ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಂದಿನವರೆಗೆ ಪ್ರಧಾನಿ ನರೇಂದ್ರ ಮೋದಿ ಅನೇಕ ದೇಶಗಳಿಗೆ ಪ್ರವಾಸಗಳನ್ನು ಕೈಗೊಂಡಿದ್ದಾರೆ. ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೊಂದಿಗೆ ದೇಶದ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬಾಂಧವ್ಯ ವೃದ್ಧಿಸುವ ಉದ್ದೇಶ ಅವರ ಪ್ರತಿ ಪ್ರವಾಸದ ಹಿಂದೆಯೂ ಇದೆ.
ಅಮೇರಿಕ, ಕೆನಡಾ, ಫ್ರಾನ್ಸ್ ನಂತರ ಈಗ ಪ್ರಧಾನಿ ಮೋದಿ ಅವರು ಮಧ್ಯ ಏಷ್ಯಾದ ಐದು ರಾಷ್ಟ್ರಗಳು ಹಾಗೂ ರಷ್ಯಾ ಪ್ರವಾಸ ಬೆಳೆಸಿ ವಾಪಾಸ್ಸಾಗಿದ್ದಾರೆ. ಮಧ್ಯ ಏಷ್ಯಾದ ಉಜಬೇಕಿಸ್ಥಾನ, ತಜಕಿಸ್ಥಾನ, ಕಜಕಿಸ್ಥಾನ, ಕರ್ಗಿಸ್ಥಾನ, ತುರ್ಕಮೇನಿಸ್ಥಾನ ಭೇಟಿಯ ಜೊತೆಗೆ ರಷ್ಯಾದಲ್ಲಿ ಮಹತ್ತರವಾದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಆರ್ಥಿಕತೆಯ ಜೊತೆಗೆ ವ್ಯಾಪಾರ ಬೆಳವಣಿಗೆ ಉತ್ತಮಗೊಳಿಸುವ ದೃಷ್ಟಿಯಿಂದಲೂ ಈ ಪ್ರವಾಸ ಸಹಾಯಕವಾಗಲಿದೆ. ಕಜಕಿಸ್ಥಾನ, ಉಜಬೇಕಿಸ್ಥಾನ ಮೊದಲಾದ ಮಧ್ಯ ಏಶ್ಯಾದ ರಾಷ್ಟ್ರಗಳು ತೈಲ, ನೈಸರ್ಗಿಕ ಸಂಪತ್ತು, ಇಂಧನಗಳಿಗೆ ಹೆಸರುವಾಸಿಯಾಗಿದೆ. ಈ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ಬೆಳೆಸುವ ದೃಷ್ಟಿಕೋನ ಭಾರತ್ತದ್ದಾಗಿದೆ.
ಉಜಬೇಕಿಸ್ಥಾನದೊಂದಿಗೆ ಪ್ರವಾಸೋದ್ಯಮ, ಸೈಬರ್ ಸುರಕ್ಷತೆ, ಯುರೇನಿಯಂ ಪೂರೈಕೆಗೆ ಮಾತುಕತೆ ನಡೆಸಲಾಗಿದೆ. 2000 ಮೆಟ್ರಿಕ್ ಟನ್ಗಳಷ್ಟು ಖನಿಜ ಆಮದು ಮಾಡುವ ಉದ್ದೇಶ ಹೊಂದಿರುವುದು ಲಾಭದಾಯಕವೇ ಆಗಿದೆ.
ಭಾರತವು ಕಜಕಿಸ್ಥಾನದೊಂದಿಗೆ ವ್ಯಾಪಾರ ಸಂಬಂಧ ಬೆಳೆಸುವ ಪ್ರಯತ್ನದಲ್ಲಿ ಸಫಲಗೊಂಡಿದೆ. ಮುಂದಿನ ನಾಲ್ಕು ವರ್ಷಗಳಿಗೆ ಈ ರಾಷ್ಟ್ರದಿಂದ 5000 ಟನ್ ಹಳದಿ ಖನಿಜ ಆಮದಾಗಲಿದೆ. ಇನ್ನು ತುರ್ಕಮೇನಿಸ್ಥಾನದೊಂದಿಗೆ ಸಂಬಂಧ ಬೆಳೆಸಿರುವ ಭಾರತ ಸರ್ಕಾರ ಅಲ್ಲಿಂದ ನೈಸರ್ಗಿಕ ಅನಿಲ ಆಮದಿಗೆ ಸಹಿ ಹಾಕಿದೆ. ಈ ರಾಷ್ಟ್ರಗಳ ಜೊತೆಗಿನ ಸಂಬಂಧಗಳಲ್ಲಿ ತೈಲ, ನೈಸರ್ಗಿಕ ಅನಿಲ ವ್ಯಾಪಾರದ ಜೊತೆಗೆ ಯೋಗ ದಿನಾಚರಣೆಯನ್ನೂ ಕೈ ಬಿಡದ ಮೋದಿ ಈ ರಾಷ್ಟ್ರಗಳೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನೂ ಬೆಳೆಸುವ ಪ್ರಯತ್ನ ನಡೆಸಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಈ ರಾಷ್ಟ್ರಗಳ ಸಂಬಂಧದಿಂದ ಭಾರತಕ್ಕೆ ಲಾಭವೇ ಲಾಭ. ಏಕೆಂದರೆ ಭಾರತದಿಂದ ಇರಾನ್, ರಷ್ಯಾ, ಮತ್ತಿತರ ಐರೋಪ್ಯ ರಾಷ್ಟ್ರಗಳಿಗೆ ಹೋಗಲು ಹಡಗು, ರೈಲು, ರಸ್ತೆ ಮಾರ್ಗವಾಗಿ ಸಂಚರಿಸಲು ಈ ರಾಷ್ಟ್ರಗಳ ಮೂಲಕವೇ ಹೋಗಬೇಕು. ಸರಕು ಸಾಗಣೆಗೆ ಅನುಕೂಲವಾಗುವಂತೆ ಈ ರಾಷ್ಟ್ರಗಳೊಂದಿಗೆ Ashgabat ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ಬೆಳೆಸುತ್ತಿರುವ ಮೋದಿ ಸರ್ಕಾರದ ದೃಷ್ಟಿಕೋನ ಬೇರೇಯೇ ಆಗಿದೆ. ’ಬ್ರಿಕ್ಸ್’ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ ಇದರ ನ್ಯೂ ನ್ಯಾಶನಲ್ ಬ್ಯಾಂಕ್ ಮೂಲಕ ಈ ರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕಾಗಿ ಈ ಬ್ಯಾಂಕ್ನಿಂದ ಹಣಕಾಸು ಸಹಾಯ ಪಡೆಯುವುದು. ಅಲ್ಲದೇ ಚೀನಾ, ರಷ್ಯಾ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳ ಜೊತೆ ಭಾರತವು ಕೂಡ ಆರು ರಾಷ್ಟ್ರಗಳ ಶಾಂಘಾಯ್ ಸಹಕಾರ ಸಂಸ್ಥೆ (ಎಸ್ಸಿಜಿ)ಯ ಪೂರ್ಣ ಸದಸ್ಯತ್ವ ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.