ಹರಿಯಾಣ ಮತ್ತು ಮಹಾರಾಷ್ಟ್ರಗಳ ಚುನಾವಣಾ ಫಲಿತಾಂಶಗಳೆರಡೂ ಬಿಜೆಪಿಗೆ ಆಘಾತವನ್ನು ನೀಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳು ಅದಕ್ಕೆ ಸಿಕ್ಕಿಲ್ಲ. ಇನ್ನೊಂದೆಡೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದ ಬಾರಿ ಇದ್ದ 42 ರಿಂದ 44 ಕ್ಕೆ ಸುಧಾರಿಸುವಲ್ಲಿ ಯಶಸ್ವಿಯಾಗಿದೆ. ಹರಿಯಾಣದಲ್ಲೂ ಅದು ಮಹತ್ವದ ಚೇತರಿಕೆಯನ್ನು ಕಂಡಿದೆ, 2014 ರಲ್ಲಿ 15 ಸ್ಥಾನಗಳಿಗೆ ಕುಸಿದಿದ್ದ ಅದು, ಈ ಬಾರಿ 31 ಕ್ಕೆ ಏರಿದೆ. ಇದು ಅನೇಕ ರಾಜಕೀಯ ವಿಶ್ಲೇಷಕರನ್ನು ಅಭಿಪ್ರಾಯವನ್ನು ಬುಡಮೇಲು ಮಾಡಿದೆ. ಕಾಂಗ್ರೆಸ್ ಚೇತರಿಕೆಗೆ ಹಲವು ಕಾರಣಗಳಿವೆ, ಅದರಲ್ಲಿ ಒಂದು ಗಾಂಧಿಗಳ ಅನುಪಸ್ಥಿತಿ. ಚುನಾವಣೆ ಘೋಷಣೆಯಾದಾಗಿನಿಂದ ಎರಡೂ ರಾಜ್ಯಗಳಲ್ಲಿ ಗಾಂಧಿಗಳು ಬಿರುಸಿನ ಪ್ರಚಾರವನ್ನು ನಡೆಸಿಲ್ಲ. ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಒಳ್ಳೆಯ ಪ್ರದರ್ಶನ ನೀಡುತ್ತದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ.
ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ಪರಸ್ಪರ ಕಚ್ಚಾಡುತ್ತಿರುವ ಕಾರಣ ಕಾಂಗ್ರೆಸ್ಸಿನ ಹರಿಯಾಣ ಘಟಕವು ಬಣವಾಗಿ ಚದುರಿ ಹೋಗಿದೆ. ರಾಹುಲ್ ಗಾಂಧಿಗೆ ಹತ್ತಿರವಾಗಿದ್ದಾರೆ ಎಂದು ನಂಬಲಾಗಿದ್ದ ತನ್ವರ್ ಅವರು ಹೂಡಾ ಅವರ ವಿರುದ್ಧ ಮೇಲುಗೈ ಸಾಧಿಸಲಾರಂಭಿಸಿದ್ದರಿಂದ ಪಕ್ಷ ನಷ್ಟ ಅನುಭವಿಸಿದೆ. ಕೊನೆಗೆ ದಲಿತ-ಜಾಟ್ ಮತ ಧ್ರುವೀಕರಣಕ್ಕಾಗಿ ಕುಮಾರಿ ಸೆಲ್ಜಾ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಹರಿಯಾಣ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರು ಕೂಡ 31 ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಳ್ಳಲಿದೆ ಎಂದು ನಿರೀಕ್ಷೆಯನ್ನು ಮಾಡಿರಲಿಲ್ಲ. 2014ರಲ್ಲಿ ಪಡೆದುಕೊಂಡ 15 ಸ್ಥಾನಗಳ ಗಡಿಯನ್ನು ಅದು ದಾಟುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಆದತೆ ಫಲಿತಾಂಶಗಳು ಅವರ ನಿರೀಕ್ಷೆಗಳನ್ನು ಹುಸಿ ಮಾಡಿದವು. ತಳ್ಳ ಮಟ್ಟದ ಕಾಂಗ್ರೆಸ್ ಕಾರ್ಯಕರ್ತನಿಗೆ ಫಲಿತಾಂಶ ತಕ್ಕ ಮಟ್ಟಿನ ನೆಮ್ಮದಿ ನೀಡಿದೆ.
ಕಾಂಗ್ರೆಸ್ ಪಕ್ಷದ ಮೊದಲ ಕುಟುಂಬ ಗಾಂಧಿ ಕುಟುಂಬ ಹರಿಯಾಣವನ್ನು ಕಡೆಗಣಿಸಿದ್ದು ಅಲ್ಲಿನ ಕಾಂಗ್ರೆಸ್ಸಿಗೆ ದೊಡ್ಡ ಹೊಡೆತವನ್ನು ನೀಡಿತ್ತು. ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾಗೆ ಹರಿಯಾಣದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲು ಸಮಯವೂ ಇರಲಿಲ್ಲ. ಅವರುಗಳು ತಿಹಾರ್ ಜೈಲಿನಲ್ಲಿ ಪಿ.ಚಿದಂಬರಂ, ಡಿಕೆ ಶಿವಕುಮಾರ್ ಮುಂತಾದವರನ್ನು ಭೇಟಿ ಮಾಡುವಲ್ಲಿ ನಿರತರಾಗಿದ್ದರು. ಭವಿಷ್ಯದ ಇಂದಿರಾ ಗಾಂಧೀ ಎಂದೇ ಬಿಂಬಿಸಲ್ಪಟ್ಟಿರುವ ಪ್ರಿಯಾಂಕ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ತನಗೆ ಮುಖಭಂಗವಾಗಿರುವ ನೋವಿನಿಂದ ಇನ್ನೂ ಹೊರ ಬಂದಂತೆ ಕಾಣುತ್ತಿಲ್ಲ. ಇನ್ನು ರಾಹುಲ್ ಗಾಂಧಿ ಅವರು ಚುನಾವಣೆಯ ನಡುವೆಯೇ ಬ್ಯಾಂಕಾಕ್ ಪ್ರವಾಸ ಮುಗಿಸಿ ಬಂದರು. ಹರಿಯಾಣದಲ್ಲಿ ಕಾರ್ಯತಂತ್ರ ಸಿದ್ಧಪಡಿಸುವುದರ ಭಾಗವಾಗಿಯೂ ಗಾಂಧಿಗಳು ಇರಲಿಲ್ಲ.
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು 30ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಪ್ರಚಾರ ಕಾರ್ಯ ಮುಗಿಯುವ ಕೊನೆಯ ದಿನ ಶಾ ಅವರು 12ಕ್ಕೂ ಅಧಿಕ ಸಭೆಗಳನ್ನು ನಡೆಸಿದ್ದರು. ಕಾರ್ಯತಂತ್ರ ಸಿದ್ಧಪಡಿಸುವಿಕೆಯಿಂದ ಹಿಡಿದು ಪ್ರಚಾರದ ಎಲ್ಲಾ ಹಂತವನ್ನೂ ಅವರು ಕೂಲಂಕುಷವಾಗಿ ಪರಿಶೀಲನೆ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಅನುಪಸ್ಥಿತಿಯಿಂದ ಹರಿಯಾಣ ಕಾಂಗ್ರೆಸ್ ಬಲಗೊಂಡಿದೆ, ರಾಹುಲ್ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಹೊರೆಯಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ, ಅವರು ತಮ್ಮ ಪಕ್ಷದ ಕಾರ್ಯವನ್ನು ಜನರ ಮುಂದೆ ಇಡುವ ಬದಲು ಮೋದಿ ಮತ್ತ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುವುದಕ್ಕೇ ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದರು. ತಳಮಟ್ಟದ ವಿಷಯಗಳ ಬಗ್ಗೆ ಅವರು ಎಂದೂ ಪ್ರಸ್ತಾಪ ಮಾಡಿಲ್ಲ. ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೇ ಅವರು ಸಮಯ ವ್ಯರ್ಥ ಮಾಡುತ್ತಿದ್ದರು. ಅವರ ಭಾಷಣಗಳು ಬಿಜೆಪಿ ಮತ್ತು ಮೋದಿಯವರ ಬಗೆಗಿನ ದ್ವೇಷದಿಂದ ತುಂಬಿ ಹೋಗುತ್ತಿದ್ದವು. ರಾಹುಲ್ ಅವರ ಹೇಳಿಕೆಯೇ ಕಾಂಗ್ರೆಸ್ಸಿನ ಲೋಕಸಭೆಯ ವೈಫಲ್ಯಕ್ಕೆ ಕಾರಣವಾಗಿತ್ತು. ರಫೇಲ್ ಸುಳ್ಳು ಅವರಿಗೆ ತಿರುಗು ಬಾಣವಾಗಿ ಪರಿಣಮಿಸಿತು. ಪ್ರತಿ ಹಂತದಲ್ಲೂ ಪ್ರಮಾದಗಳನ್ನು ಮಾಡಿ ತಮ್ಮ ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನೇ ತಂದುಕೊಟ್ಟರು. ಹರಿಯಾಣ ಕಾಂಗ್ರೆಸ್ ರಾಹುಲ್ ಅವರನ್ನು ಸಮರ್ಥಿಸುವ ಬದಲು ಪುನರುಜ್ಜೀವನಕ್ಕೆ ಹೆಚ್ಚಿನ ಒತ್ತನ್ನು ನೀಡಿತು, ಇದು ಅದಕ್ಕೆ ಪ್ಲಸ್ ಪಾಯಿಂಟ್ ಆಯಿತು.
ಗಾಂಧಿ ಕುಟುಂಬವನ್ನು ದೂರವಿಟ್ಟಷ್ಟು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದು ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಬಹುತೇಕ ಕಾಂಗ್ರೆಸ್ಸಿಗರು ಗಾಂಧಿ ಕುಟುಂಬವನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿಯೇ ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಅದರ ಬದಲು ತಮ್ಮ ಪಕ್ಷದ ಪುನರುಜ್ಜೀವನಕ್ಕೆ ಒತ್ತು ನೀಡಿದರೆ ಕಿಂಚಿತ್ತಾದರೂ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.