ನವದೆಹಲಿ: ಕಾಶ್ಮೀರ ವಿಷಯದ ಬಗ್ಗೆ ವಿಶ್ವದ ಗಮನ ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗುರುವಾರ ಮಾಸ್ಕೋಗೆ ಭೇಟಿ ನೀಡಿ ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಮೂರನೇ ಹಸ್ತಕ್ಷೇಪ ಮಾಡದಿರುವ ತತ್ವಗಳಿಗೆ ಪರಸ್ಪರ ಬೆಂಬಲ ನೀಡುವುದಾಗಿ ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಬೇಡ ಎಂಬ ಭಾರತದ ನಿಲುವನ್ನು ರಷ್ಯಾ ಬಲವಾಗಿ ಬೆಂಬಲಿಸಲು ಮುಂದಾಗಿದೆ.
ಅಜಿತ್ ದೋವಲ್ ಮತ್ತು ನಿಕೋಲಾಯ್ ಪಟ್ರುಶೇವ್ ನಡುವಿನ ಮಾತುಕತೆಯು, ಉಭಯ ದೇಶಗಳ ನಡುವೆ ಭಯೋತ್ಪಾದನಾ ನಿಗ್ರಹನ್ನು ತೀವ್ರಗೊಳಿಸುವ ಮಾರ್ಗಗಳು ಮತ್ತು ಈಸ್ಟರ್ನ್ ಎಕಾನಮಿ ಫೋರಂನಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ರಷ್ಯಾದ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡುವ ಸಿದ್ಧತೆಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿತ್ತು.
“ದ್ವಿಪಕ್ಷೀಯ ಸಮಾಲೋಚನೆಗಳ ಪ್ರಾಮುಖ್ಯತೆ ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಮಾಡದಿರುವ ತತ್ವಗಳಿಗೆ ಪರಸ್ಪರ ಬೆಂಬಲದ ಬಗ್ಗೆ ಉಭಯ ದೇಶಗಳು ತಮ್ಮ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿವೆ” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಅಜಿತ್ ದೋವಲ್ ಮತ್ತು ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೋಲಾಯ್ ಪಟ್ರುಶೇವ್ ನಡುವಿನ ಮಾತುಕತೆಯು ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಒಳಗೊಂಡಿದೆ ಎಂದು ಭಾರತ ಹೇಳಿದೆ.
ಈ ತಿಂಗಳ ಆರಂಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಭಾರತವು ಸಂವಿಧಾನದಲ್ಲಿನ 370 ನೇ ವಿಧಿಗಳನ್ನು ರದ್ದುಗೊಳಿಸಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಇದಕ್ಕೆ ಪಾಕಿಸ್ತಾನದಿಂದ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಕರಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿದ್ದರೆ, ಭಾರತ ಕಾಶ್ಮೀರ ತನ್ನ ಆಂತರಿಕ ವಿಷಯ ಎಂಬ ದೀರ್ಘಕಾಲದ ನಿಲುವನ್ನು ಪುನರುಚ್ಛರಿಸುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.