ಭಾರತದಲ್ಲಿ ಸದ್ಯಕ್ಕೆ ಎಲ್ಲಿ ನೋಡಿದರಲ್ಲಿ ಆರ್ಥಿಕ ಸ್ಥಿತಿಗತಿಯದ್ದೇ ಚರ್ಚೆ ನಡೆಯುತ್ತಿದೆ. ಒಂದು ದೃಷ್ಟಿಯಿಂದ ಇದು ಒಳ್ಳೆಯದೇ. ಏಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಸರ್ಕಾರದ ನಿರ್ಧಾರಗಳನ್ನು, ನಿರ್ಣಯಗಳನ್ನು ಪರಾಮರ್ಶಿಸಬೇಕು ಮತ್ತು ವಿಮರ್ಶೆ ಮಾಡಬೇಕು. ಆದರೆ ಎಷ್ಟೋ ಜನ ಆರ್ಥಿಕ ತಜ್ಞರು ಎನಿಸಿಕೊಂಡವರು ಭಾರತದ ಆರ್ಥಿಕತೆಯ ಬಗ್ಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈಗಿನ ಜಿಡಿಪಿಯ ಬಗ್ಗೆ ಮಾತನ್ನಾಡುವ ಮನಮೋಹನ ಸಿಂಗ್ ಅವರಿಗೆ ಅವರದ್ದೇ ಸರಕಾರವಿದ್ದಾಗ ಕುಸಿದಿದ್ದ ಜಿಡಿಪಿಯ ಅರಿವಿಲ್ಲವೇ ಅಥವಾ ಅದರೆಡೆಗೆ ಜಾಣ ಮೌನವೇ? ಅಮೇರಿಕ, ಯುಕೆ ಸೇರಿದಂತೆ ವಿಶ್ವದ ಅನೇಕ ಪ್ರಮುಖ ದೇಶಗಳ ಆರ್ಥಿಕತೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿಲ್ಲವೇ ಹಾಗಾದರೆ? ಖಂಡಿತವಾಗಿಯೂ ಇಳಿಮುಖವಾಗಿದೆ. ಆದರೆ ಸರ್ಕಾರ ಪರಿಸ್ಥಿತಿಯನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೇ? ಈ ಕುರಿತು ಒಂದಿಷ್ಟು ವಿಷಯಗಳ ಕಡೆ ಗಮನಹರಿಸೋಣ.
ಗೃಹ ಮತ್ತು ವಾಹನದ ಮೇಲಿನ ಸಾಲದ ಬಡ್ಡಿಯನ್ನು ಇಳಿಸಿರುವುದು (ಅಕ್ಟೋಬರ್ 1 ರಿಂದ ಇದು ಲಾಗೂ ಆಗಲಿದೆ), ವಿದೇಶಿ ನೇರ ಹೂಡಿಕೆ ಕುರಿತಾದ ಕಾನೂನಿನಲ್ಲಿ ಕೆಲವೊಂದು ಬದಲಾವಣೆ ಮಾಡಿರುವುದು, ಬಹಳ ಹಳೆಯದಾದ ಜಿಎಸ್ಟಿ ರಿಫಂಡ್ಗಳನ್ನು ತಡೆಹಿಡಿದು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳಿಗೆ ತೊಂದರೆ ಉಂಟುಮಾಡುತ್ತಿರುವುದನ್ನು ಗಮನಿಸಿ ಅಂತಹ ರಿಫಂಡ್ ಮೊತ್ತವನ್ನು ಆದಷ್ಟು ಬೇಗ ಸಂಬಂಧಪಟ್ಟ ವ್ಯಾಪಾರಿಗಳಿಗೆ 30 ದಿನದಲ್ಲಿ ಪಾವತಿಸುವ ಕ್ರಮ ಇರಬಹುದು, ಮೂಲಸೌಕರ್ಯ ವಿಭಾಗದಲ್ಲಿರುವ ವ್ಯಾಪಾರಿಗಳಿಗೆ ದೀರ್ಘಾವಧಿ ಸಾಲ ಒದಗಿಸುವ ನಿರ್ಣಯವಿರಬಹುದು ಇವೆಲ್ಲದರ ಜೊತೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಸುಮಾರು ಐವತ್ತೈದು ಸಾವಿರ ಕೋಟಿ ಹಣವನ್ನು ಬಂಡವಾಳವಾಗಿ ನೀಡುವ ನಿರ್ಧಾರ (Re-Capitalisation) ಮೊದಲಾದ ಒಂದಿಷ್ಟು ಪ್ರಮುಖ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ವಿದೇಶೀ ಮಾರುಕಟ್ಟೆಯನ್ನು ತಡೆಹಿಡಿಯುವದರಿಂದ ಭಾರತಕ್ಕೆ ಲಾಭವಂತೂ ಆಗುವುದಿಲ್ಲ ಎಂದು ಸರ್ಕಾರಕ್ಕೆ ಅರಿವಾಗಿದೆ. ಫಾರಿನ್ ಇನ್ಸ್ಟಿಟ್ಯೂಟ್ ಇನ್ವೆಸ್ಟರ್ಗಳ (FII) ಆದಾಯದ ಮೇಲೆ ಕಳೆದ ಬಜೆಟ್ನಲ್ಲಿ ಸರ್ಚಾರ್ಜ್ ಹಾಕಿದ್ದ ಸರಕಾರ ಅದನ್ನು ಹಿಂಪಡೆದಿದ್ದು ಕೂಡ ಗಮನಾರ್ಹ ನಡೆ. ಗಣಿಗಾರಿಕೆ ಮತ್ತು ಸಿಂಗಲ್ ಬ್ರ್ಯಾಂಡ್ ರೀಟೇಲ್ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದ್ದು ಇದರಿಂದ ಭಾರತಕ್ಕೆ ಹಣ ಹರಿದು ಬರಲಿದೆ. ವಿದೇಶೀ ಬಂಡವಾಳ ಹೂಡಿಕೆಗೆ ಮಾರ್ಕೆಟ್ ಓಪನ್ ಆದ ಕೂಡಲೇ ಆಪಲ್ನಂತಹ ಕಂಪನಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಯನ್ನು ಆನ್ಲೈನ್ ರೀಟೇಲ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಕಾರ್ಮಿಕರ ಭವಿಷ್ಯ ನಿಧಿಗೆ ಸಂಬಂಧಪಟ್ಟಂತೆ ಇನ್ನೊಂದು ಶುಭ ಸುದ್ದಿ ಸದ್ಯದಲ್ಲೆ ಹೊರಬೀಳಲಿದೆ. ಕಾರ್ಮಿಕರ ಭವಿಷ್ಯ ನಿಧಿ ಕಡಿತವನ್ನು ತಗ್ಗಿಸಿ ಉದ್ಯೋಗಿಗಳ ಕೈಗೆ ಸಂಬಳದ ಹೆಚ್ಚಿನ ಹಣ ದೊರಕುವಂತೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಕೆಲ ದಿನಗಳ ಹಿಂದೆ ಉದ್ಯೋಗಿಗಳ ಇನ್ಶೂರನ್ಸ್ ರೇಟ್ ಕಡಿಮೆ ಮಾಡಿದ್ದನ್ನು ಇಲ್ಲಿ ಗಮನಿಸಬೇಕು. ಭಾರತದ ಕಾರ್ಮಿಕ ಕ್ಷೇತ್ರಗಳಲ್ಲಿ ಬದಲಾವಣೆಯಂತೂ ಆಗಬೇಕಾದದ್ದೇ. ಈ ನಿಟ್ಟಿನಲ್ಲಿ ಸರಕಾರ ಬಹಳ ಬೇಗನೆ ಕಾರ್ಯಪ್ರವೃತ್ತವಾಗಬೇಕು. ಇದಲ್ಲದೇ ನೇರ ತೆರಿಗೆ ಕಾಯಿದೆಯಲ್ಲಿ ಕೂಡ ಬದಲಾವಣೆಗಳನ್ನು ಸದ್ಯದಲ್ಲೇ ನಿರೀಕ್ಷಿಸಬಹುದು. ಭಾರತದ ಆದಾಯ ತೆರಿಗೆ ಕಾಯಿದೆಯಲ್ಲಿ ಮಹತ್ತರವಾದ ಬದಲಾಣೆಯಾಗುವ ಪ್ರಸ್ತಾವವೂ ಸರ್ಕಾರದ ಮುಂದಿದೆ. ಕಳೆದ ಆಗಸ್ಟ್ 19 ಕ್ಕೆ ಹೊಸ ನೇರ ತೆರಿಗೆ ನೀತಿ ಸಮಿತಿಯು ಕರಡು ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಅದರ ಬಗ್ಗೆಯೂ ಸರಕಾರ ಶೀಘ್ರವಾಗಿ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸಮೀತಿಯು ವೈಯಕ್ತಿಕ ಆದಾಯ ತೆರಿಗೆ, ಕಾರ್ಪೋರೆಟ್ ತೆರಿಗೆ, ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ತೆರಿಗೆಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂಬ ವರದಿ ನೀಡಿದೆ. ಕಳೆದ ಹನ್ನೊಂದು ವರ್ಷದಿಂದ ನೇರ ತೆರಿಗೆ ನೀತಿಯ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಳು ಮತ್ತು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಲೇ ಇತ್ತು ಈಗ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುತ್ತದೆಯೆಂಬ ಆಶಾಭಾವವಿದೆ. ಅನೇಕ ಹಿರಿಯ ಆರ್ಥಿಕ ತಜ್ಞರು ಆದಾಯ ತೆರಿಗೆ ಕಾಯಿದೆ ಬದಲಾವಣೆಯ ಬಗ್ಗೆ ಈ ಸಮಯದಲ್ಲಿ ಮಾತನ್ನಾಡುತ್ತಿರುವುದನ್ನು ಕೂಡ ನಾವು ಗಮನಿಸಬಹುದು.
ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯ ಬಗ್ಗೆ ಆರ್ಥಿಕ ಸಚಿವರು ಘೋಷಣೆ ಮಾಡಿದ್ದಾರೆ. ದೇಶದ ಹಿತದ ದೃಷ್ಟಿಯಿಂದ ಬ್ಯಾಂಕ್ಗಳ ಸಂಖ್ಯೆ ಕಮ್ಮಿಯಾಗಬೇಕು. ಇದರಿಂದ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಂತೂ ಆಗುವುದಿಲ್ಲ ಆದರೆ ಸರಕಾರ ಏನು ಮಾಡಿದರೂ ಸಮಸ್ಯೆ ಎಂದು ಕೊಳ್ಳುವವರಿಗೆ ಪಕ್ಕಾ ಇದು ಬಹುದೊಡ್ಡ ಸಮಸ್ಯೆ. ಹಿಂದೆ ವಿಜಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಜೋಡಣೆಯಾದಾಗ ಉದ್ಯೋಗ ನಷ್ಟವಾಗುತ್ತದೆ ಅದು ಇದು ಎಂದು ಒಂದಿಷ್ಟು ಜನ ಕೂಗಿಕೊಂಡಿದ್ದರು ಆದರೆ ಅದ್ಯಾವುದೂ ಆಗಲಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಆ ಎರಡು ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಾಗಿದೆ.
2017 ರಲ್ಲಿ ನಮ್ಮ ದೇಶದಲ್ಲಿದ್ದ ಸಾರ್ವಜನಿಕ ವಲಯದ ಬ್ಯಾಂಕ್ಗಳು 27. ಈಗ ಅದರ ಸಂಖ್ಯೆಯನ್ನು 12ಕ್ಕೆ ಇಳಿಸಲಾಗುತ್ತಿದೆ. ಇದರ ಜೊತೆಗೆ ದೇಶದ ಹತ್ತು ಪ್ರಮುಖ ಬ್ಯಾಂಕ್ಗಳಿಗೆ 55,250 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಂಡವಾಳ ನೀಡಿದೆ. ಡಿಸೆಂಬರ್ 2018 ರಲ್ಲಿ ಸುಮಾರು 8.75 ಲಕ್ಷ ಇದ್ದ ವಸೂಲಾಗದ ಸಾಲದ ಮೊತ್ತ (non performing assets) ಇವತ್ತಿಗೆ 7.90 ಲಕ್ಷಕೋಟಿಗೆ ಇಳಿದಿದ್ದು ಸಮಾಧಾನಕರ ಸಂಗತಿ; ಅಂದರೆ ಸುಮಾರು 1.75 ಲಕ್ಷ ಕೋಟಿಯಷ್ಟು ಸಾಲವನ್ನು ಬ್ಯಾಂಕುಗಳು ಮರುಪಾವತಿ ಮಾಡಿಸಿಕೊಂಡಿದೆ. ಮುಂದೆ ಬ್ಯಾಂಕ್ ನೀಡುವ ಸಾಲದ ಮೊತ್ತ 250 ಕೋಟಿಗೂ ಅಧಿಕವಾಗಿದ್ದರೆ ಅದನ್ನು ಮಂಜೂರು ಮತ್ತು ಮಾನಿಟರ್ ಮಾಡುವುದನ್ನು ವಿಂಗಡಿಸಿ ಹೊಸ ವಿಧಾನವನ್ನು ಬ್ಯಾಂಕಿಂಗ್ ವಿಭಾಗದಲ್ಲಿ ಅಳವಡಿಸುವುದಾಗಿಯೂ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಬೇಕಾಬಿಟ್ಟಿ ಸಾಲ ನೀಡುವ ಮತ್ತು ಬ್ಯಾಂಕ್ ಮ್ಯಾನೇಜರ್ಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಾಲ ಪಡೆಯುವ ಅನೇಕರಿಗೆ ಇದು ಬಿಸಿತುಪ್ಪವಾಗಲಿದೆ.
ಒಟ್ಟಿನಲ್ಲಿ ಹೇಳುವುದಾದರೆ ಭಾರತ ಆರ್ಥಿಕವಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದೆ; ಭಾರತಕ್ಕೆ ಭವಿಷ್ಯವಿಲ್ಲ ಅದು ಇದು ಎಂಬ ಸುಳ್ಳಿಗೆ ದೇಶ ಪ್ರೀತಿಸುವ ನಾವು ಬಲಿಯಾಗುವುದು ಬೇಡ. ಆರ್ಥಿಕತೆ ಇಳಿಮುಖವಾದಾಗ ಅದು ’ಸ್ಟ್ರಕ್ಚರಲ್ಲೋ’ ಅಥವಾ ’ಸೈಕ್ಲಿಕಲ್ಲೋ’ ಎಂಬ ಪ್ರಶ್ನೆ ಏಳುತ್ತದೆ. ಸ್ಟ್ರಕ್ಚರಲ್ ಅಂದರೆ ಆರ್ಥಿಕ ಕುಸಿತ ತೀವ್ರಮಟ್ಟದಲ್ಲಾಗುತ್ತಿದೆ ಅಥವಾ ಅದು ತಹಬಂದಿಗೆ ಬರಲು ಸುಮಾರು 4-5 ವರ್ಷ ಹಿಡಿಯುತ್ತದೆ ಎಂದು ಅರ್ಥ. ಇನ್ನು ಸೈಕ್ಲಿಕಲ್ ಅಂದರೆ ಅದೊಂದು ಸಾಮಾನ್ಯ ಆರ್ಥಿಕ ಲಕ್ಷಣ ಅಥವಾ ಒಂದು ದೇಶದ ಆರ್ಥಿಕತೆಯಲ್ಲಿ ಪದೇ ಪದೇ ಎದಿರಾಗುವ ಸಾಮಾನ್ಯ ಪ್ರಕ್ರಿಯೆ. ಭಾರತದ ಆರ್ಥಿಕತೆಯ ಈಗಿನ ಸ್ಥಿತಿ ಸ್ಟ್ರಕ್ಚರಲ್ ಎಂದು ಬಿಂಬಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಸ್ವತಃ ಭಾರತೀಯ ರಿಸರ್ವ ಬ್ಯಾಂಕ್ ‘ಭಾರತದ ಆರ್ಥಿಕತೆ ಸೈಕ್ಲಿಕಲ್’ ಎಂದು ಹೇಳಿದೆ. ಇನ್ನು ಜಿಎಸ್ಟಿ ಮತ್ತು ಅಪನಗದೀಕರಣದಿಂದ ಆರ್ಥಿಕತೆ ಈ ಸ್ಥಿತಿಗೆ ಬಂತು ಎಂಬ ಮಾತನಾಡುವವರು ಬಹು ಮುಖ್ಯವಾದದ್ದನ್ನು ಗಮನಿಸಲಿಲ್ಲ. ನವೆಂಬರ್ 2016 ರ ನಂತರದ ಅಂದರೆ ಅಪನಗದೀಕರಣ ಆದ ಮೇಲೆ ಕೂಡ ನಮ್ಮ ಜಿಡಿಪಿ ಏರುಗತಿಯಲ್ಲೇ ಸಾಗಿತ್ತು ಮತ್ತು ಈ ಇಳಿಮುಖ ಪ್ರಾರಂಭವಾಗಿದ್ದು 2018 ರ ಮೊದಲ ತ್ರೈಮಾಸಿಕದ ನಂತರ. ಹಾಗೆಯೇ ಜಿಎಸ್ಟಿ ಪ್ರಾರಂಭವಾಗಿದ್ದು 2017 ರ ಜುಲೈನಲ್ಲಿಯೇ. ಜಿಎಸ್ಟಿ ಸಂಗ್ರಹದಲ್ಲಿ ಕೂಡ ಪ್ರತೀ ತಿಂಗಳೂ ಏರಿಕೆಯೇ ಆಗಿದೆ (2018 ರ ಎರಡನೇ ತ್ರೈಮಾಸಿಕವನ್ನು ಹೊರತುಪಡಿಸಿ). ಅಂದರೆ ಈ ವಾದವನ್ನು ಒಪ್ಪುವುದು ಅಸಾಧ್ಯ. ಜಿಎಸ್ಟಿಯಲ್ಲಿ ಕೆಲವೊಂದು ಬದಲಾವಣೆಯನ್ನು ಶೀಘ್ರವಾಗಿ ಸರಕಾರ ತರಬೇಕು ಎನ್ನುವುದು ಎಲ್ಲರ ಆಗ್ರಹ. ಈ ಸೆಪ್ಟೆಂಬರ್ 20 ಕ್ಕೆ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು ಅಂದು ಮಹತ್ವದ ನಿರ್ಧಾರ ಹೊರಬರುವ ಸಾಧ್ಯತೆಯೂ ಇದೆ.
ಈ ಸಮಸ್ಯೆ ನಿರಂತರವಲ್ಲ; ಜೊತೆಗೆ ಪರಿಹಾರದ ಹಾದಿ ಸರಕಾರಕ್ಕೆ ತಿಳಿದಿಲ್ಲ ಅಂತಲೂ ಅಲ್ಲ. ಜೊತೆಗೆ ನಮಗೆ ಕಾಣಿಸುತ್ತಿರುವುದು ಕೇವಲ ಸಂಘಟಿತ ವಲಯಗಳ ಅಂಕಿ ಅಂಶಗಳು ಮಾತ್ರ. ಆದರೆ ಭಾರತದಂತಹ ರಾಷ್ಟ್ರದಲ್ಲಿ ಅಸಂಘಟಿತ ವಲಯಗಳ ವ್ಯಾಪ್ತಿ ಮತ್ತು ಆರ್ಥಿಕತೆಯನ್ನು ಗಟ್ಟಿಗೊಳಿಸುವಲ್ಲಿ ಅವುಗಳ ಪಾತ್ರ ಕೂಡ ಬಹಳ ಮುಖ್ಯವಾಗಿದೆ. ಉಳಿದ ದೇಶಗಳ ಆರ್ಥಿಕ ಸ್ಥತಿಯನ್ನು ಗಮನಿಸಿದರೆ ಭಾರತ ಎಷ್ಟೋ ಪಟ್ಟು ಉತ್ತಮ ಸ್ಥಿತಿಯಲ್ಲಿದೆ. ವಿಶ್ವದ 10 ದೊಡ್ಡ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಯಾಗುವತ್ತ ಮುನ್ನುಗ್ಗುತ್ತಿರುವ ಭಾರತಕ್ಕೆ 10 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಬಲ್ಲ ಸಾಮರ್ಥ್ಯವಿದೆ ಎಂದು ವಿಶ್ವದ ಪ್ರಮುಖ ತಜ್ಞರು ಮತ್ತು ಸಂಸ್ಥೆಗಳು ಹೇಳುತ್ತಿವೆ. ಹಾಗಾಗಿ ನಾವು ಯಾವುದೇ ವದಂತಿಗಳಿಗೆ ಕಿವಿಗೊಡದೇ ವಾಸ್ತವವನ್ನು ಅರಿತು ಭರವಸೆಯೊಂದಿಗೆ ಸರ್ಕಾರದ ಜೊತೆ ನಿಲ್ಲೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.