ಮೇಘಾಲಯದ ಐಎಎಸ್ ಅಧಿಕಾರಿ ರಾಮ್ ಸಿಂಗ್ ಅವರು ಆಡುವ ಮಾತಿನಂತೆ ನಡೆದುಕೊಳ್ಳುವ ನಿಷ್ಠಾವಂತ ಅಧಿಕಾರಿ. ಅದೇ ಕಾರಣಕ್ಕಾಗಿಯೇ ನೆಟ್ಟಿಗರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೇಬಿ ಕ್ಯಾರಿಯರ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ ಪತ್ನಿ ಮತ್ತು ಬಿದಿರಿನ ಬಾಸ್ಕೆಟ್ ಅನ್ನು ಬೆನ್ನಿಗೆ ಕಟ್ಟಿಕೊಂಡಿರುವ ಅವರ ಫೋಟೋ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಅವರ ಹಸಿರು ಜೀವನ ಪದ್ಧತಿ.
“ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ನಾನು 10 ಕಿಲೋಮೀಟರ್ ನಡೆದು ಹೋಗುತ್ತಿದ್ದೇನೆ ಎಂಬ ಈ ವೈರಲ್’ ಸುದ್ದಿ ಈಗಲಾದರೂ ತಣ್ಣಗಾಗಬಹುದು ಎಂದು ನಾನು ಬಯಸುತ್ತೇನೆ” ಎಂದು 2008 ರ ಬ್ಯಾಚ್ನ ಐಎಎಸ್ ಅಧಿಕಾರಿ ರಾಮ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಸ್ತುತ ವೆಸ್ಟ್ ಗ್ಯಾರೊ ಹಿಲ್ಸ್ನ ಉಪ ಆಯುಕ್ತರಾಗಿ (ಡಿಸಿ) ಅವರು ನೇಮಕಗೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಒಂದು ವಾರಗಳ ಹಿಂದೆ ವೈರಲ್ ಆಗಿದ್ದ ಸುದ್ದಿಯ ಬಗ್ಗೆ ಅವರು ಈ ಪೋಸ್ಟ್ ಹಾಕಿದ್ದಾರೆ. ಈ ಫೋಟೋದಲ್ಲಿ ಅವರು ತುರಾ ಸಮೀಪದ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಖರೀದಿ ಮಾಡುವ ದೃಶ್ಯವಿದೆ.
“21 ಕಿ. ಗ್ರಾಂ. ವಾರಾಂತ್ಯದ ಸಾವಯವ ತರಕಾರಿ ಶಾಪಿಂಗ್. ಪ್ಲಾಸ್ಟಿಕ್ ರಹಿತ, ವಾಹನ ಮಾಲಿನ್ಯವಿಲ್ಲದ, ಟ್ರಾಫಿಕ್ ಜಾಮ್ ಇಲ್ಲದ ಶಾಪಿಂಗ್. ಫಿಟ್ ಇಂಡಿಯಾ, ಫಿಟ್ ಮೇಘಾಲಯ ಕಲ್ಪನೆಯ ಶಾಂಪಿಂಗ್. ಸಾವಯವ, ಕ್ಲೀನ್ ಮತ್ತು ಗ್ರೀನ್ ತುರಾ, ಪೌಷ್ಠಿಕತೆಯ ಶಾಂಪಿಂಗ್ಗಾಗಿ 10 ಕಿ.ಮೀ ಬೆಳಿಗ್ಗಿನ ನಡಿಗೆ” ಎಂದು ಶಾಪಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಇದು ನನಗೆ ಹೊಸ ವಿಷಯವಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆದ ನನಗೆ ವಾಕಿಂಗ್ ಮಾಡಿಕೊಂಡು ಇನ್ನೊಂದು ಸ್ಥಳಕ್ಕೆ ಹೋಗುವುದು ಸುಲಭವಾದ ಮಾರ್ಗವಾಗಿದೆ ಮತ್ತು ಅದನ್ನೇ ನಾನು ಮುಂದುವರಿಸುತ್ತಿದ್ದೇನೆ ಎಂದು ಅಸ್ಸಾಂ-ಮೇಘಾಲಯ ಕೇಡರ್ನ ರಾಮ್ ಹೇಳುತ್ತಾರೆ.
ರಾಮ್ ಸಿಂಗ್ ಅವರು ಇತರ ಅಧಿಕಾರಿಗಳೊಂದಿಗಿನ ಸಭೆಗಳಲ್ಲಿ ಪದೇ ಪದೇ ಟ್ರಾಫಿಕ್ ತೊಂದರೆಗಳ ಸಮಸ್ಯೆಯನ್ನು ಆಲಿಸುತ್ತಿದ್ದರು. ಈ ಹಿನ್ನಲೆಯಲ್ಲಿ ವಾಹನದ ದಟ್ಟಣೆಗೆ ಪರಿಹಾರವಾಗಿ ಅವರು ಶಾಪಿಂಗ್ಗೆ ವಾಹನ ಬಳಸದೆ ನಡದೇ ಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅದನ್ನು ತಮ್ಮ ಮೂಲಕವೇ ಆರಂಭಿಸಿದರು. ಮಾರುಕಟ್ಟೆಗಳಿಗೆ ಜನರು ಖರೀದಿ ಮಾಡಲು ವಾಹನಗಳನ್ನು ಬಳಕೆ ಮಾಡುವುದರಿಂದ ಹೆಚ್ಚು ದಟ್ಟಣೆ ಸಂಭವಿಸುತ್ತದೆ ಎಂಬುದು ಅವರ ಅಭಿಪ್ರಾಯ.
ರಾಮ್ ಅವರು ವಾರದಲ್ಲಿ ಒಂದು ಮಾರುಕಟ್ಟೆಗೆ ತಮ್ಮ ಪತ್ನಿ ಮತ್ತು ಮಗುವಿನ ಜೊತೆಗೆ ತೆರಳುತ್ತಾರೆ. 10ಕಿ.ಮೀ ನಡೆದೇ ಸಾಗುವ ಇವರು, ತರಕಾರಿಗಳನ್ನು ಬಿದಿರಿನ ಬುಟ್ಟಿಯಲ್ಲಿ ತುಂಬುತ್ತಾರೆ. ಇದರಿಂದ ನಮಗೆ ವ್ಯಾಯಾಮ ಮತ್ತು ಆರೋಗ್ಯ, ಉತ್ತಮ ಜೀವನ ಎಲ್ಲವೂ ಸಿಗುತ್ತದೆ ಎಂದು ಅವರು ಹೇಳುತ್ತಾರೆ.
“ನಾನು ಉತ್ಪನ್ನಗಳನ್ನು ಮನೆಗೆ ಕೊಂಡೊಯ್ಯಲು‘ ಕೊಕ್ಚೆಂಗ್’ (ಸ್ಥಳೀಯ ಬಿದಿರಿನ ಬುಟ್ಟಿ) ಯನ್ನು ಬಳಸಲು ಪ್ರಾರಂಭಿಸಿದೆ ಮತ್ತು ಇತರರಿಗೂ ಅದನ್ನು ಬಳಕೆ ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಈ ಬಿದಿರಿನ ಬುಟ್ಟಿಯನ್ನು ಆರು ತಿಂಗಳುಗಳಿಂದ ಬಳಕೆ ಮಾಡುತ್ತಿದ್ದೇನೆ, ಹೀಗಾಗಿ ಅದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ನಾನು ನಿಮಗೆ ಆಶ್ವಾಸನೆ ನೀಡಬಲ್ಲೆ” ಎಂದಿದ್ದಾರೆ.
ರಾಮ್ ಅವರ ಕಾರ್ಯ ಹೆಚ್ಚು ಪ್ರಶಂಸೆಯನ್ನು ಪಡೆಯುತ್ತಿದ್ದಂತೆ ಈಗ ಅವರ ಸಹೋದ್ಯೋಗಿಗಳು ಕೂಡ ಅದನ್ನು ಅನುಸರಿಸಲು ಆರಂಭಿಸಿದ್ದಾರೆ.
“ನನಗೆ ಇತರ ಜಿಲ್ಲೆಗಳಿಂದಲೂ ಜನರು ಕರೆ ಮಾಡಿ ಇದನ್ನು ಅನುಸರಿಸಲು ಸಹಾಯ ಮಾಡುವಂತೆ ಕೇಳುತ್ತಾರೆ. ನಿಜಕ್ಕೂ ನನಗೆ ನಗು ಬರುತ್ತದೆ. ನಾನು ಯಾವ ಹೊಸತನ್ನೂ ಆರಂಭಿಸಿಲ್ಲ. ಗ್ರಾಮೀಣ ಭಾಗದಲ್ಲಿ ಇದು ನಿತ್ಯದ ರೂಢಿ. ನಗರೀಕರಣ ಇದನ್ನೆಲ್ಲಾ ನಮ್ಮಿಂದ ಕಸಿದುಕೊಂಡಿದೆ, ಅದನ್ನು ನಾನು ಮುಖ್ಯ ವಾಹಿನಿ ಫ್ಯಾಶನ್ ಆಗಿ ಪರಿವರ್ತಿಸಲು ಬಯಸುತ್ತಿದ್ದೇನೆ” ಎಂದಿದ್ದಾರೆ.
ರಾಮ್ ಸಿಂಗ್ ಪರಿಹಾರವನ್ನು ಕಂಡುಹಿಡಿಯುವ ಪ್ರವೃತ್ತಿಯ ಅಧಿಕಾರಿ. ತಮ್ಮ ಪ್ರದೇಶದಲ್ಲಿ ಅರಣ್ಯೀಕರಣವನ್ನು ಆರಂಭಿಸಲು ಅವರು ಗಿಡಗಳನ್ನು ನೆಡುವ ಅಭಿಯಾನವನ್ನು ಆರಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸೋಲಾರ್ ವಿದ್ಯುತ್ ಅನ್ನು ಒದಗಿಸಿದ್ದಾರೆ.
ಪರಿಸರ ಪ್ರಜ್ಞೆಯ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವುದು, ಏಕ-ಬಳಕೆ-ಪ್ಲಾಸ್ಟಿಕ್ಗಳಿಗೆ ನೋ ಎನ್ನುವುದು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಹಲವು ಗಣ್ಯರಿಗೆ ಸೆಲ್ಫಿ ತೆಗೆದುಕೊಳ್ಳುವ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಲೈಕ್ ಪಡೆಯಲು ಇರುವ ದಾರಿಯಾಗಿರಬಹುದು. ಆದರೆ ರಾಮ್ ಸಿಂಗ್ರಂತಹ ಅಧಿಕಾರಿಗಳು ಆಡಿದ ಮಾತಿನಂತೆ ನಡೆಯುತ್ತಿದ್ದಾರೆ ಮತ್ತು ಹಸಿರು ಜೀವನಕ್ಕೆ ಕೊಡುಗೆ ನೀಡಲು ಪ್ರಜ್ಞಾಪೂರ್ವಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.