ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ ದಿನಚರಿಯನ್ನು ವೀಕ್ಷಿಸಿದಾಗ ಇದು ತಿಳಿಯುತ್ತದೆ.
ಭಾರತದಲ್ಲಿ ಇಂಜಿನಿಯರಿಂಗ್ ಶಿಕ್ಷಣವು ಕ್ರಿ.ಪೂ. 1000 ಕ್ಕಿಂತಲೂ ಪೂರ್ವದಲ್ಲಿ ಇತ್ತು .ಅದು ಮೂರು ವಿಧವಾಗಿತ್ತು-ಗುರುಕುಲ ಪದ್ಧತಿ, ದೇವಸ್ಥಾನ/ಅಗ್ರಹಾರ ಪದ್ಧತಿ ಮತ್ತು ವಿಶ್ವವಿದ್ಯಾಲಯಗಳು. ಆ ಕಾಲದಲ್ಲಿ ತಕ್ಷಶಿಲಾ, ನಲಂದಾ, ವಿಕ್ರಮಶಿಲಾ, ಕಾಶಿ, ಜಗದ್ದಲಾ, ಕಂಚಿ, ವಲಭಿ, ಓದಂಡಪುರಿ ಮತ್ತು ರಾಂಚಿ ಪ್ರಮುಖ ವಿಶ್ವವಿದ್ಯಾಲಯಗಳು. ಇಲ್ಲಿ ಜೀವನಕ್ಕೆ ಬೇಕಾದ ಶಿಕ್ಷಣವನ್ನು ನೀಡಲಾಗುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಅಧ್ಯಯನ ಮಾಡುತ್ತಿದ್ದರು. ಉತ್ತಮವಾದ ಗ್ರಂಥಾಲಯ, ಪ್ರಯೋಗಾಲಯಗಳ ವ್ಯವಸ್ಥೆಯೂ ಇತ್ತು.ಅಲ್ಲದೇ ಅನೇಕ ವಿದೇಶಿ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡಿ, ತಮ್ಮ ಗ್ರಂಥಗಳಲ್ಲಿ ಇವನ್ನು ಉಲ್ಲೇಖಿಸಿದ್ದಾರೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ಶ್ರೇಷ್ಠ ತಾಂತ್ರಿಕ ಕೌಶಲ್ಯಗಳನ್ನು ಹೊಂದಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ. ಉದಾಹರಣೆ: – ಹತ್ತಿ ಮತ್ತು ರೇಷ್ಮೆಯ ಬಟ್ಟೆಗಳು, ಚಿತ್ರಕಲೆ, ಬಂಗಾರ ಮತ್ತು ಬೆಳ್ಳಿಯ ಆಭರಣಗಳು, ವಾಸ್ತು ಶಿಲ್ಪ, ರಸ್ತೆಗಳು, ಸೇತುವೆಗಳು, ಸ್ಮಾರಕಗಳು, ನೀರಾವರಿ ಸೌಕರ್ಯಗಳು, ಯುದ್ಧ ಸಾಮಗ್ರಿಗಳು ಮುಂತಾದವು. ಶ್ರೇಷ್ಠ ಕೌಶಲ್ಯ ಮತ್ತು ಪರಿಣಿತಿ ಇಲ್ಲದೆ ಇವು ಅಸಾಧ್ಯ ಎಂಬುದು ಅಷ್ಟೇ ಸತ್ಯ. ಈ ಇಂಜಿನಿಯರಿಂಗ್ ತಂತ್ರಜ್ಞಾನ ಮುಂದಿನ ಅನೇಕ ತಲೆಮಾರುಗಳಿಗೆ ಪಾರಂಪರ್ಯವಾಗಿ ಸಾಗಿತ್ತು. ಆದರೆ ಅವೆಲ್ಲವುಗಳು ಸರಿಯಾದ ದಾಖಲಾತಿ ಇಲ್ಲದೇ ಸೊರಗಿ ಕಾಲಗರ್ಭದಲ್ಲಿ ಮರೆಯಾಗಿ ಹೋದವು.
ಭಾರತದಲ್ಲಿ ಇಂಜಿನಿಯರಿಂಗ್ ಕಲಿಕೆಯು ಬ್ರಿಟೀಶರ ಆಳಿಕೆಯಲ್ಲಿ ಪ್ರಾರಂಭವಾಯಿತು. ತಮ್ಮ ಅನುಕೂಲಕ್ಕಾಗಿ ಪ್ರಥಮ ಭೂ ಸಮೀಕ್ಷೆ ಶಾಲೆ 17 ಮೇ 1794 ರಂದು ಮದ್ರಾಸ್ ಸರ್ವೆ ಸ್ಕೂಲ್ ಮದ್ರಾಸಿನಲ್ಲಿ ಪ್ರಾರಂಭವಾಯಿತು. ನಂತರದ ದಶಕಗಳಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾದವು. ಇವುಗಳಲ್ಲಿ ಹಲವು ಮಾದರಿಗಳು ವಸಹಾತುಶಾಹಿ ಮಾದರಿ, ರಾಷ್ಟ್ರೀಯ ಮಾದರಿ, ಭಾರತೀಯ ರಾಷ್ಟ್ರೀಯ ತಂತ್ರಜ್ಞಾನ (ಐ.ಐ.ಟಿ) ಸಂಶೋಧನಾ ಮಾದರಿ ಮತ್ತು ವಿಶ್ವವಿದ್ಯಾಲಯಗಳು. 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಭಾರತದಲ್ಲಿ 38 ಪದವಿ ಕಾಲೇಜುಗಳು ಹಾಗೂ 52 ಡಿಪ್ಲೋಮಾ ಕಾಲೇಜುಗಳಲ್ಲಿ 2500 ಹಾಗೂ 3670 ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳಿದ್ದವು.
1980 ರ ದಶಕದಲ್ಲಿ ಕೈಗಾರಿಕೆಗಳಿಗೆ ಉದ್ಯಮಗಳಿಗೆ ಸಿಕ್ಕ ಅವಕಾಶಗಳ ಫಲವಾಗಿ ಇಂಜಿನಿಯರಿಂಗ್ ಪದವೀಧರರ ಬೇಡಿಕೆ ಹೆಚ್ಚಿತು. ಬೇಡಿಕೆ ಹೆಚ್ಚಿದಂತೆಲ್ಲ ಪೂರೈಕೆಯೂ ಹೆಚ್ಚಬೇಕಾಯಿತು. ಪರಿಣಾಮವಾಗಿ ಹೆಚ್ಚಿನ ಖಾಸಗಿ ಕಾಲೇಜುಗಳು ಪ್ರಾರಂಭವಾದವು. 1990 ರಲ್ಲಿಯ ಜಾಗತೀಕರಣ ಮತ್ತು ಸಾಫ್ಟ್ವೇರ್ ಮಾಹಿತಿ ತಂತ್ರಜ್ಞಾನದ ಬಳಕೆ ಒಂದು ಹೊಸ ದಿಕ್ಕನ್ನೇ ತೆರೆಯಿತು. ಜಗತ್ತಿನಲ್ಲಿಯ ಬದಲಾವಣೆಗಳಿಗೆ ಪೂರಕವಾಗಿ ಭಾರತವೂ ಕಾರ್ಯಾರಂಭ ಮಾಡಿತು. ಪರಿಣಾಮವಾಗಿ ಇಂದು ಅತೀ ಹೆಚ್ಚು ಸಾಫ್ಟ್ವೇರ್ ಪದವೀಧರರು ಭಾರತದಲ್ಲಿ ಶಿಕ್ಷಣ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಹೀಗಾಗಿ ವಿದೇಶಿಯ ಸಂಸ್ಥೆಗಳು ಭಾರತದಲ್ಲಿಯೂ ತಮ್ಮ ಶಾಖೆಗಳನ್ನು ಆರಂಭಿಸಿದ್ದು ಈಗ ಇತಿಹಾಸ. 2017-18 ರಲ್ಲಿ 12 ಲಕ್ಷ ಡಿಪ್ಲೋಮಾ, 16 ಲಕ್ಷ ಪದವೀಧರ ಇಂಜಿನಿಯರ್ಗಳು, 1.5 ಲಕ್ಷ ಸ್ನಾತಕೋತ್ತರ ಹಾಗೂ 33 ಸಾವಿರ ಡಾಕ್ಟರೇಟ್ ಇಂಜಿನಿಯರುಗಳು ಅಧ್ಯಯನ ಮಾಡುತ್ತಿದ್ದಾರೆ.
ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ತಾಂತ್ರಿಕ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಲಿವೆ. ಕೈಗಾರಿಕೆಗಳಿಗೆ, ಉದ್ಯಮಗಳಿಗೆ ಬೇಕಾದ ತಾಂತ್ರಿಕ ಕೌಶಲ್ಯದೊಂದಿಗೆ, ಜ್ಞಾನ ಆಧಾರಿತ ಸಮಾಜವೂ ನಿರ್ಮಾಣ ಆಗುತ್ತಲಿದೆ. ಸ್ಥಳೀಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾಂತ್ರಿಕ ಶಿಕ್ಷಣವು ಎಲ್ಲರಿಗೂ ಲಭಿಸುತ್ತಲಿದೆ. ಪ್ರತಿ ವರ್ಷ ಹೊರಬರುತ್ತಿರುವ ಲಕ್ಷಾವಧಿ ಯುವ ಇಂಜಿನಿಯರುಗಳು ದೇಶದ ಅಮೂಲ್ಯ ಮಾನವ ಸಂಪನ್ಮೂಲ.
ಇಂದು ನಾವು ಯಾವುದೇ ಹಿಂದಿನ ಯುಗಕ್ಕಿಂತ ತ್ವರಿತ ಬದಲಾವಣೆ ಬಯಸುವ ಅವಧಿಯಲ್ಲಿ ವಾಸಿಸುತ್ತಿದ್ದೇವೆ. ಇದು ಎಲ್ಲ ಹಂತದಲ್ಲಿ ನಡೆದಿದೆ ಮತ್ತು ಇದರ ಗತಿ ಹೆಚ್ಚಾಗುತ್ತಲಿದೆ. ಇದರ ಪರಿಣಾಮವು ಇಂಜಿನಿಯರಿಂಗ್ ಶಿಕ್ಷಣದ ಮೇಲೂ ಆಗುತ್ತಲಿದೆ. ವರ್ತಮಾನ ಸಮಸ್ಯೆಗಳನ್ನು ಎದುರಿಸುವ, ಪರಿಹಾರ ಸೂಚಿಸುವ ನವೀನ ತಂತ್ರಜ್ಞಾನ ಅವಶ್ಯವಾಗಿವೆ. ಇದರೊಂದಿಗೆ ಭವಿಷ್ಯದ ಸವಾಲುಗಳಿಗೂ ಸಿದ್ಧರಾಗಬೇಕಾಗಿದೆ. ಈ ದಿಕ್ಕಿನಲ್ಲಿ ಕೆಲವು ಮುಖ್ಯ ಗಮನಿಸಬೇಕಾದ ಅಂಶಗಳು ಈ ಕೆಳಗಿನಂತಿವೆ.
🔹 ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬೇಕಾಗಿರುವ ಪದವೀಧರರ ಸರಿಯಾದ ಸಂಖ್ಯೆಯ ಅಧ್ಯಯನ ಆಗಬೇಕು. ಇಲ್ಲದಿದ್ದರೆ ಬೇಡಿಕೆ ಹಾಗೂ ಪೊರೈಕೆಗಳ ವ್ಯತ್ಯಾಸ ಅಸಮತೋಲನವನ್ನು ಉಂಟುಮಾಡುತ್ತದೆ.
🔹 ಇಂಜಿನಿಯರಿಂಗ್ ಶಿಕ್ಷಣವು ಅನ್ವಯಿಕ ವಿಜ್ಞಾನದ ಭಾಗ ಅಥವಾ ವಿಜ್ಞಾನದ ತಳಹದಿಯ ಮೇಲೆ ಇಂಜಿನಿಯರಿಂಗ್ ಶಿಕ್ಷಣವು ವಿಕಸನಗೊಳ್ಳುತ್ತಲಿದೆ. ಇಂದು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅನೇಕ ವಿಭಾಗಗಳೂ ಇವೆ. ಪ್ರತಿಯೊಂದು ವಿಭಾಗಕ್ಕೂ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವಿದೆ. ವಿದ್ಯಾರ್ಥಿಗಳು ಆ ಕ್ಷೇತ್ರದ ತಂತ್ರಜ್ಞಾನದೊಂದಿಗೆ ಇತರ ಕ್ಷೇತ್ರಗಳ ಜ್ಞಾನವನ್ನು ಕೂಡ ಹೊಂದಿರಬೇಕಾಗಿದೆ.
🔹 ಪ್ರಸ್ತುತ ವಿಜ್ಞಾನ, ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನಗಳ ವ್ಯತ್ಯಾಸ ಕಡಿಮೆಯಾಗಿದೆ. ಮುಂದಿನ ಪೀಳಿಗೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಶಿಕ್ಷಣ, ಮಾನವ ಇತಿಹಾಸದಲ್ಲಿಯೇ ಕುತೂಹಲಕಾರಿಯಾದ ಘಟ್ಟ. ವಿದ್ಯಾರ್ಥಿಗಳು ತಮ್ಮ ವಿಭಾಗದ ವಿಷಯಗಳೊಂದಿಗೆ ಉಳಿದ ವಿಭಾಗಗಳ ಜ್ಞಾನವನ್ನು ಕಲಿಯಬೇಕಾಗಿದೆ.
🔹 ಇಂಜಿನಿಯರಿಂಗ್ ಶಿಕ್ಷಣದ ಬೆಳವಣಿಗೆಯು ಗಾತ್ರ ಹಾಗೂ ಸಂಕೀರ್ಣತೆಗಳಿಗೆ ಅನುಗುಣವಾಗಿ ಎರಡು ವಿಧಗಳಿವೆ. ಮೊದಲನೇಯ ಚಿಕ್ಕ ಅತೀ ಸೂಕ್ಷ್ಮ ಪ್ರಮಾಣದ ಸಂಶೋಧನೆಗಳು ಹಾಗೂ ತಾಂತ್ರಿಕ ಆವಿಷ್ಕಾರಗಳು. ಉದಾಹರಣೆ: ಜೈವಿಕ, ನ್ಯಾನೊ ಇತ್ಯಾದಿ.ಇನ್ನೊಂದು ದೊಡ್ಡ ಮತ್ತು ಅತಿದೊಡ್ಡ ಪ್ರಮಾಣದ ಆವಿಷ್ಕಾರಗಳು ಉದಾಹರಣೆ: ಶಕ್ತಿಯ ಉತ್ಪಾದನೆ, ಆಹಾರ ಸಂರಕ್ಷಣೆ ಇತ್ಯಾದಿ.
🔹 ಎಲ್ಲ ಜನರಿಗೆ ಸುರಕ್ಷಿತ, ಆರೋಗ್ಯಕರ ಸೌಕರ್ಯ ಒದಗಿಸುವದು ಇಂಜಿನಿಯರುಗಳ ಕಾರ್ಯ. ಮಾನವನ ಮೂಲಭೂತ ಅವಶ್ಯಕತೆಗಳೊಂದಿಗೆ, ಜೀವನಮಟ್ಟವನ್ನು ಸುಧಾರಿಸುವ ಸುಸ್ಥಿರ ಅಭಿವೃದ್ಧಿ ಬೇಕಾಗಿದೆ. ಉದಾಹರಣೆ: ಶಕ್ತಿಯ ಸರಿಯಾದ ಉತ್ಪಾದನೆ, ಉಳಿಕೆ ಮತ್ತು ಬಳಕೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ,ಆಹಾರ ನೀರು ಪೋರೈಕೆ, ತ್ಯಾಜ್ಯ ನಿರ್ವಹಣೆ, ವೈದ್ಯಕೀಯ ಸೌಲಭ್ಯಗಳು, ವಿಪತ್ತು ನಿರ್ವಹಣೆ, ಪ್ರಾಣಿ ಹಾಗೂ ಸಂಕುಲಗಳ ರಕ್ಷಣೆ.
🔹 ಹಳೆಯ ತಂತ್ರಜ್ಞಾನಗಳನ್ನು ನವೀನಗೊಳಿಸುವುದೂ ಕೂಡ ಸೃಜನಶೀಲತೆಯ ಒಂದು ಭಾಗ. ಪ್ರಸಕ್ತ ಸ್ಥಿತಿಯ ಬದಲಾವಣೆಗಳಿಗೆ ಅನುಗುಣವಾಗಿ ಸಂಶೋಧನೆ ಹಾಗೂ ಬೆಳವಣಿಗೆಯನ್ನು ಕೈಗೊಳ್ಳಬಲ್ಲ, ಆರ್ಥಿಕವಾಗಿ ಬೆಂಬಲ ನೀಡಬಲ್ಲ ವಿನ್ಯಾಸಗಳು ಅವಶ್ಯವಾಗಿವೆ.
🔹 ಪ್ರಸ್ತುತ ಇಂಜಿನಿಯರಿಂಗ್ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಬದಲಾವಣೆಗಳನ್ನು ಅನುಸರಿರುತ್ತಲಿದೆ. ಕೈಗಾರಿಕೆಗಳಲ್ಲಿ ಪ್ರಾಯೋಗಿಕ ತರಬೇತಿಯಿಂದ ಪ್ರಾರಂಭವಾದ ಈ ಪ್ರಕ್ರಿಯೆ ಕಾಲೇಜು ಮಟ್ಟದಲ್ಲಿಯೇ ಇಂದು ನಡೆಯುತ್ತಲಿದೆ. ಇಂಜಿನಿಯರಿಂಗ್ ಪಠ್ಯಕ್ರಮವು, ಮೂಲಭೂತ ಇಂಜಿನಿಯರಿಂಗ್ ಶಿಕ್ಷಣದೊಂದಿಗೆ, ವಿಜ್ಞಾನ, ಮಾನವ ಶಾಸ್ತ್ರ, ವೃತ್ತಿಪರ ವಿಷಯಗಳು, ನವೀನ ಪ್ರಯೋಗಾಲಯಗಳು ಹಾಗೂ ಕೌಶಲ್ಯ ತರಬೇತಿಗಳು ಸೇರಿಕೊಂಡಿವೆ.
🔹 ಬದಲಾಗುತ್ತಿರುವ ಕೈಗಾರಿಕೆಗಳು, ಉದ್ಯಮದ ಅಗತ್ಯಗಳನ್ನು ಪೊರೈಸಲು ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಅನೇಕ ಪ್ರಯೋಗಗಳನ್ನು ಕೈಗೊಂಡಿವೆ. ಹೀಗಾಗಿ ಪಠ್ಯಕ್ರಮಗಳು ಹೆಚ್ಚು ರಚನಾತ್ಮವಾಗಿ, ಕ್ರಿಯಾತ್ಮಕವಾಗಿ ಕೈಗಾರಿಕೆಗಳಿಗೆ ಪೂರಕವಾಗಿವೆ.
🔹 ಇಂಜಿನಿಯರಿಂಗ್ ಜ್ಞಾನದ ಬೆಳವಣೆಗೆಯು ಪ್ರಗತಿಯ ಸಾಧನ, ಜ್ಞಾನ ಮತ್ತು ಸಂಶೋಧನೆಗಳ ಮೂಲಕ ಇದನ್ನು ಸಾಧಿಸಬೇಕು. ಕಲಿಕೆಗೆ ಪೂರಕವಾದ ವಾತಾವರಣವೂ ಅವಶ್ಯ. ನಾವಿನ್ಯತೆಯ ಪ್ರಗತಿಯ ಮಾರ್ಗ ಹಾಗೂ ದೇಶದ ಭವಿಷ್ಯವು ಪಾಠದ ಕೊಠಡಿಗಳಲ್ಲಿ, ಪ್ರಯೋಗಾಲಯಗಳಲ್ಲಿ ಇದೆ.
ಮೂಲಭೂತ ವಿಜ್ಞಾನ, ತಂತ್ರಜ್ಞಾನ ತಳಹದಿಯ ಮೇಲೆ ಇಂಜಿನಿಯರಿಂಗ್ ಶಿಕ್ಷಣ ಸ್ಪಂದಿಸಬೇಕಾಗಿದೆ. ಭಾರತದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕಾದ ಅವಶ್ಯಕತೆಯಿದೆ. ಭಾರತೀಯ ತಾಂತ್ರಿಕ ವಿದ್ಯಾಲಯಗಳು, ತಂತ್ರಜ್ಞಾನದ ಸಂಸ್ಥೆಗಳು, ಕಲಿಕೆ, ಅನ್ವೇಷಣೆ ಹಾಗೂ ಆವಿಷ್ಕಾರಗಳ ಸೂಕ್ತ ಸಮ್ಮಿಲನದೊಂದಿಗೆ ಬೇಳೆಯುತ್ತಲಿವೆ. ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ ಉನ್ನತ ಗುಣಮಟ್ಟದ ತಾಂತ್ರಿಕಜ್ಞಾನವನ್ನು ನೀಡುವ ಕಾರ್ಯ ನಡೆಯಬೇಕಾಗಿದೆ.
ಈ ಶತಮಾನದ ವಿದ್ಯಾರ್ಥಿಗಳು ನವೀನ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತನ್ಮೂಲಕ ಅತ್ಯಂತ ಸವಾಲಿನ ಭವಿಷ್ಯವನ್ನು ಎದುರಿಸಬೇಕಾಗಿದೆ. ಸರಕಾರಗಳು ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಉದ್ಯಮಿಗಳು, ಇಂಜಿನಿಯರಿಂಗ್ ಶಿಕ್ಷಣದ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.
✍ ಡಾ|| ಗೋಪಾಲಕೃಷ್ಣ ಧೃವರಾಜ ಕಮಲಾಪೂರ
ಅಧ್ಯಾಪಕರು, ವಿದ್ಯುತ್ ವಿಭಾಗ
ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು, ಧಾರವಾಡ- 580002
ಮೋ. ನಂ.: 9480248486
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.