ದೇಶದ ಬೆನ್ನೆಲುಬು ಎನಿಸಿಕೊಂಡ ರೈತನ ಇಂದಿನ ಸ್ಥಿತಿ ಚಿಂತಾಜನಕ ಮಟ್ಟಕ್ಕೆ ಇಳಿದಿದೆ. ಕೈಕೊಟ್ಟ ಮಳೆ, ಸಿಗದ ಫಸಲು, ಏರುತ್ತಿರುವ ಸಾಲ ಅನ್ನದಾತನನ್ನು ಸಾವಿನ ದವಡೆಗೆ ನೂಕುತ್ತಿದೆ. ಕೋಟ್ಯಾಂತರ ಜನರ ಹಸಿವೆಯನ್ನು ನೀಗಿಸುವ ಆತನ ಹಸಿವೆಯನ್ನು ಕೇಳುವವರಿಲ್ಲ. ಆತನ ನೆರವಿಗೆ ಧಾವಿಸುವವರಿಲ್ಲ. ಹಾಗಾಗಿಯೇ ಆತ ಆತ್ಮಹತ್ಯೆ ಎಂಬ ಮಹಾಪಾಪ ಕಾರ್ಯ ಮಾಡಲು ಮುಂದಾಗುತ್ತಿದ್ದಾನೆ.
ಕಳೆದ ಮೂರು ವಾರಗಳಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆಗೀಡಾದ ರೈತರ ಸಂಖ್ಯೆ 55 ಕ್ಕೂ ಹೆಚ್ಚು. ಪ್ರತಿದಿನ ಎರಡು ಮೂರು ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಬೇಸರ, ಫಸಲು ಕೈಗೆ ಬರಲಿಲ್ಲ ಎಂಬ ಆಕ್ರೋಶ, ಸಾಲ ಕೊಟ್ಟವರು ಸುಮ್ಮನೆ ಬಿಡಲಾರರು ಎಂಬ ಭಯದಿಂದ ರೈತರು ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಿದ್ದಾರೆ.
ಇನ್ನು ಕೆಲ ರೈತರು ತಾವು ಬೆಳೆದ ಕಬ್ಬಿನ ಪೈರಿಗೆ ತಾವೇ ಬೆಂಕಿ ಹಾಕಿ ಸುಟ್ಟು ಭಸ್ಮ ಮಾಡಿದ್ದಾರೆ. ಟ್ರ್ಯಾಕ್ಟರ್ ಹತ್ತಿಸಿ ನೆಲಸಮ ಮಾಡುತ್ತಿದ್ದಾರೆ. ಒಬ್ಬ ರೈತನಂತು ಕಬ್ಬಿಗೆ ಬೆಂಕಿ ಹಚ್ಚಿ ಅದೇ ಬೆಂಕಿಗೆ ತಾನೂ ಹಾರಿ ಭೀಕರ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಷ್ಟೆಲ್ಲಾ ಆದರೂ ಸರ್ಕಾರ ಮಾತ್ರ ರೈತನ ರಕ್ಷಣೆಗೆ ಧಾವಿಸಿಲ್ಲ, ಕೇವಲ ಬಾಯಿ ಮಾತಿನಲ್ಲೇ ನಮ್ಮ ಸಿಎಂ, ಮಂತ್ರಿಗಳು ರೈತರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಆದರೆ ಈ ಸಾಂತ್ವಾನಗಳು ರೈತರ ನೋವನ್ನು, ಆಕ್ರೋಶವನ್ನು ತಣ್ಣಗಾಗಿಸುತ್ತಿಲ್ಲ.
ಹಿಂದೆ ಭಾರತದಲ್ಲಿ ಕೃಷಿ ಹೊಟ್ಟೆಪಾಡಿನ ಮೂಲ ಜೀವನಾಧಾರವಾಗಿತ್ತು. ಆದರೆ ಈಗ ವಾಣಿಜ್ಯ ಬೆಳೆಗಳನ್ನೇ ರೈತರು ನೆಚ್ಚಿಕೊಂಡಿದ್ದಾರೆ. ಕೃಷಿ ಆಧುನೀಕರಣಗೊಂಡರೂ ಮಳೆಯನ್ನೇ ರೈತ ಅವಲಂಬಿಸಬೇಕಾದುದು ಅನಿವಾರ್ಯ. ಆಧುನಿಕ ಪರಿಕರಗಳು, ಕೀಟನಾಶಕಗಳು, ಬೀಜ, ಗೊಬ್ಬರ ಇವು ಕೂಡ ರೈತನ ಸಾಲದ ಹೊರೆಯನ್ನು ಹೆಚ್ಚಿಸಿವೆ. ಸರ್ಕಾರದ ಸಬ್ಸಿಡಿಗಳ ಮೇಲೂ ಈಗಿನ ರೈತ ಅವಲಂಬಿತನಾಗಿದ್ದಾನೆ. ತಪ್ಪು ಕೃಷಿ ನೀತಿಗಳು, ರಾಜಕಾರಣಿಗಳ ನಿರ್ಲಕ್ಷ್ಯ, ತಪ್ಪು ಆರ್ಥಿಕ ನೀತಿಗಳು ಇವೆಲ್ಲವೂ ರೈತನ ಲಾಭ, ನಷ್ಟದ ಲೆಕ್ಕಚಾರದ ಮೇಲೆ ತೀವ್ರ ಪ್ರಭಾವ ಬೀರುತ್ತಿವೆ.
ಲೇವಾದೇವಿಗಾರರಿಂದ, ಬ್ಯಾಂಕುಗಳಿಂದ ಲಕ್ಷಾಂತರ ಸಾಲ ಪಡೆದು ಬೆಳೆ ಬೆಳೆಯುವ ರೈತ ಫಸಲು ಕೈಕೊಟ್ಟ ಸಂದರ್ಭ ಸಾಲ ಮರುಪಾವತಿ ಮಾಡಲಾಗದೆ ಒದ್ದಾಡುತ್ತಾನೆ. ಕೊನೆಗೆ ದಾರಿ ಕಾಣದೆ ತನ್ನ ಕುಟುಂಬವನ್ನು ಅನಾಥವನ್ನಾಗಿಸಿ ಆತ್ಮಹತ್ಯೆಗೆ ಶರಣಾಗುತ್ತಾನೆ.
ರೈತರ ಆತ್ಮಹತ್ಯೆಗೆ ಶರಣಾಗುತ್ತಿರುವ ಈ ವೇಳೆಯಲ್ಲಿ ರಾಜಕೀಯವನ್ನು ಬದಿಗೊತ್ತಿ ಎಲ್ಲರೂ ರೈತನ ರಕ್ಷಣೆಗೆ ಧಾವಿಸಬೇಕಾಗಿದೆ. ಸರ್ಕಾರ ರೈತನಿಗೆ ಆರ್ಥಿಕ ಸಹಾಯ ನೀಡಬೇಕು, ಕಬ್ಬಿನ ಬಾಕಿ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳಿಂದ ವಸೂಲಿ ಮಾಡಿ ರೈತನಿಗೆ ನೀಡಬೇಕು, ಬೆಂಬಲ ಬೆಲೆ ಘೋಷಿಸಬೇಕು. ಆತ್ಮಹತ್ಯೆಗೆ ಶರಣಾಗದಂತೆ ಸರ್ವ ಪ್ರಯತ್ನಗಳನ್ನೂ ಮಾಡಬೇಕು. ರೈತನ ಆಕ್ರಂದನವನ್ನು ಕೊನೆಗಾಣಿಸಬೇಕು. ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂಬುದನ್ನು ನಮ್ಮನಾಳುವವರು ಅರಿತುಕೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.