ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ ವರದಿಯ ಪ್ರಕಾರ, 2050ರ ವೇಳೆಗೆ ವಿಶ್ವದಲ್ಲಿ ಹಿರಿಯ ನಾಗರೀಕರ ಸಂಖ್ಯೆ 2 ಬಿಲಿಯನ್ಗೆ ಏರುವ ನಿರೀಕ್ಷೆಯಿದೆ, ಇದು ಒಟ್ಟು ಜನಸಂಖ್ಯೆಯ ಶ.22 ರಷ್ಟು. ಜಗತ್ತಿಗೆ ವಯಸ್ಸಾಗುತ್ತಿದೆ ಎಂದು ಹೇಳುವುದಕ್ಕೆ ಈ ವರದಿ ಸಾಕು, ಇದು ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆ, ಸರಕು ಮತ್ತು ಸೇವೆಗಳಂತಹ ಆರ್ಥಿಕತೆಯ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೇ, ಸಾರಿಗೆ, ವಸತಿ ಮತ್ತು ಸಾಮಾಜಿಕ ರಕ್ಷಣೆಯಂತಹ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಹಿರಿಯ ನಾಗರೀಕರನ್ನು ಅಭಿವೃದ್ಧಿಯ ಪ್ರಕ್ರಿಯೆಗೆ ಕೊಡುಗೆ ನೀಡುವವರು ಎಂದು ನಾವು ನೋಡಬೇಕಾಗಿದೆ ಮತ್ತು ಎಲ್ಲಾ ಹಂತಗಳಲ್ಲಿ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಾಗ ಸಾಮಾಜಿಕ ಸುಧಾರಣೆಯ ಮೇಲೆ ಪ್ರಭಾವ ಬೀರುವ ಹಿರಿಯರ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ವಯಸ್ಸಾದ ಜನರಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು, ಸಾಮಾಜಿಕ ರಕ್ಷಣೆ ಮತ್ತು ಪಿಂಚಣಿಗಳನ್ನು ಪ್ರಪಚದಾದ್ಯಂತ ಜಾರಿಗೆ ತರಲಾಗಿದೆ. ಭಾರತದಲ್ಲೂ ಹಿರಿಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ, ಅವರಿಗೆ ಗೌರವ ಮತ್ತು ಘನತೆಗಳನ್ನು ತಂದುಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಭಾರತದಲ್ಲಿ, 2050 ರ ವೇಳೆಗೆ ಹಿರಿಯರ ನಾಗರೀಕರ ಸಂಖ್ಯೆ 30 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹಿರಿಯ ನಾಗರೀಕರಿಗಾಗಿ ಭಾರತ ಸರ್ಕಾರವು ಅನೇನ ಯೋಜನೆಗಳನ್ನು ಜಾರಿಗೆ ತಂದು ಅವರ ಸಾಮಾಜಿಕ ಭದ್ರತೆಗಾಗಿ ಶ್ರಮಿಸುತ್ತಿದೆ. ಈ ಲೇಖನದಲ್ಲಿ, ಅಂತಹ ಐದು ಯೋಜನೆಗಳ ವಿವರವನ್ನು ನೀಡಲಾಗಿದೆ. ಹಿರಿಯರಿಗೆ ಅತ್ಯುತ್ತಮವಾದ ಯೋಜನೆ ಇದಾಗಿದೆ.
1. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
🔹 ಇದು ಸರ್ಕಾರಿ ಬೆಂಬಲಿತ ಉಳಿತಾಯ ಸಾಧನವಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಿವಾಸಿಗಳಿಗೆ ನೀಡಲಾಗುತ್ತದೆ.
🔹 ಇದರಡಿಯಲ್ಲಿನ ಠೇವಣಿ ಐದು ವರ್ಷಗಳಲ್ಲಿ ಮೆಚ್ಯೂರಿಟಿಗೆ ಬರುತ್ತದೆ ಮತ್ತು ಹೆಚ್ಚುವರಿಯಾಗಿ ಮೂರು ವರ್ಷಗಳ ಅವಧಿಗೆ ಒಮ್ಮೆ ವಿಸ್ತರಣೆ ಮಾಡಬಹುದು.
🔹 ಈ ಯೋಜನೆಯನ್ನು ಸಾರ್ವಜನಿಕ / ಖಾಸಗಿ ಬ್ಯಾಂಕ್ ಮೂಲಕ ಅಥವಾ ಭಾರತೀಯ ಅಂಚೆ ಕಚೇರಿ ಮೂಲಕ ಪಡೆಯಬಹುದು.
🔹 2019 ರ ಜನವರಿಯಿಂದ ಮಾರ್ಚ್ ವರೆಗಿನ ಬಡ್ಡಿದರವನ್ನು ಶೇಕಡಾ 8.6 ಕ್ಕೆ ನಿಗದಿಪಡಿಸಲಾಗಿದೆ ಮತ್ತು ಪ್ರತಿ ತ್ರೈಮಾಸಿಕದಲ್ಲಿ ಸರ್ಕಾರವು ಇದನ್ನು ಪರಿಷ್ಕರಣೆ ಮಾಡುತ್ತದೆ.
🔹 ಇದರಲ್ಲಿ ಬಡ್ಡಿ ಕ್ರೋಢಿಕರಿಸಲ್ಪಡುತ್ತದೆ ಮತ್ತು ತ್ರೈಮಾಸಿಕವಾಗಿ ಕ್ರೆಡಿಟ್ ಆಗುತ್ತದೆ.
🔹 ಈ ಯೋಜನೆಯಡಿ ಕನಿಷ್ಠ 1,000 ರೂಗಳ ಮತ್ತು ಗರಿಷ್ಠ 15 ಲಕ್ಷ ರೂಗಳ ಠೇವಣಿಯನ್ನು ಇಡಬಹುದು
🔹 ಈ ಯೋಜನೆಯಡಿ ಮಾಡಿದ ಹೂಡಿಕೆಗಳು ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿವೆ.
🔹 ಕೆಲವೊಂದು ಕಾರಣಕ್ಕಾಗಿ, ಮೆಚ್ಯೂರಿಟಿ ಆಗುವ ಮೊದಲೇ ಹಣವನ್ನು ಹಿಂಪಡೆಯಲು ಬಯಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಎರಡು ವರ್ಷಕ್ಕಿಂತ ಮುನ್ನ ಹಿಂಪಡೆದರೆ ಠೇವಣಿಯ ಶೇ.1.5ರಷ್ಟು ದಂಡ ಮತ್ತು ಎರಡು ವರ್ಷಗಳ ನಂತರ ಶೇ. 1 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
2. ಪ್ರಧಾನ ಮಂತ್ರಿ ವಯ ವಂದನ ಯೋಜನೆ (PMVVY)
🔹 ಈ ಯೋಜನೆಯನ್ನು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ನಿರ್ವಹಿಸುತ್ತದೆ.
🔹 ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ಠೇವಣಿಯ ಮೇಲೆ ಶೇಕಡಾ 8 ರಷ್ಟು ವಾರ್ಷಿಕ ರಿಟರ್ನ್ ಇದೆ. ಪಿಂಚಣಿ ಅಥವಾ ರಿಟರ್ನ್ ಅನ್ನು 10 ವರ್ಷಗಳ ಅವಧಿಗೆ ಪಾವತಿಸಲಾಗುತ್ತದೆ ಮತ್ತು ಫಲಾನುಭವಿಗೆ ಪಾವತಿಯ ಅವಧಿಯನ್ನು ಆಯ್ಕೆ ಮಾಡುವ ಅವಕಾಶವಿದೆ.
🔹 2020ರ ಮಾರ್ಚ್ 30 ರವರೆಗೆ ಇದಕ್ಕೆ ಚಂದಾದಾರರಾಗುವ ಅವಕಾಶವಿದೆ.
🔹 ಈ ಯೋಜನೆಯಡಿ ಹೂಡಿಕೆ ಮಾಡಬಹುದಾದ ಮೊತ್ತದ ಮೇಲೆ ಒಂದು ಮಿತಿ ಇದೆ, ಒಬ್ಬ ವ್ಯಕ್ತಿಯು ಗರಿಷ್ಠ 15 ಲಕ್ಷ ರೂ ಮತ್ತು ಕನಿಷ್ಠ 1,000 ರೂ ಹೂಡಿಕೆ ಮಾಡಬಹುದು.
🔹 ಯೋಜನೆಗೆ ಯಾವುದೇ ತೆರಿಗೆ ವಿನಾಯಿತಿಗಳಿಲ್ಲ.
🔹 ಇದರ ಅವಧಿ ಪೂರ್ಣಗೊಳ್ಳುವ ಮೊದಲು ಫಲಾನುಭವಿಯ ಸಾವು ಸಂಭವಿಸಿದರೆ, ಮೂಲ ಮೊತ್ತವನ್ನು ನಾಮಿನಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ.
🔹 ಒಂದು ವೇಳೆ ಈ ಯೋಜನೆಯ ಫಲಾನುಭವಿಯು ಅಥವಾ ಸಂಗಾತಿಯು ಗಂಭೀರ ಕಾಯಿಲೆಗೆ ತುತ್ತಾದ ಸಂದರ್ಭದಲ್ಲಿ ಹಣವನ್ನು ಹಿಂಪಡೆಯುವ ಅವಕಾಶವನ್ನೂ ಕೂಡ ನೀಡಲಾಗಿದೆ. ಅಂತಹ ಸಂದರ್ಭದಲ್ಲಿ ಶೇಕಡಾ 2 ರಷ್ಟು ಶುಲ್ಕವನ್ನು ದಂಡವಾಗಿ ಹಿಂಪಡೆಯಲಾಗುತ್ತದೆ.
3. ವರಿಷ್ಟ ಪಿಂಚಣಿ ಬಿಮಾ ಯೋಜನೆ
🔹 ಎಲ್ಐಸಿ ಪ್ರಾರಂಭಿಸಿದ ಈ ಯೋಜನೆಯು ತನ್ನ ಫಲಾನುಭವಿಗಳಿಗೆ 10 ವರ್ಷಗಳ ಅವಧಿಗೆ ಸ್ಥಿರವಾದ ಶೇ.8 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.
🔹 ಇತರ ಯೋಜನೆಗಳಿಗಿಂತ ಇದು ಭಿನ್ನವಾಗಿದೆ, ಇದರ ಪ್ರಯೋಜನಗಳನ್ನು ಪಡೆಯಲು ಯಾರೊಬ್ಬರೂ ಯಾವುದೇ ವೈದ್ಯಕೀಯ ತಪಾಸಣೆಗಳನ್ನು ಮಾಡಬೇಕಾಗಿಲ್ಲ.
🔹 ಈ ಯೋಜನೆಯು 15 ವರ್ಷಗಳ ಅವಧಿಯನ್ನು ಹೊಂದಿದೆ.
🔹 ಪಾಲಿಸಿದಾರರಿಗೆ ಗಂಭೀರ ಕಾಯಿಲೆ ಇರುವುದು ಪತ್ತೆಯಾದರೆ ಇದನ್ನು ಮೆಚ್ಯೂರಿಟಿಗಿಂತಲೂ ಮೊದಲೇ ಹಿಂತೆಗೆದುಕೊಳ್ಳಬಹುದು.
🔹 ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ.
🔹 ಕೆಲವು ಕಾರಣಗಳಿಗಾಗಿ ಈ ಯೋಜನೆಯ ಬಗ್ಗೆ ಅತೃಪ್ತಿ ಮೂಡಿದರೆ, ಇದನ್ನು ರದ್ದುಗೊಳಿಸಲು ಯೋಜನೆಗೆ ಸೇರಿದ ದಿನಾಂಕದಿಂದ 15 ದಿನಗಳವರೆಗೆ ಕಾಲವಕಾಶವಿದೆ.
🔹 ಈ ಯೋಜನೆಯಡಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಾವತಿಯನ್ನು ಪಡೆಯಲು ಆಯ್ಕೆ ಮಾಡಬಹುದು.
🔹 ಇದು ಒಂದೇ ಪ್ರೀಮಿಯಂ ಪಾಲಿಸಿಯಾಗಿದೆ ಮತ್ತು ನಮಗೆ ಬೇಕಾದ ಪಿಂಚಣಿ ಮೊತ್ತವನ್ನು ಅವಲಂಬಿಸಿ ಪ್ರೀಮಿಯಂ ಬದಲಾಗುತ್ತದೆ.
🔹 6,66,665 ರೂ.ಗಳ ಏಕ ಪ್ರೀಮಿಯಂ ಪಾಲಿಸಿದಾರರಿಗೆ ತಿಂಗಳಿಗೆ 5,000 ರೂ. ಮತ್ತು ವಾರ್ಷಿಕ 6,39,610 ರೂ.ಗಳ ಪ್ರೀಮಿಯಂ ಪಿಂಚಣಿದಾರರಿಗೆ ವಾರ್ಷಿಕ 60,000 ರೂ ನೀಡುತ್ತದೆ.
4. ರಾಷ್ಟ್ರೀಯ ವಯೋಶ್ರಿ ಯೋಜನೆ (RVY)
🔹 ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2017 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು.
🔹 ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯವಿದೆ, ಅಂದರೆ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಇದೆ.
🔹 ಕಡಿಮೆ ದೃಷ್ಟಿ, ಶ್ರವಣ ದೋಷ, ಹಲ್ಲುಗಳ ನಷ್ಟ, ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ನೆರವು ಮತ್ತು ಆಯಾ ಸಾಧನಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ.
🔹 ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ಯೋಜನೆಗೆ ಅರ್ಹರನ್ನು ಗುರುತಿಸುತ್ತದೆ.
🔹 ಪ್ರತಿ ಜಿಲ್ಲೆಯ ಫಲಾನುಭವಿಗಳ ಪೈಕಿ ಶೇ 30 ರಷ್ಟು ಮಹಿಳೆಯರು.
🔹 ವಾಕಿಂಗ್ ಸ್ಟಿಕ್ಗಳು, ಎಲ್ಬೋ ಕ್ರಚಸ್, ವಾಕರ್ಸ್, ಶ್ರವಣ ಸಾಧನಗಳು, ವ್ಹೀಲ್ ಚೇರ್ ಮತ್ತು ಕೃತಕ ದಂತಗಳು ಈ ಯೋಜನೆಯಡಿ ಒದಗಿಸಲಾದ ಕೆಲವು ಸಾಧನಗಳಾಗಿವೆ.
🔹 260 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಮತ್ತು 2019-2020ರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.
5. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ
• 2007 ರಲ್ಲಿ ಭಾರತದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪರಿಚಯಿಸಿದ ಈ ಯೋಜನೆಯನ್ನು ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (ಎನ್ಒಎಪಿಎಸ್) ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
🔹 ಈ ಯೋಜನೆ ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಕಲಾಂಗರಿಗೆ ಸಾಮಾಜಿಕ ನೆರವು ಪ್ರಯೋಜನಗಳನ್ನು ಒದಗಿಸುತ್ತದೆ.
🔹 ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ಮಾಸಿಕ ಪಿಂಚಣಿ ಸಿಗುತ್ತದೆ.
🔹 ಈ ಯೋಜನೆಯ ಮುಖ್ಯ ಅಂಶವೆಂದರೆ, ಪಿಂಚಣಿ ಸ್ವೀಕರಿಸಲು ಫಲಾನುಭವಿಯು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.
🔹 ಫಲಾನುಭವಿಯು ಬಿಪಿಎಲ್ ಕಾರ್ಡುದಾರರಾಗಿರಬೇಕು ಮತ್ತು ಯಾವುದೇ ಮೂಲದಿಂದ ನಿಯಮಿತ ಹಣಕಾಸಿನ ನೆರವನ್ನು ಹೊಂದಿರಬಾರದು.
🔹 ಫಲಾನುಭವಿ 60 ರಿಂದ 79 ವರ್ಷ ವಯಸ್ಸಿನವರಾಗಿದ್ದರೆ ಮಾಸಿಕ 200 ರೂ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ 500 ರೂ.ಪಿಂಚಣಿ ದೊರೆಯುತ್ತದೆ.
🔹 ಪಿಂಚಣಿ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಐದು ಯೋಜನೆಗಳು ಹಿರಿಯ ನಾಗರಿಕರಿಗೆ ಸಂತೋಷದಿಂದ, ಗೌರವಪೂರ್ಣವಾಗಿ ಬದಕಲು ನೆರವಾಗುತ್ತವೆ. ಆದರೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.