ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರಂದು ಫ್ರಾನ್ಸ್ನಲ್ಲಿ ಮೊದಲನೆಯ ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತವು 36 ರಫೇಲ್ ಜೆಟ್ಗಳಿಗಾಗಿ ಫ್ರೆಂಚ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ತರುವಾಯ ಮೊದಲ ಯುದ್ಧ ವಿಮಾನ ಭಾರತಕ್ಕೆ ಆಗಮಿಸಲು ಸಿದ್ಧವಾಗುತ್ತಿದೆ.
“ಅಕ್ಟೋಬರ್ 8 ಎರಡು ಕಾರಣಗಳಿಗಾಗಿ ಶುಭವಾಗಿದೆ. ಒಂದು ಆ ದಿನ ದಸರಾ ಮತ್ತು ಇನ್ನೊಂದು ಅದು ವಾಯುಪಡೆಯ ದಿನವಾಗಿದೆ” ಎಂದು ಸರ್ಕಾರದ ಮೂಲಗಳು ವರದಿಯಲ್ಲಿ ಉಲ್ಲೇಖಿಸಿವೆ.
ವರದಿಯ ಪ್ರಕಾರ, ಸಿಂಗ್ ಅವರು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಅಕ್ಟೋಬರ್ 8 ರಂದು ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಲು ಫ್ರಾನ್ಸ್ಗೆ ಪ್ರಯಾಣಿಸಲಿದ್ದಾರೆ.
ಈ ಹಿಂದೆ, ಸೆಪ್ಟೆಂಬರ್ 19-20 ರಂದು ಫ್ರಾನ್ಸ್ನಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಬಿಎಸ್ ಧನೋವಾ ಅವರೊಂದಿಗೆ ರಕ್ಷಣಾ ಸಚಿವರು ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಬಹುದು ಎಂದು ವರದಿಯಾಗಿತ್ತು. ಆದರೆ, ಈಗ ಈ ಯೋಜನೆಯಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 8ರಂದು ಯುದ್ಧ ವಿಮಾನವನ್ನು ಸ್ವೀಕಾರ ಮಾಡಲಾಗುತ್ತದೆ. ಆದರೆ ವಾಯುಸೇನೆಯ ತಂಡವು ಸೆ.19-20ಕ್ಕೆ ಫ್ರಾನ್ಸ್ ಅಧಿಕಾರಿಗಳೊಂದಿಗೆ ದಾಖಲೆಗಳಿಗೆ ಸಹಿ ಹಾಕಲು ಫ್ರಾನ್ಸ್ಗೆ ಪ್ರಯಾಣಿಸಲಿದ್ದು, ನಂತರ ಅಲ್ಲಿ ರಫೇಲ್ ವಿಮಾನಗಳ ಬಗ್ಗೆ ತರಬೇತಿಯನ್ನು ಆರಂಭಿಸಲಿದ್ದಾರೆ.
“ಭಾರತೀಯ ಪೈಲೆಟ್ಗಳು ತರಬೇತಿ ಪಡೆದ ನಂತರ, ರಕ್ಷಣಾ ಸಚಿವರು ಮತ್ತು ಅವರ ತಂಡವನ್ನು ಬೋರ್ಡೆಕ್ಸ್ ಬಳಿಯ ನೆಲೆಗೆ ಅವರೇ ವಿಮಾನವನ್ನು ಹಾರಿಸುತ್ತ ಹೊತ್ತು ತರಬಹುದಾಗಿದೆ” ಎಂದು ಮೂಲಗಳು ತಿಳಿಸಿವೆ.
ಹಸ್ತಾಂತರಿಸುವ ಸಮಾರಂಭದಲ್ಲಿ, ಫ್ರಾನ್ಸ್ನ ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ವಿಮಾನವನ್ನು ತಯಾರಿಸಿದ ಡಸಾಲ್ಟ್ ಏವಿಯೇಷನ್ನ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.