ಗೋರಖ್ಪುರ: ಭಾರತವು 300 ವರ್ಷಗಳಲ್ಲೇ ಮೊದಲ ಬಾರಿಗೆ ತನ್ನ ಬಡತನವನ್ನು ಹೋಗಲಾಡಿಸಬಹುದು ಎಂಬ ವಿಶ್ವಾಸ ಮತ್ತು ಆಶಾವಾದವನ್ನು ಬೆಳೆಸುವ ಆರ್ಥಿಕ ವಾತಾವರಣವನ್ನು ಹೊಂದಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಗೋರಖ್ಪುರದಲ್ಲಿ ಮದನ್ ಮೋಹನ್ ಮಾಳವಿಯಾ ತಂತ್ರಜ್ಞಾನ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, “300 ವರ್ಷಗಳಲ್ಲಿ ಮೊದಲ ಬಾರಿಗೆ, ನಾವು ಬಡತನವನ್ನು ನಿವಾರಿಸಬಲ್ಲೆವು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸಬಲ್ಲೆವು ಎಂಬ ವಿಶ್ವಾಸವನ್ನು ಹುಟ್ಟುಹಾಕುವ ಆರ್ಥಿಕ ವಾತಾವರಣವನ್ನು ನಾವು ಹೊಂದಿದ್ದೇವೆ” ಎಂದಿದ್ದಾರೆ.
ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಂಎಂಎಂಯುಟಿ ಉಪಕುಲಪತಿ ಶ್ರೀನಿವಾಸ್ ಸಿಂಗ್, ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಮತ್ತು ನೂರಾರು ವಿದ್ಯಾರ್ಥಿಗಳು ಈ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು.
“ಕಷ್ಟಪಟ್ಟು ಪ್ರಯತ್ನಿಸಿದರೆ, ಮಹಾತ್ಮ ಗಾಂಧಿಯವರು ಬಯಸಿದಂತೆ ನಾವು ಬಡ ಮಗುವಿನ ಕಣ್ಣೀರನ್ನು ಒರೆಸಬಹುದು” ಎಂದು ಮೂರ್ತಿ ಈ ವೇಳೆ ಹೇಳಿದರು.
“ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವುದು ಮತ್ತು ‘ಮೇರಾ ಭಾರತ್ ಮಹನ್’ ಮತ್ತು ‘ಜೈ ಹೋ’ ಎಂದು ಕೂಗುವುದು ಸುಲಭ, ಆದರೆ ಅದರ ಮೌಲ್ಯಗಳನ್ನು ಅನುಸರಿಸುವುದು ಕಷ್ಟ. ದೇಶಪ್ರೇಮ ಎಂದರೆ ಪ್ರತಿಯೊಬ್ಬ ನಾಗರಿಕರಿಂದ ಉತ್ತಮವಾದದ್ದನ್ನು ಹೊರ ತರುವುದು ಎಂದರ್ಥ” ಎಂದು ಮೂರ್ತಿ ವಿವರಿಸಿದರು.
ದೇಶಪ್ರೇಮವು ದೇಶಕ್ಕಾಗಿ ಕೆಲಸ ಮಾಡುವುದನ್ನು ಪ್ರೇರೇಪಿಸುತ್ತದೆ ಮತ್ತು ವೈಯಕ್ತಿಕ ಹಿತಾಸಕ್ತಿಗಳಿಗಿಂತ ದೇಶದ ಹಿತಾಸಕ್ತಿಗಳನ್ನು ಮುಂದಿಡುವುದನ್ನು ಉತ್ತೇಜಿಸುತ್ತದೆ ಎಂದರು.
“ನಾವು ನಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ನಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಿಂತ ಮುಂದಿಡಬೇಕು, ನಮ್ಮ ಅಹಂ ಮತ್ತು ಪಕ್ಷಪಾತವನ್ನು ತ್ಯಜಿಸಬೇಕು” ಎಂದು ಅವರು ಹೇಳಿದರು.
ದೇಶಪ್ರೇಮ ಎಂದರೆ ಸಮಾಜದ ಸುಧಾರಣೆಗಾಗಿ ಉತ್ಸಾಹದಿಂದ ಕೆಲಸ ಮಾಡುವುದಾಗಿದೆ ಎಂದರು.
ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ವಿವರಿಸಿದ ನಾರಾಯಣ ಮೂರ್ತಿ, “ನಮ್ಮ ಆರ್ಥಿಕತೆ ಈ ವರ್ಷ ಶೇಕಡಾ 6 ರಿಂದ 7 ರವರೆಗೆ ಬೆಳೆಯುತ್ತಿದೆ. ಭಾರತವು ವಿಶ್ವದ ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರವಾಗಿ ಮಾರ್ಪಟ್ಟಿದೆ. ನಮ್ಮ ವಿದೇಶಿ ವಿನಿಮಯ ಮೀಸಲು 400 ಬಿಲಿಯನ್ ಡಾಲರ್ಗಳನ್ನು ದಾಟಿದೆ. ಹೂಡಿಕೆದಾರರ ವಿಶ್ವಾಸವು ಐತಿಹಾಸಿಕ ಉನ್ನತ ಮಟ್ಟದಲ್ಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.