ನವದೆಹಲಿ: ಕರ್ನಾಟಕ, ಅಸ್ಸಾಂ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತ್ರಿಪುರ ಮತ್ತು ಉತ್ತರ ಪ್ರದೇಶ ಒಟ್ಟು ಏಳು ವಿಪತ್ತು ಪೀಡಿತ ರಾಜ್ಯಗಳಿಗೆ 5,908.56 ಕೋಟಿ ರೂ.ಗಳ ಹೆಚ್ಚುವರಿ ನೆರವು ನೀಡಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ.
ನೈರುತ್ಯ ಮಾನ್ಸೂನ್ 2019 ರ ಸಮಯದಲ್ಲಿ ಈ ರಾಜ್ಯಗಳು ಪ್ರವಾಹ, ಭೂಕುಸಿತ ಮತ್ತು ಭಾರೀ ಮಳೆಯಿಂದ ಪೀಡಿತಗೊಂಡಿದ್ದವು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ (ಎನ್ಡಿಆರ್ಎಫ್) ಏಳು ರಾಜ್ಯಗಳಿಗೆ ಹೆಚ್ಚುವರಿ ಸಹಾಯವನ್ನು ಒದಗಿಸುವ ನಿರ್ಧಾರವನ್ನು ಅಂಗೀಕರಿಸಲಾಯಿತು. ಅಸ್ಸಾಂಗೆ 616.63 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ., ಕರ್ನಾಟಕಕ್ಕೆ 1869.85 ಕೋಟಿ ರೂ., ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ, ಮಹಾರಾಷ್ಟ್ರಕ್ಕೆ 956.93 ಕೋಟಿ ರೂ, ತ್ರಿಪುರಕ್ಕೆ 63.32 ಕೋಟಿ ರೂ. ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ.ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಗೃಹ ವ್ಯವಹಾರ, ಹಣಕಾಸು, ಕೃಷಿ ಮತ್ತು ನೀತಿ ಆಯೋಗದ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಹಿಂದೆ ಕೇಂದ್ರ ಸರ್ಕಾರವು ನಾಲ್ಕು ರಾಜ್ಯಗಳಿಗೆ 3,200 ಕೋಟಿ ರೂ.ಗಳ ಮಧ್ಯಂತರ ಆರ್ಥಿಕ ಸಹಾಯವನ್ನು ಬಿಡುಗಡೆ ಮಾಡಿತ್ತು – ಕರ್ನಾಟಕಕ್ಕೆ 1,200 ಕೋಟಿ ರೂ., ಮಧ್ಯಪ್ರದೇಶಕ್ಕೆ 1,000 ಕೋಟಿ ರೂ, ಮಹಾರಾಷ್ಟ್ರಕ್ಕೆ 600 ಕೋಟಿ ರೂ ಮತ್ತು ಬಿಹಾರಕ್ಕೆ 400 ಕೋಟಿ ರೂ ಬಿಡುಗಡೆ ಮಾಡಿತ್ತು. ಇದಲ್ಲದೇ, 2019-20ರ ಅವಧಿಯಲ್ಲಿ, ಇಲ್ಲಿಯವರೆಗೆ, ಕೇಂದ್ರವು ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ (ಎಸ್ಡಿಆರ್ಎಫ್) 27 ರಾಜ್ಯಗಳಿಗೆ 8,068.33 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ನೈಸರ್ಗಿಕ ವಿಪತ್ತುಗಳ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮಾಡುವ ಪ್ರಯತ್ನಗಳಿಗೆ ಪೂರಕವಾಗಿ ಸಮಯೋಚಿತ ಸರಕು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ” ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.