ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಭಾರತ ಹೋರಾಟ ಆರಂಭಿಸಿದೆ. ಅಕ್ಟೋಬರ್ 2 ರಿಂದ ದೇಶವ್ಯಾಪಿಯಾಗಿ ಈ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಕ್ಕೊಳಪಡಿಸಲಾಗುತ್ತಿದೆ. 4000 ನಗರ ಸಂಸ್ಥೆಗಳಿಗೆ ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸೂಚನೆಯನ್ನು ನೀಡಲಾಗಿದೆ. 5 ಲಕ್ಷ ಸರಪಂಚರು ಮತ್ತು ಸ್ವಚ್ಛಾಗ್ರಹಿಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಈ ನಿಟ್ಟಿನಲ್ಲಿ ವೈಯಕ್ತಿಕ ಸಂದೇಶವನ್ನು ಸ್ವೀಕರಿಸಲಿದ್ದಾರೆ. ಹಿಮಾಲಯನ್ ಪ್ರದೇಶ ಮತ್ತು ಇತರ ಪರಿಸರ-ಸೂಕ್ಷ್ಮ ವಲಯಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಹಲವು ಮಾಹಿತಿಗಳ ವಿವರ ಇಲ್ಲಿದೆ.
ಸರ್ಕಾರದ ಕ್ರಮ ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ಒಂದು ದೈತ್ಯ ಹೆಜ್ಜೆಯಾಗಿದೆ. ಪ್ಲಾಸ್ಟಿಕ್ ಸೃಷ್ಟಿಸುವ ಆವಂತರಗಳ ಬಗ್ಗೆ ನಿತ್ಯ ನಾವು ಕುಳಿತು ಹರಟೆ ಹೊಡೆಯುತ್ತಿರುತ್ತೇವೆ, ಆದರೆ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಪ್ಲಾಸ್ಟಿಕ್ ಜೈವಿಕ ವಿಘಟನೀಯವಲ್ಲದ ವಸ್ತು ಎಂದು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಾರೆ. ಭೂಮಿ ಅಥವಾ ನೀರಿನ ಮೇಲೆ ವಿನಾಶಕಾರಿ ಪ್ಲಾಸ್ಟಿಕ್ ಮಾಡುವ ಹಾನಿಗಳ ಬಗ್ಗೆಯೂ ನಿರ್ಲಕ್ಷ್ಯ ವಹಿಸುತ್ತೇವೆ. ನಾವು ಬಳಸುವ ಸ್ಟ್ರಾಗಳಿಂದ ಹಿಡಿದು ಸ್ಟಾರ್ಬಕ್ಸ್ ಕಾಫಿ ಕಪ್ಗಳವರೆಗೆ, ವಿಮಾನ ನಿಲ್ದಾಣದಲ್ಲಿ ಬಳಸುವ ನಿರೀನ ಬಾಟಲಿಗಳಿಂದ ಹಿಡಿದು ವಿ ಕಟ್ಲರಿಗಳವರೆಗೆ, ಸಾಮಾನು ಚೀಲಗಳಿಂದ ಹಿಡಿದು ಚಿಪ್ಸ್ ಪಾಕೆಟ್ಗಳವರೆಗೆ ಅವಿನಾಶಿಯಾದ ಪ್ಲಾಸ್ಟಿಕ್ನ ಉಪಸ್ಥಿತಿ ಇರುತ್ತದೆ. ಸುಟ್ಟುಹೋದ ಅಥವಾ ಚೂರು ಚೂರಾದ ಪ್ಲಾಸ್ಟಿಕ್ ನಮ್ಮ ಆಹಾರ ಮತ್ತು ನೀರಿನಲ್ಲಿ ಸೇರಿಕೊಂಡು ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಇದು ನಾವು ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಇದು ಕ್ಯಾನ್ಸರ್, ಉಸಿರಾಟದ ತೊಂದರೆ, ರೋಗನಿರೋಧಕ ಶಕ್ತಿಯ ಕುಂಠಿತ ಸೇರಿದಂತೆ ಅನೇಕ ಅಪಾಯಕಾರಿ ರೋಗಗಳಿಗೆ ಎಡೆಮಾಡಿಕೊಡುತ್ತದೆ. ಪ್ಲಾಸ್ಟಿಕ್ ಮಣ್ಣಿನ ಪೋಷಕಾಂಶಗಳನ್ನು ನಾಶ ಮಾಡುತ್ತದೆ ಮತ್ತು ಅದರ ಚೈತನ್ಯವನ್ನು ದುರ್ಬಲಗೊಳಿಸುತ್ತದೆ.
ನಾವು ಈಗಾಗಲೇ ಪರಿಸರಕ್ಕೆ ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ ಹೊರೆಯನ್ನು ಹೊರೆಸಿದ್ದೇವೆ. ಪ್ರಾಣಿಗಳು ಮತ್ತು ಪಕ್ಷಿಗಳು ಅವುಗಳನ್ನು ತಿಂದು ಸಾಯುತ್ತಿವೆ, ಅವುಗಳ ದೇಹಕ್ಕೆ ಪ್ಲಾಸ್ಟಿಕ್ ಅನ್ನು ಅರಗಿಸಿಕೊಳ್ಳುವ ಶಕ್ತಿಯಿಲ್ಲ. ದೆಹಲಿ ಮೃಗಾಲಯದಲ್ಲಿ ಮೃತಪಟ್ಟ ಕೇಪ್ ಎತ್ತು ಇದಕ್ಕೊಂದು ಉತ್ತಮ ಉದಾಹರಣೆ. ಪ್ರಾಣಿಗಳ ಕರುಳುಗಳಿಗೆ ಪ್ಲಾಸ್ಟಿಕ್ ಸುತ್ತಿಕೊಂಡು ಅವುಗಳು ಸಾವನ್ನಪ್ಪುತ್ತವೆ. ಕಳೆದ ವರ್ಷ ಆನೆಯೊಂದು ಇದೇ ರೀತಿ ಸತ್ತು ಹೋಗಿತ್ತು. ಪ್ರತಿ ವರ್ಷ ಅರೇಬಿಯನ್ ಪೆನಿನ್ಸ್ಯುಲದಲ್ಲಿ ಸಾಯುವ ಒಂಟೆಗಳ ಪೈಕಿ ಅರ್ಧದಷ್ಟು ಪ್ಲಾಸ್ಟಿಕ್ ತಿಂದೇ ಸಾಯುತ್ತಿವೆ ಎನ್ನಲಾಗಿದೆ. ಜಪಾನ್ನ ಪ್ರಸಿದ್ಧ ನಾರಾ ಪಾರ್ಕ್ನ ಒಂದು ಜಿಂಕೆಯ ಹೊಟ್ಟೆಯಲ್ಲಿ 4.3 ಕೆಜಿ ಪ್ಲಾಸ್ಟಿಕ್ ಇರುವುದು ಕಂಡುಬಂದಿದೆ. 2016 ರಲ್ಲಿ ಜಿಂಬಾಬ್ವೆಯಲ್ಲಿ ಎಂಟು ಆಫ್ರಿಕನ್ ಆನೆಗಳು ಇದೇ ಕಾರಣಕ್ಕೆ ಸಾವನ್ನಪ್ಪಿವೆ. ಭಾರತದಲ್ಲೂ ದನಗಳ ಹೊಟ್ಟೆಯಿಂದ ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ಗಳನ್ನು ಹೊರತೆಗೆದ ಸುದ್ದಿಗಳನ್ನು ಆಗಾಗ ನಾವು ನೋಡುತ್ತಿರುತ್ತೇವೆ.
ಪ್ರತಿವರ್ಷ 100,000 ಕ್ಕೂ ಹೆಚ್ಚು ಸಮುದ್ರ ಸಸ್ತನಿಗಳು ಮತ್ತು 1 ದಶಲಕ್ಷಕ್ಕೂ ಹೆಚ್ಚು ಸಮುದ್ರ ಪಕ್ಷಿಗಳು ಪ್ಲಾಸ್ಟಿಕ್ನಿಂದ ಸಾಯುತ್ತವೆ. ಇತ್ತೀಚಿನ ಒಂದು ಅಧ್ಯಯನವು ಪರೀಕ್ಷಿಸಿದ ಪ್ರತಿಯೊಂದು ತಿಮಿಂಗಿಲ, ಡಾಲ್ಫಿನ್ ಮತ್ತು ಸೀಲ್ ಒಳಗೆ ಪ್ಲಾಸ್ಟಿಕ್ ಅನ್ನು ಕಂಡುಹಿಡಿದಿದೆ. 2050 ರ ಹೊತ್ತಿಗೆ, ಸಾಗರದಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ. ಜಲವಾಸಿ ಸಸ್ತನಿಗಳು ಪ್ಲಾಸ್ಟಿಕ್ ಅನ್ನು ಆಹಾರವೆಂದು ತಪ್ಪಾಗಿ ಗ್ರಹಿಸಿ ಅವುಗಳನ್ನು ಸೇವಿಸುತ್ತವೆ ಅಥವಾ ಪ್ಲಾಸ್ಟಿಕ್ನಿಂದ ಸಿಕ್ಕಿಹಾಕಿಕೊಂಡು ಒದ್ದಾಡುತ್ತವೆ. ಪ್ಲಾಸ್ಟಿಕ್ ಅವುಗಳ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವುತ್ತದೆ. ಅಂತಿಮವಾಗಿ ನಿಧಾನವಾಗಿ ಮತ್ತು ನೋವುಂಡು ಸಾವನ್ನು ಅಪ್ಪುತ್ತವೆ. ಸಮುದ್ರದ ಪರಿಸರ ವ್ಯವಸ್ಥೆಯು ಪ್ಲಾಸ್ಟಿಕ್ ದುಷ್ಪರಿಣಾಮದಿಂದಾಗಿ ಹಾನಿಗೊಳಗಾಗಿದೆ. ಒಂದು ಪ್ರಬೇಧದ ಪ್ರಾಣಿಯ ನಾಶ ಇತರ ಪ್ರಾಣಿಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬುದನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕಿದೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಕೈ ಜೋಡಿಸಿದರೆ ಯಾವುದೂ ಕಷ್ಟವಲ್ಲ. ಇದಕ್ಕೆ ಹೆಚ್ಚು ಶ್ರಮದ ಅಗತ್ಯವೂ ಇಲ್ಲ, ಆದರೆ ಅಗತ್ಯವಿರುವುದು ದೃಢ ಸಂಕಲ್ಪ ಮತ್ತು ತಾಳ್ಮೆಯ ಕ್ರಮ. ಪೇಪರಿನಿಂದ ತಯಾರಿಸಲ್ಪಟ್ಟ ಸ್ಟ್ರಾ ಮತ್ತು ಕಾಫಿ ಕಪ್ಗಳನ್ನು ಬಳಕೆ ಮಾಡಲು ನಾವು ಆರಂಭಿಸಬೇಕು. ಮರುಬಳಕೆ ಮಾಡಬಹುದಾದ ಕಟ್ಲರಿ, ಬಿಸಾಡಬಹುದಾದ ಕಪ್, ಬಿದಿರಿನ ಟೂತ್ ಬ್ರಷ್, ಪರಿಸರ ಸ್ನೇಹಿ ಹೊದಿಕೆಗಳು, ಬಟ್ಟೆ ಚೀಲಗಳು ಇತ್ಯಾದಿಗಳ ಬಳಕೆಯನ್ನು ನಿರಂತರಗೊಳಿಸಬೇಕು. ಇದರಿಂದ ನಮ್ಮ ಹೊರಾಂಗಣಗಳು ಅತ್ಯಂತ ಸ್ವಚ್ಛವಾಗಿರುತ್ತವೆ. ನಮ್ಮನ್ನು ಇದು ಪ್ರಗತಿಪರರಾಗಿರುವಂತೆಯೂ ಬಿಂಬಿಸುತ್ತದೆ. ಪ್ಲಾಸ್ಟಿಕ್ಗೆ ಪರ್ಯಾಯವಾಗಿ ನಮ್ಮಲ್ಲಿ ಅನೇಕ ಪರ್ಯಾಯ ಆಯ್ಕೆಗಳಿವೆ. ನಾವು ಒಂದು ಸೀಮಿತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಅದು ಹಾನಿಯಾದರೆ ವಾಸಿಸಲು ಮತ್ತೊಂದು ಜಗತ್ತು ನಮಗಿಲ್ಲ ಎಂಬ ಅರಿವು ನಮಗಿರಲೇ ಬೇಕು.
ಪ್ಲಾಸ್ಟಿಕ್ ನಿಷೇಧದ ಮಹತ್ವದ ಘೋಷಣೆಯನ್ನು ನಮ್ಮ ಸರ್ಕಾರ ಮಾಡಿದೆ. ಅದರ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಬೇಕಾದುದು ನಮ್ಮ ಕರ್ತವ್ಯ. ಬಿಜೆಪಿಯ ಕೇಂದ್ರ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ ಬಳಿಕವೇ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಗೆ ನಿಷೇಧ ಹೇರಲಾಗಿದೆ. ಒಂದು ಕಾಲದಲ್ಲಿ ಅಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯಗಳು ಕಸದ ಬುಟ್ಟಿಯಲ್ಲಿ ರಾಶಿಯಾಗಿ ಬೀಳುತ್ತಿದ್ದವು. ಆದರೀಗ ಅಲ್ಲಿ ಜಗ್ ಮತ್ತು ಪೇಪರ್ ಲೋಟಗಳು ಕಾಣಸಿಗುತ್ತಿವೆ.
ಸರ್ಕಾರದ ಈ ಹೊಸ ಕ್ರಮ ಖಂಡಿತವಾಗಿಯೂ ಆಹಾರ ಮತ್ತು ಪಾನೀಯಗಳನ್ನು ಉತ್ಪಾದಿಸುವ ದೈತ್ಯರಿಗೆ ನೋವುಂಟು ಮಾಡುತ್ತದೆ. ಆದರೆ ಅಸ್ತಿತ್ವದ ಬಿಕ್ಕಟ್ಟಿನ ಮೇಲೆ ಲಾಭ ಗಳಿಸಲು ಯಾರಿಗೂ ಸಾಧ್ಯವಿಲ್ಲ. ಅಮೆಜಾನ್ ಮತ್ತು ವಾಲ್ಮಾರ್ಟ್ ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿವೆ. 2020 ರ ಜೂನ್ ವೇಳೆಗೆ ಭಾರತದಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ನಲ್ಲಿ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಅಮೆಜಾನ್ ಹೇಳಿದೆ. ಭಾರತದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಪ್ಲಾಸ್ಟಿಕ್ ನಿಷೇಧಕ್ಕೆ ಮಾರ್ಚ್ 2021 ರ ಗಡುವನ್ನು ಸ್ವತಃ ನಿಗದಿಪಡಿಸಿದೆ. ನಮ್ಮ ಫ್ರಿಡ್ಜ್ಗಳನ್ನು ತಂಪು ಪಾನೀಯಗಳು ಮತ್ತು ನೀರಿನ ಬಾಟಲಿಗಳೊಂದಿಗೆ ಜೋಡಿಸುವ ಬಹುರಾಷ್ಟ್ರೀಯ ದೈತ್ಯರಿಗೆ ಇದು ಒಂದು ಕ್ಷಣವಾಗಿದೆ. ಹಲವು ರೆಸ್ಟೋರೆಂಟ್ಗಳು ಕೂಡ ಕೈ ಜೋಡಿಸಿವೆ. ಆಹಾರ ತ್ಯಾಜ್ಯದ ವಿರುದ್ಧ ಹೋರಾಡಲು, ಆಹಾರ ಮತ್ತು ನೀರನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು, ಮಾಲಿನ್ಯವನ್ನು ಕಡಿತಗೊಳಿಸಲು ಮತ್ತು ವೆಚ್ಚ-ಪರಿಣಾಮಕಾರಿಯಾದ ವಿಧಾನವನ್ನು ಬಳಸಿಕೊಳ್ಳಲು ಭಾರತದೊಂದಿಗೆ ಹಲವು ಕಂಪನಿಗಳು ಕೈಜೋಡಿಸಿವೆ.
ಪ್ಲಾಸ್ಟಿಕ್ ವಿರುದ್ಧ ಭಾರತ ಆರಂಭಿಸಿರುವ ಹೋರಾಟ ನಮ್ಮ ಅಸ್ತಿತ್ವಕ್ಕಾಗಿ ನಾವು ಮಾಡುತ್ತಿರುವ ಹೋರಾಟ. ಇದಕ್ಕೆ ಎಲ್ಲರೂ ಕೈ ಜೋಡಿಸಲೇಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.