ಚೆನ್ನೈ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ಅನೇಕ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ. ವಿಶ್ವದ ಬಾಹ್ಯಾಕಾಶ ದಿಗಂತದಲ್ಲಿ ಇಸ್ರೋ ಪ್ರಬಲವಾಗಿ ನಿಂತಿದೆ. ಇಸ್ರೋದ ಹಲವು ಸಾಧನೆಗಳ ಹಿಂದಿನ ವ್ಯಕ್ತಿ ಅಥವಾ ಆ ಸಾಧನೆಯ ಪ್ರಮುಖ ಭಾಗವಾಗಿದ್ದಾರೆ ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್. ಅವರ ಬೃಹತ್ ಸಾಧನೆಗೆ ಪುರಸ್ಕಾರವಾಗಿ, ತಮಿಳುನಾಡು ಸರ್ಕಾರ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪ್ರದಾನಿಸಿದೆ.
ವೈಜ್ಞಾನಿಕ ಬೆಳವಣಿಗೆ, ಮಾನವೀಯತೆ ಮತ್ತು ವಿದ್ಯಾರ್ಥಿಗಳ ಕಲ್ಯಾಣವನ್ನು ಉತ್ತೇಜಿಸುವ ಕಾರ್ಯ ಮಾಡುವವರನ್ನು ಗುರುತಿಸಿ ಕಲಾಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರು ತಮಿಳುನಾಡಿನವರಾಗಿರಬೇಕಾಗುತ್ತದೆ. ಪ್ರಶಸ್ತಿ 8 ಗ್ರಾಂ ಚಿನ್ನದ ಪದಕ, ರೂ. ಐದು ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮೂಲದವರಾದ ಸಿವನ್ ಅವರನ್ನು “ರಾಕೆಟ್ ಮ್ಯಾನ್” ಎಂದು ಶ್ಲಾಘಿಸಲಾಗುತ್ತದೆ. ಅತ್ಯಂತ ವಿನಮ್ರ ಹಿನ್ನಲೆಯಿಂದ ಬಂದ ಅವರು ಇಂದು ವೃತ್ತಿಜೀವನದ ಬಹು ಎತ್ತರಕ್ಕೆ ಏರಿದ್ದಾರೆ. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸೆಂಟರ್ ನಿರ್ದೇಶಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಸಿವನ್ ಅವರ ನಾಯಕತ್ವವು, ದೇಶೀಯ ಕ್ರಯೋಜೆನಿಕ್ ಸ್ಟೇಜ್ನೊಂದಿಗೆ ಅತ್ಯಂತ ಯಶಸ್ವಿ ಜಿಎಸ್ಎಲ್ ವಿ ಹಾರಾಟದ ಐತಿಹಾಸಿಕ ಸಾಧನೆಗೆ ಕಾರಣವಾಗಿದೆ ಎಂದು ಪ್ರಶಸ್ತಿ ಆಯೋಜಕರು ಪ್ರಸಂಶಿಸಿದ್ದಾರೆ.
“ಇಸ್ರೇಲ್ ಜುಲೈ 22 ರಂದು ಚಂದ್ರನಲ್ಲಿಗೆ ಎರಡನೇ ಮಿಷನ್ ಚಂದ್ರಯಾನ್ 2 ಅನ್ನು ಯಶಸ್ವಿಯಾಗಿ ಪ್ರಾರಂಭಿಸಿತು ಮತ್ತು ಈ ಮಿಷನ್ನಲ್ಲಿ ಸಿವನ್ ಅವರು SITARA ಅಂದರೆ 6 ಡಿ ಟ್ರಜೆಕ್ಟರಿ ಸಿಮ್ಯುಲೇಶನ್ ಸಾಫ್ಟ್ವೇರ್ನ ಮುಖ್ಯ ಶಿಲ್ಪಿ” ಎಂದು ಪ್ರಶಸ್ತಿ ಸಮಾರಂಭದಲ್ಲಿ ಉಲ್ಲೇಖಿಸಲಾಗಿದೆ.
62 ವರ್ಷದ ಬಾಹ್ಯಾಕಾಶ ವಿಜ್ಞಾನಿ ಸಿವನ್ ಅವರು ತಮ್ಮ ಕುಟುಂಬದ ಪ್ರಥಮ ಪದವೀಧರರಾಗಿದ್ದಾರೆ, 1980 ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಅವರು ನಂತರ ಇಸ್ರೋಗೆ ಸೇರಿದರು ಮತ್ತು ಅವರು ಡಾ. ವಿಕ್ರಮ್ ಸಾರಾಭಾಯ್ ರಿಸರ್ಚ್ ಅವಾರ್ಡ್ (1999) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
2015 ರಲ್ಲಿ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ನಿಧನದ ನಂತರ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಕಲಾಂ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದ್ದರು. ಡಾ. ಕಲಾಂ ಅವರ ಜನ್ಮದಿನವಾದ ಅಕ್ಟೋಬರ್ 15 ಅನ್ನು “ಯುವ ನವೋದಯ ದಿನ” ಎಂದು ಆಚರಿಸಲಾಗುವುದು ಎಂದು ಈ ವೇಳೆ ಅವರು ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.