ಸಮರ್ಪಣ ಭಾರತ… ಹೆಸರೇ ಎಷ್ಟು ಚಂದ! ಅಲ್ಲೊಂದು ಅರ್ಪಣೆಯ ಭಾವ. ಇದು ನೊಂದವರ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಹೊರಟವರ ಕಥೆ. ಗಟ್ಟಿವಂತರ ನಾಡು ಹುಬ್ಬಳ್ಳಿ ಧಾರವಾಡಗಳ ಮೃದು ಮನಸ್ಸುಗಳ ಬಗ್ಗೆ ಒಂದಿಷ್ಟು ಸಾಲುಗಳು. ಬ್ಯಾಂಕಿನಲ್ಲಿ ಕುಳಿತಿದ್ದರೆ ಆತ ಎಷ್ಟೊಂದು ಹಣ ಸಂಪಾದಿಸಬಹುದಿತ್ತು?! ಒಂದಲ್ಲ ಎರಡೆರಡು ಸರ್ಕಾರಿ ಬ್ಯಾಂಕುಗಳ ಪರೀಕ್ಷೆ ಗೆದ್ದ ಯುವಕ. ಬಹುಶಃ ಬ್ಯಾಂಕ್ ಪರೀಕ್ಷೆಗಳನ್ನು ಬರೆಯುವವರಿಗೆ ಗೊತ್ತಿರುತ್ತದೆ ಅದರ ಕಷ್ಟ. ಎರಡು ಕಡೆಯೂ ಆತನಿಗೆ ಯಾವುದಕ್ಕೂ ತೊಂದರೆಯಿರಲಿಲ್ಲ. ಆದರೂ ಸಮಾಜಮುಖಿ ತುಡಿತ ಅಲ್ಲೆಲ್ಲೂ ಇರಗೊಡಲಿಲ್ಲ. ಅವನ ಕನಸಿನ ಕೂಸಾಗಿ ಹುಟ್ಟಿದ್ದು ಸಮರ್ಪಣ ಭಾರತ. ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಟ್ರಸ್ಟ್ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗುವ ಮೂಲಕ ತನ್ನ ದಿಶೆಯನ್ನು ಸಾಬೀತು ಪಡಿಸಿದೆ. ನಾಲ್ಕು ಕಾಸು ಆದರೆ ಸಾಕು, ನಾವು ನಮ್ಮ ಮನೆ ಅಂತ ಬದುಕುವವರ ಮಧ್ಯೆ ಮನೆಯನ್ನೇ ಕಛೇರಿ ಮಾಡಿಕೊಂಡು, ನಾಳೆಗಳ ಕನಸು ಕಟ್ಟಿಕೊಂಡು, ದೊಡ್ಡ ಮನಸ್ಸುಗಳು ಒಗ್ಗೂಡಿದ ಸಮರ್ಪಣ ಭಾರತ ಟ್ರಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ.
ಕೇವಲ ದುಡ್ಡು ಸಂಪಾದಿಸುವುದೇ ಬದುಕಲ್ಲ, ಸೇವೆಯು ಬದುಕಿನ ಗುರಿ ಎಂದು ಅರ್ಥ ಮಾಡಿಕೊಳ್ಳಲು ಆತ ಬಹಳ ಸಮಯವನ್ನು ತೆಗೆದುಕೊಳ್ಳಲಿಲ್ಲ. ಮೂವತ್ತರ ಹರೆಯದ ಯುವಕ, ಹೆಸರು ಸುನಿಲ್ ಗುರಣ್ಣನವರ್. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳ ಮಾಜಿ ಉದ್ಯೋಗಿ. ಅವರು ಈ ಕನಸಿನ ಟ್ರಸ್ಟ್ನ ರೂವಾರಿ. ಅವರು ಸಮರ್ಪಣ ಭಾರತ ಕುರಿತು ಹೇಳುವುದು ಹೀಗೆ.
ಕಾಲೇಜು ದಿನಗಳಿಂದಲೇ ಸಮಾಜಕ್ಕಾಗಿ, ದೀನರಿಗಾಗಿ, ದುರ್ಬಲರಿಗಾಗಿ ಏನಾದರೂ ಮಾಡಲೇಬೇಕೆಂಬ ತುಡಿತ ಇದ್ದೇ ಇತ್ತು. ಅದಕ್ಕೆ ಸಹಮನಸ್ಕ ಗೆಳೆಯರೂ ಸೇರಿಕೊಂಡು ಕನಸನ್ನು ಕಟ್ಟುತ್ತಲೇ ಹೋದರು.
ಈ ನಡುವೆ ಇವರ ಇನ್ನೊಬ್ಬ ಗೆಳೆಯ ಮಲ್ಲಪ್ಪ ಬಂಡಿ. ಒಬ್ಬ ಹುಟ್ಟು ಅಂಧ ಯುವಕ. ಆದರೆ ಅಂಧತ್ವವನ್ನು ಗೆದ್ದು ನಿಂತು ವಿಶ್ವವಿದ್ಯಾಲಯದ ಬಂಗಾರದ ಪದಕ ವಿಜೇತ. ಸದ್ಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಕನ್ನಡ ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೂ ಇವರೂ ಪಿಯುಸಿ ಕಲಿಯುತ್ತಿದ್ದಾಗಲೇ ಗೆಳೆಯರು. ಇಬ್ಬರ ವಿಚಾರಗಳೂ ಹೆಚ್ಚೂ ಕಡಿಮೆ ಒಂದೇ ತರ. ಹಾಗೆ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ತುಡಿಯುತ್ತಿದ್ದ ಈ ಮನಸ್ಸುಗಳು ಮುಖ್ಯವಾಗಿ ನಮ್ಮ ಸಮಾಜದ ಅಡಿಗಲ್ಲಿರುವುದೇ ಶಾಲಾ-ಕಾಲೇಜುಗಳಲ್ಲಿ. ಅಲ್ಲಿ ನಾವು ವಿಧ್ಯಾರ್ಥಿಗಳಿಗೆ ಬರೀ ಪಠ್ಯವನ್ನಲ್ಲದೇ ಅವರ ಚಾರಿತ್ರ್ಯ ನಿರ್ಮಾಣ ಮಾಡಬೇಕು. ಅವರೊಂದು ಆದರ್ಶಯುತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತಹ ವಿದ್ಯೆ ನೀಡಬೇಕು. ಅವರು ಧೈರ್ಯಶಾಲಿಗಳೂ, ಛಲ ಬಿಡದವರೂ, ಜವಾಬ್ದಾರಿಯುತ ನಾಗರೀಕರೂ ಆಗಿ ಬೆಳೆಯಬೇಕು. ಹೀಗೆ ಒಂದು ಗಟ್ಟಿ, ಆದರ್ಶಯುತ ವ್ಯಕ್ತಿತ್ವ ಬೆಳೆಸದ ಯಾವುದೇ ಶಿಕ್ಷಣ ಮನುಷ್ಯನನ್ನು ಜೀವನ ಸಂಘರ್ಷಕ್ಕೆ ಅಣಿ ಮಾಡುವುದಿಲ್ಲ. ಹಾಗಾಗಿ ಸಮಾಜ ಸೇವೆಗಾಗಿ ನಾವು ಮಾಡುವ ಸಂಸ್ಥೆಯ ಮೂಲ ಕಾರ್ಯ ಶಿಕ್ಷಣ, ವ್ಯಕ್ತಿತ್ವ ವಿಕಸನವೇ ಆಗಿರಬೇಕು ಎಂದು ಕನಸು ಕಟ್ಟುತ್ತಲೇ ಹೋಗುತ್ತಾರೆ. ಮುಂದೆ ಕಾಲ ಕೂಡಿ ಬಂದು ಗೆಳೆಯರೆಲ್ಲರೂ ಸೇರಿ ಆಯ್ತು ಇನ್ನು ಕನಸು ಕಾರ್ಯರೂಪಕ್ಕೆ ಬರಲಿ ಎಂದು ನಿರ್ಧಾರ ಮಾಡಿ ಮುಂದೆ ಹೆಜ್ಜೆ ಇಟ್ಟಾಗ ಇವರಿಗೆ ಒತ್ತಾಸೆಯಾಗಿ ನಿಲ್ಲುತ್ತಾರೆ ಇವರ ಗೆಳೆಯನ ಅಣ್ಣನೂ, ವಕೀಲರೂ ಆದ ಬಸವರಾಜ ಮೇಗುಂಡಿ ಮತ್ತು ಉದ್ಯಮಿ ಮತ್ತು ಸುನೀಲ್ರ ಭಾವ ಶಂಕರ್ ಸುಂಕದ. ನೀವು ಮುಂದೆ ಸಾಗಿ ನಾವು ನಿಮ್ಮ ಜೊತೆಗಿದ್ದೇವೆ ಎಂದು ಧೈರ್ಯ ತುಂಬುತ್ತಾರೆ. ಹಾಗೆ ಮಲ್ಲಪ್ಪ ಬಂಡಿ ಮತ್ತು ಸುನಿಲ್ ಅವರ ಜಂಟಿ ಕನಸು ಅಂತ ಪ್ರಾರಂಭವಾದದ್ದೇ ಸಮರ್ಪಣ ಭಾರತ. 9ನೇ ಜೂನ್ 2019 ರಂದು ಗಿಡ ನೆಡುವ ಮೂಲಕ ವಿದ್ಯುಕ್ತವಾಗಿ ಆರಂಭ ಮಾಡಲಾಯಿತು.
“ನಾನು ಇವತ್ತು ಏನಾಗಿದ್ದೇನೊ ಅದಕ್ಕೆ, ಒಂದು ಮರ್ಯಾದೆಯುತ ಜೀವನ ಮಾಡುತ್ತಿದ್ದೇನೆ ಎಂಬುದಕ್ಕೆ ನನ್ನ ಪರಿಶ್ರಮ, ಪ್ರಯತ್ನಕ್ಕಿಂತ ಹೆಚ್ಚಾಗಿ ಎಲ್ಲೋ ಸೋತು ಕೂತಾಗ, ಹತಾಶನಾದಾಗ, ಅಸಹಾಯಕನಾಗಿದ್ದಾಗ ನನ್ನ ಕೈ ಹಿಡಿದ, ಸಹಾಯ ಮಾಡಿದ, ಬೆನ್ನಿಗೆ ನಿಂತ ಸ್ನೇಹಿತರು, ಸಂಬಂಧಿಗಳಿಲ್ಲದೇ ನನ್ನ ಯಾವುದೇ ಕನಸುಗಳು ನನಸಾಗಲು ಸಾಧ್ಯವೇ ಇರುತ್ತಿರಲಿಲ್ಲ. ನಾನು ಎಂಬಿಎ ಮಾಡಲು ಸಾಧ್ಯವೇ ಇಲ್ಲವೆಂಬಂತಹ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿ ಎಂಬಿಎ ಮಾಡಿಸಿದ್ದು ಖುದ್ದು ಅಣ್ಣನಿಗಿಂತ ಹೆಚ್ಚೇ ಆಗಿದ್ದ ಆ ಒಬ್ಬ ಸುಭಾಷ್ ಕೋಟಿ. ಅಕಾಲಿಕ ಮರಣ ಹೊಂದಿದ ಆ ಗೆಳೆಯನ ಋಣ ತೀರಿಸಲಾದೀತೆ? ಆತನನ್ನು ನೆನೆದರೆ ಇಂದಿಗೂ ಕಣ್ಣು ಹನಿ ತುಂಬಿಕೊಳ್ಳುತ್ತವೆ.
ಇದೇ ತರ ಜೊತೆಗೆ ನಿಂತು ಸಹಾಯ, ಬೆಂಬಲ, ಪ್ರೋತ್ಸಾಹ ಕೊಡುತ್ತಾ ಹೋದ ಬಾಲ್ಯ ಸ್ನೇಹಿತರು, ಕಾಲೇಜು ಸ್ನೇಹಿತರು ಜೀವನದ ವಿವಿಧ ಹಂತಗಳಲ್ಲಿ ಸಿಕ್ಕ ಸ್ನೇಹಿತರು, ಹಿತೈಷಿಗಳ ಸಹಕಾರ, ಪ್ರೋತ್ಸಾಹಗಳನ್ನು ನೆನೆಯದಿದ್ದರೆ ಆದೀತೆ?
ಹೀಗೆ ಸಮಾಜದ ಋಣ ಹೊತ್ತುಕೊಂಡಿರುವ ನಾವು ಸಮಾಜಕ್ಕಾಗಿ ನಮ್ಮ ಕೈಲಾದದ್ದು ಮಾಡಲೇಬೇಕಾದದ್ದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವೇ ಅಲ್ಲವೇ? ನಾವು ಮಾಜಿ ರಾಷ್ಟ್ರಾಧ್ಯಕ್ಷ ಅಬ್ದುಲ್ ಕಲಾಮ್ ರವರ ಪುರಾ ಯೋಜನೆಯನ್ನು ಅಲ್ಪ, ಸ್ವಲ್ಪ ಮಾರ್ಪಾಡುಗಳೊಂದಿಗೆ ಕಾರ್ಯರೂಪಕ್ಕೆ ತರುವ ಕನಸೂ ಇದೆ. PURA (Providing Urban Amenities in Rural Areas) Its aim is to develop self sustainable villages with advanced community farming, medical, infra facilities. ಕೇವಲ ಅಸಹಾಯಕತನಕ್ಕೆ ಯಾರೂ ತಮ್ಮ ಕನಸುಗಳನ್ನು ಕೊಂದುಕೊಳ್ಳಬಾರದು ಅದೇ ನಮ್ಮ ಧ್ಯೇಯ.
ಒಬ್ಬ ಕಡುಬಡವ ಹುಡುಗ ಪ್ರತಿಭಾವಂತ, ಜಾಣ, ಕಲಿತು ಮುಂದೆ ಬರಬಲ್ಲ ಸಾಮರ್ಥ್ಯ ಇರುವವ, ಆದರೆ ಬಡತನ, ಹಣದ ಕೊರತೆ, ತುರ್ತಾಗಿ ದುಡಿದು ಕುಟುಂಬ ಸಾಕಬೇಕಾದ ಅನಿವಾರ್ಯತೆಯಿಂದಾಗಿ ತನ್ನ ಶಿಕ್ಷಣವನ್ನು ಕೊನೆಗೊಳಿಸಬೇಕಾಗಿ ಬಂದರೆ? ಅಥವಾ ಉನ್ನತ ಶಿಕ್ಷಣಕ್ಕೆ ಹೋಗಲು ಹಣವೂ, ಧೈರ್ಯವೂ ಇಲ್ಲದೇ ಸಣ್ಣ-ಪುಟ್ಟ ಕೆಲಸಗಳಿಗೆ ತೃಪ್ತಿಪಟ್ಟುಕೊಳ್ಳುವಂತಾದರೆ? ಕೇವಲ ಬಡತನದ ಕಾರಣಕ್ಕಾಗಿ IAS, IPS, ಲೆಕ್ಚರರ್ ಇತ್ಯಾದಿ ಕನಸುಗಳನ್ನು ಕೊಂದುಕೊಳ್ಳಬೇಕಾಗಿ ಬಂದರೆ? ಇದು ಅನ್ಯಾಯವಲ್ಲವೇ?
ಒಂದು ಕಡೆ ಅನ್ನ ಗಟಾರಿಗೆ ಬಿದ್ದು ಪೋಲಾಗುತ್ತದೆ, ಇನ್ನೊಂದು ಕಡೆ ತುತ್ತು ಅನ್ನಕ್ಕೂ ಪರದಾಡುವ ಕೋಟ್ಯಾಂತರ ಜನರಿದ್ದಾರೆ. ಅನ್ಯಾಯವಲ್ಲವೇ?
ಒಬ್ಬ ಬಡವ, ದೀನ, ದುರ್ಬಲ ಪ್ರಭಾವಿಗಳು, ಸಬಲರ ವಿರುದ್ಧ ನ್ಯಾಯಕ್ಕಾಗಿ ಹೋರಾಡಲಾಗದ ಅವನ ಅಸಹಾಯಕತೆ ಅನ್ಯಾಯವಲ್ಲವೇ?
ಒಬ್ಬ ಬಡವ, ದುರ್ಬಲ, ವಸೂಲಿ ಇಲ್ಲದವ ಸರ್ಕಾರಿ ಕಛೇರಿಗಳಲ್ಲಿ ಸೌಲಭ್ಯಗಳಿಂದ ವಂಚಿತನಾಗುವುದು, ದಬ್ಬಾಳಿಕೆ, ಅಸಡ್ಡೆ, ತಾತ್ಸಾರಗಳನ್ನು ಅನುಭವಿಸಿ ಸೋತು ಸುಣ್ಣವಾಗುವುದು ಅನ್ಯಾಯವಲ್ಲವೇ?
ಇಲ್ಲಿ, ಕೆಲವು ಜನ ಕ್ಯಾನ್ಸರಿನಂತಹ ಮಾರಣಾಂತಿಕ ರೋಗಗಳನ್ನು ಎದುರಿಸಲಾಗದೇ ಹಣವಿಲ್ಲದೇ ಅಥವಾ ಕೇವಲ ಧೈರ್ಯವಿಲ್ಲದ ಕಾರಣಕ್ಕಾಗಿ ಸಾವನ್ನಪ್ಪುತ್ತಾರೆ. ಅನ್ಯಾಯವಲ್ಲವೇ?
ಇಲ್ಲಿ ಜನ ಸಾಮರ್ಥ್ಯವಿದ್ದೂ ತಮ್ಮ ಉದ್ಯೋಗ, ವಿದ್ಯಾಭ್ಯಾಸ, ಕಲೆ ಮೊದಲಾದವುಗಳ ಕುರಿತ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳದೇ ಕೇವಲ ಧೈರ್ಯ, ಆತ್ಮವಿಶ್ವಾಸವಿಲ್ಲದ ಕಾರಣಕ್ಕಾಗಿ ಕೊಂದುಕೊಳ್ಳುತ್ತಾರೆ. ಅನ್ಯಾಯವಲ್ಲವೇ?
ಇಲ್ಲಿ, ಬಡವರು, ದೀನರು, ದುರ್ಬಲರು ಅವರಿಗೆ ಭರವಸೆ ನೀಡಬಲ್ಲವರು, ಕೈ ಹಿಡಿದು ಎತ್ತಬಲ್ಲವರು, ಧೈರ್ಯ ಕೊಡಬಲ್ಲವರು, ಆತ್ಮವಿಶ್ವಾಸ ತುಂಬಬಲ್ಲವರು ಇಲ್ಲದೆ ಕಷ್ಟದಲ್ಲೇ ಬದುಕಿ ಸಾಯುವುದು ಅನ್ಯಾಯವಲ್ಲವೇ?
ಇಲ್ಲಿ, ಸಮರ್ಥರೂ ಕೂಡ ಧೈರ್ಯ, ಆತ್ಮವಿಶ್ವಾಸಗಳಿಲ್ಲದೇ ಹತಾಶರಾಗಿ ಬದುಕುವುದು ಅನ್ಯಾಯವಲ್ಲವೇ?
ಯೋಚಿಸಿ ನೋಡಿ,
ನಾವು ಇವತ್ತು ಜೀವನದಲ್ಲಿ ಏನಾಗಿದ್ದೇವೋ ಅದಕ್ಕೆ, ಸಮಾಜದಲ್ಲಿ ಸಬಲರಾಗಿ ಬದುಕುತ್ತಿರುವುದಕ್ಕೆ ಕೇವಲ ನಮ್ಮ ಶ್ರಮ, ಸಾಮರ್ಥ್ಯಗಳಷ್ಟೇ ಕಾರಣವೇ?
ಅಲ್ಲ. ನಮ್ಮ ಜೀವನದುದ್ದಕ್ಕೂ ಆಯಾ ಹಂತಗಳಲ್ಲಿ ನಮಗೆ ಸಹಾಯ ಮಾಡಿದ ತಂದೆ-ತಾಯಿ, ಸಹೋದರರು, ಸ್ನೇಹಿತರು, ಬಂಧುಗಳು, ಹಿತೈಷಿಗಳಂತಹ ಮಹಾನುಭಾವರು ಕೂಡ ನಮ್ಮ ಏಳ್ಗೆಗೆ ಕಾರಣ.
ಎಲ್ಲೋ ನಮಗೆ ಅವಶ್ಯವಿದ್ದಾಗ ಸಹಾಯ ಮಾಡಿದವರಿದ್ದಾರೆ. ಸೋತು ಕೂತಾಗ, ಭಯಪಟ್ಟಾಗ, ಎದೆಗುಂದಿದಾಗ, ಕಷ್ಟದಲ್ಲಿದ್ದಾಗ ನಮ್ಮ ಕೈ ಹಿಡಿದು ಎತ್ತಿದವರಿದ್ದಾರೆ, ಧೈರ್ಯ, ಸಾಂತ್ವನ ಹೇಳಿ ಆತ್ಮವಿಶ್ವಾಸ, ಭರವಸೆ ತುಂಬಿದವರಿದ್ದಾರೆ. ಹಾಗೆ, ಅಂತಹ ಮಹಾನುಭಾವರ ಸಹಾಯ ಪಡೆದು ಸಬಲರಾಗಿ ಬಾಳುತ್ತಿರುವ ನಮ್ಮ ಮೇಲೆ ಅವರ ಋಣವಿಲ್ಲವೇ? ಆ ಋಣ ತೀರಿಸಬೇಕಾದ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿಲ್ಲವೇ?
ಸಮಾಜದಲ್ಲಿರುವ ಬಡವರು, ಸಂತ್ರಸ್ತರು, ದುರ್ಬಲರಿಗೆ ನಮ್ಮ ಕೈಲಾದ ಸೇವೆ ಮಾಡುವ ಕನಿಷ್ಟ ಮಾನವೀಯ ನಡೆ ನಮ್ಮಲ್ಲಿರಬೇಕಾದದ್ದು ನಮ್ಮ ಸಾಮಾಜಿಕ ಜವಾಬ್ದಾರಿ ಅಲ್ಲವೇ? ಪ್ರತಿದಿನ, ಅನುಕ್ಷಣ ನಮ್ಮ ಉದ್ಧಾರಕ್ಕಾಗಿ, ಒಳ್ಳೆಯ ನಾಳೆಗಾಗಿ, ನಮ್ಮ ಸ್ವಾರ್ಥಕ್ಕಾಗಿ ಯೋಚಿಸುವ, ಜೀವಿಸುವ ನಾವುಗಳು ನಮ್ಮ ಜೀವನದ ಕಿಂಚಿತ್ ಕ್ಷಣಗಳನ್ನು, ಒಂದು ಚಿಕ್ಕ ಪಾಲನ್ನು ನಿಸ್ವಾರ್ಥ ಸೇವೆಗೆ ಮುಡಿಪಾಗಿಡಲಾರೆವೇ? ತೀರಾ ಗುಡ್ಡವನ್ನು ಕಿತ್ತಿಡಲಾರೆವೇನೋ, ಆದರೆ ನಡುದಾರಿಯಲ್ಲಿ ಬಿದ್ದ ಚಿಕ್ಕ ಕಲ್ಲೊಂದನ್ನು ತೆಗೆದು ರಸ್ತೆ ಪಕ್ಕಕ್ಕೆ ಎತ್ತಿಡಬಲ್ಲಷ್ಟು ಚಿಕ್ಕ ಕೆಲಸವನ್ನಾದರೂ ಮಾಡಬಲ್ಲೆವಲ್ಲವೇ ನಾವು?
ಬಡವರು, ಸಂತ್ರಸ್ತರು, ದುರ್ಬಲರನ್ನು ಕಂಡರೆ ಮಮ್ಮಲ ಮರುಗುವ, ಅವರ ಕಷ್ಟಗಳು ತೀರಲೆಂದು ದೇವರಲ್ಲಿ ಪ್ರಾರ್ಥಿಸುವ ನಾವು ಕನಿಕರ, ಕರುಣೆ ತೋರಿಸಿ ಮುಂದೆ ಸಾಗುವ ಬದಲು ಕಾರ್ಯರೂಪದಲ್ಲಿ ಕೈಲಾದ ಸೇವೆ ಮಾಡಬಲ್ಲೆವು. ಅಲ್ಲವೇ?
ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿ ಸಾಮಾಜಿಕ ಕ್ರಾಂತಿ ಮಾಡಲಾರೆವೇನೋ, ಆದರೆ ಸಣ್ಣ ಅಳಿಲು ಸೇವೆಯನ್ನಂತೂ ಮಾಡಬಲ್ಲೆವಲ್ಲವೇ ನಾವು?
ಹಾಗೆ, ಕೈಲಾದ ಸೇವೆ ಮಾಡಬೇಕೆಂಬ ಮಾನವೀಯ ಮನಸ್ಸುಳ್ಳ, ಸಾಮಾಜಿಕ ಜವಾಬ್ದಾರಿಯುಳ್ಳ ನಾವು-ನೀವೆಲ್ಲರೂ, ಒಬ್ಬರೇ ಮಾಡಲಾಗದ ಕೆಲಸಗಳನ್ನು ನಾವೆಲ್ಲ ಸೇರಿ ಮಾಡಬಹುದು. ಒಬ್ಬ ಮಾಡಬಹುದಾದ್ದನ್ನು ಎಲ್ಲರೂ ಸೇರಿದರೆ ಇನ್ನೂ ದಕ್ಷವಾಗಿ, ಚೆನ್ನಾಗಿ ಮಾಡಬಹುದು. ಹಾಗೆ, ನಿಸ್ವಾರ್ಥವಾಗಿ ಕೈಲಾದ ಸೇವೆ ಮಾಡುವ ಇಚ್ಛೆಯುಳ್ಳ ನಾವೆಲ್ಲ ಸೇರಿ ಆಗುವ ನಮ್ಮ ತಂಡವೇ ನಮ್ಮ NGO.
ನಮ್ಮ ಉದ್ದೇಶ:
To Serve the Needy,
Support the Downtrodden
Strengthen the Broke..”
ಅಬ್ಬಾ ಎಷ್ಟೊಂದು ಕನಸು, ಅದೆಷ್ಟು ನಂಬಿಕೆ. ಪ್ರತಿ ದೊಡ್ಡ ಪ್ರಯಾಣವೂ ಪುಟ್ಟ ಹೆಜ್ಜೆಗಳಿಂದಲೇ ಆರಂಭವಾಗುತ್ತದೆ. ಅಂತಹ ಒಂದು ಪುಟ್ಟ ಪುಟ್ಟ ಹೆಜ್ಜೆಗಳ ಪ್ರಯಾಣ ಆರಂಭವಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕರ್ನಾಟಕವೇ ತತ್ತರಿಸಿ ಹೋಗಿತ್ತು. ಜೀವ ತೆಯ್ದು ಸೂರು ಕಟ್ಟಿಕೊಂಡ ಅನೇಕರು ಅಕ್ಷರಶಃ ಬೀದಿಗೆ ಬಂದ ಕ್ಷಣಗಳು. ಆಗ ಸಮರ್ಪಣ ಭಾರತ ಟೊಂಕ ಕಟ್ಟಿ ನಿಂತಿತ್ತು. ಉತ್ತರ ಕರ್ನಾಟಕವನ್ನು ಕದಡಿದ ಪ್ರವಾಹಕ್ಕೆ ಕರಗಿದ ಸಂತ್ರಸ್ತರ ಬದುಕಿಗೆ ನೆರವು ನೀಡಲು ಮುಂದಾಯಿತು. ಮೊದಲ ಹಂತದಲ್ಲಿ ಆರಿಸಿಕೊಂಡಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕು. ಅಲ್ಲಿ ಹೋಗಿ ನಿಂತಾಗ ಕಣ್ಣೆದುರು ಕಂಡದ್ದು ಚೆಲ್ಲಾ ಪಿಲ್ಲಿಯಾದ ಬದುಕಷ್ಟೆ. ಒಂದು ನೂರಾ ಐವತ್ತು ಸಂತ್ರಸ್ತ ಕುಟುಂಬಗಳು. ಕಮರಿದ ಬದುಕಿಗಳಿಗೆ ನೆರವಿನ ಹಸ್ತ ಚಾಚಿ ಹೊದಿಕೆಗಳು, ಚಾಪೆ, ಟವೆಲ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್ಸ್, ಗ್ಲೂಕೋಸ್ ಮತ್ತು ಸಾಬೂನು ಹೀಗೆ ಅನೇಕ ಅವಶ್ಯಕ ವಸ್ತುಗಳನ್ನು ಟ್ರಸ್ಟ್ ವಿತರಿಸಿ ಬಂದಿತು. ಆ ಕೆಲಸ ಅದೆಷ್ಟು ವಿಶ್ವಾಸ ತುಂಬಿತು ಎಂದರೆ ಅದೇ ಕ್ಷಣದಲ್ಲೇ ಎರಡನೆಯ ಹಂತದ ನೆರವಿಗೂ ತೀರ್ಮಾನಿಸಿ ಬಿಟ್ಟಿದ್ದರು.
ಎರಡನೆಯ ಹಂತದಲ್ಲಿ ಅಳ್ನಾವರ, ಖಾನಾಪುರ ತಾಲ್ಲೂಕುಗಳಲ್ಲಿ ಛಿದ್ರಗೊಂಡ ಬದುಕುಗಳ ನೆರವಿಗೆ ನಿಂತಿತ್ತು. ಮಸ್ಕೇನಹಟ್ಟಿ ಗ್ರಾಮದಲ್ಲಿ ಟ್ರಸ್ಟ್ ಆಶಾಕಿರಣವಾಯಿತು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ಆ ಕುಟುಂಬಗಳನ್ನು ನಂಬಿಕೊಂಡಿದ್ದ ಜೀವರಾಶಿ.. ಜಾನುವಾರುಗಳು. ಪ್ರವಾಹದ ಸಮಯದಲ್ಲಿ ಅಸಂಖ್ಯಾತ ಜಾನುವಾರುಗಳು ಮಳೆಗೆ ಮೃತಪಟ್ಟರೆ, ಇನ್ನುಳಿದವು ಹಸಿವಿಗೆ ಹೈರಾಣಾಗಿದ್ದವು. ಅದನ್ನು ಗಮನಿಸಿದ ಸಮರ್ಪಣ ಭಾರತ ಟ್ರಸ್ಟ್ ಶಿವಯೋಗಿ ಮಂದಿರದ ಗೋಶಾಲೆಗೆ ಒಂದು ಟ್ರಕ್ ಮೇವು ನೀಡಿತು. ಇವರ ಪ್ರಯತ್ನಗಳಿಗೆ ಒಂದು ದೊಡ್ಡ ಸಲಾಮ್. ಅಲ್ಲಿ ಇದ್ದುದು ನಿಸ್ವಾರ್ಥದ ಸೇವೆ. ಯಾರೂ ಸಿರಿವಂತರಲ್ಲ, ಅದು ತೆರಿಗೆ ವಿನಾಯಿತಿಗೆ ಮಾಡಿದ ಕೆಲಸವೂ ಅಲ್ಲ. ಪರಿಶುದ್ಧ ಮನಸ್ಸಿನ ನೆರವಿನ ಕಾರ್ಯ.
ಇದಾಗಲೇ ಐವತ್ತರಿಂದ ಅರವತ್ತು ಸದಸ್ಯರು ಇರುವ ಸಮರ್ಪಣ ಭಾರತ ಟ್ರಸ್ಟ್ನಲ್ಲಿ ಏಳು ಜನರ ನಿರ್ದೇಶಕ ಮಂಡಳಿಯಿದೆ. ಅದಕ್ಕೆ ಸುನಿಲ್ ಗುರಣ್ಣನವರ್ ಅವರೇ ಕಾರ್ಯದರ್ಶಿ. ಬರೇ ಎರಡು ತಿಂಗಳ ಕೂಸಾದ ಸಮರ್ಪಣ ಭಾರತ ಪ್ರವಾಹದ ಸಮಯದಲ್ಲಿ ಸುಮಾರು 150 ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿಗಳಷ್ಟು ಮೌಲ್ಯದ ನೆರವು ನೀಡಿತು ಎಂದರೆ ಅವರ ಸಮರ್ಪಣಾ ಮನೋಭಾವ ತಿಳಿಯುತ್ತದೆ. ಈಗಂತೂ ಸದಸ್ಯರ ದತ್ತಿಯಿಂದಲೇ ನಡೆಯುತ್ತಿರುವ ಟ್ರಸ್ಟ್ ನೂರ್ಕಾಲ ಬಾಳಲು ಎಲ್ಲರ ನೆರವು ಬೇಕು. ಉದ್ಯೋಗಾಸಕ್ತರಿಗೆ ತರಬೇತಿ, ಆರೋಗ್ಯ ತಪಾಸಣಾ ಶಿಬಿರ, ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಏರ್ಪಾಟು ಹೀಗೆ ರಾಶಿ ರಾಶಿ ಕನಸುಗಳ ಜೋಳಿಗೆ ಸಮರ್ಪಣ ಭಾರತ. ನಿಮ್ಮ ಪುಟ್ಟ ನೆರವಿನ ಹಸ್ತ ಅವರಿಗೆ ದೊಡ್ಡ ಅಭಯ.
ಸಮರ್ಪಣ ಭಾರತ ಟ್ರಸ್ಟ್ ಖಾತೆ ವಿವರ –
ಹೆಸರು – ಸಮರ್ಪಣ ಭಾರತ ಟ್ರಸ್ಟ್,
ಕೆನರಾ ಬ್ಯಾಂಕ್,
IFSC – CNRB0002949
Account Number – 2949101005602
ಸಂಪರ್ಕಿಸಲು,
ಸುನಿಲ್ ಗುರಣ್ಣನವರ್, ಕಾರ್ಯದರ್ಶಿ, ಸಮರ್ಪಣ ಭಾರತ ಟ್ರಸ್ಟ್.
ಫೋನ್ ನಂಬರ್ – 9620038114
ಟ್ರಸ್ಟ್ ವಿಳಾಸ – ಸಮರ್ಪಣ ಭಾರತ ಟ್ರಸ್ಟ್ (R)
#73, ಶಬರಿ ನಗರ, ಕೂಸುಗಲ್ ರಸ್ತೆ, ಕೇಶ್ವಾಪುರ್, ಹುಬ್ಬಳ್ಳಿ -580023
ಇದೆಲ್ಲವನ್ನೂ ನೋಡಿದಾಗ ಹೆಮ್ಮೆ ಎನ್ನಿಸುತ್ತದೆ. ಹೊಸ ನಾಡೊಂದನು, ರಸದ ಬೀಡೊಂದನು ಕಟ್ಟಲು ಹೊರಟ ಸಮರ್ಪಣ ಭಾರತ ಟ್ರಸ್ಟ್ ಭಾರತದಾದ್ಯಂತ ವಿಜೃಂಭಿಸಲಿ. ಹೀಗೆ ಅನೇಕರಿಗೆ ನೆರವು ಶಕ್ತಿ ದೇವರು ಅವರಿಗೆ ನೀಡಲಿ. ಕನಸುಗಳಿಗೆ ಯಾವ ಗಡಿಯೂ ಇರುವುದಿಲ್ಲ, ಮಾಡುವ ಮನಸ್ಸು ಇದ್ದರೆ ಸಾಕು. ಒಳ್ಳೆಯ ಮನಸ್ಸುಗಳಿಗೆ ಸದಾ ಒಳ್ಳೆಯದೇ ಆಗುತ್ತದೆ ಎಂಬ ಮಾತಿದೆ. ಹಾಗೆಯೇ ಸಮರ್ಪಣ ಭಾರತ ಸದಾಕಾಲ ಇರಲಿ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.