ಬಾಲ್ಯದಿಂದಲೂ ನಿವೃತ್ತ ಕರ್ನಲ್ ಶಂಕರ್ ವೆಂಬು ಅವರಿಗೆ ಭಾರತೀಯ ಸೇನೆಯೆಂದರೆ ಅದೇನೋ ಸೆಳೆತ, ಆಕರ್ಷಣೆ.
“ನಾನು ಸ್ಕೌಟ್ ಬಾಯ್ ಆಗಿದ್ದೆ. ದೇಶಕ್ಕಾಗಿ ಸೇವೆ ಮಾಡಬೇಕು ಎಂಬುದು ಸದಾ ನನ್ನ ತಲೆಯಲ್ಲಿತ್ತು. ಇದೇ ನನ್ನನ್ನು NDA (National Defence Academy) ಮತ್ತು IMA (Indian Military Academy)ಗೆ ಸೇರುವಂತೆ ಮಾಡಿತು” ಎಂದು ಕರ್ನಲ್ ಶಂಕರ್ ಹೇಳುತ್ತಾರೆ.
1997 ರಲ್ಲಿ ಅವರು ಭಾರತೀಯ ಸೇನೆಗೆ ನಿಯೋಜನೆಗೊಂಡರು ಮತ್ತು 1998 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದಕ್ಕಾಗಿ ಇವರು ಶೌರ್ಯ ಚಕ್ರವನ್ನು ಗೆದ್ದರು. ಅದರ ಮರು ವರ್ಷ ಅವರು ಆಪರೇಷನ್ ವಿಜಯ್ (ಕಾರ್ಗಿಲ್ ಯುದ್ಧ) ದಲ್ಲಿಯೂ ಭಾಗವಹಿಸಿದರು.
“ಆಪರೇಷನ್ ವಿಜಯ್ನಲ್ಲಿ ಭಾಗವಹಿಸಿದ್ದು ನನಗೆ ಜೀವನ ಬದಲಾವಣೆಯ ಅನುಭವವಾಗಿತ್ತು. ನಾನು ಆಗ ಕೇವಲ ಎರಡು ವರ್ಷಗಳ ಸೇವೆಯನ್ನು ಸಲ್ಲಿಸಿದ ಯುವ ಅಧಿಕಾರಿಯಾಗಿದ್ದೆ. ಈ ಯುದ್ಧದ ಸಮಯದಲ್ಲಿ ಸೇನೆಯು 500 ಕ್ಕೂ ಹೆಚ್ಚು ಯೋಧರನ್ನು ಮತ್ತು ಅಧಿಕಾರಿಗಳನ್ನು ಕಳೆದುಕೊಂಡಿದ್ದರೂ ಕೂಡ, ಅದೃಷ್ಟವಶಾತ್ ನಮ್ಮ ಘಟಕಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ ”ಎಂದು ಕರ್ನಲ್ ಶಂಕರ್ ಹೇಳುತ್ತಾರೆ.
ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಕರ್ನಲ್ ಶಂಕರ್ ಅವರು ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದರು.
“ನಾನು ಪೂರ್ವ ವಲಯದಲ್ಲಿ ಫೀಲ್ಡ್ ಯುನಿಟ್ ಅನ್ನು ಕಮಾಂಡ್ ಮಾಡುತ್ತಿದ್ದ ಸಂದರ್ಭದಲ್ಲಿ, ಸೇನೆಯು ಕಾರ್ಯಾಚರಣೆಯಿಲ್ಲದ ಸೇವಾ ಸಂದರ್ಭದಲ್ಲೇ ಹಲವಾರು ಯೋಧರು ಮತ್ತು ಅಧಿಕಾರಿಗಳನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಅರಿತುಕೊಂಡೆ. ವಾಸ್ತವವಾಗಿ, ನನ್ನ ವಲಯದಲ್ಲಿ ಪ್ರತಿ ಮೂರು ಅಥವಾ ನಾಲ್ಕು ದಿನಕ್ಕೆ ಒರ್ವ ಸಿಬ್ಬಂದಿಗಳು ಸಾಯುತ್ತಿದ್ದರು. ಕೆಲವು ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಅಗಲಿದ ಯೋಧರ ಕುಟುಂಬಗಳಿಗೆ ಕಲ್ಯಾಣ ಯೋಜನೆಗಳು ತಲುಪುತ್ತಿಲ್ಲ ಎಂಬ ಅಂಶ ನನಗೆ ತಿಳಿಯಿತು. ನಾನು ಅವಧಿಪೂರ್ವ ನಿವೃತ್ತಿಗೆ ಅರ್ಹನಾಗಿರುವುದರಿಂದ, ಈ ಅಗಲಿದ ಸೈನಿಕರ ರಕ್ತಸಂಬಂಧಿಗಳಿಗೆ ಸೇವೆ ಸಲ್ಲಿಸುವ ಪ್ರಯತ್ನವನ್ನು ಕೈಗೊಳ್ಳಲು ನಿರ್ಧರಿಸಿದೆ ”ಎಂದಿದ್ದಾರೆ.
‘ಪ್ರಾಜೆಕ್ಟ್ ಸಂಬಂಧ್’ ಎಂಬ ಹೆಸರಿನ 1000 ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡ ಅವರು, ಅದರ ಮೂಲಕ ಅಗಲಿದ ಯೋಧರ ಸಂಬಂಧಿಗಳ ಜೊತೆ ಸಂಪರ್ಕವನ್ನು ಸಾಧಿಸುತ್ತಾರೆ. ವಿಶೇಷವೆಂದರೆ, 2019 ಅನ್ನು ಭಾರತೀಯ ಸೇನೆಯು ‘ನೆಕ್ಸ್ಟ್ ಆಫ್ ಕಿನ್’ ಅಂದರೆ ಅಗಲಿದ ಯೋಧರ ಕುಟುಂಬದ ವರ್ಷವೆಂದು ಘೋಷಣೆ ಮಾಡಿದೆ.
ಕರ್ನಲ್ ಶಂಕರ್ ಅವರು ಆಗಸ್ಟ್ 15, 2017 ರಂದು ಸೇವೆಯಲ್ಲಿದ್ದಾಗ ಈ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಇದು ಮೇ 11, 2020 ರಂದು ಪೂರ್ಣಗೊಳ್ಳುತ್ತದೆ.
ಪ್ರತಿ ವರ್ಷ, ಭಾರತೀಯ ಸೇನೆಯು 1500-2000 ಸಿಬ್ಬಂದಿಯನ್ನು ವಿವಿಧ ಅಪಘಾತಗಳು, ವೈದ್ಯಕೀಯ ಪರಿಸ್ಥಿತಿಗಳು, ಆತ್ಮಹತ್ಯೆಗಳು ಅಥವಾ ಫ್ರ್ಯಾಟ್ರಿಸೈಡ್ಗಳಿಂದಾಗಿ ಕಳೆದುಕೊಳ್ಳುತ್ತದೆ. ಹುತಾತ್ಮರ ರಕ್ತಸಂಬಂಧಿಗಳು ಸಮಾಜದ ತುಸು ಗಮನಕ್ಕೆ ಪಾತ್ರರಾಗುತ್ತಾರೆ, ಆದರೆ ಬೇರೆ ಪರಿಸ್ಥಿತಿಗಳಿಂದ ಅಗಲಿದ ಅಥವಾ ಅಂಗವೈಕಲ್ಯಕ್ಕೆ ಒಳಗಾದ ಯೋಧರ ಕುಟುಂಬಿಕರ ಪರಿಸ್ಥಿತಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಕೆಟ್ಟದಾಗಿರುತ್ತದೆ ಮತ್ತು ಅಲ್ಪ ಪಿಂಚಣಿಯಲ್ಲೇ ಅವರು ಬದುಕು ಸಾಗಿಸಬೇಕಾಗುತ್ತದೆ.
ಕೆಲವೊಮ್ಮೆ ಅಗಲಿದ ಯೋಧರ ವಿಧವೆಯರು, ಗಂಡನ ಮನೆಯಿಂದ ಹೊರ ಬರುವ ಕಾರಣ ಸೇನೆಯಲ್ಲಿ ದಾಖಲಾದ ವಿಳಾಸದಲ್ಲಿ ಅವರು ಇರುವುದೇ ಇಲ್ಲ. ಹೀಗಾಗಿ ಕಾಲಾ ನಂತರ ಸೇನೆ ಮತ್ತು ಅವರ ನಡುವಣ ಸಂಪರ್ಕ ಕಳೆದುಹೋಗುತ್ತದೆ.
ಅಗಲಿದ ಯೋಧರ ಸಂಬಂಧಿಗಳನ್ನು ಪತ್ತೆ ಮಾಡುವುದು, ಅವರ ದಾಖಲೆ ಪರಿಶೀಲಿಸುವುದು ಮತ್ತು ಸೇನೆಯನ್ನು ತಲುಪಲು ಅವರಿಗೆ ಅರ್ಹತೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸವಾಲಿನ ಕೆಲಸ. ಕಳೆದ ಎರಡು ವರ್ಷಗಳಿಂದ, ಕರ್ನಲ್ ಶಂಕರ್ ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ, ದಾಖಲೆಗಳನ್ನು ಸಂಗ್ರಹಿಸಿದ್ದಾರೆ, ವಿಶ್ಲೇಷಿಸಿದ್ದಾರೆ ಮತ್ತು ರಿಫ್ರೆಶ್ ಮಾಡಿದ್ದಾರೆ.
ಕರ್ನಲ್ ಶಂಕರ್ ಅವರು ತಮ್ಮ ಕಾರ್ಯಕ್ರಮದ ಮೂಲಕ ಇದುವರೆಗೆ ಅಂತಹ 27,000 ಕುಟುಂಬಗಳನ್ನು ಗುರುತಿಸಿದ್ದಾರೆ. ಅವರಿಗೆ ಸೇನೆಯ ಕಲ್ಯಾಣ ಯೋಜನೆಗಳು ಸಿಗುವಂತೆ ಮಾಡಿದ್ದಾರೆ. ಪ್ರಸ್ತುತ ಅವರ ಯೋಜನೆಯು ಅಂತಿಮ ಹಂತದಲ್ಲಿದೆ. ಇದಲ್ಲದೆ, ಈ ಕಲ್ಯಾಣ ಸೇವೆಗಳ ವಿತರಣೆಯಲ್ಲಿ ತೊಡಗಿರುವ ಅಧಿಕಾರಿಗಳಲ್ಲಿನ ಜಾಗೃತಿ ಮಟ್ಟವನ್ನು ಹೆಚ್ಚಿಸಲು ಈ ಯೋಜನೆ ಅವರಿಗೆ ಸಹಾಯ ಮಾಡಿದೆ.
ತಮ್ಮ ಕಾರ್ಯದ ಸಮಯದಲ್ಲಿ ಎದುರಾದ ಸನ್ನಿವೇಶವೊಂದರ ಬಗ್ಗೆ ಹೇಳಿಕೊಂಡಿರುವ ಕರ್ನಲ್ ಶಂಕರ್ ಅವರು, “ಸಾಕಷ್ಟು ಶ್ರಮಿಸಿ ದಾಖಲೆಗಳನ್ನು ಸಂಗ್ರಹಿಸಿ ತಂಜಾಪೂರು ಸಮೀಪದ ಒಂದು ಗ್ರಾಮಕ್ಕೆ ತೆರಳಿದೆ. ಅಗಲಿದ ಯೋಧ ಹವಲ್ದಾರ್ ಕೆ ಪೊನ್ಮುಡಿ ಅವರ ಮನೆಗೆ ತೆರಳಿದೆ. ಅಲ್ಲಿ ಅವರ ಸಹೋದರ ನಮಗೆ ಸಿಕ್ಕರು. ‘ಪೊನ್ಮುಡಿ ಅವರ ಪತ್ನಿ ಸರಸ್ವತಿ ಹಾಗೂ ಮಗ ಈ ಮನೆಯಿಂದ ತೆರಳಿದ್ದಾರೆ. ಅವರಿಗೆ ಯಾವ ಸಹಾಯದ ಅಗತ್ಯವೂ ಇಲ್ಲ’ ಎಂದು ಆತ ಹೇಳಿದ. ಮಾತ್ರವಲ್ಲ, ತಾಯಿ ಮತ್ತು ಮಗನ ಬಗ್ಗೆ ಟೀಕೆಯನ್ನೂ ಮಾಡಿದ. ನನಗೆ ಶಾಕ್ ಆಯಿತು. ತಾಯಿ ಮಗ ಇಬ್ಬರನ್ನೂ ಪತ್ತೆ ಮಾಡಿದೆ. ಚೆನ್ನೈನಲ್ಲಿ ಒಂದು ರೂಮಿನ ಮನೆಯಲ್ಲಿ ಅವರಿಬ್ಬರ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಪತಿಯ ಸೇವೆಯ ಯಾವ ನೆರವೂ ಅವರಿಗೆ ಸಿಕ್ಕಿರಲಿಲ್ಲ” ಎಂದಿದ್ದಾರೆ. ಪತಿಯ ಮನೆಯವರ ಸಹಕಾರ ಇಲ್ಲದಿರುವುದು ಮತ್ತು ಪತಿ ಮನೆಯನ್ನು ಅವರು ತೊರೆದಿರುವುದು ಅವರ ಕಷ್ಟಕ್ಕೆ ಪ್ರಮುಖ ಕಾರಣವಾಗಿತ್ತು. ಇಂದು ಕರ್ನಲ್ ಶಂಕರ್ ಅವರ ಕಾರಣದಿಂದಾಗಿ ಸರಸ್ವತಿ ಮಗನಿಗೆ ಸೇನೆ ವತಿಯಿಂದ ಸ್ಕಾಲರ್ ಶಿಪ್ ದೊರೆಯುತ್ತಿದೆ.
ಈ ರೀತಿಯಾಗಿ ಸಾವಿರಾರು ಅಗಲಿದ ಯೋಧರ ಕುಟುಂಬ ನೆರವಿಗೆ ಕರ್ನಲ್ ಶಂಕರ್ ಧಾವಿಸಿ ಅವರಿಗೆ ಸೇನೆಯಿಂದ ನೆರವು ದೊರಕಿಸಿಕೊಡುವ ಕಾರ್ಯವನ್ನು ಮಾಡಿದ್ದಾರೆ ಮತ್ತು ಮಾಡುತ್ತಲೇ ಇದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರ ಕುಟುಂಬವನ್ನು ಸದಾ ಗೌರವಾದರಗಳಿಂದ ನೋಡಿಕೊಳ್ಳಬೇಕಾದುದು ಪ್ರತಿಯೊಬ್ಬನ ಕರ್ತವ್ಯ ಎಂಬುದು ಕರ್ನಲ್ ಶಂಕರ್ ಅವರ ಪ್ರತಿಪಾದನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.