ನವದೆಹಲಿ: ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಎಸಿಸಿ) ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಶನಿವಾರ ಹೊಸ ಕಾನೂನಿನ ಬಗ್ಗೆ ಜನರಿಗೆ ತಿಳಿಸಲು ಹೊಸ ಸಂವಹನ ಅಭಿಯಾನವನ್ನು ಆರಂಭಿಸಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹರಡಿದ ಸುಳ್ಳು ಮಾಹಿತಿಯನ್ನು ಈ ಅಭಿಯಾನದ ಮೂಲಕ ಬಯಲು ಮಾಡಲು ನಿರ್ಧರಿಸಿದೆ.
“ಈ ಅಭಿಯಾನದ ಮೂಲಕ ಬಿಜೆಪಿ ಮೂರು ಕೋಟಿ ಕುಟುಂಬಗಳನ್ನು ತಲುಪಲಿದೆ. ಮುಂದಿನ 10 ದಿನಗಳಲ್ಲಿ ನಾವು 250 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲಿದ್ದೇವೆ. ಇದಲ್ಲದೆ, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ಬಗ್ಗೆ ಹರಡಿರುವ ವದಂತಿಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲಿದ್ದೇವೆ ಮತ್ತು ಪ್ರತಿಪಕ್ಷಗಳು ಸೃಷ್ಟಿಸಿದ ಕಟ್ಟು ಕಥೆಯನ್ನು ಬಗ್ಗುಬಡಿಯಲು 1,000 ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದೇವೆ ”ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಹೇಳಿದ್ದಾರೆ.
ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಹಿರಿಯ ಬಿಜೆಪಿ ನಾಯಕರ ಸಭೆಯ ನಂತರ ಯಾದವ್ ಈ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ಮುಖಂಡರು, ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯ ಬಗ್ಗೆ ವಿರೋಧ ಪಕ್ಷಗಳು ಹರಡಿರುವ ಸುಳ್ಳನ್ನು ಜನರಿಗೆ ತಿಳಿಸಲು ಬಿಜೆಪಿ ದೇಶದ ಜನರೊಂದಿಗೆ ಸಂವಹನ ನಡೆಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಯಾದವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷವು ಜನರನ್ನು ದಾರಿತಪ್ಪಿಸುತ್ತಿದೆ ಮತ್ತು ದೇಶಾದ್ಯಂತ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವಂತೆ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ, ಮುಸ್ಲಿಂ, ಬೌದ್ಧ, ಪಾರ್ಸಿ, ಸಿಖ್ ಮತ್ತು ಇತರ ಎಲ್ಲ ಸಮುದಾಯಗಳು ಭಾರತೀಯ ಪ್ರಜೆಗಳು ಮತ್ತು ಅವರೆಲ್ಲರಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಂಬಿದೆ ಎಂದು ಯಾದವ್ ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.