ಕಲೆ ಮತ್ತು ಕರಕುಶಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಸ್ಥಾನವು ದೇಶದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ವಿಷಯ, ಬಣ್ಣ ಮತ್ತು ವಿನ್ಯಾಸದಲ್ಲಿ ರಾಜಸ್ಥಾನದ ಕರಕುಶಲ ವಸ್ತುಗಳಿಗೆ ಹೋಲಿಕೆಯೇ ಇಲ್ಲ. ಆಭರಣಗಳು, ಚಿತ್ರಕಲೆ, ಪೀಠೋಪಕರಣಗಳು, ಚರ್ಮದ ಸಾಮಾನುಗಳು, ಕುಂಬಾರಿಕೆ, ಲೋಹದ ಕರಕುಶಲ ವಸ್ತುಗಳು ಅಥವಾ ರಾಜಸ್ಥಾನಿಯರ ಕೈಯಿಂದ ಮೂಡಿದ ಜವಳಿಗಳಾಗಿರಲಿ ಅಲ್ಲಿನ ಪ್ರತಿಯೊಂದು ವಸ್ತುವಿಗೂ ಸೂಕ್ಷ್ಮ ಮತ್ತು ಅತಿಯಾದ ಆಕರ್ಷಣೆ ಇರುತ್ತದೆ. ರಾಜಸ್ಥಾನಿಯರು ಕೂಡ ತಮ್ಮ ವಿಭಿನ್ನವಾದ ಬಟ್ಟೆ, ಸಂಪ್ರದಾಯಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ವಿಶ್ವದಾದ್ಯಂತ ಜನರು, ರಾಜಸ್ಥಾನವನ್ನು ಕರಕುಶಲ ವಸ್ತುಗಳ ಭಂಡಾರ ಮತ್ತು ಸ್ವರ್ಗ ಎಂದು ಬಣ್ಣಿಸುತ್ತಿರುವುದರಲ್ಲಿ ಆಶ್ಚರ್ಯವೇ ಇಲ್ಲ.
ರಾಜಸ್ಥಾನದ ಬಹುತೇಕರಿಗೆ ಕಲೆ ಎಂಬುದು ರಕ್ತಗತವಾಗಿ ಬರುತ್ತದೆ. ಅಲ್ಲಿ ಪೂರ್ವಜರು ದಯಪಾಲಿಸಿದ ಕಲೆಯನ್ನು ಬಿಟ್ಟು ಬಿಡಲು ಇಷ್ಟವಿಲ್ಲದ ಎಷ್ಟೋ ಕುಟುಂಬಗಳು ಇಂದಿಗೂ ಪಂಶಪಾರಂಪರ್ಯವಾಗಿ ಬಂದ ಕಲಾ ಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಅಂತಹ ಕುಟುಂಬಗಳ ಸಾಲಿಗೆ ರಾಜಸ್ಥಾನದ ಬರ್ಮೇರ್ನಲ್ಲಿನ ವಿಶಾಲ್ ಗ್ರಾಮದ ಕುಟುಂಬವೊಂದೂ ಸೇರಿದೆ. ಜೇಡಿ ಮಣ್ಣನ್ನು ಬಳಸಿಕೊಂಡು ವಿಧವಿಧದ ಆಭರಣಗಳನ್ನು ಈ ಕುಟುಂಬ ತಯಾರಿಸುತ್ತದೆ.
ಕಳೆದ 40 ವರ್ಷಗಳಿಂದ ಈ ಕುಟುಂಬ ಆಭರಣ ತಯಾರಿಸುವ ಕಸುಬನ್ನು ಮಾಡಿಕೊಂಡು ಬರುತ್ತಿದ್ದು, ಪ್ರಸ್ತುತ ವಿದೇಶೀ ಮಾರುಕಟ್ಟೆಗಳಿಗೂ ಇದನ್ನೂ ಮಾರಾಟ ಮಾಡುವ ಮೂಲಕ ತಮ್ಮ ಕಸುಬನ್ನು ಈ ಕುಟುಂಬ ಮುಂದಕ್ಕೆ ಕೊಂಡೊಯ್ಯುತ್ತಿದೆ.
“ನಮ್ಮ ಕುಟುಂಬ ಕಳೆದ 40 ವರ್ಷಗಳಿಂದ ಜೇಡಿಮಣ್ಣಿನಿಂದ ಆಭರಣಗಳನ್ನು ತಯಾರು ಮಾಡುತ್ತಿದೆ. ಭಾರತದಲ್ಲಿ ಬೇಡಿಕೆ ತುಂಬಾ ಕಡಿಮೆ, ಆದರೆ ವಿದೇಶಿಯರು ನಿಜವಾಗಿಯೂ ಈ ರೀತಿಯ ಆಭರಣಗಳನ್ನು ಇಷ್ಟಪಡುತ್ತಾರೆ. ನಾವು ಎಲ್ಲಾ ರೀತಿಯ ಮಹಿಳೆಯರಿಗೊಪ್ಪುವ ಆಭರಣಗಳನ್ನು ತಯಾರಿಸುತ್ತೇವೆ. ಈ ವೃತ್ತಿಯಲ್ಲಿ ನಾವು ದೊಡ್ಡ ಲಾಭವನ್ನು ಗಳಿಸುವುದಿಲ್ಲ. ಆದರೂ ಯಾರಾದರೂ ಆರ್ಡರ್ ನೀಡಿದರೆ ಮಾತ್ರ ಅವರಿಗೆ ಮಾಡಿ ಕೊಡುತ್ತೇವೆ. ಆರ್ಡರ್ ಇಲ್ಲದಿದ್ದರೆ ನಾವು ಈ ಆಭರಣಗಳನ್ನು ಮಾಡುವುದಿಲ್ಲ, ಯಾಕೆಂದರೆ ಬೇಡಿಕೆ ತುಂಬಾನೇ ಕಡಿಮೆಯಾಗಿದೆ “ಎಂದು ಆಭರಣ ತಯಾರಕ ಝಮೀನ್ ಖಾನ್ ಹೇಳುತ್ತಾರೆ. ಇವರ ಕುಟುಂಬಕ್ಕೆ ಜೇಡಿ ಮಣ್ಣಿನಿಂದ ಆಭರಣ ತಯಾರಿಸುವುದು ಪಂಶಪಾರಂಪರ್ಯದ ಮೂಲಕ ಒಲಿದು ಬಂದ ಕಲೆ.
“ಈ ಮೊದಲು ನಾನು ಒಂದು ಆಭರಣಗಳನ್ನು 20-30 ರೂಪಾಯಿಗೆ ಮಾರಾಟ ಮಾಡುತ್ತಿದ್ದೆ, ಆದರೆ ಈಗ ಬೇಡಿಕೆ ಕಡಿಮೆ ಇರುವುದರಿಂದ ನಾನು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇನೆ. ಮುಂಬಯಿ, ಉದಯಪುರ, ರಾಜ್ಕೋಟ್ ಮತ್ತು ಉನಾ ಮುಂತಾದ ಬೇರೆ ಬೇರೆ ಊರುಗಳಿಗೆ ತೆರಳಿ ನಾನು ಮಾರಾಟ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ.
“ನಾನು ಕಳೆದ 15 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮ ಕುಟುಂಬ ತಯಾರಿಸಿದ ಆಭರಣಗಳು ಇಂದು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ವಿದೇಶಿ ಮಾರುಕಟ್ಟೆಗಳ ಕಾರಣದಿಂದಾಗಿ ನಮ್ಮ ಕೆಲಸವು ಉತ್ತಮವಾಗಿ ಸಾಗುತ್ತಿದೆ. ಸರ್ಕಾರ ಆಯೋಜಿಸಿದ ಉತ್ಸವಗಳಿಗೆ ಕೂಡ ನಮ್ಮ ಆಭರಣಗಳನ್ನು ಮಾರಾಟ ಮಾಡುತ್ತೇನೆ. ನಾವು ನಿಂಬೋಲಿ, ಲಾಕೆಟ್, ಹಾರ ಮತ್ತು ಜೇಡಿಮಣ್ಣಿನ ಬಳೆಗಳನ್ನು ತಯಾರಿಸಿ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತೇವೆ “ಎಂದು ಮತ್ತೊಬ್ಬ ಕುಟುಂಬ ಸದಸ್ಯ ಅರ್ಬಾಬ್ ಖಾನ್ ಹೇಳಿದ್ದಾರೆ.
ಈಗ, ಝಮೀನ್ ಮತ್ತು ಅರ್ಬಾಬ್ ತಮ್ಮ ಮಕ್ಕಳಿಗೆ ಈ ಸಂಪ್ರದಾಯವನ್ನು ಮುಂದುವರೆಸಲು ಕಲಿಸುತ್ತಿದ್ದಾರೆ. ತಮಗೆ ರಕ್ತಗತವಾಗಿ ಬಂದಿರುವ ಕಲೆಯನ್ನು ಮುಂದಿನ ಪೀಳಿಗೆಗೂ ತೆಗೆದುಕೊಂಡು ಹೋಗುವ ಕನಸು ಅವರದ್ದು. ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಿದ್ದರೂ, ವಿದೇಶದ ಮಾರುಕಟ್ಟೆಯಿಂದ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿರುವುದು ಈ ಕುಟುಂಬದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.