ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಮುನ್ನಡೆಸಿದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ. ಸಿವನ್ ಅವರ ಜೀವನಗಾಥೆಯೇ ಒಂದು ಪ್ರೇರಣೆ. ಸಾಮಾನ್ಯ ರೈತನ ಮಗನಾಗಿರುವ ಅವರು ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿಯನ್ನು ಹಾಕುವಷ್ಟು ಅನುಕೂಲವನ್ನೂ ಪಡೆದಿರಲಿಲ್ಲ. ಆದರೆ ಇಂದು ಅವರು ದೇಶದ ಅಗ್ರಗಣ್ಯ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ.
ಚಂದ್ರಯಾನ-2 ಯೋಜನೆಯಲ್ಲಿ ಅವರು ತಮ್ಮನ್ನು ತಾವು ಎಷ್ಟು ಸಮರ್ಪಿಸಿಕೊಂಡಿದ್ದರೆಂದರೇ ಅದು ಹಿನ್ನಡೆ ಅನುಭವಿಸಿದಾಗ ಎಳೆ ಮಗುವಿನಂತೆ ಅವರು ಕಣ್ಣೀರು ಹಾಕಿದ್ದಾರೆ. ದೇಶದ ಪ್ರಧಾನಿಯವರೇ ಅವರನ್ನು ಬಿಗಿದಪ್ಪಿ ಸಂತೈಸಬೇಕಾಯಿತು. ಈ ಭಾವುಕ ಕ್ಷಣದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಂತೆ ಮೋದಿ ಪ್ರತಿಯೊಬ್ಬ ವಿಜ್ಞಾನಿಗೂ ಧೈರ್ಯವನ್ನು ತುಂಬಿದ್ದಾರೆ.
ಕೆ.ಸಿವನ್ ಅವರು ತಮ್ಮ ವಿದ್ಯಾರ್ಥಿ ಜೀವನದ ಬಹು ಸಮಯದವರೆಗೆ ಪ್ಯಾಂಟ್ ಅನ್ನು ಕೂಡ ಹೊಂದಿರಲಿಲ್ಲ, ಧೋತಿಯನ್ನುಟ್ಟು ಕಾಲೇಜಿಗೆ ಬರುತ್ತಿದ್ದರು. ಆದರೆ ಸಂಕಷ್ಟಗಳು, ಮುಗ್ಗಟ್ಟುಗಳು ಅವರ ಗುರಿಗೆ ತಡೆಯುಂಟು ಮಾಡಿಲ್ಲ. “ನಾನು ಏನನ್ನು ಪಡೆದುಕೊಂಡಿಲ್ಲವೋ ಅದರ ಬಗ್ಗೆ ಚಿಂತಿಸುವುದಿಲ್ಲ. ನನಗೆ ಏನು ನೀಡಲಾಯಿತೋ ಅದರಲ್ಲಿ ತಜ್ಞತೆಯನ್ನು ಪಡೆದುಕೊಂಡಿದ್ದೇನೆ” ಎಂದು ಸಿವನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
“ನಮ್ಮ ಹಳ್ಳಿಯಲ್ಲಿ ನಾವು ಬಹಳ ಆಸಕ್ತಿದಾಯಕವಾದ ಜೀವನವನ್ನು ಹೊಂದಿದ್ದೆವು. ಶಾಲೆಯ ಬಳಿಕ ನಾವು ಕೃಷಿ ಚಟುವಟಿಕೆಯಲ್ಲಿ ಕೆಲಸ ಮಾಡಬೇಕಾಗಿತ್ತು. ನನ್ನ ತಂದೆ ಕೃಷಿಕರಾಗಿದ್ದರು. ಋತುವಿನ ಸಂದರ್ಭದಲ್ಲಿ ಅವರು ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ರಜಾದಿನಗಳಲ್ಲಿ ನಾವು ಮಾವಿನ ತೋಟಕ್ಕೆ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದೆವು. ನಾನು ಇದ್ದಾಗ ನನ್ನ ತಂದೆ ಕಾರ್ಮಿಕನನ್ನು ನೇಮಿಸಿಕೊಳ್ಳುತ್ತಿರಲಿಲ್ಲ “ಎಂದು ಡಾ. ಸಿವನ್ ಹೇಳುತ್ತಾರೆ.
ಕಾಲೇಜು ದಿನಗಳಲ್ಲೂ ಸಿವನ್ ಅವರು ತಮ್ಮ ತಂದೆಗೆ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಿದ್ದರು.
“ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಭಿನ್ನ ಭಿನ್ನವಾದ ಮಾನದಂಡಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ನನ್ನ ತಂದೆ ಹೊಂದಿದ್ದು ಒಂದೇ ಮಾನದಂಡ, ಅದೆಂದರೆ ಕಾಲೇಜು ಮನೆಗೆ ಹತ್ತಿರದಲ್ಲಿ ಇರಬೇಕೆಂದು. ಕಾಲೇಜು ಹತ್ತಿರದಲ್ಲಿದ್ದರೆ ಬೇಗ ಬಂದು ತನಗೆ ಸಹಾಯ ಮಾಡಬಹುದೆಂಬುದು ಅವರ ಅನಿಸಿಕೆಯಾಗಿತ್ತು. ಬಾಯಿಗೊಂದು ತುತ್ತು ಎಂಬ ಪರಿಸ್ಥಿತಿಯಲ್ಲಿ ನಾವಿದ್ದೆವು” ಎಂದು ಅವರು ಹೇಳುತ್ತಾರೆ.
“ನಾನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದಾಗಿನಿಂದ ಮಾತ್ರ ನಾನು ಚಪ್ಪಲಿ ಧರಿಸಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ನಾವು ಬರಿಗಾಲಿನಲ್ಲಿ ನಡೆಯುತ್ತಿದ್ದೆವು. ನಮ್ಮಲ್ಲಿ ಯಾವುದೇ ಪ್ಯಾಂಟ್ ಇರಲಿಲ್ಲ, ನಾವು ಯಾವಾಗಲೂ ಧೋತಿಯಲ್ಲೇ ಇರುತ್ತಿದ್ದೆವು” ಎಂದು ಡಾ.ಸಿವನ್ ನಗುತ್ತಾ ನೆನಪಿಸಿಕೊಳ್ಳುತ್ತಾರೆ.
ಸಂಕಷ್ಟಗಳ ನಡುವೆಯೂ ತಮ್ಮ ಪೋಷಕರು ತಮಗೆ ದಿನಕ್ಕೆ ಮೂರು ಹೊತ್ತು ಊಟ ನೀಡುತ್ತಿದ್ದರು ಎಂದು ಸಿವನ್ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. “ನಮ್ಮ ಸ್ಥಿತಿ ಅಷ್ಟೊಂದು ಕೆಟ್ಟದಿರಲಿಲ್ಲ. ನಮ್ಮ ಪೋಷಕರು ನಮಗೆ ಮೂರು ಹೊತ್ತು ಊಟ ಕೊಡುವಷ್ಟು ಶಕ್ತರಾಗಿದ್ದರು” ಎನ್ನುತ್ತಾರೆ.
ತಮ್ಮ ಉನ್ನತ ವ್ಯಾಸಂಗದ ಬಗ್ಗೆ ಮಾತನಾಡಿರುವ ಡಾ.ಸಿವನ್ ಅವರು, ತನ್ನ ತಂದೆಗೆ ಎಂಜಿನಿಯರಿಂಗ್ ಕೋರ್ಸ್ಗೆ ಹಣ ನೀಡಲು ಸಾಧ್ಯವಾಗದ ಕಾರಣ ಬ್ಯಾಚುಲರ್ ಆಫ್ ಸೈನ್ಸ್ ಕಲಿಯಬೇಕಾಯಿತು ಎಂದಿದ್ದಾರೆ.
“ನಾನು ಎಂಜಿನಿಯರಿಂಗ್ಗೆ ಹೋಗಬೇಕೆಂದು ಬಯಸಿದ್ದೆ ಆದರೆ ಆ ಕೋರ್ಸ್ ತುಂಬಾ ದುಬಾರಿಯಾಗಿತ್ತು. ಹೀಗಾಗಿ ನನ್ನ ತಂದೆ ಬಿಎಸ್ಸಿ (ಬ್ಯಾಚುಲರ್ ಆಫ್ ಸೈನ್ಸ್) ಮಾಡುವಂತೆ ನನಗೆ ಹೇಳಿದರು. ನಾನು ವಿರೋಧಿಸಿದೆ. ಮಾತ್ರವಲ್ಲ, ನನ್ನ ತಂದೆಯ ಮನಸ್ಸನ್ನು ಬದಲಾಯಿಸಲು ನಾನು ಒಂದು ವಾರಗಳ ಕಾಲ ಉಪವಾಸ ಮಾಡಿದ್ದೇನೆ. ಆದರೆ ಅಂತಿಮವಾಗಿ, ನಾನು ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳಬೇಕಾಯಿತೇ ಹೊರತು ತಂದೆ ಬದಲಾಗಲಿಲ್ಲ” ಎನ್ನುತ್ತಾರೆ.
“ನಂತರ ನಾನು ಬಿಎಸ್ಸಿ ಮೆಥಮ್ಯಾಟಿಕ್ಸ್ ಮಾಡಿದೆ. ಬಳಿಕ ನನ್ನ ತಂದೆ ನನ್ನ ಬಳಿ ಬಂದು, ‘ನಿನಗೆ ಬೇಕಾದುದನ್ನು ನೀನು ಮಾಡುವುದನ್ನು ಒಮ್ಮೆ ನಾನು ನಿಲ್ಲಿಸಿದ್ದೇನೆ, ಆದರೆ ಈ ಬಾರಿ ನಾನು ನಿನ್ನನ್ನು ಖಂಡಿತಾ ತಡೆಯುವುದಿಲ್ಲ. ನಿನ್ನ ಎಂಜಿನಿಯರಿಂಗ್ ಕೋರ್ಸ್ಗೆ ಹಣ ನೀಡಲು ನಾನು ಭೂಮಿಯನ್ನು ಮಾರಾಟ ಮಾಡುತ್ತೇನೆ’ ಎಂದು ಹೇಳಿದರು. ಅದರಂತೆ ಬಿಟೆಕ್ ಮಾಡಿದೆ ಎಂದು ಸಿವನ್ ಹೇಳುತ್ತಾರೆ
“ಬಿಟೆಕ್ ಮಾಡಿದ ನಂತರ, ಆ ಸಮಯದಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಬಹಳ ಸೀಮಿತ ಉದ್ಯೋಗಗಳು ಇದ್ದ ಕಾರಣ ನಾನು ಕೆಲಸಕ್ಕಾಗಿ ಕಷ್ಟಪಡಬೇಕಾಯಿತು. ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮತ್ತು ಎನ್ಎಎಲ್ (ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್) ನಲ್ಲಿ ಮಾತ್ರ ಅವಕಾಶಗಳಿತ್ತು. ನನಗೆ ಕೆಲಸ ಸಿಗಲಿಲ್ಲ, ಹೀಗಾಗಿ ನಾನು ಐಐಎಸ್ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಮುಂದಾದೆ” ಎನ್ನುತ್ತಾರೆ.
ತಮ್ಮ ಇಡೀ ಜೀವನದಲ್ಲಿ ಸಿವನ್ ಅವರು ಏನು ಆಸೆ ಪಟ್ಟರೋ ಅದು ಸಿಗಲಿಲ್ಲ. ಆದರೆ ಅವರು ತಮಗೆ ಸಿಕ್ಕಿದ್ದರಲ್ಲೇ ಪರಿಪಕ್ವತೆಯನ್ನು ಪಡೆಯುತ್ತಾ ಹೋದರು.
“ನಾನು ಸ್ಯಾಟಲೈಟ್ ಸೆಂಟರಿಗೆ ಸೇರಲು ಬಯಸಿದ್ದೆ ಆದರೆ ನನಗೆ ಸಿಕ್ಕಿದ್ದು ವಿಕ್ರಮ್ ಸಾರಾಭಾಯ್ ಸೆಂಟರ್. ಅಲ್ಲಿ ಕೂಡ ಏರೋಡೈನಮಿಕ್ಸ್ ಗ್ರೂಪ್ ಸೇರಲು ಬಯಸಿದ್ದೆ ಆದರೆ ಸೇರಿದ್ದು ಪಿಎಸ್ಎಲ್ವಿ ಪ್ರಾಜೆಕ್ಟ್ಗೆ. ಎಲ್ಲಾ ಕಡೆಯೂ, ನನಗೆ ಏನು ಬೇಕಾಗಿತ್ತೂ ಅದು ಸಿಗಲಿಲ್ಲ” ಎಂದು ಸಿವನ್ ಹೇಳುತ್ತಾರೆ.
ಪ್ರಸ್ತುತ ಕೆ.ಸಿವನ್ ಅವರು ಇಸ್ರೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಮ್ರ ಹಿನ್ನಲೆಯಿಂದ ಬಂದ ಅವರು ಅತ್ಯಂತ ವಿನಮ್ರರಾಗಿಯೇ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಇಷ್ಟು ಎತ್ತರಕ್ಕೆ ಸಾಗಿ ಬಂದ ಹಾದಿ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.