ವಚನ ಚಳುವಳಿ ಜೀವ ಪಡೆದು 9 ಶತಮಾನಗಳಿಗೂ ಹೆಚ್ಚು ಸಮಯ ಆಗಿದ್ದರೂ ಅವು ಪ್ರಸಕ್ತ ಸನ್ನಿವೇಶಕ್ಕೆ ಸಮಕಾಲೀನ ಸವಾಲುಗಳಿಗೆ ಸಿದ್ದೌಷದಂತೆ, ಅತ್ಯುತ್ತಮ ಚಿಕಿತ್ಸೆಯಂತೆ ಪ್ರಸ್ತುತವಾಗಿವೆ. ಸಾರ್ವಕಾಲಿಕ ಮೌಲ್ಯಗಳಾಗಿ ಸಮಕಾಲಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳಾಗಿವೆ.
ಜಾತಿ ಭೇದ ಪದ್ದತಿಗಳು, ಭಾರತವನ್ನು ವಿನಾಶದತ್ತ ಉಪಕ್ರಮಿಸುತ್ತಿದ್ದ ಕ್ಲಿಷ್ಟ ಸನ್ನಿವೇಶದಲ್ಲಿ ಭಾರತೀಯ ಸಮಾಜಕ್ಕೆ ಹೊಸ ಸಮರ್ಥ, ದಿಗ್ದರ್ಶಕ, ಬಲಾಢ್ಯ, ಚಿಂತಕ, ದಾರ್ಶನಿಕ ಮಾರ್ಗದರ್ಶಕದ ಅನಿವಾರ್ಯತೆಯನ್ನು ಸೃಷ್ಠಿಸಿದ್ದ ಸಂಕಷ್ಟ ಸಮಯದಲ್ಲಿ ಉದಯಿಸಿದ ಬೆಳಕೇ ವಚನ ಸಾಹಿತ್ಯ.
ವಿಜ್ಞಾನದ ವಿಧ್ವಂಸಕ ಮುಖವನ್ನು ನೋಡುತ್ತಿರುವ ಪರಿಸ್ಥಿತಿಯಲ್ಲಿ ಆಯ್ದಕ್ಕಿ ಮಾರಯ್ಯನ ಪತ್ನಿ ಲಕ್ಕಮ್ಮ.
ನಮಗೆ ಎಂದಿನದೇ ಸಾಕು
ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ
ಮಾರಯ್ಯ ಪ್ರಿಯ ಅಮರೇಶ್ವರನ ಲಿಂಗ ಕೊಟ್ಟು
ಕಾಯಕವೇ ಸಾಕು ಮಾರಯ್ಯ
ಹೀಗೆ ಹೇಳುವ ಮೂಲಕ ದುರಾಸೆಯನ್ನು ಬಿಡಲು ತಿಳಿಸಿ ಆತನು ತಂದಿದ್ದ ಅಧಿಕ ಅಕ್ಕಿಯನ್ನು ಅಲ್ಲೇ ಸುರಿದು ಬರಲು ತಿಳಿಸುತ್ತಾಳೆ. ಹೆಚ್ಚಿಗೆ ಏಕೆ ತಂದೆ ಎಂದು ಪ್ರಶ್ನಿಸುತ್ತಾಳೆ. ಇಂತಹ ದಿಟ್ಟತನ, ಸಾದ್ವಿ ನಡವಳಿಕೆ ಈಗ ಎಲ್ಲರಲ್ಲಿಯೂ ಬೆಳೆದಿದ್ದೇ ಆದರೆ ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ ಮೂಡಿರಲು ಸಾಧ್ಯವಾಗುತ್ತದೆ.
ಪ್ರತಿಯೊಬ್ಬನು ತನ್ನ ಕಾಯಕಕ್ಕೆ ನಿಷ್ಠರಾಗಬೇಕೆಂದು ಸುಮ್ಮನೆ ಕುಳಿತಿದ್ದ ತನ್ನ ಪತಿಗೆ ಲಕ್ಕಮ್ಮನು
ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ
ಅಮರೇಶ್ವರ ಲಿಂಗಕ್ಕೆ ಬೇಗ ಹೋಗು ಮಾರಯ್ಯ
ಎಂದು ಮಾರಯ್ಯನನ್ನು ಎಚ್ಚರಿಸಿ, ಕಾಯಕಕ್ಕೆ ತೆರಳುವಂತೆ ಮಾಡುತ್ತಾಳೆ. ದುಡಿಮೆಗೆ ಗಂಟೆಗಿಷ್ಟು, ಹೊತ್ತಿಗಿಷ್ಟು ಸಂಭಾವನೆ ಪಡೆದು, ಏನೂ ದುಡಿಯದೆ ಸೋಮಾರಿಗಳಾಗಿ ಪ್ರತಿಫಲ ನಿರೀಕ್ಷಿಸುವ ಜನರಿಗೆ ಈ ನಡೆ ದಾರಿದೀಪ.
ವಚನಗಳು ಕಳೆಕಿತ್ತು, ಕೃಷಿ ಮಾಡಿ ಜೀವನೋಪಾಯಕ್ಕಾಗಿ ಬೆಳೆದ ಆಹಾರ ಧಾನ್ಯಗಳಂತೆ ಬದುಕಿಗೆ ಉತ್ತಮ ಮಾರ್ಗವನ್ನು ತೋರಿವೆ. ವಚನ ಸಾಹಿತ್ಯ ಸಂಪ್ರದಾಯಕ್ಕಿಂತ ಅನುಭವಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿ ವಿಶ್ವಧರ್ಮದ ಸಾಲಿನಲ್ಲಿ ನಿಂತಿದೆ.
ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ,
ಶಿವದೀಕ್ಷೆಯಾದ ಬಳಿಕ ಸಾಕ್ಷತ್ ಶಿವನೆಂದು ವಂದಿಸಿ,
ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ ಕೂಡಲ ಚನ್ನ ಸಂಗಮದೇವ.
ಎಂದು ಚನ್ನಬಸವೇಶ್ವರರು ಎಲ್ಲರಿಗೂ ಎಚ್ಚರಿಕೆ ನೀಡಿ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಧೃಡಪಡಿಸಲು ಸಹಪಂಕ್ತಿ ಭೋಜನ, ಕೊಳ್ಕೊಡೆ ಬಹಳ ಮುಖ್ಯವಾಗಿ ವೃತ್ತಿ, ಜಾತಿ ಯಾವುದಾದರೂ ಅವುಗಳನ್ನು ಪರಿಗಣಿಸದೆ ಅವರುಗಳ ಮನೆಯಲ್ಲಿ ಊಟಮಾಡಬೇಕೆಂದು ಅವರ ಸಂಬಂಧಗಳನ್ನು ಬೆಳೆಸಬೇಕೆಂದು ಸೂಚಿಸುತ್ತಾನೆ. ೧೨ನೇಶತಮಾನದಲ್ಲೂ ಇದ್ದ ಈ ತಾರತಮ್ಯ ಇಂದಿಗೂ ಜೀವಂತವಾಗಿದ್ದು ಸಾಮಾಜಿಕ ಪಿಡುಗಾಗಿ ಕಾಣುತ್ತಿದೆ. ಅದನ್ನು ಸರಿಪಡಿಸಲು ವಚನಕಾರರು ಶ್ರಮಿಸಿದಂತೆ, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಇಂದಿನ ಅವಶ್ಯಕತೆಯೂ ಆಗಿರುವುದು ವಚನ ಸಾಹಿತ್ಯದ ಅಗತ್ಯ ಪ್ರಾಮುಖ್ಯತೆಯನ್ನು ಶ್ರುತಪಡಿಸುತ್ತದೆ.
ಸದಾಚಾರದಲ್ಲಿ ಕಾಯಕಕ್ಕೆ ಹೆಚ್ಚಿನ ಪ್ರಾಶಸ್ತ್ಯವುಂಟು, ಕಾಯಕವೆಂದರೆ ಜೀವನೋಪಾಯಕ್ಕೆ ಕೈಗೊಂಡ ವೃತ್ತಿ, ಎಲ್ಲ ವೃತ್ತಿಗಳೂ ಗೌರವಯುತವಾದುದೆಂದೂ, ಅವುಗಳಲ್ಲಿ ಯಾವುದೂ ಹೆಚ್ಚು ಕಡಿಮೆ ಇಲ್ಲವೆಂದು ವೃತ್ತಿಯಿಂದ ಜಾತಿಗಳು ಏರ್ಪಡುವುದಿಲ್ಲವೆಂದು ವಚನ ಧರ್ಮ ಹೇಳುತ್ತದೆ.
ಕಾಸಿ ಕಮ್ಮಾರವಾದ, ಬೀಸಿಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವ ನೋದಿ ಹಾರುವನಾದ
ಇದು ಕಾರಣ ಕೂಡಸಂಗಮದೇವ ಲಿಂಗ
ಸಂಗವನರಿತವನೇ ಕುಲಜನು
ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಚಿಂತನೆ ಆಲೋಚನೆ ತಾರ್ಕಿಕತೆ, ಒಳ್ಳೆಯ ಕೆಟ್ಟದ್ದನ್ನು ವಿಮರ್ಶಿಸುವ, ನಿರ್ಧರಿಸುವ ಸ್ವಾತಂತ್ರ್ಯವಿರುತ್ತದೆ. ತನ್ನ ಜೀವನದ ಶಿಲ್ಪಿ ತಾನೇ ಎಂದು ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಪ್ರತಿಭಾ ಸಂಪನ್ನತೆಯನ್ನು ತಾನೇ ಎಂದೂ ಅರಿಯಲಾರರು.
ಎಲ್ಲ ಎಲ್ಲವನರಿದು ಫಲವೇನಯ್ಯ
ತನ್ನಲ್ಲಿ ಅರಿವು ಸ್ವಯಂ ಆಗಿರಲು
ಅನ್ಯರ ಕೇಳಲುಂಟೇ ಚನ್ನಮಲ್ಲಿಕಾರ್ಜುನ
ಎನ್ನುವ ಅಕ್ಕನ ಮಾತುಗಳು ಮೊದಲು ತನ್ನನ್ನು
ಅರಿತುಕೊಳ್ಳುವ ಅಗತ್ಯವನ್ನು ಅಂದೇ ಪ್ರತಿಪಾದಿಸಿದ್ದಾರೆ.
ಅಜ್ಞಾನಿಗಳ, ವಿಚಾರಶೂನ್ಯರ ಸಹವಾಸ ಮಾಡದೆ ಸಜ್ಜನರ ಜ್ಞಾನಿಗಳ ಸಹವಾಸ ಮಾಡುವುದು ಅಮೃತದ ಸವಿಗೆ ಹೋಲಿಸಿ
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲ ಹೊಯ್ದು ಕಿಡಿಯ ತೆಗೆದು ಕೊಂಬಂತೆ
ಚನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ
ಸಂಗವ ಮಾಡಿದೊಡೆ ಕರ್ಪೂರಗಿರಿಯನು ಉರಿಕೊಂಬಂತೆ
ಎನ್ನುತ್ತಾ ಶರಣರ ಸಾಂಗತ್ಯ ನಮ್ಮನ್ನು ಸನ್ಮಾರ್ಗದೆಡೆಗೆ ಔನ್ನತ್ಯದೆಡೆಗೆ ಕೊಂಡೊಯ್ಯುವ ದಿಶೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಅನಾಚಾರ, ದುರಾಚಾರ, ಭ್ರಷ್ಟಚಾರ, ಅತ್ಯಾಚಾರಗಳೇ ಹೆಚ್ಚಾಗಿ ಸಾಮಾಜಿಕ ಜೀವನ ಮಾರ್ಗದೆಡೆಗೆ ಸಾಗುತ್ತಿರುವ ಸಮಾಜ ವಿನಾಶದತ್ತ ಸಾಗುತ್ತಿದೆ. ವಿನಾಶವಾಗದೆ ಉಳಿಯಬೇಕಾದರೆ ವಚನಕಾರರ ನಡೆ, ನುಡಿ ಆದರ್ಶಗಳನ್ನು ಮೈಗೂಡಿಸಿಕೊಂಡು ’ಸರ್ವೇಜನೋ ಸುಖಿನೋ ಭವಂತು’ ಎಂಬ ನುಡಿಗೆ ಅನ್ವರ್ಥವಾಗಿ ಬದುಕೋಣ, ಭಾರತೀಯ ಜೀವನಮೌಲ್ಯಗಳನ್ನು ಉಳಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.