ಕೂಜಂತಂ ರಾಮ ರಾಮೇತಿ |
ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ |
ವಂದೇ ವಾಲ್ಮೀಕಿ ಕೋಕಿಲಮ್ ||
ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ, ನಮಸ್ಕರಿಸುವ ಶ್ಲೋಕವು ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ. ಕಾವ್ಯವೆಂಬ ಮರದ ಮೇಲೆ ಕುಳಿತು ರಾಮ, ರಾಮಾ ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ.
ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗಳ ಕುರಿತು ತಿಳಿಯಲು ಯೋಗ್ಯವಾದ ಸಂದರ್ಭ. ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿರುವ ಸಾಮಾನ್ಯ ವಿಷಯ ವಾಲ್ಮೀಕಿ ಮಹರ್ಷಿಗಳ ಹಿನ್ನೆಲೆ, ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ.
ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ’ರತ್ನಾಕರ’ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಮುನಿಯಲ್ಲಿ ದರೋಡೆ ಮಾಡಲು ಹೋದಾಗ ನಾರದ ಮಹರ್ಷಿಯ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತು. ಮುಂದೆ ಇದೇ ಡಕಾಯಿತ ರತ್ನಾಕರ ವಾಲ್ಮೀಕಿಯಾಗಿ ಬದಲಾದ ಎಂದು ಹೇಳಲಾಗುತ್ತದೆ.
ಇನ್ನೊಂದು ಮೂಲದ ಪ್ರಕಾರ ವಾಲ್ಮೀಕಿ ಮಹರ್ಷಿಗಳು ಪ್ರಚೇತನ ಮುನಿಯ ಮಗ. ಅವರಿಗೆ ‘ಪ್ರಚೇತನ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಆದ್ದರಿಂದ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು. ಸಂಸ್ಕೃತದಲ್ಲಿ ’ವಾಲ್ಮೀಕಿ’ ಎಂದರೆ ಹುತ್ತ ಎಂದರ್ಥ.
ಮೇಲಿನ ದಂತಕಥೆಗಳ ಆಧಾರದಿಂದ ವಾಲ್ಮೀಕಿ ಬದಲಾದ ಕಥೆಗಳನ್ನು ತಿಳಿಯಬಹುದು. ಇಲ್ಲಿ ಪ್ರಮುಖವಾಗಿ ತಿಳಿಯುವ ವಿಷಯ ಒಬ್ಬ ಕ್ರೂರ ದರೋಡೆಕೋರ ಮಹಾನ್ ಮಹರ್ಷಿಯಾಗಿ ಬದಲಾಗಿ ಜಗತ್ತಿಗೆ ಮಾದರಿಯಾದ, ಯುಗ ಯುಗಾಂತರಕ್ಕೂ ದಾರಿದೀಪವಾದ ಅದ್ಭುತ, ಮಹಾನ್ ’ರಾಮಾಯಣ’ವನ್ನು ರಚಿಸಿದ್ದು. ವಾಲ್ಮೀಕಿ ಮಹರ್ಷಿಯು ನಾರದರು ತಮಗೆ ಹೇಳಿದ್ದ ಸಂಗ್ರಹರೂಪದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24000 ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು ಎಂಬುದು ತಿಳಿದ ವಿಷಯ. ಮಹಾ ಪುರುಷೋತ್ತಮ ರಾಮ, ಅಯೋಧ್ಯೆಯ ರಾಜನಾಗಿ ರಾಮನ ರಾಜನಿಷ್ಠೆ, ಒಬ್ಬ ಪತಿಯಾಗಿ ಸೀತೆಯ ಸೀತಾರಾಮನಾಗಿ ಅಣ್ಣನಾಗಿ, ಲಕ್ಷ್ಮಣ, ಭರತ, ಶತ್ರುಘ್ನರ ಮಾರ್ಗದರ್ಶಕನಾಗಿ, ತನ್ನ ಪರಮ ಭಕ್ತ ಶಿಷ್ಯ ಹನುಮಾನನ ದೈವನಾಗಿ, ಎಲ್ಲದಕ್ಕೂ ಮಿಗಿಲಾಗಿ ಮಗನಾಗಿ, ಮಾತಾ ಪಿತೃವಿನ ವಚನ ಪರಿಪಾಲಕನಾಗಿ ನಾವು ರಾಮನ ಚಿತ್ರ ಭಾವವನ್ನು ಎಂದೂ ಮರೆಯದಂತೆ ನಮ್ಮ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಸಿಕೊಂಡಿದ್ದೇವೆ. ವಾಲ್ಮೀಕಿ ಮಹರ್ಷಿಯು ತನ್ನ ಶ್ಲೋಕಗಳಲ್ಲಿ ಒಬ್ಬ ಮಹಾನ್ ವ್ಯಕ್ತಿಯ ರೂಪದಲ್ಲಿ ಸಮಾಜ, ರಾಷ್ಟ್ರದ ಒಂದು ಅದ್ಭುತ ಚಿತ್ರಣವನ್ನು ಸರ್ವಕಾಲಕ್ಕೂ ಅನ್ವಯಿಸುವಂತೆ ರಚಿಸಿರುವುದು ವಿಸ್ಮಯ.
ಪ್ರಸ್ತುತ ಸಮಾಜ, ಕುಟುಂಬ, ವ್ಯಕ್ತಿ, ರಾಷ್ಟ್ರದ ಸ್ಥಿತಿಯನ್ನು ವಾಲ್ಮೀಕಿ ರಾಮಾಯಣಕ್ಕೆ ಹೋಲಿಸಿ ನೋಡಿದಾಗ ಒಂದು ಅವ್ಯಕ್ತ ಭಯ ಆವರಿಸುತ್ತದೆ. ಕಾರಣ ಇಂದಿನ ಪ್ರತಿಯೊಬ್ಬ ವ್ಯಕ್ತಿ, ಸಮಾಜ ಇದರ ವ್ಯತಿರಿಕ್ತ ದಾರಿಯಲ್ಲಿ ನಡೆಯುತ್ತಿದ್ದು ಯಾವ ರಾಮ ರಾಜ್ಯದ ಕಲ್ಪನೆಯನ್ನು ನಮ್ಮ ಪೂರ್ವಜರು ವಾಲ್ಮೀಕಿಯ ಶ್ಲೋಕಗಳ ಮೂಲಕ ಯುಗ ಯುಗಗಳಿಂದ ಸಾರುತ್ತಾ, ಪಾಲಿಸುತ್ತಾ ಬಂದಿರುವರೋ, ಅದರ ಕಲ್ಪನೆಯನ್ನು ಮೀರಿ ವಿರುದ್ಧ ದಿಕ್ಕಿನಲ್ಲಿ ನಾವು ನಡೆಯುತ್ತಿರುವುದು ಬೇಸರದ ಸಂಗತಿ. ಆಧುನಿಕ ಬೆಳವಣಿಗೆಯ ವೇಗದಲ್ಲಿ ನಮ್ಮ ಸಂಸ್ಕೃತಿ, ಬದುಕುವ ಸುಂದರ ಕ್ಷಣಗಳ ಅನುಭವವನ್ನು ಮೀರಿ, ಮೌಲ್ಯ, ನೀತಿ, ಆಚಾರ, ವಿಚಾರಗಳನ್ನು ಬಿಟ್ಟು ಕ್ಷಣಿಕ, ಲೌಕಿಕ ಸುಖದ ಹಿಂದೆ ನಾಗಲೋಟದಲ್ಲಿ ಓಡುತ್ತಿದ್ದೇವೆ. ಒಂದು ಕ್ಷಣ ನಿಂತು ಯೋಚಿಸಿದಾಗ ನಮ್ಮ ಸಂಸ್ಕೃತಿಯ ಭವ್ಯತೆ, ಅದರ ಆಳದಲ್ಲಿನ ಅದ್ಭುತಗಳನ್ನು ಕಂಡು ಅದನ್ನು ಉಳಿಸಿ, ಬೆಳೆಸಿ, ಪೋಷಿಸಿ, ಪಸರಿಸುವ ಅವಶ್ಯಕತೆ, ಅಗತ್ಯತೆ ಗೋಚರಿಸುತ್ತದೆ.
ವಾಲ್ಮೀಕಿ ಮಹರ್ಷಿಯನ್ನು ಕೇವಲ ಅವರ ರಾಮಾಯಣದ ರಚನೆಯ ದೃಷ್ಟಿಯಿಂದ ನೋಡದೆ ಪರಿಪೂರ್ಣ ಸಮಾಜ, ರಾಷ್ಟ್ರದ ನಿರ್ಮಾಣದ ದಾರಿಗೆ ಪ್ರಜ್ವಲಿಸುವ ದ್ವೀಪವಾಗಿ ದಾರಿ ತೋರಿಸುವ ಮಾರ್ಗದರ್ಶಕ, ಗುರು, ಅದ್ಭುತ ಚೇತನವಾಗಿ ಕಾಣಬಹುದಾಗಿದೆ.
✍ ಶ್ರೀಮತಿ ರೇಣುಕಾ ಹಂಗನಳ್ಳಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.