ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅದರಲ್ಲೂ ಮುಖ್ಯವಾಗಿ ಕಾಶ್ಮೀರ ಕಣಿವೆಯಲ್ಲಿ ಆಧಾರ್ ನೋಂದಾವಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾಶ್ಮೀರದಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ನಿಧಾನ ಗತಿಯಲ್ಲಿದೆ, ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಸರ್ಕಾರದ ಜನಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಿಗುವಂತೆ ಮಾಡಲು ಆಧಾರ್ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತಿದೆ.
ಅಕ್ಟೋಬರ್ 31 ರಂದು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕಾರ್ಯ ಅಧಿಕೃತವಾಗಿ ಪೂರ್ಣಗೊಳ್ಳುತ್ತದೆ. ನಂತರ ಆಧಾರ್ ನೋಂದಣಿ ಪ್ರಕ್ರಿಯೆಯು ವೇಗಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಸಬ್ಸಿಡಿಗಳ ವರ್ಗಾವಣೆ ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಆಧಾರ್ ಯಶಸ್ವಿ ಸಾಧನವಾಗಿದೆ. ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಮತ್ತು ಕೇಂದ್ರವು ತನ್ನ ಬದ್ಧತೆಯನ್ನು ಈಡೇರಿಸಲು ಸಹಾಯ ಮಾಡುವ ಪ್ರಮುಖ ಸಾಧನಗಳಲ್ಲಿ ಆಧಾರ್ ಕೂಡ ಒಂದಾಗಿದೆ. ಜಮ್ಮು ಕಾಶ್ಮೀರದಲ್ಲಿ ಆಧಾರ್ ವ್ಯಾಪ್ತಿಯು ಸುಮಾರು ಶೇ.78 ತಲುಪಿದ್ದರೂ, ಕೆಲವು ಭಾಗಗಳಲ್ಲಿ ಅದರ ನೋಂದಣಿ ಕಾರ್ಯ ನಿಧಾನಗತಿಯಲ್ಲಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಗಸ್ಟ್ 6 ರಂದು ಲೋಕಸಭೆಯು ಭಾರತೀಯ ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ರಾಜ್ಯವನ್ನು ಎರಡು ಕೇಂದ್ರ ಪ್ರದೇಶಗಳಾಗಿ ವಿಂಗಡಿಸಲು ಅನುವು ಮಾಡಿಕೊಟ್ಟಿತು. ಜಮ್ಮು ಕಾಶ್ಮೀರ ಶಾಸಕಾಂಗದೊಂದಿಗೆ ಮತ್ತು ಲಡಾಕ್ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಯಿತು. ರಾಜ್ಯಸಭೆಯು ಆಗಸ್ಟ್ 5 ರಂದು ಈ ನಿರ್ಣಯವನ್ನು ಅಂಗೀಕರಿಸಿತು. ಈ ಬದಲಾವಣೆಗಳು ಈ ಪ್ರದೇಶವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲು ಅನುಕೂಲ ಮಾಡಿಕೊಟ್ಟಿದೆ.
ಈ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರುವ ಪ್ರತಿ ಯೋಜನೆಗಳ ಫಲವೂ ಕಾಶ್ಮೀರಿ ಜನತೆಗೆ ಸಮರ್ಪಕವಾಗಿ ತಲುಪಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.