ಭಾರತದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಕಾಲಘಟ್ಟಕ್ಕೆ ಅನಿವಾರ್ಯ ಎನಿಸಿರುವ “ಫಿಟ್ ಇಂಡಿಯಾ ಅಭಿಯಾನ” ವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನವು ಭಾರತೀಯರಿಗೆ ತಮ್ಮ ಫಿಟ್ನೆಸ್ ಮಟ್ಟವನ್ನು, ಸೃಜನಶೀಲ ಸಾಮರ್ಥ್ಯವನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಫಿಟ್ ಇಂಡಿಯಾ ಅಭಿಯಾನವು ಲಕ್ಷಾಂತರ ಭಾರತೀಯರನ್ನು ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಲು ಪ್ರೇರೇಪಿಸುತ್ತದೆ. ವಿಶ್ವದ ಅತ್ಯಂತ ಕ್ರಿಯಾಶೀಲ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ನರೇಂದ್ರ ಮೋದಿ ಅವರು ತಮ್ಮ ದೈಹಿಕ ದೃಢತೆ ಮತ್ತು ಸಹಿಷ್ಣುತೆಯ ಸಾಮರ್ಥ್ಯವನ್ನು ದೇಶದ ಮುಂದೆ ಅನಾವರಣಗೊಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಭಾರತದ ಅನೇಕ ಪ್ರಾದೇಶಿಕ ಪಕ್ಷಗಳನ್ನು ಹಿನ್ನಲೆಗೆ ಸರಿಸಿದ 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವಿರತವಾಗಿ ದಿನಕ್ಕೆ ಕನಿಷ್ಠ ಎರಡರಂತೆ ಸಮಾವೇಶಗಳನ್ನು ಆಯೋಜನೆಗೊಳಿಸಿದ್ದಾರೆ. ದೇಶದ ಮೂಲೆ ಮೂಲೆಯನ್ನು ಸುತ್ತಿದ್ದಾರೆ. ಮೋದಿಯವರು 2013ರ ಸೆಪ್ಟೆಂಬರ್ ಮತ್ತು 2014 ರ ಮೇ 10ರ ನಡುವೆ 425 ಸಾರ್ವಜನಿಕ ಸಮಾವೇಶಗಳನ್ನು ನಡೆಸಿದ್ದಾರೆ. ಇದು ನಿಜಕ್ಕೂ ನಂಬಲಾಗದ ಸಾಧನೆಯಾಗಿದೆ. 2019 ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅವರು 142 ಸಮಾವೇಶಗಳನ್ನು ನಡೆಸಿದ್ದಾರೆ ಮತ್ತು 1.5 ಲಕ್ಷ ಕಿಲೋಮೀಟರ್ ಸಂಚರಿಸಿದ್ದಾರೆ. ಅವರ ಶಿಸ್ತು, ಆಹಾರ ಪದ್ಧತಿ, ನಿಯಮಿತ ಯೋಗ ಮತ್ತು ದೈಹಿಕ ವ್ಯಾಯಾಮವು ರಾಷ್ಟ್ರ ನಿರ್ಮಾಣಕ್ಕಾಗಿ ಅವರನ್ನು ಸದೃಢವಾಗಿ ಮತ್ತು ಬಲವಾಗಿ ಇರುವಂತೆ ಮಾಡಿದೆ. ಭಾರತವನ್ನು ಸಂತೋಷವಾಗಿರಿಸಲು ಮತ್ತು ಸದೃಢವಾಗಿಸಲು ಲಕ್ಷಾಂತರ ಭಾರತೀಯರಿಗೆ ಯೋಗ ಮತ್ತು ಸೂರ್ಯನಮಸ್ಕಾರಗಳನ್ನು ಮಾಡುವಂತೆ ಮೋದಿ ಸದಾ ಪ್ರೇರೇಪಿಸುತ್ತಾರೆ.
ಫಿಟ್ ಇಂಡಿಯಾ ಅಭಿಯಾನವು ಲಕ್ಷಾಂತರ ಭಾರತೀಯರನ್ನು ರೋಗಗಳು, ಅಕಾಲಿಕ ಸಾವುಗಳು ಮತ್ತು ಯಾತನೆಗಳಿಂದ ರಕ್ಷಿಸಲಿದೆ. ಮೋದಿ ಈಗಾಗಲೇ ಯೋಗ ಸೂತ್ರದ ಮೂಲಕ ದೇಶದ ಜನರನ್ನು ಬೆಸೆದಿದ್ದಾರೆ ಮತ್ತು ಪ್ರಸ್ತುತ ಫಿಟ್ ಇಂಡಿಯಾ ಅಭಿಯಾನದ ಮೂಲಕ ಅವರು ದೇಶಾದ್ಯಂತದ ಜಾತಿ ಮತ್ತು ಭಾಷಾ ವಿಭಜನೆಯನ್ನು ತೊಡೆದು ಜನರನ್ನು ಪರಸ್ಪರ ಬೆಸೆಯಲು ಮುಂದಾಗಿದ್ದಾರೆ. ಆರ್ಎಸ್ಎಸ್ ಪ್ರಚಾರಕ್ ಆಗಿದ್ದ ಪ್ರಧಾನಿ ಮೋದಿ ಜನರಲ್ಲಿ ಆರ್ಎಸ್ಎಸ್ ಶಾಖೆಯ ಅತ್ಯುತ್ತಮ ಮಾನವ ಸಂಪನ್ಮೂಲ ಸಾಧನಗಳನ್ನು ಪರಿಚಯಿಸುತ್ತಿದ್ದಾರೆ. ಆರೆಸ್ಸೆಸ್ ತನ್ನ ಶಾಖೆಯಲ್ಲಿ ಲಕ್ಷಾಂತರ ಜನರಿಗೆ ಅವರ ಜಾತಿ, ಭಾಷೆ ಮತ್ತು ಧರ್ಮಗಳನ್ನು ಲೆಕ್ಕಿಸದೆ ನಿತ್ಯ ಒಂದು ಗಂಟೆಯ ಕಾಲ ಸೂರ್ಯ ನಮಸ್ಕಾರ ಮತ್ತು ಯೋಗವನ್ನು ಕಲಿಸುತ್ತದೆ. ಇಷ್ಟು ಮಾತ್ರವಲ್ಲದೇ, ಮಾನವ ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವಿವಿಧ ಸ್ಥಳೀಯ ಆಟಗಳನ್ನು ಹೇಗೆ ಆಡಬೇಕೆಂದೂ ಆರ್ಎಸ್ಎಸ್ ಯುವಕರಿಗೆ ಕಲಿಸುತ್ತದೆ. ಉದಾಹರಣೆಗೆ, ಕಬ್ಬಡ್ಡಿ ಆಡುವುದು ಆರ್ಎಸ್ಎಸ್ ಚಟುವಟಿಕೆಯ ಅವಿಭಾಜ್ಯ ಅಂಗವಾಗಿದೆ. ಇದು ಧೈರ್ಯ, ಜಾಗರೂಕತೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಬ್ಬಡ್ಡಿ ಈಗ ದೇಶದಲ್ಲಿ ಮತ್ತಷ್ಟು ಜನಪ್ರಿಯವಾಗಿದೆ. ದುಬಾರಿಯಲ್ಲದ ಈ ಆಟವು ಭಾರತವನ್ನು ದಿಟ್ಟ ಮತ್ತು ಶಕ್ತಿಯುತ ದೇಶವಾಗಿ ಪರಿವರ್ತಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಆರ್ಎಸ್ಎಸ್ ತನ್ನ ದೈನಂದಿನ ಪ್ರಾರ್ಥನೆಯಾದ “ನಮಸ್ತೆ ಸದಾ ವತ್ಸಲೆ ಮಾತೃಭೂಮಿ…” ನೊಂದಿಗೆ ಶಾಖೆಯನ್ನು ಪ್ರಾರಂಭಗೊಳಿಸಿ ಯುವಕರಲ್ಲಿ ದೇಶಭಕ್ತಿಯನ್ನೂ ಹುಟ್ಟು ಹಾಕುತ್ತದೆ.
ಫಿಟ್ ಇಂಡಿಯಾ ಅಭಿಯಾನವು ಪ್ರತಿ ಪ್ರದೇಶದಲ್ಲೂ ಸಾರ್ವಜನಿಕ ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ. ಆರೋಗ್ಯ ಮತ್ತು ಸಂತೋಷಕ್ಕಾಗಿ ಈ ಸಾರ್ವಜನಿಕ ಆಟದ ಮೈದಾನಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದನ್ನು ನಮ್ಮ ದೇಶದ ಜನರು ಖಂಡಿತವಾಗಿಯೂ ಕಲಿಯಲಿದ್ದಾರೆ. ಉತ್ತಮ ಆರೋಗ್ಯ ಮತ್ತು ಉತ್ತಮ ಮನಸ್ಸು ದೇಶದ ಉತ್ಪಾದಕತೆಯನ್ನು ಹೆಚ್ಚಿಸಲಿದೆ. ಇತ್ತೀಚೆಗೆ ಭಾರತ ವಿಶ್ವ ಬ್ಯಾಡ್ಮಿಂಟನ್ ಶಕ್ತಿಯಾಗಿ ಹೊರಹೊಮ್ಮಿದೆ. ಬ್ಯಾಡ್ಮಿಂಟನ್ನಲ್ಲಿ ಮೊದಲ ಬಾರಿಗೆ ಪಿ ವಿ ಸಿಂಧು ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಾಕಿಯಲ್ಲಿ ಕಳೆದುಕೊಂಡ ವೈಭವವನ್ನು ಭಾರತ ಮರಳಿ ಪಡೆದುಕೊಂಡಿದೆ. ಇದು ಏಷ್ಯನ್ ಮತ್ತು ಒಲಿಂಪಿಕ್ ಎರಡೂ ಕ್ರೀಡಾಕೂಟಗಳಲ್ಲಿ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಭಾರತಕ್ಕೆ ನೆರವಾಗಲಿದೆ.
ಜಾತಿ, ಭಾಷೆ ಮತ್ತು ಧರ್ಮಗಳನ್ನು ಮೀರಿ ಭಾರತೀಯರು ಪ್ರತಿವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಸಾಕಷ್ಟು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಪ್ರಧಾನಿ ಮೋದಿ ಯೋಗಾಭ್ಯಾಸದಲ್ಲಿ ಅತೀವ ಆಸಕ್ತಿ ಹೊಂದಿರುವ ವ್ಯಕ್ತಿಯಾಗಿದ್ದಾರೆ ಮತ್ತು ಅವರು ವೈಯಕ್ತಿಕವಾಗಿ ಮನವಿಯನ್ನು ಮಾಡಿ ಲಕ್ಷಾಂತರ ಜನರನ್ನು ಯೋಗಾಭ್ಯಾಸ ಮಾಡಲು ಪ್ರೇರೇಪಿಸಿದ್ದಾರೆ. ಯೋಗವು ಜೀವನ ವಿಧಾನವಾಗಿ ಮಾರ್ಪಟ್ಟಂತೆ, ಹೆಚ್ಚು ಹೆಚ್ಚು ಭಾರತೀಯರು ಸಂತೋಷ ಮತ್ತು ಶಾಂತಿಯನ್ನು ಕಂಡುಕೊಳ್ಳುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಸಂತೋಷದ ಮಟ್ಟವನ್ನು ಹೆಚ್ಚಿಸುವುದೇ ಪ್ರತಿ ಆರ್ಥಿಕ ಮಾದರಿಯ ಮುಖ್ಯ ಉದ್ದೇಶವಾಗುತ್ತದೆ. 2022 ರಲ್ಲಿ ಸಂತುಷ್ಟ ಜನರೊಂದಿಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಎಲ್ಲ ಸಾಮರ್ಥ್ಯವನ್ನು ಭಾರತ ಹೊಂದಿದೆ.
ಪ್ರಧಾನಿ ಮೋದಿಯವರು ಫಿಟ್ ಇಂಡಿಯಾ ಅಭಿಯಾನವನ್ನು ಸೂಕ್ತ ಸಮಯದಲ್ಲೇ ಪ್ರಾರಂಭಿಸಿದ್ದಾರೆ. “ಆರೋಗ್ಯ ಮತ್ತು ಫಿಟ್ನೆಸ್ ಇಲ್ಲದೆ ಸಂಪತ್ತಿಗೆ ಯಾವುದೇ ಅರ್ಥವಿಲ್ಲ” ಎಂಬ ಸಂದೇಶವೂ ಪ್ರಸ್ತುತ ಕಾಲಘಟ್ಟಕ್ಕೆ ಹೆಚ್ಚು ಅನ್ವಯಿಸುತ್ತದೆ. ದಶಕಗಳಿಂದಲೂ, ಭಾರತವು ವಿಶ್ವದ ಅತಿದೊಡ್ಡ ಸಂಖ್ಯೆಯ ಮಧುಮೇಹ ರೋಗಿಗಳಿಗೆ ನೆಲೆಯಾಗಿದೆ, ಮುಖ್ಯವಾಗಿ ಜಡ ಉದ್ಯೋಗಗಳ ಬೆಳವಣಿಗೆಯಿಂದಾಗಿ ಮಧುಮೇಹ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಫಿಟ್ ಇಂಡಿಯಾ ಅಭಿಯಾನವು ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲಿದೆ ಮತ್ತು ಜನರನ್ನು ಮತ್ತೆ ಆಟದ ಮೈದಾನಕ್ಕೆ ತರಲಿದೆ ಎಂಬುದು ಖಚಿತ. ಪ್ರತಿಯೊಂದು ವಲಯದಲ್ಲೂ ಆದಾಯ ಗಳಿಸುವ ಉದ್ಯೋಗಗಳಿವೆ. ಜನರು ಸದೃಢರಾಗಿದ್ದರೆ ಮಾತ್ರ ಅವರು ತಮ್ಮ ಹಣ್ಣಿನ ತೋಟ, ಕೃಷಿ ಸಾಕಣೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಾರೆ, ಮೀನುಗಾರಿಕೆಗೆ ಹೋಗುತ್ತಾರೆ, ತೋಟಗಾರಿಕೆ ಮಾಡುತ್ತಾರೆ ಮತ್ತು ತಮ್ಮ ಹವ್ಯಾಸಗಳು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ. ಇಲ್ಲದಿದ್ದರೆ ಎಲ್ಲದಕ್ಕೂ ಬ್ರೇಕ್ ಬೀಳುತ್ತದೆ.
ಪ್ರತಿಯೊಬ್ಬರೂ ತಮ್ಮನ್ನು ಸದೃಢವಾಗಿಡಲು ಮತ್ತು ಆರೋಗ್ಯವಾಗಿಡಲು ಆಟದ ಮೈದಾನವನ್ನು ಹೊಂದುವಂತಾಗಬೇಕು. ಅದೇ ರೀತಿ ಪ್ರತಿ ಐದು ಹಳ್ಳಿಗಳಿಗೆ ಒಂದು ಸಮುದಾಯ ಆಟದ ಮೈದಾನಗಳು ಇರಬೇಕು. ಇದರಿಂದ ಯುವಕರು ಫುಟ್ಬಾಲ್, ಕಬ್ಬಡಿ, ವಾಲಿಬಾಲ್ ಮತ್ತು ದುಬಾರಿಯಲ್ಲದ ಸ್ಥಳೀಯ ಆಟಗಳನ್ನು ಆಡಬಹುದಾಗಿದೆ. ಒಬ್ಬರನ್ನು ಸದೃಢವಾಗಿಡಲು ಈಜು ಅತ್ಯಂತ ಕಡಿಮೆ ವೆಚ್ಚದ ಮಾರ್ಗವಾಗಿದೆ. ಭಾರತವು 12000 ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ನದಿಗಳನ್ನು ಹೊಂದಿದೆ, ನೂರಾರು ಸರೋವರಗಳು ಮತ್ತು ಕೊಳಗಳನ್ನು ಈಜು ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪುನರುಜ್ಜೀವನಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಭಾರತದ 7516 ಕಿ.ಮೀ ಕರಾವಳಿಯು ಈಜಲು ಅವಕಾಶವನ್ನು ನೀಡುತ್ತದೆ.
ಈಜಲು ಅಪಾರ ನೈಸರ್ಗಿಕ ಮೂಲಸೌಕರ್ಯಗಳನ್ನು ಹೊಂದಿದ್ದರೂ ಕೂಡ ಭಾರತವು ಒಲಿಂಪಿಕ್ ಈಜು ಸ್ಪರ್ಧೆಯಲ್ಲಿ ಇದುವರೆಗೆ ಒಂದೇ ಒಂದು ಪದಕವನ್ನು ಗೆದ್ದಿಲ್ಲ ಎಂಬುದು ದುರಾದೃಷ್ಟಕರ. ಒಲಿಂಪಿಕ್ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ದೇಶವು ತನ್ನ ನೈಸರ್ಗಿಕ ಜಲಮೂಲಗಳನ್ನು ಬಳಸಿಕೊಳ್ಳಲು ಇದು ಸಕಾಲವಾಗಿದೆ. ಫಿಟ್ನೆಸ್ಗೆ ಮತ್ತೊಂದು ಕಡಿಮೆ ವೆಚ್ಚ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಸೈಕ್ಲಿಂಗ್. ಜನರ ಫಿಟ್ನೆಸ್ ಮಟ್ಟವನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಡೆನ್ಮಾರ್ಕ್, ಯುರೋಪ್ ಮತ್ತು ಜಪಾನ್ ನಂತಹ ದೇಶಗಳು ಮೀಸಲು ಸೈಕಲ್ ಟ್ರ್ಯಾಕ್ಗಳನ್ನು ಹೊಂದಿದೆ. ಅಂತಹ ವಿಧಾನವನ್ನು ಭಾರತವೂ ಅನುಸರಿಸಿದರೆ ಉತ್ತಮ. ಸೈಕಲ್ ಟ್ರ್ಯಾಕ್ ಭಾರತಕ್ಕೆ ವಿದೇಶಿ ಕರೆನ್ಸಿಯನ್ನು ಹರಿಸುವಲ್ಲಿಯೂ ಸಹಾಯ ಮಾಡಬಲ್ಲದು. ಫಿಟ್ ಇಂಡಿಯಾ ಕಾರ್ಯಕ್ರಮದ ಯಶಸ್ಸು ದೇಶಾದ್ಯಂತ ಇರುವ ಸ್ವಯಂಸೇವಾ ಸಂಘಟನೆಗಳ ಅವಿರತ ಪರಿಶ್ರಮವನ್ನು ಅವಲಂಬಿಸಿದೆ ಎಂಬುದು ದಿಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.