ಹೃದಯ ಸಂಬಂಧಿ ಸಮಸ್ಯೆಗಳ ಸಂದರ್ಭದಲ್ಲಿ ಗ್ರಾಮೀಣ ಭಾಗದ ವೈದ್ಯರುಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಗಳೂರಿನ ವೈದ್ಯ ಡಾ.ಪದ್ಮನಾಭ ಕಾಮತ್ ಅವರು ವಾಟ್ಸಾಪ್ ಗ್ರೂಪ್ಗಳನ್ನು ರಚನೆ ಮಾಡಿದ್ದಾರೆ. ಈ ಗ್ರೂಪ್ಗಳ ಮೂಲಕ ದಾನಿಗಳ ಸಹಾಯವನ್ನು ಪಡೆದು ಕುಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಚನೆ ಮಾಡಿದ್ದಾರೆ, ಮೊಬೈಲ್ ಮಾದರಿಯ ಲೈಫ್ ಇಸಿಜಿ ಉಪಕರಣಗಳನ್ನು ಹಂಚಿದ್ದಾರೆ. ಅವರ ಈ ಕಾರ್ಯವು ಗ್ರಾಮೀಣ ವೈದ್ಯರಿಗೆ ಹಿಂದುಳಿದ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಸಲಹೆ ಮತ್ತು ಆರಂಭಿಕ ಚಿಕಿತ್ಸೆಗಳನ್ನು ಒದಗಿಸಲು ಸಹಾಯ ಮಾಡುತ್ತಿದೆ. ವಾಟ್ಸಾಪ್ ಗ್ರೂಪ್ ಈಗಾಗಲೇ 800 ಕ್ಕೂ ಹೆಚ್ಚು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ!
ಚಿಕ್ಕಮಗಳೂರಿನ ಕುಗ್ರಾಮದ ರಿಕ್ಷಾ ಚಾಲಕರೊಬ್ಬರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣಕ್ಕೆ ಸಾವನ್ನಪ್ಪಿದ ಐದು ವರ್ಷಗಳ ಹಿಂದಿನ ಘಟನೆಯನ್ನು ಪದ್ಮನಾಭ ಕಾಮತ್ ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ.
“ಅವರಿಗೆ 32 ವರ್ಷ ವಯಸ್ಸಾಗಿತ್ತು, ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದರು ಮತ್ತು ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಚಿಕಿತ್ಸೆಯಲ್ಲಿ ವಿಳಂಬವಾಗಿರುವುದೇ ಅವರ ಸಾವಿಗೆ ಏಕೈಕ ಕಾರಣ” ಎಂದು ಡಾ.ಕಾಮತ್ ಹೇಳುತ್ತಾರೆ.
ಭಾರತದಲ್ಲಿ ಅಂಗವೈಕಲ್ಯ ಮತ್ತು ಸಾವಿಗೆ ಹೃದಯಾಘಾತವೇ ಪ್ರಮುಖ ಕಾರಣವಾಗಿದೆ ಎಂದು WHO ವರದಿ ಹೇಳುತ್ತದೆ. ನಮ್ಮ ದೇಶದಲ್ಲಿ ಹೃದ್ರೋಗದ ಹರಡುವಿಕೆಯು 1990 ರಲ್ಲಿ 2.57 ಕೋಟಿಯಿಂದ 2016 ರಲ್ಲಿ 5.45 ಕೋಟಿಗೆ ಏರಿದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವುಗಳು 1990 ರಲ್ಲಿ 13 ಲಕ್ಷದಿಂದ 2016 ರಲ್ಲಿ 28 ಲಕ್ಷಕ್ಕೆ ಏರಿದೆ ಎಂದು ಲ್ಯಾನ್ಸೆಟ್ ಅಧ್ಯಯನವು ಹೇಳಿದೆ.
ಹೃದಯಾಘಾತದಿಂದ ಬಳಲುತ್ತಿರುವ ರೋಗಿ ಸಾಮಾನ್ಯವಾಗಿ ಚಿಕಿತ್ಸೆ ಪಡೆಯಲು ತೆಗೆದುಕೊಳ್ಳುವ ಸರಾಸರಿ ಸಮಯ 360 ನಿಮಿಷಗಳು. ಮೊದಲ 60 ನಿಮಿಷಗಳು ಗೋಲ್ಡರ್ ಅವರ್ ಆಗಿರುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
“ಭಾರತದಲ್ಲಿ 360 ನಿಮಿಷಗಳ ಅವಧಿಯಲ್ಲಿ ವ್ಯಕ್ತಿ ಚಿಕಿತ್ಸೆ ಪಡೆಯುವ ಪ್ರಮಾಣ ಕಡಿಮೆ ಇದೆ. ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಗೆ ಚಕಿತ್ಸೆ ಪಡೆಯಲು 10 ರಿಂದ 13 ಗಂಟೆಗಳು ತಗಲುತ್ತವೆ” ಎಂದು ಅವರು ಹೇಳುತ್ತಾರೆ.
ಆಟೋ ಚಾಲಕನ ಸಾವಿನ ಘಟನೆಯು ಡಾ. ಕಾಮತ್ ಅವರನ್ನು ಎಷ್ಟರ ಮಟ್ಟಿಗೆ ಬಾಧಿಸಿತು ಎಂದರೆ, ವಾಟ್ಸಾಪ್ ಗ್ರೂಪ್ ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ಸ್ (ಸಿಎಡಿ) ಯನ್ನು ಪ್ರಾರಂಭಿಸುವಷ್ಟರ ಮಟ್ಟಿಗೆ. ತಜ್ಞ ವೈದ್ಯರ ಲಭ್ಯತೆ ಇಲ್ಲದೆ ಕುಗ್ರಾಮ ಪ್ರದೇಶಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಈ ಗ್ರೂಪ್ ಮಾಡುತ್ತಿದೆ. ಇಲ್ಲಿ ರೋಗಿಗಳು ತಮ್ಮ ಇಸಿಜಿಯನ್ನು ಹಂಚಿಕೊಳ್ಳುತ್ತಾರೆ. ವೈದ್ಯರುಗಳು ಅದನ್ನು ಪರಿಶೀಲಿಸಿ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡುತ್ತಾರೆ. ತ್ವರಿತ ಚಿಕಿತ್ಸೆಗೆ ಸಂಬಂಧಿಸಿದಂತೆ 800 ಮಂದಿ ವೈದ್ಯರು ಇಲ್ಲಿ ಮಾರ್ಗದರ್ಶನಗಳನ್ನು ನೀಡುತ್ತಾರೆ.
ಇಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ವೈದ್ಯರು ತಮ್ಮ ವೃತ್ತಿಪರ ಸಲಹೆಯನ್ನು ಉಚಿತವಾಗಿ ನೀಡುತ್ತಾರೆ, ಮಾತ್ರವಲ್ಲ ಸೆಕೆಂಡ್ ಒಪಿನಿಯನ್ಗಳಿಗಾಗಿ ಗ್ರೂಪಿನಲ್ಲಿ ಹಾಕಲಾದ ಪೋಸ್ಟ್ಗಳಿಗೆ ಸಂಬಂಧಿಸಿದ ಎಲೆಕ್ಟ್ರೋಕಾರ್ಡಿಯೋಗ್ರಾಮ್ಗಳನ್ನು (ಇಸಿಜಿ) ಓದುವ ವಿಷಯದಲ್ಲಿ ಗ್ರಾಮೀಣ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ.
ಸಣ್ಣ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಶಿಫಾರಸ್ಸು ಮಾಡಿದ ಆಸ್ಪತ್ರೆ ಮತ್ತು ಹತ್ತಿರದ ಹೃದ್ರೋಗ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಹೃದ್ರೋಗ ತಜ್ಞರು ಸಹಾಯ ಮಾಡುತ್ತಾರೆ.
ಅವರ ವಾಟ್ಸಾಪ್ ಗ್ರೂಪ್ ಪ್ರಾರಂಭವಾಗಿ 1.5 ವರ್ಷಗಳಾಗಿವೆ, ಒಟ್ಟು ನಾಲ್ಕು ಗ್ರೂಪ್ಗಳಲ್ಲಿ ಇದುವರೆಗೆ ಕನಿಷ್ಠ 8000 ಪ್ರಕರಣಗಳನ್ನು ಸ್ವೀಕರಿಸಲಾಗಿದೆ. ಪ್ರತಿ ಗ್ರೂಪಿನಲ್ಲೂ ತಲಾ ಮೂರು ಹೃದ್ರೋಗ ತಜ್ಞರು ಇದ್ದಾರೆ.
“ಇಲ್ಲಿಯವರೆಗೆ, 500 ಹೃದಯಾಘಾತ ಮತ್ತು 850 ಹೃದಯ ಕಾಯಿಲೆಗಳನ್ನು ಗುಂಪಿನಲ್ಲಿ ನಿಖರವಾಗಿ ಪತ್ತೆ ಮಾಡಲಾಗಿದೆ” ಎಂದು ಡಾ. ಕಾಮತ್ ಉಲ್ಲೇಖಿಸಿದ್ದಾರೆ.
ದಿನವಿಡೀ ಆನ್ಲೈನ್ನಲ್ಲಿ ಇರಲು ಸಾಧ್ಯವಿಲ್ಲದ ಕಾರಣ ತಜ್ಞ ವೈದ್ಯರುಗಳು ತಮ್ಮ ದೂರವಾಣಿ ಸಂಖ್ಯೆಯನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬೇಕು ಎಂದು ಡಾ. ಕಾಮತ್ ಒತ್ತಿಹೇಳುತ್ತಾರೆ.
“ಪೋಸ್ಟ್ ಮಾಡಿದ ಪ್ರತಿಯೊಂದು ಇಸಿಜಿಯನ್ನು ತಕ್ಷಣ ವರದಿ ಮಾಡಲಾಗುತ್ತದೆ ಮತ್ತು ನಂತರ ಆರ್ಚೀವ್ ಮಾಡಲಾಗುತ್ತದೆ. ಇಸಿಜಿಯಲ್ಲಿ ರೋಗವಿರುವುದು ಪತ್ತೆಯಾದರೆ, ರೋಗಿಯ ಯೋಗಕ್ಷೇಮದ ಕಾರಣಕ್ಕಾಗಿ ವೈದ್ಯರು ಆತನಿಗೆ ಫೋನ್ ಕರೆಯನ್ನು ಮಾಡಿ ಸಲಹೆ ಸೂಚನೆಯನ್ನು ನೀಡುತ್ತಾರೆ. ಇಸಿಜಿ ಏನು ತೊಂದರೆ ಇಲ್ಲ ಎಂದು ತೋರಿಸಿದರೆ, ವಾಟ್ಸಾಪ್ ಮೂಲಕವೇ ಆತನಿಗೆ ಸಲಹೆ ನೀಡಲಾಗುತ್ತದೆ.
ಈ ವಾಟ್ಸಾಪ್ ಗ್ರೂಪ್ ಹಣವನ್ನೂ ಸಂಗ್ರಹ ಮಾಡಿದ್ದು, ಸಣ್ಣ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಇಸಿಜಿ ಯಂತ್ರಗಳನ್ನು ಮತ್ತು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ.
ಈ ಇಸಿಜಿ ಯಂತ್ರಗಳಿಗೆ ಹಣವನ್ನು ರೋಗಿಗಳಿಂದ, ಅವರ ಸಂಬಂಧಿಗಳಿಂದ, ಹಿತೈಷಿಗಳಿಂದ, ಸಮಾಜಸೇವಕರಿಂದ ಸಂಗ್ರಹ ಮಾಡಲಾಗುತ್ತದೆ. ಕೆಲವೊಂದಕ್ಕೆ ಬ್ಯಾಂಕುಗಳು ಕೂಡ ಫಂಡಿಂಗ್ ಮಾಡಿವೆ.
ಈ ಗ್ರೂಪ್ ಸುಮಾರು 1000 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತುರ್ತು ಹೃದಯಾಘಾತ ರೋಗನಿರ್ಣಯ ಮತ್ತು ಚಿಕಿತ್ಸಾ ಕಿಟ್ಗಳನ್ನು ಸಹ ನೀಡಿದೆ. ಈ ಕಿಟ್ಗಳಲ್ಲಿ ಔಷಧಿಗಳಿದ್ದು, ಹೃದಯಾಘಾತದ ಸಂದರ್ಭದಲ್ಲಿ ರೋಗಿಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವವರೆಗೆ ತಕ್ಷಣದ ಚಿಕಿತ್ಸೆಗೆ ಇದನ್ನು ಬಳಸಬಹುದಾಗಿದೆ.
ತಮ್ಮ ವಾಟ್ಸಾಪ್ ಗ್ರೂಪಿನ ಕಾರಣದಿಂದಾಗಿ ರೋಗಿಯೊಬ್ಬ ಜೀವ ಉಳಿಸಿಕೊಂಡ ಇತ್ತೀಚಿನ ಘಟನೆಯನ್ನು ಡಾ. ಕಾಮತ್ ಹೀಗೆ ನೆನಪಿಸಿಕೊಳ್ಳುತ್ತಾರೆ..
“ಗ್ರಾಮೀಣ ಭಾಗದ ಆಯುಷ್ ವೈದ್ಯರ ಸಹೋದರನಿಗೆ ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ರಾತ್ರಿ 8.30 ಗಂಟೆಯಾಗಿತ್ತು. ಆ ವ್ಯಕ್ತಿ ಈಶ್ವರಮಂಗಲದಲ್ಲಿರುವ ತನ್ನ ದೂರದ ತೋಟದ ಮನೆಯಲ್ಲಿದ್ದರು. ವಾಟ್ಸಾಪ್ ಗ್ರೂಪ್ ದಾನ ಮಾಡಿದ ಯಂತ್ರವನ್ನು ಬಳಸಿ ಅವರ ಬಳಿಗೆ ತೆರಳಿದ ವೈದ್ಯರು ಅವರ ಇಸಿಜಿಯನ್ನು ಮಾಡಿದರು ಮತ್ತು ವರದಿಯನ್ನು ವಾಟ್ಸಾಪ್ ಗ್ರೂಪಿನಲ್ಲಿ ಹಂಚಿಕೊಂಡರು. ನಮ್ಮ ವೈದ್ಯರು ತಕ್ಷಣ ಇದನ್ನು ಹೃದಯಾಘಾತ ಎಂದು ಗುರುತಿಸಿದರು, ವ್ಯಕ್ತಿಯನ್ನು ಮಂಗಳೂರಿಗೆ ಕರೆದೊಯ್ಯುವಂತೆ ಹೇಳಿದರು. ಅವರು ಬಂದ ಕೂಡಲೇ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲು ತಂಡ ಸಿದ್ಧವಾಯಿತು” ಎಂದಿದ್ದಾರೆ.
ಪ್ರಸ್ತುತ, ಡಾ, ಕಾಮತ್ ಮತ್ತು ಇತರ ತಜ್ಞರು ತಮ್ಮ ಸಮಾಲೋಚನಾ ಸೇವೆಯನ್ನು ಕರ್ನಾಟಕದಾದ್ಯಂತ 14 ಜಿಲ್ಲೆಗಳಲ್ಲಿ ಒದಗಿಸುತ್ತಿದ್ದಾರೆ, ಮಾತ್ರವಲ್ಲ ಇತರ ರಾಜ್ಯಗಳಿಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಿದ್ದಾರೆ. ಅವರು ಈಗಾಗಲೇ ಕೇರಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 12 ಇಸಿಜಿ ಯಂತ್ರಗಳನ್ನು ದಾನ ಮಾಡಿದ್ದಾರೆ.
ಅಲ್ಲದೇ, ಹೃದಯ ಸಂಬಂಧಿತ ತುರ್ತು ಸಂದರ್ಭಗಳಲ್ಲಿ ಡಾ. ಕಾಮತ್ ಉಚಿತ ವಾಟ್ಸಾಪ್ ಸಹಾಯವಾಣಿ (9743287599) ಅನ್ನು ಸಹ ನಡೆಸುತ್ತಾರೆ. ಈ ಸಹಾಯವಾಣಿ ತುರ್ತು ಸಂದರ್ಭಗಳಲ್ಲಿ ಆನ್ಲೈನ್ ಸಮಾಲೋಚನೆಗಳಿಗೆ ಮಾತ್ರ ಇದೆ ಮತ್ತು ಯಾವುದೇ ರೀತಿಯಲ್ಲಿ ಇದು ವೈದ್ಯಕೀಯ ಜ್ಞಾನ ಮತ್ತು ಅನಿಸಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಡಾ. ಕಾಮತ್ ಸ್ಪಷ್ಟಪಡಿಸಿದ್ದಾರೆ.
“ನನ್ನ ಮಹತ್ವಾಕಾಂಕ್ಷೆಯೆಂದರೆ, ದೇಶವ್ಯಾಪಿಯಾಗಿ ಸಮಾನ ಮನಸ್ಕ ಹೃದ್ರೋಗ ತಜ್ಞರ ಸಹಾಯದಿಂದ ಮತ್ತು ದೊಡ್ಡ ಉದ್ಯಮಗಳ ದೇಣಿಗೆ ಮೂಲಕ ನಮ್ಮ ಕಾರ್ಯವನ್ನು ವಿಸ್ತರಣೆ ಮಾಡುವುದು. ಇದರಿಂದ ಪರಿವರ್ತನೆಯನ್ನು ತರಲು ಸಾಧ್ಯ” ಎಂದು ಕಾಮತ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.