಬೇಕಾದರೂ ಭಾರತದ ಆರ್ಥಿಕತೆಯ ಇಂದಿನ ಸ್ಥಿತಿ ಬದಲಾಗಬೇಕಾದರೆ, ವಿತ್ತೀಯ ಶಿಸ್ತನ್ನು ಸಡಿಲಗೊಳಿಸಿ, ಈ ಬಾರಿಯ ಬಜೆಟ್ ಹೆಚ್ಚಿನ ಸಾಲದ ಮೊರೆಹೋಗಲಿದೆ. ಪರಿಣಾಮ ಜಿಡಿಪಿಯ 3% ರಿಂದ 3.3%ರಷ್ಟು ಇರಬೇಕಿದ್ದ ವಿತ್ತೀಯ ಕೊರತೆ ಪ್ರಮಾಣ ಜಿಡಿಪಿಯ ಸುಮಾರು 3.8% ಅಥವಾ ಅದಕ್ಕಿಂತ ಹೆಚ್ಚು ಹೋಗುವ ಸಾಧ್ಯತೆ ಇದೆ.
ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲೂ ಇದನ್ನು ಪುನರುಚ್ಚರಿಸಲಾಗಿದೆ. ಆದರೆ ಈ ಸಾಲ ಭಾರತದ ಪಾಲಿಗೆ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ತಂದುಕೊಡುವ ಹೂಡಿಕೆಗೆ (capital investment) ಕಾರಣವಾಗಬೇಕು. ಅದು ಸರಕಾರದ ಜನಪ್ರಿಯ ಯೋಜನೆಗಳಿಗೆ ಪೂರೈಕೆಯಾಗುವ “ಸೇವನೆ (consumption)” ಕೇಂದ್ರಿತವಾಗಿರಬಾರದು. ಸ್ಥಳಿಯ ಮಟ್ಟದಲ್ಲಿ ಇಳಿಮುಖವಾಗಿರುವ ಬೇಡಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸಿ, ಉತ್ಪಾದನೆಗೆ ಒತ್ತು ನೀಡಲು ಮತ್ತು ಭಾರತದ ೫ ಟ್ರಿಲಿಯನ್ ಬೆಳವಣಿಗೆಯ ಕನಸಿಗೆ, ಭಾರತೀಯರ ಆಕಾಂಕ್ಷೆಗಳನ್ನು ಪೂರೈಸುವುದಕ್ಕೆ ಇದು ಅನಿವಾರ್ಯ. ಕುಂಠಿತ ಬೆಳವಣಿಗೆ ಪುನರುಜ್ಜೀವನಗೊಳಿಸುವ ಮಹತ್ವದ ಜವಬ್ದಾರಿಯ ಹಾದಿಯಲ್ಲಿ ಖಾಸಗಿ ವಲಯದಿಂದ ಆಗದ ಹೂಡಿಕೆಯನ್ನು ಸರಕಾರವೇ ಮಾಡಬೇಕಿದೆ. ಈ ಹಾದಿಯಲ್ಲಿ ವಿತ್ತೀಯ ಕೊರತೆಯ ಪ್ರಮಾಣವನ್ನು ಅತೀ ಹೆಚ್ಚಾಗದಂತೆ ತಡೆದು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ (3.8%) ನಿಲ್ಲಿಸುವ ಕತ್ತಿಯಂಚಿನ ನಡಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಥಿಕ ಇಲಾಖೆಯ ಆಯವ್ಯಯ ತಯಾರಿಕೆಯ ತಂಡದ ಮೇಲಿದೆ.
ಅನೇಕ ಬಜೆಟ್ಗಳು ಒಂದು ಹಂತದಲ್ಲಿ ಆಯಾ ವರ್ಷಕ್ಕೆ ಸೀಮಿತವಾಗುತ್ತವೆ. ಇನ್ನೂ ಕೆಲವು ಹೊಸ ಸರಕಾರಗಳು ಆರಿಸಿ ಬಂದಾಗ, ಸರಕಾರದ ಮುಂದಿನ ಐದು ವರ್ಷಗಳ ಅಥವಾ ದಶಕದ ದೂರದೃಷ್ಟಿಯನ್ನು ಸಾಕಾರಗೊಳಿಸುವ ಕಾಯಕಲ್ಪವನ್ನು ಹೊಂದಿರುತ್ತದೆ. ಇನ್ನೂ ಕೆಲವು ಬಜೆಟ್ಗಳು ಐತಿಹಾಸಿಕ ಮಹತ್ವ ಪಡೆದ ಕಾಲದ ಅನಿವಾರ್ಯತೆಯನ್ನು ಉತ್ತರಿಸಿ ಭವಿಷ್ಯ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತವೆ.
ನಿರ್ಮಲಾ ಸೀತರಾಮನ್ ಹಾಗೂ ಮೋದಿ 2.0 ಸರಕಾರದ ಎರಡನೇ ಬಜೆಟ್ ಮೂರನೇ ವರ್ಗಕ್ಕೆ ಸೇರುತ್ತದೆ. ಈ ಬಾರಿ ಎಡವಿದರೆ ಮತ್ತೆಂದೂ ಇಂತಹ ಅವಕಾಶ ದೊರೆಯದು. ಕಳೆದ ಬಾರಿಯ ಮೋದಿ 2.0ನ ಮೊದಲ ಬಜೆಟ್ ಚುನಾವಣೋತ್ತರ ಬಜೆಟ್ ಎನ್ನುವುದಕ್ಕಿಂತ ಎಲ್ಲಾ ವಲಯಗಳಿಗೂ ಏನನ್ನಾದರೂ ಕೊಡಬೇಕು ಎನ್ನುವಂತೆ ರೂಪುಗೊಂಡ, ಕೊನೆಗೆ ಯಾವ ವಲಯವೂ ಸಂತುಷ್ಟಗೊಳ್ಳದ “ಚುನಾವಣಾಪೂರ್ವ” ಬಜೆಟ್ನಂತೆ ಭಾಸವಾಗಿತ್ತು. ಈ ಬಾರಿ ಅಂತಹ ಪ್ರಮಾದ ನಡೆಯಬಾರದು. 1990 ರಲ್ಲಿ ವಿಪಿ ಸಿಂಗ್ ಸರಕಾರದಲ್ಲಿ, ವಾಸ್ತವಿಕತೆಗೆ ದೂರವಾಗಿ, ಮಧು ದಂಡವತೆ ಅಂತಹದ್ದೇ ಪ್ರಮಾದ ಮಾಡಿದ್ದರು. ಅವರಿಗೆ ಎರಡನೇ ಅವಕಾಶ ಸಿಕ್ಕಿರಲಿಲ್ಲ. ಆದರೆ ನಿರ್ಮಲ ಸೀತಾರಾಮನ್ ಅವರಿಗೆ ಅವರ ಮೊದಲ ತಪ್ಪನ್ನು ಸರಿಪಡಿಕೊಳ್ಳುವ ಮತ್ತು ಮುಕ್ತ ಮಾರುಕಟ್ಟೆಯ ನಂಬಿಕೆಗಳನ್ನು ಮೇಲೆತ್ತುವ ಹೊಣೆ ಬಜೆಟ್ ಮೇಲಿದೆ.
ಕಳೆದ ವರ್ಷದಿಂದಲೇ ಬಜೆಟ್ನಲ್ಲಿ ಅನೇಕ ವಿಚಾರಗಳನ್ನು, ದಾಖಲೆಗಳನ್ನು ಮರೆಮಾಚಲಾಗಿದೆ ಎಂಬ ಟೀಕೆಗಳು ಬಂದಿದ್ದವು. ನಂತರ ಮಾಧ್ಯಮಗಳನ್ನು ವಿತ್ತ ಸಚಿವಾಲಯದಿಂದ ದೂರವಿಡಲಾಗಿತ್ತು. ಈಗೀಗ ಮಾಧ್ಯಮಗಳಲ್ಲಿ ವಿತ್ತ ಸಚಿವರನ್ನು ಬದಲಾಯಿಸುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಇಲ್ಲಿ ಮುಖ್ಯವಾಗಿರಬೇಕಾದ ವಿಚಾರ, ವಿತ್ತ ಸಚಿವರು ಯಾರೇ ಬಂದರೂ ಸರಕಾರದ ನಾಯಕತ್ವದ ಶಕ್ತಿಯ ಮೇಲೆ ವಿತ್ತ ಸಚಿವಾಲಯದ ಸಾಧನೆಯೂ ನಿಂತಿರುತ್ತದೆ. ಪಿ.ವಿ.ನರಸಿಂಹರಾವ್ ಕೊಟ್ಟ Go ahead ಕಾರಣದಿಂದ 1991 ರಲ್ಲಿ ಮನಮೋಹನ್ ಸಿಂಗ್ ಯಶಸ್ವಿಯಾಗಿದ್ದು ಎಂಬುದನ್ನು ಮರೆಯಬಾರದು. ಇತ್ತೀಚಿಗೆ ಅನೇಕ ಆರ್ಥಿಕ ತಜ್ಞರು ವಿತ್ತ ವಿಚಾರದ ದೃಷ್ಟಿಯಿಂದ ಮೋದಿ ೨.೦ ಅವಧಿಯನ್ನು ಯುಪಿಎ 2 ರ ಅವಧಿಗೆ ಹೋಲಿಸುತ್ತಿದ್ದಾರೆ. ವಿತ್ತ ವಲಯದ ಯೋಜನೆಗಳ ಅನಿಶ್ಚಿತತೆ, ತೆರಿಗೆ ಭಯೋತ್ಪಾದನೆ, ಅದೇ ಕಾನೂನಾತ್ಮಕ ಹೋರಾಟ-ತೊಡಕು, ಸಂಕಷ್ಟದಲ್ಲಿರುವ ಯೋಜನೆಗಳನ್ನು, ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸದ ಸ್ಥಿತಿ (ಉದಾ: ಟೆಲಿಕಾಂ ಕಂಪೆನಿಗಳ ಎಜಿಆರ್ ಕಂದಾಯ ವಸೂಲಿ ನೀತಿ), ಸರಕಾರದ ಇನ್ಪೆಕ್ಟರ್-ಪರವಾನಗಿ ರಾಜ್ ಛಾಯೆ, ಮುಕ್ತ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಸರಕಾರದ ಅನಗತ್ಯ ಪ್ರವೇಶ, ಬಿಜ್ನೆಸ್ ನಾಯಕರನ್ನು ಅನುಮಾನದಿಂದ ನೋಡುವ ಬಗೆ, ಕಳೆಗುಂದುತ್ತಿರುವ ನಂಬಿಕೆ, ಗ್ರಾಮೀಣ, ನಗರ ಪ್ರದೇಶಗಳಲ್ಲಿ ಚೇತರಿಕೆ ಕಾಣದ ಬೇಡಿಕೆ, ಹೂಡಿಕೆಗಳು ಇವೇ ಮೊದಲಾದ ಸಂಗತಿಗಳನ್ನು ಗುರುತಿಸಲಾಗುತ್ತಿದೆ. ಒಂದು ಬಜೆಟ್ ಇವೆಲ್ಲ ಸವಾಲುಗಳಿಗೆ ಪರಿಹಾರ ನೀಡುವ, ಭರವಸೆ ಒದಗಿಸುವ ಪ್ರಯತ್ನ ಮಾಡಬಹುದು. ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಾಯಿಸುವುದು ಕಷ್ಟ ಮತ್ತು ದೊಡ್ಡ ಸವಾಲು.
ಉಳಿದಂತೆ ತೆರಿಗೆ ದರ ಕಡಿತ, ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ತೆಗೆದುಹಾಕುವಿಕೆ (ಷೇರು ಮಾರುಕಟ್ಟೆಯ ಪ್ರಧಾನ ಬೇಡಿಕೆ), ಕೆಲವು ವಲಯಗಳಲ್ಲಿ ಜಿಎಸ್ಟಿ ದರ ಕಡಿತ, ಇವೆಲ್ಲ ಮಾಡಬೇಕು ಎನ್ನುವ ಕೋರಿಕೆ ಇದ್ದರೂ, ಇವುಗಳು ಹೋದರೆ ಇನ್ನೊಂದು ರೀತಿಯಲ್ಲಿ ಪಡೆಯುವ ವ್ಯವಸ್ಥೆಯನ್ನು ಮಾಡಬೇಕಾಗಬಹುದು. ಅದಾಗಲೇ ಆದಾಯದಲ್ಲಿ ಕೊರತೆ ಕಂಡಿರುವ ಸರ್ಕಾರ ವಿನಾಯಿತಿ ನೀಡುವುದು ಎಂದರೆ ಹೆಚ್ಚಿನ ಹೊರೆ ಹೊತ್ತುಕೊಂಡಂತೆ! ರಕ್ಷಣೆ, ರೈಲ್ವೆ, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮೊದಲಾದ ಆಯಕಟ್ಟಿನ ವಲಯಗಳಲ್ಲಿ ಹಿಂದಿನ ಅನುದಾನ ಮಾದರಿಯೇ ಮುಂದುವರೆಯಬಹುದು.
ಉತ್ತಮ ಅಭ್ಯಾಸ: ನಿಧಾನವಾಗಿ ನಾವು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹೆಜ್ಜೆಹಾಕುತ್ತಿದ್ದೇವೆ ಎಂದರೆ ನಾವೂ ವಿಶ್ವದ ಅತ್ಯುತ್ತಮ ಅಭ್ಯಾಸಗಳನ್ನು ಆರ್ಥಿಕ ಆಯವ್ಯಯ ಯೋಜನೆಯ ಭಾಗವಾಗಿಸಬೇಕು. ಸ್ಕ್ಯಾಂಡಿನೇವಿಯನ್ ದೇಶಗಳ ಮಾದರಿಯ ಲಿಂಗಾಧಾರಿತ ಬಜೆಟ್ ಅಧ್ಯಯನಗಳು, ಕೇವಲ ಬೆಳವಣಿಗೆಯನ್ನು ಕೇಂದ್ರೀಕರಿಸದ ಆದರೆ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆಹಾಕುವ ಪ್ರಯತ್ನದ ಮಾದರಿಗಳು, ಜಿಡಿಪಿಯಲ್ಲದೇ ಭೂತಾನ್ ಮಾದರಿಯ GNH (ರಾಷ್ಟ್ರೀಯ ಸಂತೋಷ), ಆರ್ಥಿಕ ಅಸಮಾನತೆಯ ಪ್ರಮಾಣ ಕಡಿಮೆಗೊಳಿಸುವ ಕಾಯಕಲ್ಪ.. ಇನ್ನಿತರ ಸಂಗತಿಗಳೂ ನಮ್ಮ ಬಜೆಟ್ ಆಲೋಚನೆಯ ಭಾಗವಾಗಬೆಕು. ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಆಲೋಚನೆಗಳು ಈಗಿನಿಂದಲೇ ಬಜೆಟ್ ಹಾಗೂ ಸರಕಾರದ ನೀತಿಗಳ ಭಾಗವಾಗದಿದ್ದಲ್ಲಿ. ಮೆಕೆನ್ಸಿ ವರದಿ ಪ್ರಕಾರ, 2050 ರ ಹೊತ್ತಿಗೆ ಹವಾಮಾನ ವೈಪರಿತ್ಯದ ಪರಿಣಾಮ ನೇರವಾಗಿ ಜಿಡಿಪಿಯ ಸುಮಾರು 2.5% ರಿಂದ 4.5%ದ ವರೆಗೂ ನಷ್ಟವನ್ನು ಉಂಟುಮಾಡಲಿದೆ. ಇದು ಆತಂಕಕಾರಿ ಹಾಗಾಗಿ ಈಗಿಂದಲೇ ಸವಾಲು ಎದುರಿಸಲು ಸಿದ್ಧವಾಗುವ ಜೊತೆಗೆ ಪರಿಸರ ಸ್ನೇಹಿ ಯೋಜನೆಗಳು ಎಲ್ಲಾ ವಲಯಗಳ ಆದ್ಯತೆ ಆಗಬೇಕು. ಇಲ್ಲಿ ನಾವು ನೊಡುತ್ತಿರುವ ಭೌತಿಕ ಆಸ್ತಿಯ ನಷ್ಟ ಮಾತ್ರವಲ್ಲ, ನಾವು ಲೆಕ್ಕಹಾಕಲಾಗದ ಮಾನವಿಕ ನಷ್ಟದ ಪ್ರಮಾಣವೂ ಗಂಭೀರ ಸ್ವರೂಪದಲ್ಲಿ ಎದುರಾಗಬಹುದು.
ಇತ್ತೀಚೆಗೆ ಘೋಷಿಸಿರುವಂತೆ, ಕೇಂದ್ರ ಸರಕಾರ ರಾಜ್ಯಗಳ ಸಹಯೋಗದೊಂದಿಗೆ, ಮುಂದಿನ ಐದು ವರ್ಷಗಳಲ್ಲಿ ಸುಮಾರು 102 ಲಕ್ಷ ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೇಲೆ ಹೂಡುವ ಆಶಯ ವ್ಯಕ್ತಪಡಿಸಿದೆ. ಬೇಡಿಕೆ, ಉದ್ಯೋಗ ಹೆಚ್ಚಿಸಲು ಹಾಗೂ ಆರ್ಥಿಕ ಪುನಶ್ಛೇತನ ಒದಗಿಸಲು ಇಂತಹ ನಡೆ ಪೂರಕ. ಇಲ್ಲಿ ಇಂಧನ ವಲಯ, ರೈಲ್ವೆ, ರಸ್ತೆ ಹಾಗೂ ನಿರ್ಮಾಣ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯಗಳೂ ಹೂಡಿಕೆ ಮಾಡಿ ಕೇಂದ್ರವೂ ಅಂದುಕೊಂಡ ಗುರಿಯನ್ನು ತಲುಪುವ ಈ ದಿಸೆಯಲ್ಲಿ ಯಶಸ್ವಿಯಾದರೆ ಆರ್ಥಿಕತೆಯ ಮಧ್ಯಮ ಅವಧಿಯ ಅಗತ್ಯಗಳಿಗೆ ಉಸಿರಾಡಲು ಅವಕಾಶ ಸಿಕ್ಕಂತಾಗುತ್ತದೆ.
ಮೊದಲು ಬಿಸಿನೆಸ್(business) ಸಮುದಾಯದ ಭಾವನೆಯನ್ನು ಗೆಲ್ಲುವ ಹಾಗೂ ತತ್ಕಾಲೀನ ಎಲ್ಲಾ ವಲಯಗಳ ಮೂಲಭೂತ ಆಶಯಗಳ ಜೊತೆ ಅವುಗಳ ಬಲವರ್ಧನೆಗೆ ಹೆಚ್ಚಿನ ಹೂಡಿಕೆ ಮಾಡುವ ಅನಿವಾರ್ಯತೆಯಿದೆ. ಹೂಡಿಕೆ ಕೇವಲ ಭೌತಿಕವಾಗಿರಬಾರದಷ್ಟೇ. ಮಾನವಿಕ, ಸಾಮಾಜಿಕ ಹೂಡಿಕೆಗಳೂ ಸಣ್ಣ ಅವಧಿಯಲ್ಲಿ ಬೇಡಿಕೆ, ಉದ್ಯೋಗ, ಆದಾಯ ಹಾಗೂ “ಪೂರೈಕೆ ಸೌಕರ್ಯ”ಗಳನ್ನು ಒದಗಿಸಲು ಸಾಧ್ಯ.
ಅದೇ ಹೊತ್ತಿಗೆ ಸರ್ಕಾರವೇ ಹೆಚ್ಚಿನ ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಸಹಜವಾಗಿ ಹೆಚ್ಚಿನ ಸಾಲ ಮತ್ತು ಸಾಮಾಜ ಕಲ್ಯಾಣ ಯೋಜನೆಗಳ ಮೇಲಿನ ಅನುದಾನ ಕುಂಠಿತಗೊಳ್ಳುವ ಸಾಂಭಾವ್ಯತೆಯಿದೆ. (ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ, ಬೇಡಿಕೆ, ಹಾಗೂ ಆದಾಯ ಒದಗಿಸುವ MGNREGA ಅಥವಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನೇಕ ರಾಜ್ಯಗಳಲ್ಲಿ ದುಡ್ಡು ಖಾಲಿಯಾಗಿರುವುದು. ಕಳೆದ ಒಂದೆರಡು ವರ್ಷಗಳಲ್ಲಿ ICDS ನಂತಹ ಮಕ್ಕಳ ಬೆಳವಣಿಗೆಗೆ ಪೂರಕವಾಗುವ ಯೋಜನೆಗಳಲ್ಲಿ ಕಡಿತಗೊಳ್ಳುತ್ತಿರುವ ದುಡ್ಡಿನ ಬಗ್ಗೆ ಅಂದಿನ ಮಕ್ಕಳ ಕಲ್ಯಾಣ ಸಚಿವೆ ಮೇನಕ ಗಾಂಧಿ ಕಾಳಜಿಯನ್ನು ಗಮನಿಸಬಹುದು.)
ವಿದೇಶಿ ಹೂಡಿಕೆ ಮತ್ತು ಇಲ್ಲಿನವರು ಫಲಾಯನ ಮಾಡಬಾರದು ಎಂದಾದರೆ ಸರ್ಕಾರದ ನೀತಿಗಳಲ್ಲಿ ಗೊಂದಲ, ಅನಿಶ್ಚಿತತೆ ಕನಿಷ್ಟವಾಗಿರಬೇಕು. ಅದೇ ರೀತಿ ಸಾಮಾಜಿಕ-ರಾಜಕೀಯ-ಶಾಂತಿಯುತ ದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಸೂಕ್ತ ವಾತಾವರಣವಿರುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸುತ್ತವೆ. ಉದಾಹರಣೆಗೆ ಕಾಶ್ಮೀರದಲ್ಲಿ ಹೂಡಿಕೆ ಆಗಬೇಕು ಅಂದರೆ ಪ್ರದೇಶವೂ ಸಹಜ ಸ್ಥಿತಿಯಲ್ಲಿರಬೇಕು. ಸಿಎಎ ಕಾನೂನಿನ ಸುತ್ತಮುತ್ತಲು ಆಗುತ್ತಿರುವ ಬೆಳವಣಿಗೆಗಳು ಆರ್ಥಿಕತೆಯ ಬೆಳವಣಿಗೆ, ಉತ್ತಮ ಹೂಡಿಕೆ ಸೆಳೆಯುವ ದೃಷ್ಟಿಯಿಂದ ಆದರ್ಶಪ್ರಾಯವಾಗಿಲ್ಲ.
21ನೇ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದು ಎಂಬುದು ಪ್ರಸ್ತುತ ದೇಶಿಯ ಮತ್ತು ಜಾಗತಿಕ ಬೆಳವಣಿಗೆಗಳಲ್ಲಿ ಸ್ಪಷ್ಟವಾಗುತ್ತಿದೆ. ಪ್ರಜಾಪ್ರಭುತ್ವ, ಯುವ ಜನಸಂಖ್ಯೆ ಮತ್ತು ಬೇಡಿಕೆ ಇವೇ ಭಾರತ ಹಾಗೂ ಏಷ್ಯಾದ ಶಕ್ತಿಯಾಗಬಲ್ಲವು.
ಯಾವುದೇ ಸಾಮ್ರಾಜ್ಯ ನಿರ್ಮಾಣ, ವಿಸ್ತರಣೆ ಆಗುವುದು ಆರ್ಥಿಕತೆ ಸುಭಧ್ರವಾಗಿದ್ದಾಗ ಮಾತ್ರ. ನಾಯಕತ್ವ ಆರ್ಥಿಕತೆಗೆ ಸರಿಯಾದ ದಿಶೆಯನ್ನು ಒದಗಿಸಿ, ಸಮರ್ಥವಾಗಿ ಬೆಳೆಸಿದರೆ, ಆ ಅವಕಾಶ ಆ ದೇಶದ್ದು ಎಂಬುದು ಇತಿಹಾಸದ ಅರಿವಿನಿಂದ ತಿಳಿಯುತ್ತದೆ. ಈ ಐತಿಹಾಸಿಕ ಅವಕಾಶಗಳನ್ನು ಬಳಸಿಕೊಳ್ಳಲು ಭಾರತಕ್ಕಿದು ಸರಿಯಾದ ಸಮಯ. ಈ ಬಜೆಟ್ ಸೋತರೆ ಕೇವಲ ಸರಕಾರ ಮಾತ್ರವಲ್ಲ ಭಾರತ ಮತ್ತು ಭಾರತದ ಭವಿಷ್ಯ ಸೋತಂತೆ. ಇದು ಎಚ್ಚರಿಕೆಯ ಕರೆಘಂಟೆಯೂ ಹೌದು. ಕೇವಲ ಆರ್ಥಿಕತೆಯ ಭದ್ರ ಬುನಾದಿಗಳು ಗಟ್ಟಿಯಾಗಿದ್ದರೆ ಸಾಲದು ಅವುಗಳ ವಿಸ್ತರಣೆಯೂ ಆಗಬೇಕಿದೆ.
ಕಳೆದ ದಶಕದ ಆರಂಭದ ವರ್ಷಗಳಲ್ಲಿ, ಆಂತರಿಕ ಬಾಹ್ಯ ಸಂಗತಿಗಳು (ತೈಲ ಬೆಲೆ ಇತ್ಯಾದಿ) ಭಾರತದ ಪರವಾಗಿದ್ದ ಸಮಯದಲ್ಲಿ, “ಭಾರತ ಇನ್ನೇನು ಕೆಲವೇ ವರ್ಷಗಳಲ್ಲಿ ಎರಡಂಕಿಯ (10-12%) ಜಿಡಿಪಿ ಬೆಳವಣಿಗೆ ದರವನ್ನು ತಲುಪಲಿದೆ” ಎಂದಿದ್ದ ಸಂಗತಿಗಳು ಅಸಾಧ್ಯವಲ್ಲದಿದ್ದರೂ , ಸಾಧ್ಯವಾಗಿಲ್ಲ ಎಂಬ ಸಂಗತಿ ನೆನಪಿಸುತ್ತವೆ. ವಿಶ್ವ ಹಣಕಾಸು ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಭಾರತ ೪.೫-೪.೮% ಜಿಡಿಪಿ ದರದ ಬೆಳವಣಿಗೆಯನ್ನು ಹೊಂದಬಹುದು ಎನ್ನಲಾಗಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ 2018-19 ನೇ ಸಾಲಿನ ದೇಶದ ಆದಾಯ, ಜಿಡಿಪಿ ಬೆಳವಣಿಗೆ ದರ 5% ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಸಾಲಿನಲ್ಲಿ ಭಾರತ ಸುಮಾರು 6% ಬೆಳವಣಿಗೆ ದರವನ್ನು ಕಾಣಲಿದೆ ಎಂದು ಅಂದಾಜಿಸಲಾಗಿದೆ.
4%/5%/6% ಬೆಳವಣಿಗೆ ದರಗಳು ಭಾರತದ ಬೆಳವಣಿಗೆಯ ಮಹತ್ವಾಕಾಂಕ್ಷೆಯ ದೃಷ್ಟಿಯಿಂದ ಆತಂಕಕಾರಿ. ವಿಶ್ವಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ಆದರೆ ಭಾರತದ ಆರ್ಥಿಕ ಬೆಳವಣಿಗೆ ದರ ಭಾರತದ ಅಗತ್ಯತೆಗಳೊಂದಿಗೆ ಹೋಲಿಸಿದರೆ ಇದೇ ಮಾತನ್ನು ಹೇಳುವುದು ಕಷ್ಟ. ಸಮಯ ಕಡಿಮೆಯಿದೆ, ಹೆಚ್ಚಿನ ಸುಧಾರಣೆಗಳು ಆಗಬೇಕಿವೆ. ಭಾರತದ ಆರ್ಥಿಕತೆಯ ಕುರಿತಾದ ಆತಂಕ, ಹಿಂಜರಿತದ (slowdown) ಭಯ ಇವೆಲ್ಲವೂ ತಾತ್ಕಾಲಿಕ ಎನ್ನುವುದೂ ಅಷ್ಟೇ ಸತ್ಯ. ಮುಂದಿನ ದಿನಗಳಲ್ಲಿ ಸೂಕ್ತ ದಿಶೆಯಲ್ಲಿ ಮುನ್ನಡೆದರೆ ಭಾರತದ ಆರ್ಥಿಕತೆ ಚೇತರಿಕೆ ಕಾಣಲಿದೆ. ಆರ್ಥಿಕ ಸಮೀಕ್ಷೆ 2020 ರ ಪ್ರಕಾರ ಎಲ್ಲಾ ಅಂದುಕೊಂಡಂತೆ ನಡೆದರೆ ಭಾರತದ ಆರ್ಥಿಕತೆ 2021 ನೇ ಹಣಕಾಸು ವರ್ಷದಲ್ಲಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ಹಾಗಾಗಿ 2020, ಹೊಸ ದಶಕವನ್ನು ಸ್ವಾಗತಿಸುತ್ತಿರುವ ಭಾರತದ ಆರ್ಥಿಕತೆಗೆ, ಹೊಸ ತಲೆಮಾರಿನವರಿಗೆ, ಬಹು ಗಂಭೀರ ಮತ್ತು ನಿರ್ಣಾಯಕ ವರ್ಷ.
ಆರ್ಥಿಕ ಸಮೀಕ್ಷೆ 2020: ಆರ್ಥಿಕ ಸಮೀಕ್ಷೆ 2020 ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಸುಮಾರು ಹತ್ತು ಅಂಶಗಳ ಕಾರ್ಯಸೂಚಿಯನ್ನು ಒದಗಿಸಿದೆ. ಅವು ಬಜೆಟ್ನಲ್ಲಿ ಹಾಗೂ ಆ ನಂತರದ ಆರ್ಥಿಕ ಯೋಜನೆಗಳಲ್ಲಿ ಸ್ಪಷ್ಟರೂಪದಲ್ಲಿ ಜಾರಿಗೆ ಬರಬಹುದು ಅಥವಾ ಚರ್ಚೆಯ ನೆಲೆಯಲ್ಲಿ ನಿಲ್ಲಬಹುದು. ಭಾರತ $5 ಟ್ರಿಲಿಯನ್ ಆರ್ಥಿಕತೆಯಾಗಲು ಮುಖ್ಯವಾಗಿ ಪಾಲಿಸಬೇಕಾದ ಎರಡು ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಒಂದು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ನಿರ್ಮಿಸುವ “pro-business” ನೀತಿಗಳು. ಮತ್ತು ಕೇವಲ ಕೆಲವು ಬೃಹತ್ ಖಾಸಗಿ ಉದ್ಯಮಗಳ ಹಿತಾಸಕ್ತಿಗೆ ಸೀಮಿತವಾಗಿರುವ “crony capital” ನೀತಿಗಳಿಂದ ಹಿಂದಕ್ಕೆ ಸರಿಯುವ ನೀತಿಗಳತ್ತ ಸಾಗಬೇಕು ಎಂಬ ಸಲಹೆ ನೀಡಲಾಗಿದೆ. ಇದನ್ನು ಎಲ್ಲಾ ಸರಕಾರಗಳು ಪಾರದರ್ಶಕವಾಗಿ ಪಾಲಿಸಬೇಕು.
ರಫ್ತು ಕೇಂದ್ರಿತ ಮೌಲ್ಯವರ್ಧನೆಯ ಸರಪಳಿಯ ಮೂಲಕ $5 ಟ್ರಿಲಿಯನ್ ಆರ್ಥಿಕತೆಯ ಸುಮಾರು ಒಂದನೇ ನಾಲ್ಕರಷ್ಟು ಆದಾಯವನ್ನು ಗಳಿಸಬಹುದು ಎಂಬ ಮಹತ್ವಾಕಾಂಕ್ಷೆಯ ಚಿತ್ರಣ ನೀಡಲಾಗಿದೆ. ಕೇವಲ ರಫ್ತು ಕೇಂದ್ರಿತವಾಗಿ ಆರ್ಥಿಕತೆಯನ್ನು ಸಿದ್ಧಪಡಿಸುವುದು ಸವಾಲು ಮತ್ತು ತುಸು ಅಪಾಯಕಾರಿ, ಚೀನ, ಜರ್ಮನಿ ಮೊದಲಾದ ರಫ್ತು ಕೇಂದ್ರಿತವಾಗಿ ಬೆಳವಣಿಗೆ ಸಾಧಿಸಿದ ದೇಶಗಳ ಇಂದಿನ ಚಿತ್ರಣ ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಯಾಕೆಂದರೆ ಯಾವುದೇ ದೇಶದ ಆರ್ಥಿಕತೆ ಯಾವುದೇ ಒಂದು ವಲಯದ ಮೇಲೆ ಅವಲಂಭಿತವಾಗಿರಬಾರದು, ಎಂಥ ಕಠಿಣ ಆರ್ಥಿಕ ಸವಾಲುಗಳನ್ನು ಎದುರಿಸುತ್ತಾ ನಿಂತಿರುವ ಭಾರತ diversified economy ಗೆ ಉತ್ತಮ ಉದಾಹರಣೆ. ಆರ್ಥಿಕ ಸಮೀಕ್ಷೆಯಲ್ಲಿ ಸೂಚಿಸಲಾಗುವ ಇಂತಹ ಅನೇಕ ಸಂಗತಿಗಳನ್ನು ಬಜೆಟ್ ನೀತಿಯ ಸ್ಥೂಲ ಆಯಾಮದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಆರ್ಥಿಕ ಸಮೀಕ್ಷೆ ಒಂದು ರೀತಿಯಲ್ಲಿ ಬಜೆಟ್ಗೊಂದು ಸ್ಪಷ್ಟತೆ ನೀಡುವ ಜೊತೆಗೆ ಮುನ್ನುಡಿ ಬರೆಯುವ ಪ್ರಯತ್ನ ಮಾಡುತ್ತದೆ.
ಅಗ್ಗ ತುಟ್ಟಿ ಪಟ್ಟಿಯಿಂದ ಹೊರ ಬಂದಮೇಲೆ ಬಜೆಟ್ ಕೆಲವು ಆಯಕಟ್ಟಿನ ಮತ್ತು ಹೆಚ್ಚಿನ ಬೆಳವಣಿಗೆ ಸಾಧಿಸಬಲ್ಲ ಕ್ಷೇತ್ರ ವಲಯಗಳತ್ತ ಹೆಚ್ಚಿನ ಅವಧಾರಣೆ ನೀಡುವ ಪ್ರಯತ್ನ ಮಾಡಬೇಕು. ಉದಾಹರಣೆಗೆ ಭಾರತದ ೫ ಟ್ರಿಲಿಯನ್ ಕನಸಿಗೆ, ಉದ್ಯೋಗ ಸಹಿತ ಅಭಿವೃದ್ಧಿಗೆ ಪೂರಕವಾಗಬಲ್ಲ, ಸ್ಟಾರ್ಟಪ್ಗಳು (27,000 ಸ್ಟಾರ್ಟಪ್ಗಳ ತವರು ಭಾರತ ವಿಶ್ವದಲ್ಲಿಯೇ ಸ್ಟಾರ್ಟಪ್ ವಾತಾವರಣವನ್ನು ನಿರ್ಮಿಸುವಲ್ಲಿ ಮೂರನೇ ಸ್ಥಾನದಲ್ಲಿದೆ), ಪ್ರವಾಸೋದ್ಯಮ, ಆಹಾರ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ, ಈ ಕಾಮರ್ಸ್, ಶುದ್ಧ ಇಂಧನ ಮೂಲಗಳು, ಕೌಶಲ್ಯದಿಂದ ಕೂಡಿದ ಜ್ಞಾನಶಾಖೆಗಳು, ವೇಗವಾಗಿ ಬೆಳೆಯುತ್ತಿರುವ Internet of Things, automation, artifical intelligence ಮೊದಲಾದ ತಂತ್ರಜ್ಞಾನ ಪ್ರಣೀತ ಕ್ಷೇತ್ರಗಳು, ಹೀಗೆ ವೇಗವಾಗಿ ಬೆಳೆಯಬಲ್ಲ ವಲಯಗಳನ್ನು ಗುರುತಿಸಿ, ಅವಕ್ಕೆ ಪುಷ್ಟಿ ನೀಡಿ, ತೊಡಕುಗಳನ್ನು ನಿವಾರಿಸಿ ಹಿಮ್ಮುಖ ಮತ್ತು ಮುಂಚಲನೆಯ ತಂತ್ರಜ್ಞಾನ ಮಾದರಿಗಳ ಆಧಾರದಲ್ಲಿ ಜಾಗತಿಕ ಮೌಲ್ಯವರ್ಧನೆಯ ಕೊಂಡಿಯೊಂದನ್ನು ಭಾರತದ ಮೂಲಕವೇ ನಿರ್ಮಿಸುವ ಪ್ರಯತ್ನ ಮಾಡಬೇಕು. ಬಜೆಟ್ ಈ ಬಗ್ಗೆ ಗಂಭೀರ ಚಿಂತನೆ ನಡೆಸಬಹುದು.
ದೇಶದ ಮುಂದೆ ಇರುವ ಬೆಳವಣಿಗೆ, ಅಭಿವೃದ್ಧಿ, ಆದಾಯ, ಉದ್ಯೋಗ, ತರಕಾರಿ ಮೊದಲಾದ ಅಗತ್ಯ ವಸ್ತುಗಳ ಮೇಲಿನ ಹಣದುಬ್ಬರ, ರೈತರ ಆದಾಯ ದ್ವಿಗುಣ ಮೊದಲಾದ ಸವಾಲು, ಸಮಸ್ಯೆ ಮತ್ತು ಆತಂಕಗಳಿಗೆ ಬಜೆಟ್ ಉತ್ತರಿಸುವ ಕೆಲಸ ಮಾಡಬೇಕಿದೆ. ಚುನಾವಣಾ ವರ್ಷವಲ್ಲದ ಕಾರಣ, ಸರಕಾರದ ಮಟ್ಟಿಗೆ ಅಲ್ಲದಿದ್ದರೂ, ದಶಕದ ಮೊದಲ ವರ್ಷವಾದ ಕಾರಣ, ಭಾರತದ ಆರ್ಥಿಕತೆಯ ಮಟ್ಟಿಗೆ ಇದು ಈ ದಶಕದ ಹಾದಿಯನ್ನು ನಿರ್ಧರಿಸುವ ಕತ್ತಿಯಂಚಿನ ಹಾದಿಯಲ್ಲಿ ಸಾಗಲಿರುವ, ಮಾಡು ಇಲ್ಲವೆ ಮಡಿ ಭಾರತ ಬಜೆಟ್. ನಮ್ಮ ಕಾತುರ, ಅಪೇಕ್ಷೆಗಳಿಗೆ ಬಜೆಟ್ ಸೂಕ್ತ ಉತ್ತರ ನೀಡಲಿ. ಶುಭವಾಗಲಿ.
ಜೈ ಹಿಂದ್.
✍ ಶ್ರೇಯಾಂಕ ಎಸ್, ರಾನಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.