ಶ್ವಾನಗಳು ಮಾನವನ ಆತ್ಮೀಯ ಗೆಳೆಯನೆಂಬುದು ಸಾರ್ವಕಾಲಿಕ ಸತ್ಯ. ತನ್ನ ಮಾಲೀಕ ಕಷ್ಟದಲ್ಲಿದ್ದಾನೆ ಎಂದು ತಿಳಿದ ಕೂಡಲೇ ಶ್ವಾನ ರಕ್ಷಣೆಗೆ ಧಾವಿಸುತ್ತದೆ, ಕಷ್ಟಕರವಾದ ಕಾರ್ಯಾಚರಣೆಯ ಸಂದರ್ಭದಲ್ಲೂ ವಿಶೇಷ ಪಡೆಗಳಿಗೆ ಶ್ವಾನಗಳು ಸಾಥ್ ನೀಡುತ್ತವೆ. ಶಸ್ತ್ರಾಸ್ತ್ರ ಪಡೆಗಳಲ್ಲಿ, ಪೊಲೀಸ್ ಪಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶ್ವಾನಗಳಿವೆ. ಎಲ್ಲಾ ರೀತಿಯ ಕಾರ್ಯಾಚರಣೆಯಲ್ಲೂ ಇದು ಭಾಗಿಯಾಗುತ್ತದೆ.
ಕಳೆದ ಹಲವಾರು ವರ್ಷಗಳಲ್ಲಿ, ಡ್ರಗ್ಸ್ ಮತ್ತು ಸ್ಫೋಟಕಗಳನ್ನು ಹುಡುಕಲು, ಕಾಣೆಯಾದವರನ್ನು ಪತ್ತೆ ಹಚ್ಚಲು, ಅಪರಾಧದ ದೃಶ್ಯ ಸಾಕ್ಷ್ಯಗಳನ್ನು ಕಂಡುಹಿಡಿಯಲು ಮತ್ತು ತಮ್ಮ ಎದುರಾಳಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ನಾಯಿಗಳನ್ನು ಹಲವಾರು ಕಾನೂನು ಸಂಸ್ಥೆ ಮತ್ತು ಅರೆಸೈನಿಕ ದಳಗಳಲ್ಲಿ ಸೇರಿಸಿಕೊಳ್ಳಲಾಗಿದೆ.
ಬೆಂಗಳೂರಿನ ತಾರಲು ಗ್ರಾಮದಲ್ಲಿರುವ ಸಿಆರ್ಪಿಎಫ್ನ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಶಾಲೆಯಲ್ಲಿ, ಬೆಲ್ಜಿಯಂ ಶೆಫರ್ಡ್, ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ಸ್ನಂತಹ ವಿವಿಧ ತಳಿಗಳ ನಾಯಿಗಳು ಶ್ವಾನ ದಳಕ್ಕೆ ಸೇರ್ಪಡೆಗೊಳ್ಳುವ ಸಲುವಾಗಿ ಕಠೋರ ತರಬೇತಿಗಳಿಗೆ ಒಳಪಡುತ್ತಿರುತ್ತವೆ.
ಬೆಲ್ಜಿಯಂ ಶೆಫರ್ಡ್ ಹೆಸರೇ ಸೂಚಿಸುವಂತೆ ಬೆಲ್ಜಿಯಂ ಮೂಲದ ಶ್ವಾನಗಳಾಗಿವೆ. ಅವುಗಳು ಒರಟುತನ, ಆಕ್ರಮಣಶೀಲತೆ ಮತ್ತು ಚುರುಕುತನಕ್ಕೆ ಹೆಸರುವಾಸಿಯಾಗಿವೆ. ಈ ತಳಿಗಳು ಪ್ರಸ್ತುತ ಪೊಲೀಸ್ ಮತ್ತು ಕಾನೂನು ಸಂಸ್ಥೆಗಳ ಹಾಟ್ ಫೇವರೆಟ್ ಆಗಿ ಹೊರಹೊಮ್ಮಿದೆ.
ಈ ತಳಿಗಳು ಒರಟಾದ ದೇಹವನ್ನು ಹೊಂದಿರುವುದರಿಂದ ಮತ್ತು ಯಾವುದೇ ಕಾರ್ಯಾಚರಣೆಯಲ್ಲಿ ಮೈಲುಗಳವರೆಗೆ ನಡೆಯುವ ಸಾಮರ್ಥ್ಯವನ್ನು ಹೊಂದಿರುವ ಕಾರಣದಿಂದ ಸಿಆರ್ಪಿಎಫ್ ಇವುಗಳನ್ನು ಹೆಚ್ಚಾಗಿ ನಿಯೋಜನೆಗೊಳಿಸುತ್ತದೆ. “ಯಾವುದೇ ಕಾರ್ಯಾಚರಣೆಯ ವೇಳೆ ಆಪರೇಷನ್ ಪಾಯಿಂಟ್ ತಲುಪಲು ಯೋಧರು ಮೈಲುಗಟ್ಟಲೆ ನಡೆಯಬೇಕಾಗುತ್ತದೆ. ಈ ತಳಿಗಳು ಮಾತ್ರ ಅವರೊಂದಿಗೆ ಮೈಲುಗಟ್ಟಲೆ ಹೆಜ್ಜೆ ಹಾಕುವ ಸಾಮರ್ಥ್ಯವನ್ನು ಹೊಂದಿವೆ” ಎಂದು ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಕೇಂದ್ರದ ಹಿರಿಯ ಉಪಾಧ್ಯಕ್ಷ ಪಿ. ಮನೋಜ್ ಕುಮಾರ್ ಅವರು ಹೇಳುತ್ತಾರೆ.
ಶ್ವಾನಗಳಿಗೆ ನೀಡಲಾಗುವ ತರಬೇತಿಯ ಬಗ್ಗೆ ಮಾಹಿತಿ ನೀಡಿದ ಅವರು, “ಗುರುತು ಪತ್ತೆ, ಆಕ್ರಮಣ ಮತ್ತು ಟ್ರ್ಯಾಕಿಂಗ್ನತ್ತ ಹೆಚ್ಚು ಗಮನ ಹರಿಸಿ ನಾವು ಶ್ವಾನಗಳಿಗೆ ತರಬೇತಿಯನ್ನು ನೀಡುತ್ತೇವೆ. ಶಿಸ್ತು ಕಲಿಸುವಿಕೆ ಕೂಡ ತರಬೇತಿಯ ಬಹುಮುಖ್ಯ ಭಾಗ. ಗುರುತಿನ ಪತ್ತೆ, ಕಾಲಾಳುಪಡೆ ಗಸ್ತು ಮತ್ತು ಆಕ್ರಮಣ ತರಬೇತಿ ಕೂಡ ಇದೆ. ಇದರಲ್ಲಿ ನಾವು ಎರಡು ವಿಭಿನ್ನ ರೀತಿಯ ತರಬೇತಿ ಮಾಡ್ಯೂಲ್ಗಳನ್ನು ಹೊಂದಿದ್ದೇವೆ. ನಾವು ನಮ್ಮ ಶ್ವಾನಗಳನ್ನು ಬಹುಕಾರ್ಯಕ್ಕಾಗಿ ಬಳಸುತ್ತಿದ್ದೇವೆ. ಜೈಲುಗಳಲ್ಲಿ ಮಾದಕ ದ್ರವ್ಯ ಅಥವಾ ಮೊಬೈಲ್ ಫೋನ್ಗಳಂತಹ ವಸ್ತುಗಳನ್ನು ಪತ್ತೆ ಮಾಡಲು ಕೂಡ ನಾವು ಶ್ವಾನಕ್ಕೆ ತರಬೇತಿ ನೀಡುತ್ತೇವೆ” ಎಂದಿದ್ದಾರೆ.
“ನಾವು ಸಕಾರಾತ್ಮಕ ವಿಧಾನದ ಬಲವರ್ಧನೆ ತರಬೇತಿಯನ್ನು ಬಳಸುತ್ತೇವೆ, ಅದು ನಾವು ಹೊಂದಿರುವ ಅತ್ಯಂತ ಆದ್ಯತೆಯ ಶ್ವಾನ ತರಬೇತಿ ವಿಧಾನಗಳಲ್ಲಿ ಒಂದಾಗಿದೆ. ಇತರ ಶ್ವಾನ ಶಾಲೆಗಳಲ್ಲಿ ಹೆಚ್ಚಾಗಿ ಶಿಕ್ಷೆ ಮತ್ತು ಆಹಾರ ನೀಡದೇ ಇರುವ ಮೂಲಕ ಶಿಕ್ಷೆಯನ್ನು ನೀಡಲಾಗುತ್ತದೆ. ನಾವು ಶ್ವಾನದ ಸಹಜ ಪ್ರವೃತ್ತಿಯಾದ ಬೇಟೆಯಾಡುವಿಕೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತೇವೆ. ಯಾವುದೇ ಉತ್ತಮ ಕೆಲಸ ಮಾಡಿದರೆ ಶ್ವಾನಕ್ಕೆ ಬಹುಮಾನ ನೀಡುವ ಪದ್ಧತಿಯನ್ನೂ ನಾವು ರೂಢಿಸಿಕೊಂಡಿದ್ದೇವೆ. ಪ್ರತಿ ನಾಯಿಯೂ ಸಿದ್ಧ ಕೆಲಸಗಾರ “ಎನ್ನುತ್ತಾರೆ.
ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ಗಳಿಗೂ ತರಬೇತಿ ನೀಡುತ್ತಿದ್ದೇವೆ ಎಂದಿರುವ ಅವರು, ಈ ನಾಯಿಗಳಿಗೆ ಹೆಚ್ಚು ದೂರ ನಡೆಯುವ ಸಾಮರ್ಥ್ಯ ಇಲ್ಲ ಹೀಗಾಗಿ ಅವುಗಳನ್ನು ನಡೆಯಬೇಕಾಗಿಲ್ಲದ ಕ್ಷೇತ್ರಗಳು ಹೆಚ್ಚಾಗಿ ನಿಯೋಜನೆಗೊಳಿಸುತ್ತವೆ ಎನ್ನುತ್ತಾರೆ.
ಸಿಆರ್ಪಿಎಫ್ ಶ್ವಾನ ಶಾಲೆಯನ್ನು 2011 ರ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು ಮತ್ತು ಇಲ್ಲಿಯವರೆಗೆ 553 ನಾಯಿಗಳಿಗೆ ತರಬೇತಿ ನೀಡಿ ವಿವಿಧ ಕ್ಷೇತ್ರದಲ್ಲಿ ನಿಯೋಜಿಸಲಾಗಿದೆ.
ಬೆಲ್ಜಿಯಂ ಶೆಫರ್ಡ್ ಯಾಕೆ ಸಿಆರ್ಪಿಎಫ್ ಪಡೆಯ ಆದ್ಯತೆಯಾಗಿದೆ ಎಂಬುದನ್ನು ಸಿಆರ್ಪಿಎಫ್ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಶಾಲೆಯ ಪ್ರಾಂಶುಪಾಲ ಡಿಐಜಿ ಎಂಎಲ್ ರವೀಂದ್ರ ಕೂಡ ವಿವರಿಸಿದ್ದಾರೆ. “2011 ರವರೆಗೆ, ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ಗಳು ನಮ್ಮ ಆದ್ಯತೆಯಾಗಿದ್ದವು. ಆದರೆ ಎರಡು ತಳಿಗಳ ಸಮಸ್ಯೆ ಎಂದರೆ ಅವುಗಳು ತುಂಬಾ ಒರಟಾಗಿಲ್ಲ. ನಾಲ್ಕರಿಂದ ಐದು ಕಿಲೋಮೀಟರ್ ನಡೆದ ನಂತರ ಅವುಗಳು ದಣಿಯುತ್ತವೆ. ಹೀಗಾಗಿ ನಾವು ಒರಟಾದ ಮತ್ತು ಹೆಚ್ಚು ನಡೆಯಬಲ್ಲ ಶ್ವಾನ ತಳಿಯನ್ನು ನಿಯೋಜಿಸಿದೆವು, ಅದುವೇ ಬೆಲ್ಜಿಯಂ ಶೆಫರ್ಡ್. ಈ ತಳಿಗಳು 20 ರಿಂದ 30 ಕಿಲೋಮೀಟರ್ವರೆಗೆ ನಡೆಯಬಲ್ಲದು. ಆರಂಭದಲ್ಲಿ, ನಾವು ಬೆಲ್ಜಿಯಂನಿಂದ 15 ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ಆಮದು ಮಾಡಿಕೊಂಡು ತರಬೇತಿ ಮತ್ತು ಸಂತಾನೋತ್ಪತ್ತಿ ಪ್ರಾರಂಭಿಸಿದೆವು “ಎಂದಿದ್ದಾರೆ.
ಬೆಲ್ಜಿಯಂ ಶೆಫರ್ಡ್ ಪ್ರತಿಭಾನ್ವಿತ ಮತ್ತು ಬಹುಕಾರ್ಯಕ್ಕೆ ಹೊಂದಿಕೊಳ್ಳಬಲ್ಲದು, ಅದು ಸ್ನಿಫಿಂಗ್, ಟ್ರ್ಯಾಕಿಂಗ್ ಅಥವಾ ಆಕ್ರಮಣ ಕಾರ್ಯಾಚರಣೆಗಳಿಗೆ ಹೇಳಿ ಮಾಡಿಸಿದ ಶ್ವಾನವಾಗಿದೆ.
“ನಾವು ಶ್ವಾನಗಳಿಗಾಗಿ ಜಂಗಲ್ ಕ್ಯಾಂಪ್ಗಳನ್ನು ನಡೆಸುತ್ತೇವೆ. ಇದನ್ನು ನಾಲ್ಕು ವಾರಗಳವರೆಗೆ ನಡೆಸಲಾಗುತ್ತದೆ. ಅವು ಭೌಗೋಳಿಕ ಭೂಪ್ರದೇಶ ಮತ್ತು ನಿಜವಾದ ಯುದ್ಧ ಭೂಪ್ರದೇಶವನ್ನು ತಿಳಿದುಕೊಳ್ಳಬೇಕಾಗುತ್ತದೆ, ಇದಕ್ಕಾಗಿ ಜಂಗಲ್ ಕ್ಯಾಂಪ್ ನಡೆಸುತ್ತೇವೆ. ಈ ಸಂದರ್ಭದಲ್ಲಿ ನಾಯಿಗಳು ತಮ್ಮ ಹ್ಯಾಂಡ್ಲರ್ಗಳೊಂದಿಗೆ ಡೇರೆಗಳಲ್ಲಿ ಉಳಿಯುತ್ತವೆ. ಅವರು ತಿನ್ನುವ ಆಹಾರವನ್ನೇ ತಿನ್ನುತ್ತದೆ. ಕಾನ್ಸ್ಟೆಬಲ್ಗಳು ಹೋದ ಕಡೆ ಇವುಗಳೂ ಹೋಗುತ್ತವೆ ” ಎಂದು ರವೀಂದ್ರ ಹೇಳುತ್ತಾರೆ.
ವಿಶೇಷವೆಂದರೆ, 2011 ರ ಕಾರ್ಯಾಚರಣೆಗೆ ಯುಎಸ್ ನೇವಿ ಸೀಲ್ಸ್ ಬಳಸಿದ ತಳಿ ಕೂಡ ಬೆಲ್ಜಿಯಂ ಶೆಫರ್ಡ್. ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅನ್ನು ಈ ಕಾರ್ಯಾಚರಣೆಯ ವೇಳೆ ಕೊಂದು ಮುಗಿಸಲಾಗಿತ್ತು.
ಇತ್ತೀಚೆಗೆ, ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲೂ ಇದೇ ತಳಿಯ ನಾಯಿಗಳು ಪ್ರಮುಖ ಪಾತ್ರ ವಹಿಸಿದೆ. ‘ಕಾನನ್’ ಹೆಸರಿನ ನಾಯಿ ಐಸಿಸ್ ನಾಯಕ ಅಬೂಬಕರ್ ಅಲ್-ಬಾಗ್ದಾದಿಯನ್ನು ಪತ್ತೆ ಹಚ್ಚಿತ್ತು, ಅದರ ನಂತರ ಭಯೋತ್ಪಾದಕ ತನ್ನನ್ನೇ ತಾನು ಸ್ಪೋಟಿಸಿ ಆತ್ಮಹತ್ಯೆ ಮಾಡಿಕೊಂಡ.
ಸ್ಫೋಟದ ಪರಿಣಾಮವಾಗಿ ‘ಕಾನನ್’ ಗಾಯಗೊಂಡಿತ್ತು, ಪ್ರಸ್ತುತ ಅದು ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಪೊಲೀಸರ ಕಾನೂನು ಸುವ್ಯವಸ್ಥೆ ಪಾಲನೆಗೆ, ಶಸ್ತ್ರಾಸ್ತ್ರ ಪಡೆಗಳ ಕಾರ್ಯಾಚರಣೆಗೆ, ಮಾದಕ ವಸ್ತುಗಳ ಪತ್ತೆಗೆ ಹೀಗೆ ಎಲ್ಲಾ ಕಾರ್ಯಕ್ಕೂ ಶ್ವಾನಗಳು ಬೇಕು. ಶ್ವಾನ ಗೆಳೆಯ ಮಾತ್ರವಲ್ಲ, ನಮ್ಮ ರಕ್ಷಕನೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.