ನವದೆಹಲಿ: ಭಾರತೀಯ ರೈಲ್ವೇಯು ಶೀಘ್ರದಲ್ಲೇ ಶತಾಬ್ದಿ, ತೇಜಸ್, ಗಾಟಿಮನ್ ಮತ್ತು ಅಂತರ್ ನಗರ ರೈಲು ಇತ್ಯಾದಿ ಕಡಿಮೆ ಬೇಡಿಕೆಯನ್ನು ಹೊಂದಿರುವ ಆಯ್ದ ರೈಲುಗಳಲ್ಲಿ ಖಾಲಿ ಇರುವ ಆಸನಗಳಿಗೆ ಶೇಕಡಾ 25 ರವರೆಗೆ ರಿಯಾಯಿತಿ ದರವನ್ನು ನೀಡಲಿದೆ. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ಸೌಕರ್ಯ ಹೊಂದಿರುವ ಎಲ್ಲಾ ರೈಲುಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಆಸನಗಳ ಬೇಡಿಕೆಯನ್ನು ಸುಧಾರಿಸುವುದು ಮತ್ತು ಕಡಿಮೆ ವೆಚ್ಚದ ವಿಮಾನಗಳ ಮತ್ತು ರಸ್ತೆ ಸಾರಿಗೆಗಳ ಸವಾಲನ್ನು ಬಲಿಷ್ಠವಾಗಿ ಎದುರಿಸುವ ಉದ್ದೇಶದೊಂದಿಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮೂಲ ದರದಲ್ಲಿ ಶೇ 25 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಮೀಸಲಾತಿ ದರ, ಸೂಪರ್ಫಾಸ್ಟ್ ದರ ಮತ್ತು ಜಿಎಸ್ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಕಳೆದ ವರ್ಷ ಶೇಕಡಾ 50 ಕ್ಕಿಂತ ಕಡಿಮೆ ಮಾಸಿಕ ಆಸನ ಬೇಡಿಕೆಯನ್ನು ಹೊಂದಿದ್ದ ರೈಲುಗಳು ರಿಯಾಯಿತಿಗೆ ಅರ್ಹವಾಗಿವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ರಿಯಾಯಿತಿ ದರದಲ್ಲಿನ ರೈಲುಗಳಿಗೆ ಕ್ಯಾಟರಿಂಗ್ ಆಪ್ಶನಲ್ ಆಗಿದೆ.
ಎಲ್ಲಾ ವಲಯದ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಹೊರಡಿಸಲಾದ ಸುತ್ತೋಲೆಯಲ್ಲಿ ರಿಯಾಯಿತಿ ದರವನ್ನು ಪರಿಚಯಿಸುವಂತೆ ರೈಲ್ವೇ ಸಚಿವಾಲಯ ಸೂಚನೆಯನ್ನು ನೀಡಿದೆ.
ರಿಯಾಯಿತಿ ಯೋಜನೆಯನ್ನು ಜಾರಿಗೊಳಿಸಿದ ಮೊದಲ ನಾಲ್ಕು ತಿಂಗಳ ನಂತರ, ಆಸನಗಳ ಬೇಡಿಕೆಯ ತುಲನಾತ್ಮಕ ವರದಿ ಮತ್ತು ಗಳಿಕೆಯ ವರದಿಯನ್ನು ನೀಡುವಂತೆ ವಲಯಗಳಿಗೆ ನಿರ್ದೇಶಿಸಲಾಗಿದೆ. ವರದಿಯನ್ನು ಆಧರಿಸಿ, ಯೋಜನೆಯನ್ನು ಆರು ತಿಂಗಳು ಮತ್ತೆ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.