ನವದೆಹಲಿ: ಕಳೆದ ಆರು ತಿಂಗಳಲ್ಲಿ 12,934 ವಿದೇಶಿಯರು ಸೇರಿದಂತೆ ಸುಮಾರು 34,10,219 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ರೂ. 25.12 ಕೋಟಿ ಆದಾಯವನ್ನು ಗಳಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
2019 ರ ಮೇ 15 ರಿಂದ ನವೆಂಬರ್ 15 ರವರೆಗೆ ಪ್ರವಾಸಿಗರ ಅಂಕಿ-ಅಂಶಗಳು ಇದಾಗಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಂಪೂರ್ಣವಾಗಿ ಸ್ಥಿರ ಮತ್ತು ಶಾಂತಿಯುತವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಸರ್ಕಾರ ಹೇಳಿದೆ.
ಮಾಹಿತಿಯ ಪ್ರಕಾರ, ಆಗಸ್ಟ್ 5 ರಿಂದ ನವೆಂಬರ್ 15 ರವರೆಗೆ ಸುಮಾರು 190 ಕಲ್ಲು ತೂರಾಟದ ಪ್ರಕರಣಗಳು ದಾಖಲಾಗಿವೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 765 ಜನರನ್ನು ಬಂಧಿಸಲಾಗಿದೆ. ಜನವರಿಯಿಂದ ಆಗಸ್ಟ್ 4 ರವರೆಗೆ ದಾಖಲಾದ ಒಟ್ಟು ಪ್ರಕರಣಗಳು 361 ಆಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಸೃಷ್ಟಿಸುತ್ತಿರುವ ಶಂಕಿತರನ್ನು ಗುರುತಿಸುವುದು ಸೇರಿದಂತೆ ಕಲ್ಲು ತೂರಾಟದ ಘಟನೆಗಳನ್ನು ತಡೆಯಲು ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ಘಟನೆಗಳನ್ನು ಪ್ರಚೋದಿಸುವಲ್ಲಿ ಹುರಿಯತ್ ಪ್ರತ್ಯೇಕತಾವಾದಿ ಸಂಘಟನೆಯ ಹಲವಾರು ಸದಸ್ಯರು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವಾಲಯ ಪತ್ತೆ ಹಚ್ಚಿದೆ. ಭಯೋತ್ಪಾದಕ ಸಂಘಟನೆಗೆ ಧನಸಹಾಯದಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾಗಿರುವ 18 ಜನರನ್ನು ಎನ್ಐಎ ಈಗಾಗಲೇ ಬಂಧಿಸಿದೆ.
ಆಗಸ್ಟ್ 5 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 950 ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯು ಶೀಘ್ರವಾಗಿ ಪ್ರತಿಕ್ರಿಯೆಯನ್ನು ನೀಡಿದೆ ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.