ಚರಿತ್ರೆಯ ಸತ್ಯಗಳನ್ನು ಮುಚ್ಚಿಟ್ಟು ಆಯ್ದ ತುಣುಕುಗಳನ್ನಷ್ಟೇ ಎತ್ತಿ ತೋರಿಸಬೇಕೆ? ಸುಳ್ಳಿನ ಕಥೆ ಹೆಣೆದು ಜನರನ್ನು ನಂಬಿಸಬೇಕೇ? ಅಥವಾ ಸತ್ಯ ಹೇಗಿದೆಯೋ ಹಾಗೇ ತೋರಿಸಬೇಕೆ? ಇಂಥಹದ್ದೊಂದು ಬಹು ಆಯಾಮದ ಪ್ರಶ್ನೆಯೊಂದಕ್ಕೆ ನಾವು ಮುಖಾಮುಖಿಯಾಗುವ ಸಂದರ್ಭದಲ್ಲಿದ್ದೇವೆ. ಕನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿ ಆದೇಶ ಹೊರಡಿಸುತ್ತಿದ್ದಂತೆ ನಮ್ಮ ನಾಡಿನ ಅನೇಕ ಪ್ರಗತಿಪರ, ಜಾತ್ಯಾತೀತತೆಯ ಮುಖವಾಡ ಧರಿಸಿದ ರಾಜಕಾರಣಿಗಳು, ಚಿಂತಕರು ಗೊಳೋ ಎಂದು ರೋಧಿಸಲಾರಂಬಿಸಿದ್ದಾರೆ. ಅವರ ಪ್ರಕಾರ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ. ಅಭಿವೃದ್ಧಿಯ ಹರಿಕಾರ. ದೂರದೃಷ್ಟಿಯ ನಾಯಕ. ಆದರೆ ಟಿಪ್ಪುಕಾಲದ ದಾಖಲೆಗಳನ್ನೇ ಆಧಾರವಾಗಿಟ್ಟು ನೋಡಿದರೆ ಕಾಣುವುದು ಆತನ ಮತಾಂಧತೆ, ಕ್ರೌರ್ಯ, ಅತ್ಯಾಚಾರ, ಹಿಂಸೆಯ ಚಿತ್ರಣಗಳು. ಟಿಪ್ಪು ಮಾತ್ರವೆಂದಲ್ಲ, ಅಕ್ಬರ್, ಔರಂಗಜೇಬ್, ಹುಮಾಯುನ್, ಬಾಬರ್ , ಘಸ್ನಿ, ಘೋರಿಗಳು, ಬ್ರಿಟಿಷ್, ಫ್ರೆಂಚ್, ಪೋರ್ಚುಗೀಸ್ ಮೊದಲಾದ ಆಕ್ರಮಣಕಾರರುಗಳು ಈ ದೇಶದಲ್ಲಿ ಮಾಡಿದ್ದೇನು? ಅವರನ್ನು ನಮ್ಮ ಚರಿತ್ರೆಯ ಪುಸ್ತಕಗಳು ಚಿತ್ರಿಸಿದ ಬಗೆ ಹೇಗೆ? ಹಾಗಾದರೆ ಸತ್ಯ ಯಾಕೆ ಮರೆಗೆ ಸರಿದು ಹುಸಿ ನಿರೂಪಣೆಗಳು ಹುಟ್ಟಿಕೊಂಡವು? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸಬೇಕಾಗಿದೆ.
ಚರಿತ್ರೆಯ ತಪ್ಪುಗಳಿಗೆ ವರ್ತಮಾನದ ಪೀಳಿಗೆಗಳು ತಲೆತಗ್ಗಿಸಬೇಕಾಗಿಲ್ಲ. ಆದರೆ ಕ್ರೌರ್ಯ ಮೆರೆದು, ಅತ್ಯಾಚಾರ ನಡೆಸಿ ಒಂದು ಇಡೀ ತಲೆಮಾರನ್ನು ಶಾಪಗ್ರಸ್ತರನ್ನಾಗಿಸಿ, ನಾಶ ಮಾಡಿದವರ ಜತೆಗಿನ ವಾರಸುದಾರಿಕೆಯನ್ನು ಕಡಿದುಕೊಳ್ಳುವ ಔದಾರ್ಯವನ್ನು ತೋರಬೇಕು. ಟಿಪ್ಪುವನ್ನು, ಬಾಬರ್ನನ್ನು, ಘಸ್ನಿ-ಘೋರಿಯರನ್ನು, ಪೋರ್ಚುಗೀಸ್- ಇಂಗ್ಲಿಷರನ್ನು ತಮ್ಮ ವಂಶದ ಪೂರ್ವಜರು ಎಂದು ಒಪ್ಪಿಕೊಳ್ಳುವಿರಾದರೆ ಅವರುಗಳ ನೀಚ-ಕ್ರೂರ-ಮತಾಂಧ ನಡವಳಿಕೆಗಳಿಗಾಗಿ ತಲೆತಗ್ಗಿಸಲೇ ಬೇಕಾದೀತು. ಒಂದು ದೇಶದ ವರ್ತಮಾನದ ತಲೆಮಾರುಗಳು, ಆಕ್ರಮಣಕಾರಿಗಳಾಗಿ ಬಂದವರ ಜತೆಗಿನ ಮತೀಯ ಕಾರಣದ ಸಂಬಂಧಗಳಿಗಾಗಿ ಅವರುಗಳು ಮೆರೆದ ಮತಾಂಧತೆಯನ್ನು ಸಮರ್ಥಿಸಬೇಕಾಗಿಲ್ಲ.
ಹೌದು. ಟಿಪ್ಪು ಒಬ್ಬ ಮತಾಂಧನೇ ಆಗಿದ್ದ. ಬಾಬರ್ ಒಬ್ಬ ಭಯೋತ್ಪಾದಕ, ಪರಮ ಅಸಹಿಷ್ಟ್ಣು. ಘಸ್ನಿ-ಘೋರಿಯರು ಮೆರೆದದ್ದು ನೀಚತನ, ದ್ರೋಹವನ್ನೇ. ಅಕ್ಬರ್ ಓರ್ವ ಕಾಮುಕ ಎನ್ನುವುದನ್ನು ಒಪ್ಪಿಕೊಳ್ಳುವುದರಲ್ಲೇ ಚರಿತ್ರೆಗೆ ಗೌರವ ಸಲ್ಲುವುದು. ಆಯೋಧ್ಯೆಯ ರಾಮನ ಮಂದಿರವಿದ್ದ ಪವಿತ್ರ ಸ್ಥಳವನ್ನೇ ಬಾಬರ್ ಆಕ್ರಮಣಕಾರನಾಗಿ ದ್ವಂಸ ಮಾಡಿದನು. ಹುಮಾಯುನ್ ತನ್ನ ದಂಡಯಾತ್ರೆಯ ಉದ್ದಕ್ಕೂ ದೇಗುಲಗಳನ್ನು ದ್ವಂಸ ಮಾಡುತ್ತಾ ಹೋದ, ಬಹಮನಿಗಳಿಂದಲೇ ವಿಜಯ ನಗರದ ಸುಂದರ ದೇವಾಲಯಗಳು ನಾಶವಾಯಿತು ಎಂದು ಒಪ್ಪಿಕೊಳ್ಳುವುದರಿಂದ ಚರಿತ್ರೆಗೆ ಅಪಚಾರವಾಗುತ್ತದೆಯೇ? ಶಾಂತಿಪ್ರಿಯರೆಂದು ಕರೆದುಕೊಂಡವರ ಶಾಂತಿಪ್ರಿಯತೆ ಮೊಘಲ್ ಆಳ್ವಿಕೆಯಲ್ಲೆಲ್ಲೂ ಕಾಣಲಿಲ್ಲ. ಕ್ಷಮಾಗುಣಕ್ಕೆ, ಸೇವಾ ಮನೋಭಾವಕ್ಕೆ ವಾರಸುದಾರರೆನ್ನುವವರ ಈ ಗುಣಗಳು ಬ್ರಿಟಿಷ್, ಪೋರ್ಚುಗೀಸ್ ಕಾಲದಲ್ಲಿ ಲವಲೇಶವೂ ಗೋಚರವಾಗಲಿಲ್ಲ. ಸಾವಿರಾರು ಅಮಾಯಕರನ್ನು ಬಲಿ ತೆಗೆದುಕೊಂಡ ಬ್ರಿಟಿಷ್ ಅಧಿಕಾರಿ ಮೈಕೆಲ್ ಡೈಯರ್ನಲ್ಲಿ ಸಹನಾಮಯಿಯ ಲಕ್ಷಣಗಳಿತ್ತೇ? ದೇವಟ್ಟಿಪರಂಬುವಿನಲ್ಲಿ ಸಾವಿರಾರು ಕೊಡವರನ್ನು ಮೋಸದಿಂದ ಒಟ್ಟು ಸೇರಿಸಿ ಕಗ್ಗೊಲೆಗೈದ ಟಿಪ್ಪುವಿನಲ್ಲಿ ಶಾಂತಿ ಪ್ರಿಯತೆಯ ಗುಣವಿತ್ತೇ? ಹಾಗಾದರೆ ಯಾವುದು ಸತ್ಯ? ಶಾಂತಿ, ಕ್ಷಮೆ ಮೊದಲಾದ ಗುಣಗಳು ತಮ್ಮ ಮತದ ಗುರುತೆನ್ನುವುದಾರೆ ಅದಕ್ಕೆ ಅಪಚಾರವೆಂಬಂತೆ ನಡೆದುಕೊಂಡ ಈ ಪಾತಕಿಗಳೊಂದಿಗೆ ತಮಗೆ ಯಾವುದೇ ವಾರಸುದಾರಿಕೆಯೂ ಇಲ್ಲ ಎನ್ನಬೇಕು ಅಥವಾ ಈ ಮುಖವೇ ಸತ್ಯ, ಉಳಿದದ್ದು ಮುಖವಾಡ ಎಂದು ಒಪ್ಪಿಕೊಳ್ಳಬೇಕಷ್ಟೇ.
ಈ ಸತ್ಯಗಳನ್ನು ಮರೆಮಾಚಿ ಕ್ರೂರಿಗಳನ್ನು ಇತಿಹಾಸದ ಮಹಾಪುರುಷರು ಎಂದರೆ ಅದು ಇತಿಹಾಸಕ್ಕೆ ಅಪಚಾರ. ಸತ್ಯವನ್ನು ಹುದುಗಿಸಿಟ್ಟು ಸುಳ್ಳಿನ ಕಥನಗಳನ್ನು ಕಟ್ಟಿ, ’ಹೀರೋ’ಗಳನ್ನಾಗಿಸುವ ಪ್ರಯತ್ನ ನೀಚತನದ್ದು. ಈ ಸತ್ಯವನ್ನು ಬದಲಾಯಿಸಲಾಗದು ಎಂದಾಗ ಯಾರಾದರೂ ಯಾಕಾದರೂ ಹೆಗಲು ಕೊಡಬೇಕು? ಚರಿತ್ರೆಯ ನಿರೂಪಣೆ, ಬೋಧನೆ ಎಂದರೆ ಅದೊಂದು ಆತ್ಮಾವಲೋಕನ. ನಿಕಷಕ್ಕೆ ಒಡ್ಡಿಕೊಳ್ಳುವ ಕ್ರಿಯೆ. ಹೀಗೆ ಹೊರಟಾಗ ಅಲ್ಲಿ ಕಾಣುವ ಸಂಗತಿಗಳಿಗೆ ಬೆನ್ನು ಹಾಕಲಾಗದು. ಒಪ್ಪಿಕೊಳ್ಳುವ ದೈರ್ಯವನ್ನು ತೋರಲೇ ಬೇಕು. ಕೇವಲ ತೋರ್ಪಡಿಕೆಗಾಗಿ ಅಲ್ಲ. ಪ್ರಾಂಜಲವಾಗಿ ಒಪ್ಪಿಕೊಳ್ಳಲೇ ಬೇಕು. ತೀವ್ರವಾದ ಮಥನಕ್ಕೆ ಇಳಿದಾಗ ಅಮೃತ ಬರುವುದು ಖಚಿತ. ಆದರೆ ಅದಕ್ಕಿಂತ ಮೊದಲು ಅನಿವಾರ್ಯವಾಗಿ ಹೊರಹೊಮ್ಮುವ ಹಾಲಾಹಲಕ್ಕೂ ಕೈಯೊಡ್ಡಿ ಜೀರ್ಣಿಸಿಕೊಳ್ಳುವ ವಿಷಕಂಠರೂ ಆಗಲೇ ಬೇಕು. ಅದು ಜೀರ್ಣವಾಗದಿದ್ದರೆ ಲೋಕಕ್ಕೆ ಅಪಾಯ. ಅಮೃತದ ಬಯಕೆ ಹಾಲಾಹಲದ ಭಯಕ್ಕೆ ಬತ್ತಿಹೋಗಬಾರದು.
ನಮ್ಮ ವರ್ತಮಾನದ ಪೀಳಿಗೆಗಳಿಗೆ ನಮ್ಮ ನೈಜವಾದ ಇತಿಹಾಸವನ್ನು ತಿಳಿಸಲೇಬೇಕು. ಆ ಇತಿಹಾಸದಲ್ಲಿ ನಮ್ಮ ಮೇಲೆ ದಂಡೆತ್ತಿ ಬಂದವರು ಮೆರೆದ ಕ್ರೌರ್ಯದ ಚಿತ್ರಣವನ್ನೂ, ಅವರನ್ನು ಎದುರಿಸಿ ನಿಂತ ನಮ್ಮವರ ಕ್ಷಾತ್ರ ಪರಂಪರೆಯನ್ನೂ ತಿಳಿಸಲೇಬೇಕು. ನಮ್ಮದು ಸೊಲಿನ ಇತಿಹಾಸವಲ್ಲ, ಅದು ನಿರಂತರ ಸಂಘರ್ಷದ ಇತಿಹಾಸ. ನಮ್ಮ ಪೂರ್ವಜರು ಯಾವತ್ತೂ ಗುಲಾಮಿತಕ್ಕೆ ಹೆಗಲು ಕೊಟ್ಟು ನಿಶ್ಚಿಂತರಾಗಿ ಬಾಳಿದವರಲ್ಲ. ಕೆಲವೊಮ್ಮೆ ವ್ಯಕ್ತಿಗತವಾಗಿ, ಮತ್ತೆ ಕೆಲವೊಮ್ಮೆ ಸಂಘಟಿತರಾಗಿ ಸವಾಲೊಡ್ಡಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸ್ವಾಭಿಮಾನ ಶೂನ್ಯರಾಗಿ ಬದುಕುವುದಕ್ಕಿಂತ ಹೋರಾಡುತ್ತಲೇ ಬರುವ ಸಾವಿಗೆ ಕೊರಳೊಡ್ಡಿದ್ದಾರೆ, ಎದೆ ಕೊಟ್ಟಿದ್ದಾರೆ. ಆದರೆ ನಮ್ಮವರ ಶೌರ್ಯ ಎಂದೂ ಬತ್ತಿ ಹೋಗಲಿಲ್ಲ. ಹಾಲ್ಗೆನ್ನೆಯ ಕೌಮಾರ್ಯದ ವಯೋಮಾನದಿಂದ ತೊಡಗಿ, ಸುಕ್ಕು ಚರ್ಮದ ವಯೋವೃದ್ದರವರೆಗೆ ಈ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡವರಿದ್ದಾರೆ. ಮಹಾರಾಣಾ ಪ್ರತಾಪನ ಶೌರ್ಯ, ಶಿವಾಜಿಯ ಚಾಣಕ್ಷತನ, ಕೃಷ್ಣದೇವರಾಯನ ಕಾಲದ ವೈಭವ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವರ ಪರಾಕ್ರಮದ ಹೋರಾಟದ ಸತ್ಯವನ್ನು ಮರೆಮಾಚಿದರೆ ಹೇಗೆ? ಮರೆಮಾಚಿದರೆ ವರ್ತಮಾನದ ಪೀಳಿಗೆಗಳಿಗೆ ತಮ್ಮ ಪೂರ್ವಜರ ಸಾಹಸ-ಬಲಿದಾನಗಳು ತಿಳಿಯುವುದಾದರೂ ಹೇಗೆ?
ನೂರಾರು ವರ್ಷಗಳ ಹಿಂದೆ ನಡೆದ ಘಟನೆಗಳನ್ನೇ ಈಗ ಗೋರಿ ಅಗೆದು ಪೋಸ್ಟ್ಮಾರ್ಟಂ ಮಾಡಬೇಕೇ? ಎಂದುಕೊಳ್ಳುವವರಿದ್ದಾರೆ. ಸತ್ಯದ ಅನ್ವೇಷಿಗೆ ನೂರಾರು ವರ್ಷಗಳೇನು ಮಹಾ? ಹೊರತೆಗೆದ ಹೊಸ ಸತ್ಯಗಳನ್ನು ಅಥವಾ ಮರೆಮಾಚಲಾಗಿದ್ದ ಸತ್ಯವನ್ನು ಪ್ರಕಟಪಡಿಸಿದಾಗ ಅದನ್ನು ಒಪ್ಪಿಕೊಳ್ಳಲೇ ಬೇಕಲ್ಲ? ನಮಗೆ ಪ್ರಿಯವಲ್ಲದೆ ಇರಬಹುದು. ಪ್ರಿಯವಲ್ಲ ಎನ್ನುವ ಕಾರಣಕ್ಕಾಗಿ ಮುಚ್ಚಿಡಬೇಕೆ? ಅದರ ಜಾಗದಲ್ಲಿ ಪ್ರಿಯವಾಗುವಂಥ ಸುಳ್ಳುಗಳನ್ನೇ ಸತ್ಯವೆಂದು ಪ್ರತಿಪಾದಿಸಬೇಕೇ?
ನಮ್ಮ ದೇಶದ ಬಹುಮುಖ್ಯರಾದ ಇತಿಹಾಸಕಾರರು ಈ ದೇಶದ ಪೂರ್ವ ಪರಂಪರೆ, ಈ ನೆಲದ ಸಾಧನೆ- ಸಾಹಸಗಳ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲದವರಂತಿದ್ದಾರೆ. ಅಭಿಮಾನ ಮಾತ್ರವಲ್ಲ, ಅವುಗಳಲ್ಲೆದರಲ್ಲೂ ಹುಳುಕನ್ನು ಕಾಣುವ ಇವರಿಗೆ, ಪರಕೀಯರಿಂದ ನಡೆದ ದಾಳಿ- ಆಕ್ರಮಣಗಳೆಲ್ಲಾ ಶೌರ್ಯ- ಸಾಹಸದ ಸಾಧನೆಗಳಾಗಿಯೂ, ಅವರು ನಡೆಸಿದ ದರ್ಪ ದಬ್ಬಾಳಿಕೆಗಳು ಸುಧಾರಣಾವಾದಿ ಆಶಯದ ಕ್ರಿಯೆಗಳಾಗಿಯೂ ಕಾಣಿಸುತ್ತದೆ. ಸ್ವತಃ ಬಾಬರ್, ಘಸ್ನಿ-ಘೋರಿಯರು, ಟಿಪ್ಪು- ಹುಮಾಯುನರು, ಬ್ರಿಟಿಷ್- ಪೋರ್ಚುಗೀಸ್ ಅಧಿಕಾರಿಗಳು ತಾವೆ ಬರೆದು, ಬರೆಯಿಸಿ ದಾಖಲುಗೊಳಿಸಿದ ತಮ್ಮ ಕ್ರೌರ್ಯ ಮತಾಂಧತೆಯ ಅಟ್ಟಹಾಸಗಳನ್ನು, ಬರೆದಿಟ್ಟ ಲೆಖ್ಖದ ವರದಿಗಳನ್ನು ನಮ್ಮ ಇತಿಹಾಸಕಾರರು ನಯವಾಗಿಯೇ ಮುಚ್ಚಿಟ್ಟ ಅಪರಾಧಕ್ಕೆ ಏನೆಂದು ಹೇಳುವುದು? ನೈಜ ಇತಿಹಾಸಕಾರರಾದರೆ ಯಾವ ಪೂರ್ವಾಗ್ರಹಗಳಿಗೂ ಒಳಗಾಗದೆ , ಅಂದಿನ ಆಕ್ರಮಣಕಾರಿಗಳು ತಮಗೆ ತಾವೆ ಬರೆದುಕೊಂಡ ದಾಖಲೆಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿಡಬೇಕಾಗಿತ್ತು. ಆದರೆ ಹಾಗಾಗಿದೆಯೇ? ಎನ್.ಸಿ.ಇ.ಆರ್.ಟಿ, ವಿಶ್ವವಿದ್ಯಾಲಯಗಳಲ್ಲಿ ಕುಳಿತುಕೊಂಡು ಅಕಾಡೆಮಿಕ್ ರೂಪುರೇಷೆಗಳನ್ನು ನಿರ್ಣಯಿಸುವ ಮಹಾನ್ ಇತಿಹಾಸಕಾರರೆಷ್ಟು ಜನ ಇಂತಹ ದಾಖಲೆಗಳನ್ನು ಪರಿಶೀಲಿಸಿ ಓದುಗರ ಮುಂದಿರಿಸಿದ್ದಾರೆ? ತಾವು ಬರೆಯುವ ಇತಿಹಾಸ ಗ್ರಂಥಗಳಲ್ಲಿ, ಪಠ್ಯ ನಿರೂಪಣೆಗಳಲ್ಲಿ ದಾಖಲೆ, ಪರಾಮರ್ಶನಗಳಾಗಿ ನೀಡಿದ್ದಾರೆ? ಎಂದು ಹುಡುಕಿದರೆ ತೀವ್ರ ನಿರಾಶೆಯಾದೀತು.
ಇಂದಿನನವರೆಗೂ ಭಾರತದ ಮೇಲೆ ದಾಳಿ ಮಾಡಿದ ಈ ಮತೀಯವಾದಿ ಗುಂಪುಗಳ ನೈಜ ಮನಸ್ಥಿತಿಯನ್ನು, ಅದರ ಹಿಂದಿನ ಕಾರಣಗಳನ್ನು ಸರಿಯಾಗಿ ವಿವರಿಸಲಾಗಿಲ್ಲ. ಅದರ ಬದಲಿಗೆ ಇಲ್ಲಿ ಎಷ್ಟು ಬಾರಿ ದಂಡೆತ್ತಿ ಬಂದರು? ಯಾವ ರಾಜ ಎದುರಿಸಿದ? ಸೋತ? ಸೋತ ಬಳಿಕ ಎಷ್ಟು ಸಂಪತ್ತನ್ನು ದೋಚಲಾಯಿತು ಎನ್ನುವ ನಿರೂಪಣೆಯಲ್ಲಿ ಆಕ್ರಮಣಕಾರನೇ ನಿಜವಾದ ಸಾಹಸಿ ಎನ್ನುವಂಥ ಪರಾಕ್ರಮದ ಭಾಷೆ !! ಸಂಪತ್ತು ದೋಚಿದರು ಎನ್ನುವಲ್ಲಿಗೆ ಮೇಲು ಮೇಲಿನ ನಿರೂಪಣೆ ಮುಕ್ತಾಯವಾಗುತ್ತದೆ. ಅದರ ಹೊರತಾಗಿ ಹೀಗೆ ಆಕ್ರಮಣಕಾರರಾಗಿ ಬಂದವರು ಇಲ್ಲಿ ನಡೆದುಕೊಂಡ ರೀತಿ, ತಮ್ಮ ಮತೀಯ ನಂಬಿಕೆಯ ಕಾರಣಕ್ಕಾಗಿಯೇ , ಅವಿಶ್ವಾಸಿ ಕಾಫೀರರನ್ನು ಶಿಕ್ಷಿಸುವ ಸಲುವಾಗಿಯೇ ಇಲ್ಲಿನ ಧಾರ್ಮಿಕ ಕೇಂದ್ರಗಳನ್ನು ಪುಡಿಗಟ್ಟಿದ ಬಗೆ, ಗೆದ್ದ ರಾಜ್ಯದ ರಾಜನ ಅರಮನೆಯಿಂದ ತೊಡಗಿ ಬೀದಿ ಬೀದಿಗಳಲ್ಲಿ ಕಂಡ ಸ್ತ್ರೀಯರನ್ನು ತಮ್ಮ ಅಂತಃಪುರಕ್ಕೆ ಎಳೆದೊಯ್ದ ಅತ್ಯಾಚಾರವೆಸಗಿ ದಾಸ್ಯಕ್ಕಿರಿಸಿಕೊಂಡ ರೀತಿ, ಮುತ್ತಿಗೆ ಹಾಕಿ ಗೆದ್ದ ಸೈನಿಕರು ಸೆರೆಹಿಡಿದ ಹೆಣ್ಣುಮಕ್ಕಳ ಸ್ಥಿತಿ, ಊರಿಗೆ ಹಚ್ಚಿದ ಬೆಂಕಿಯಲ್ಲಿ ಸುಟ್ಟು ಹೋದವರು, ಗುರುಕುಲಗಳಿಂದ ತೊಡಗಿ ವಿಶ್ವವಿದ್ಯಾಲಯಗಳವರೆಗೆ ಜ್ಞಾನ ಪ್ರಸರಣದ ಕೇಂದ್ರಗಳಿಗೆ ಹಚ್ಚಿದ ಬೆಂಕಿ, ಪಾಠ ಹೇಳುತ್ತಿದ್ದ ಪಂಡಿತರ ಕತ್ತರಿಸಿದ ರುಂಡಗಳು ಹೇಳುವ ಕಥೆಯೊಂದಿದೆ. ಆದರೆ ಆ ಎಲ್ಲಾ ಕಥೆಗಳನ್ನು ಜಾತ್ಯಾತೀತತೆಯ ಹೆಸರಿನಲ್ಲಿ ಮರೆಮಾಚಲಾಗಿದೆ !! ಈ ಕಥೆಗಳು ಯಾರಿಗೋ ನೋವುಂಟುಮಾಡುತ್ತದೆ ಎನ್ನುವ ಹುಸಿ ಭಯದಿಂದ ನಾವು ಟೊಳ್ಳು ಸೌಧಗಳನ್ನು ಕಟ್ಟುತ್ತಾ ಬಂದೆವು. ಈ ಸುಳ್ಳುಗಳು ಹೇಗಿದೆ ಎಂದರೆ ಸೋತ ರಾಜನ ಸಹೋದರಿಯರನ್ನು ಗೆದ್ದ ರಾಜನ ಜತೆಗೆ ವಿಹಾಹ ಸಂಬಂಧ ಏರ್ಪಡಿಸಿ ಸಂಬಂಧ ಬೆಳೆಸಲಾಯಿತು! ದೇಗುಲಗಳ ಗೋಡೆಗಳಲ್ಲಿ, ಕಟ್ಟಿದ ಮಸೀದಿಗಳ ಗೋಡೆಗಳಲ್ಲಿ ಮೊಘಲ್ ಶೈಲಿಯ, ಪರ್ಷಿಯನ್ ರೀತಿಯ ಕಲಾತ್ಮಕ ಕುಸುರಿ ಕಲೆಗಳನ್ನು, ಚಿತ್ರಗಳನ್ನು ರಚಿಸಲಾಯಿತು !! ರೇಷ್ಮೆಯ ವಸ್ತುಗಳಲ್ಲಿ ನವಿರಾದ ಕಸೂತಿಯ ಕಲೆಗಳನ್ನು ಇಲ್ಲಿ ಪ್ರಚುರಪಡಿಸಿದರು, ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ನಾಂದಿಹಾಡಿದರು, ಸುಂದರ ನಗರಗಳನ್ನು ಕಟ್ಟಿದರು… ಇವೇ ಮೊದಲಾದ ಮೆಚ್ಚುಗೆಯನ್ನು ಸುಳ್ಳು ಸುಳ್ಳಾಗಿಯೇ ಪ್ರಚಾರ ಮಾಡಿಕೊಂಡು ಬರಲಾಯಿತು. ಇಂತಹ ಪ್ರಯತ್ನದ ಹಿಂದಿದ್ದವರು ಜಾತ್ಯಾತೀತತೆಯ ಮುಖವಾಡ ಧರಿಸಿದ ಮಹಾನ್ ಇತಿಹಾಸಕಾರರು !
ಇತಿಹಾಸವನ್ನು ನಿಜವಾಗಿಯೂ ಶೋಧಿಸುವುದೇ ಆದರೆ, ಇತಿಹಾಸವನ್ನು ವರ್ತಮಾನದ ಪೀಳಿಗೆಗಳಿಗೆ ಬೋಧಿಸುವುದೇ ಆದರೆ ಅದನ್ನು ಸತ್ಯಕ್ಕೆ ಕವಿದ ಪೊರೆಗಳನ್ನು ಕಳಚುವಲ್ಲಿಂದಲೇ ಆರಂಭಿಸೋಣ. ಅದು ಯಾರಿಗೋ ಅವಮಾನಿಸಲೋ, ಯಾರನ್ನೋ ದ್ವೇಷಿಸಲೋ ಅಲ್ಲ. ನಮ್ಮನ್ನು ನಾವು ಕಂಡುಕೊಳ್ಳುವುದಕ್ಕಾಗಿ ನಡೆಯಬೇಕಾದ ಪ್ರಯತ್ನ. ಇದರ ಹೊರತಾಗಿ ನಮ್ಮ ಇಂದಿನ ಪೀಳಿಗೆಗೆ ದೇಶದ ಪರಂಪರೆ, ವಾರಸಿಕೆಯ ಕುರಿತ ನಿಜದ ಅರಿವಿಗೆ ದಾರಿಗಳಿಲ್ಲ.
✍ ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಸಹಾಯಕ ಪ್ರಾಧ್ಯಾಪಕ
ವಿವೇಕಾನಂದ ಕಾಲೇಜು, ಪುತ್ತೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.