ನವದೆಹಲಿ: ಮಾಲ್ಡೀವ್ಸ್ ಸರ್ಕಾರದ ತುರ್ತು ಅಗತ್ಯಕ್ಕೆ ಅನುಗುಣವಾಗಿ 30,000 ದಡಾರ ಮತ್ತು ರುಬೆಲ್ಲಾ (ಎಂಆರ್) ಲಸಿಕೆಯನ್ನು ಭಾರತ ಗುರುವಾರ ಪೂರೈಸಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿಮಿಟೆಡ್ನ ಕನಿಷ್ಠ 30,000 ಡೋಸ್ ಎಂಆರ್ ಲಸಿಕೆಯನ್ನು ತ್ವರಿತವಾಗಿ ಖರೀದಿಸಲಾಯಿತು ಮತ್ತು ಮೂರು ದಿನಗಳಲ್ಲಿ ಲಸಿಕೆಯನ್ನು ಮಾಲೆಗೆ ತಲುಪಿಸಲಾಯಿತು. ಲಸಿಕೆಗಳನ್ನು 2020 ರ ಜನವರಿ 23 ರಂದು ಮಾಲ್ಡೀವ್ಸ್ ಸರ್ಕಾರದ ಆರೋಗ್ಯ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಂತರ, ಮಾಲ್ಡೀವ್ಸ್ ಆರೋಗ್ಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿನ ಆರೋಗ್ಯ ಸಚಿವ ಹೆಚ್.ಇ.ಅಬ್ದುಲ್ಲಾ ಅಮೀನ್ ಅವರು ಅಲ್ಲಿನ ಭಾರತೀಯ ರಾಯಭಾರಿ ಎಚ್.ಇ.ಸಂಜಯ್ ಸುಧೀರ್ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿದರು. ಈ ಮೂಲಕ ಸದ್ಭಾವನೆ ಮತ್ತು ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಿದ ಭಾರತಕ್ಕೆ ಧನ್ಯವಾದ ಅರ್ಪಿಸಿದರು.
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಹಕಾರದ ಪ್ರಬಲ ಸ್ತಂಭಗಳಲ್ಲಿ ಆರೋಗ್ಯವು ಒಂದಾಗಿದೆ. ಹೀಗಾಗಿ ಅಲ್ಲಿನ ಆರೋಗ್ಯ ತುರ್ತು ಅಗತ್ಯಕ್ಕೆ ಭಾರತ ತ್ವರಿತ ಪ್ರತಿಕ್ರಿಯೆ ನೀಡಿದೆ. ಈ ಕಾರ್ಯ ಭಾರತದ ನೆರೆಹೊರೆ ಮೊದಲು ನೀತಿಯನ್ನು ಎತ್ತಿ ಹಿಡಿದಿದೆ ಮತ್ತು ಮಾಲ್ಡೀವ್ಸ್ ಇಂಡಿಯಾ ಫಸ್ಟ್ ನೀತಿಯ ಪರಸ್ಪರ ಬೆಂಬಲವನ್ನೂ ಒತ್ತಿಹೇಳುತ್ತದೆ.
2019 ರ ಜೂನ್ನಲ್ಲಿ ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಿದ ಆರೋಗ್ಯ ಸಹಕಾರ ಕುರಿತ ಒಪ್ಪಂದದ ಅನುಷ್ಠಾನ ಈಗಾಗಲೇ ಪ್ರಾರಂಭವಾಗಿದೆ. ಕಾರ್ಯದರ್ಶಿ ಮಟ್ಟದ ನಿಯೋಗಗಳು 2020 ರ ಜನವರಿ 5-6 ರಂದು ಮಾಲೆಯಲ್ಲಿ ಸಭೆ ಸೇರಿ ಸಾಮರ್ಥ್ಯ ವೃದ್ಧಿ, ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ತರಬೇತಿ, ರೋಗ ತಡೆಗಟ್ಟುವಿಕೆ ಜಾಗೃತಿ, ಮಾನಸಿಕ ಆರೋಗ್ಯ ವೃತ್ತಿಪರರ ತರಬೇತಿ, ಡಿಜಿಟಲ್ ಆರೋಗ್ಯ ಸಾಮರ್ಥ್ಯಗಳ ಸ್ಥಾಪನೆಗೆ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.