ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಝೀ ನ್ಯೂಜ್ ಮಾಧ್ಯಮಕ್ಕೆ ಮಂಗಳವಾರ ಸಂದರ್ಶನವನ್ನು ನೀಡಿದ್ದು, ಜಮ್ಮು ಕಾಶ್ಮೀರ, ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ, ಎನ್ಆರ್ಸಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಶೇ.100ರಷ್ಟು ಸಹಜವಾಗಿದೆ ಎಂದ ಅವರು, ಜಮ್ಮು-ಕಾಶ್ಮೀರದಲ್ಲಿ ಯಾವುದೇ ಕರ್ಫ್ಯೂ ಈಗ ಇಲ್ಲ. ಕೇವಲ 6 ಪೊಲೀಸ್ ಠಾಣೆಗಳ ಅಡಿಯಲ್ಲಿ ಮಾತ್ರ ಸೆಕ್ಷನ್ 144 ವಿಧಿಸಲಾಗಿದೆ. ಮೊಬೈಲ್ ಮತ್ತು ಲ್ಯಾಂಡ್ಲೈನ್ ಫೋನ್ ಗಳು ಕಾರ್ಯನಿರ್ವಹಿಸುತ್ತಿವೆ. ಆಪಲ್ ಬಿಸಿನೆಸ್ ಕೂಡ ಸುಗಮವಾಗಿ ನಡೆಯುತ್ತಿದೆ. ರಸ್ತೆ ಸಂಚಾರ ಮತ್ತು ಮಾರುಕಟ್ಟೆಗಳಲ್ಲೂ ಜನನಿಬಿಡತೆ ಕಂಡುಬರುತ್ತಿದೆ ಎಂದಿದ್ದಾರೆ. ಕಣಿವೆಯಲ್ಲಿ ಪರಿಸ್ಥಿತಿ ಸಹಜವಾಗಿದ್ದರೂ, ನಾವು ಎಚ್ಚರಿಕೆಯಿಂದ ಇದ್ದೇವೆ ಎಂದಿದ್ದಾರೆ.
ಪಾಕಿಸ್ಥಾನ ಕಣಿವೆಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹವಣಿಸುತ್ತಿದೆ, ಹೀಗಾಗಿ ನಮ್ಮ ಭದ್ರತಾ ಪಡೆಗಳು ಮತ್ತು ಸರ್ಕಾರ ಸದಾ ಎಚ್ಚರಿಕೆಯಿಂದ ಇದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಾಗಿ ಮಾಜಿ ಮುಖ್ಯಮಂತ್ರಿಗಳಾದ ಫಾರುಕ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇಡಲಾಗಿದೆ. ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಮುಂಬರುವ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಮತ್ತು ಹರಿಯಾಣದಲ್ಲಿ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರು ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ. ಖಂಡಿತವಾಗಿಯೂ ಜನರು ಅಲ್ಲಿ ಬಿಜೆಪಿ ಪರವಾಗಿ ಮತ ಹಾಕಲಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಪಡ್ನವಿಸ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಅವರು ಹೇಳಿದ್ದಾರೆ.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಬಗ್ಗೆ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ತಾನು ಪಟೇಲ್ ಅವರಿಂದ ಪ್ರೇರಣೆಗೊಂಡಿರುವುದು ಹೇಳಿದ್ದಾರೆ. ಪಟೇಲರು ದೇಶದ ಮೊದಲ ಗೃಹ ಸಚಿವರಾಗಿದ್ದರು, ಈಗ ನಾನು ದೇಶದ ಗೃಹಸಚಿವನಾಗಿದ್ದೇನೆ. ಹೀಗಾಗಿ ಕೆಲವರು ನನ್ನನ್ನು ಮತ್ತು ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಆದರೆ ಇದು ಸಮಂಜಸವಲ್ಲ. ನನ್ನನ್ನು ಅವರೊಂದಿಗೆ ಎಂದಿಗೂ ಹೋಲಿಕೆ ಮಾಡಬಾರದು ಎಂದಿದ್ದಾರೆ.
ಅಲ್ಲದೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ದೇಶದಾದ್ಯಂತ ನ್ಯಾಷನಲ್ ರಿಜಿಸ್ಟರ್ ಫಾರ್ ಸಿಟಿಜನ್ಸ್ ಅನ್ನು ತರಲು ಬದ್ಧವಾಗಿದೆ ಎಂದಿದ್ದಾರೆ. ಅಸ್ಸಾಂನಲ್ಲಿ ನಡೆಸಿದ NRCಯಲ್ಲಿ ಕೆಲವೊಂದು ಲೋಪದೋಷಗಳ ಆಗಿದೆ, ಅದನ್ನು ನಾವು ಸರಿಪಡಿಸಲು ಇದ್ದೇವೆ ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ಜೈಲು ಸೇರಿರುವುದರಲ್ಲಿ ನನ್ನ ಪಾತ್ರ ಇಲ್ಲ ಎಂದ ಅವರು, ಗೃಹ ಸಚಿವಾಲಯದ ಅಡಿಯಲ್ಲಿ ಇರುವ ಸಿಬಿಐ ಮತ್ತು ಇಡಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಸಚಿವಾಲಯದ ಯಾವ ಹಸ್ತಕ್ಷೇಪ ಇಲ್ಲದೆಯೂ ಸಂಸ್ಥೆಗಳು ಕ್ರಮವನ್ನು ಕೈಗೊಳ್ಳಲು ಸ್ವತಂತ್ರವಾಗಿದೆ ಎಂದಿದ್ದಾರೆ.
ದೇಶದ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಮಾತುಕತೆಯನ್ನು ನಡೆಸಿ ದೇಶದಲ್ಲಿ ಏಕ ನಾಗರೀಕ ಸಂಹಿತೆಯನ್ನು ತರಲು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಆರ್ಥಿಕತೆಗೆ ಪುನಶ್ಚೇತನವನ್ನು ನೀಡಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.