ನ್ಯೂಯಾರ್ಕ್ : ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತದಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ‘ಗ್ಲೋಬಲ್ ಗೋಲ್ಕೀಪರ್ಸ್ ಅವಾರ್ಡ್’ ಅನ್ನು ಪ್ರದಾನಿಸಿದೆ. ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಾರಂಭಿಸಿದ ಗೋಲ್ಕೀಪರ್ಸ್ ಅವಾರ್ಡ್, ಬಡತನವನ್ನು ಮತ್ತು ಅಸಮಾನತೆಯನ್ನು ಕೊನೆಗೊಳಿಸುವ ಹೋರಾಟವನ್ನು ವೇಗಗೊಳಿಸಲು ವಿಶ್ವದಾದ್ಯಂತದ ನಾಯಕರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ, “ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಕನಸು ಇಂದು ನನಸಾಗುತ್ತಿದೆ” ಎಂದಿದ್ದಾರೆ.
“ಸ್ವಚ್ಛ ಭಾರತ ಅಭಿಯಾನದಿಂದ 3 ಲಕ್ಷ ಜನರು ರೋಗಕ್ಕೆ ತುತ್ತಾಗುವುದರಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ. ಇಂತಹ ಅಭಿಯಾನವನ್ನು ಹಿಂದೆಂದೂ ನಾವು ಕಂಡಿರಲಿಲ್ಲ. ಮಹಾತ್ಮ ಗಾಂಧೀಜಿಯವರ 150 ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಮಹತ್ವದ್ದಾಗಿದೆ. 130 ಕೋಟಿ ಜನರು ಸಂಕಲ್ಪ ಮಾಡಿದರೆ, ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವುದು ಕಷ್ಟವಲ್ಲ” ಎಂದಿದ್ದಾರೆ.
“ಶೌಚಾಲಯಗಳ ಕೊರತೆಯಿಂದಾಗಿ ಅನೇಕ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು, ಆದರೀಗ ಪರಿಸ್ಥಿತಿ ಬದಲಾಗಿದೆ” ಎಂದು ಮೋದಿ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರಿಗೆ ಗೌರವದ ಸೂಚಕವಾಗಿ ಪ್ರಧಾನಿ ಮೋದಿ ಅವರು 2014 ರ ಅಕ್ಟೋಬರ್ನಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು. ಇದು ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಮತ್ತು ಹಳ್ಳಿಗಳನ್ನು ಬಯಲು ಶೌಚ ಮುಕ್ತ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.